April 24, 2024

Bhavana Tv

Its Your Channel

ಪ್ರಥಮ ಗಣಿತ ಪ್ರಯೋಗಾಲಯ ನಿರ್ಮಿಸಿ ತಾಲೂಕಿಗೇ ಮಾದರಿಯಾದ ವಿಶ್ವನಾಥ ಬೀಳಗಿ

ಕಲಿಕಾ ಚೇತರಿಕೆ ಚಟುವಟಿಕೆಗಳಿಗೆ ಪೂರಕವಾದ ಗಣಿತ ಪ್ರಯೋಗಾಲಯ ಹಾಗೂ ಸ್ಮಾರ್ಟ್ ಕ್ಲಾಸ್ ಉದ್ಘಾಟನೆ

ಬಾಗಲಕೋಟೆ: ಸ್ಪರ್ಧಾತ್ಮಕ ಜಗತ್ತಿನಲ್ಲಿ ಹಳ್ಳಿಗಳಲ್ಲಿ ಅದರಲ್ಲೂ ಸರಕಾರಿ ಶಾಲೆಗಳಲ್ಲಿ ಅನೇಕ ಅಭಿವೃದ್ಧಿಪರ ಬದಲಾವಣೆಗಳು ಉಂಟಾಗಲು ಶಿಕ್ಷಕರ ಅರ್ಪಣಾ ಮನೋಭಾವ ಹಾಗೂ ಕ್ರಿಯಾಶೀಲತೆ ಬಹುಮುಖ್ಯ ಸಾಧನ ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತೆ ಇಲಾಖೆ ಹುನಗುಂದದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ವೆಂಕಟೇಶ ಕೊಂಕಲ್ ಹೇಳಿದರು.

ಹುನಗುಂದ ತಾಲೂಕಿನ ಚಿಕ್ಕಮಾಗಿಯ ಕನ್ನಡ ಗಂಡು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಲಿಕಾ ಚೇತರಿಕೆ ಚಟುವಟಿಕೆಗಳಿಗೆ ಪೂರಕವಾದ ಗಣಿತ ಪ್ರಯೋಗಾಲಯ ಹಾಗೂ ಸ್ಮಾರ್ಟ್ ಕ್ಲಾಸ್ ಉದ್ಘಾಟನೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ಸ್ವಂತ ಆಸಕ್ತಿ, ಶ್ರಮ ಹಾಗೂ ಗ್ರಾಮದವರ ಸಹಾಯದಿಂದ ಹುನಗುಂದ ತಾಲ್ಲೂಕಿನಲ್ಲಯೇ ಪ್ರಥಮ ಗಣಿತ ಪ್ರಯೋಗಾಲಯ ನಿರ್ಮಿಸಿ ತಾಲೂಕಿಗೇ ಮಾದರಿಯಾದ ವಿಶ್ವನಾಥ ಬೀಳಗಿ ಅವರಂಥ ಶಿಕ್ಷಕರ ಅವಶ್ಯಕತೆ ನಮ್ಮ ಇಲಾಖೆಗೆ ಇದೆ ಎಂದು ಶ್ಲಾಘಿಸಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಡಯಟ್ ಇಲಕಲ್ಲದ ಹಿರಿಯ ಉಪನ್ಯಾಸಕಿಯರಾದ ಸಿದ್ದಮ್ಮ ಪಾಟೀಲ ಅವರು ರಾಷ್ಟ್ರ ಮಟ್ಟದಲ್ಲಿಯೇ ಚಿಕ್ಕಮಾಗಿ ಶಾಲೆಯನ್ನು ಗುರುತಿಸುವಂತೆ ಮಾಡಲು ನಾನು ಶ್ರಮಿಸುತ್ತೇನೆ ಎಂದು ಪಣತೊಟ್ಟರು. ಹುನಗುಂದ ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷರಾದ ಸಿದ್ದು ಶೀಲವಂತರ ಮಾತನಾಡಿ ಶಿಕ್ಷಕರಿಗೆ ಐಸಿಟಿ ಉಪಕರಣಗಳನ್ನು ಇಲಾಖೆ ಹಾಗೂ ಸರಕಾರ ಒದಗಿಸಬೇಕೆಂದು ಹೇಳಿದರು. ಇಲಕಲ್ಲ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ರಂಗನಾಥ ಮಾಸರಡ್ಡಿ ಮಾತನಾಡಿ ಶಾಲಾ ಅಭಿವೃದ್ಧಿಯಲ್ಲಿ ಗ್ರಾಮಸ್ಥರು ಧನ ಸಹಾಯ ಒದಗಿಸಿ ಬಹಳ ಶ್ರಮ ವಹಿಸಿ ಒಗ್ಗಟ್ಟಿನಿಂದ ಕಾರ್ಯ ಮಾಡಿದ್ದಾರೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಗಣಿತ ಪ್ರಯೋಗಾಲದ ಕರ್ತೃ ವಿಶ್ವನಾಥ ಬೀಳಗಿ ಅವರು ನನ್ನ ಈ ಸಾಧನೆಗೆ ನನ್ನ ತಂದೆ ತಾಯಿ, ಮಡದಿ,ಮಕ್ಕಳು, ಸಿಬ್ಬಂದಿ ವರ್ಗ, ಬೇರೆ ಶಾಲೆಯ ಶಿಕ್ಷಕರು, ನನ್ನ ಹಳೆಯ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಎಂದು ಭಾವುಕರಾದರು. ಶಾಲೆಯ ಹಳೆಯ ವಿದ್ಯಾರ್ಥಿ ಆಳಂದದ ಡಿವೈಎಸ್ಪಿ ರವೀಂದ್ರ ಶಿರೂರ ಅವರು ಮಾತನಾಡಿ ಶಾಲೆಯ ಅಭಿವೃದ್ಧಿಗೆ ರೂ 51000 ಗಳನ್ನು ದೇಣಿಗೆ ನೀಡಿದರು. ಮತ್ತೊಬ್ಬ ಶಾಲೆಯ ಹಳೆಯ ವಿದ್ಯಾರ್ಥಿ ಎಲ್.ಕೆ. ಕಾಮಾ ಪ್ರಾನ್ಶುಪಾಲರು ವಾಗ್ದೇವಿ ವಿಜ್ಞಾನ ವಿದ್ಯಾಲಯ ಬಾಗಲಕೋಟೆ ಇವರು ನಮ್ಮ ಶಾಲೆ 1 ರಿಂದ 8 ನೇ ತರಗತಿ ಇದೆ, 9 ಮತ್ತು 10 ನೇ ತರಗತಿ ಮಂಜೂರು ಮಾಡಿ, ಶಾಲಾ ಕಟ್ಟಡ ಕಟ್ಟಲು ನಾನು ಸ್ವಂತ ಜಾಗ ಕೊಡುತ್ತೇನೆ ಎಂದು ಶಪತ ಗೈದರು. ಇದೇ ಸಂದರ್ಭದಲ್ಲಿ ಬಿಇಒ, ಡಯಟ್ ಹಿರಿಯ ಉಪನ್ಯಾಸಕಿಯರು, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಶಿಕ್ಷಕರಿಗೆ, ವೇದಿಕೆಯನ್ನು ಹಂಚಿಕೊAಡ ಸರ್ವ ಮಹನಿಯರಿಗೆ, ಗ್ರಾಮದ ದಾನಿಗಳಿಗೆ ಗೌರವ ಸನ್ಮಾನ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಎಸ್.ಬಿ.ಸಜ್ಜನರ ಶಾಲಾ ಮುಖ್ಯೋಪಾಧ್ಯಾಯರು ಸ್ವಾಗತ ಕಾರ್ಯಕ್ರಮ ನಡೆಸಿಕೊಟ್ಟರು. ಶಾಲೆಯ ಶಿಕ್ಷಕರಾದ ಎಸ್ ಪಿ ಹಳಕಟ್ಟಿ,ಎಸ್ ಎಮ್ ಬೆಲ್ಲದ ,ಜೆ ಪಿ ಹವೇಲಿ, ,ಎಲ್ ಎಂ ಸೋಲಾಪುರ, ಎಸ್ ಎಸ್ ಗೋಗಿ, ಹಾಗೂ ಎಸ್ ಡಿ ಎಮ್ ಸಿ ಅಧ್ಯಕ್ಷರು ಸದಸ್ಯರು ಹಾಗೂ ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು. ಶಶಿಧರ ಹಳ್ಳೂರ ವಂದಿಸಿದರು, ಶ್ರೇಯಾಂಶ ಕೋಲಾರ ನಿರೂಪಿಸಿದರು.

error: