September 15, 2024

Bhavana Tv

Its Your Channel

ಎಸ್.ಬಿ.ಫೌಂಡೇಷನ್ ನಿಂದ ಉಚಿತ ಚಿಕಿತ್ಸೆ ನೀಡುವ ಕೋವಿಡ್ ಆಸ್ಪತ್ರೆ

ಕಂಪ್ಲಿ: ರಾಜ್ಯದಲ್ಲಿ ಮರಣ ಮೃದಂಗವನ್ನು ಭಾರಿಸುತ್ತಿರುವ ಕೊರೋನಾ ವೈರಸ್ ನಿಂದ ರಾಜ್ಯದ ಜನರು ಆತಂಕದಲ್ಲಿ ಕಾಲ ಕಳೆಯುತ್ತಿರುವ ಈ ಸಂದರ್ಭದಲ್ಲಿ ರಾಜ್ಯದಲ್ಲಿಯೇ ಬಳ್ಳಾರಿ ಜಿಲ್ಲೆ ಎರಡನೇ ಸ್ಥಾನದಲ್ಲಿದೆ. ಜಿಲ್ಲೆಯ ಜನರಲ್ಲಿ ಆತಂಕ ಮನೆ ಮಾಡಿರುವ ಈ ಸಂದರ್ಭದಲ್ಲಿ, ಮಾಜಿ ಶಾಸಕರಾದ ಟಿ.ಎಚ್.ಸುರೇಶಬಾಬು ಅವರು ಕ್ಷೇತ್ರದ ಜನರ ಆತಂಕವನ್ನು ದೂರ ಮಾಡಲು ತಮ್ಮ ಸ್ವಂತ ಹಣದಿಂದ ಎಸ್.ಬಿ.ಫೌಂಡೇಷನ್ ನೇತೃತ್ವದಲ್ಲಿ ತಮ್ಮ ಕ್ಷೇತ್ರದ ಕಂಪ್ಲಿ ಪಟ್ಟಣದಲ್ಲಿ ಕೊರೋನಾ ಸೋಂಕಿತರಿಗೆ ಉಚಿತ ಚಿಕಿತ್ಸೆ ನೀಡುವ ಉದ್ದೇಶದಿಂದ ೫೦ ಹಾಸಿಗೆಯ ಕೋವಿಡ್ ಆಸ್ಪತ್ರೆಯನ್ನು ಸಮಾಜ ಕಲ್ಯಾಣ ಇಲಾಖೆ ಸಚಿವರಾದ ಶ್ರೀ. ಬಿ.ಶ್ರೀರಾಮುಲು ಹಾಗೂ ಶ್ರೀ ವಾಮದೇವ ಮಹಾಂತ ಶಿವಾಚಾರ್ಯ ಸ್ವಾಮಿಜಿಗಳು ಚಾಲನೆ ನೀಡಿದ್ದಾರೆ. ಕಂಪ್ಲಿ ಪಟ್ಟಣದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯದಲ್ಲಿ ಪ್ರಾರಂಭಿಸಿರುವ ಈ ಆಸ್ಪತ್ರೆಗೆ ಎಸ್.ಬಿ.ಫೌಂಡೇಷನ್ ವತಿಯಿಂದ ನುರಿತ ವೈದ್ಯರು ಹಾಗೂ ಶುಶ್ರುಷಕರು ಸೇರಿದಂತೆ ಎಲ್ಲಾ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಾಗಿದೆ. ಈ ಆಸ್ಪತ್ರೆಗೆ ದಾಖಲಾದ ಸೋಂಕಿತರಿಗೆ ಉತ್ತಮ ಚಿಕಿತ್ಸೆ, ಔಷದ ಉಪಚಾರ ಹಾಗೂ ಉಚಿತ ಊಟ-ಉಪಹಾರದ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದೆ. ಆಸ್ಪತ್ರೆಗೆ ದಾಖಲಾಗುವ ಸೋಂಕಿತರು ಒಂದು ರೂಪಾಯಿ ಖರ್ಚಿಲ್ಲದೆ ಸಂಪೂರ್ಣ ಗುಣಮುಖರಾಗಿ ಮನೆಗೆ ಹೋಗುವ ವರೆಗಿನ ಎಲ್ಲಾ ಚಿಕಿತ್ಸಾ ವೆಚ್ಚವನ್ನು ಮಾಜಿ ಶಾಸಕ ಸುರೇಶಬಾಬು ಅವರ ಎಸ್.ಬಿ.ಪೌಂಡೇಷನ್ ನಿಂದ ಭರಿಸಲಾಗುವುದು. ಮಾಜಿ ಶಾಸಕರೊಬ್ಬರು ಇಂತಹ ದಿಟ್ಟ ಹೆಜ್ಜೆಯನ್ನಿಡುವ ಮೂಲಕ ಜನರ ಸೇವೆ ಮಾಡುತ್ತಿರುವುದು ರಾಜ್ಯದಲ್ಲಿ ಇದೆ ಮೊದಲು ಎಂದೆ ಹೇಳಬಹುದು.

ಬಳ್ಳಾರಿ ಜಿಲ್ಲೆಯಲ್ಲಿ ಪ್ರತಿದಿನ ೧೫೦೦ ರಿಂದ ೨೦೦೦ ಕೊರೋನಾ ಸೋಂಕಿತ ಪ್ರಕರಣಗಳು ದಾಖಲಾಗುತ್ತಿದ್ದು, ಜಿಲ್ಲೆಯ ಜನರು ಆತಂಕಗೊAಡಿದ್ದಾರೆ. ಅಲ್ಲದೇ ಸೋಂಕಿತರಿಗೆ ಜಿಲ್ಲೆಯಲ್ಲಿ ಬೆಡ್ ಮತ್ತು ಆಕ್ಸಿಜನ್ ಸರಿಯಾದ ಸಮಯಕ್ಕೆ ದೊರಕದ ಕಾರಣ ಜನರು ಸಂಕಷ್ಟಕ್ಕೊಳಗಾಗಿರುವ ಇಂತಹ ಕಠಿಣ ಮತ್ತು ಆತಂಕದ ಸಮಯದಲ್ಲಿ ಕಂಪ್ಲಿ ಮಾಜಿ ಶಾಸಕ ಟಿ. ಎಚ್. ಸುರೇಶಬಾಬು ಅವರು ಎಸ್ ಬಿ ಫೌಂಡೇಶನ್ ವತಿಯಿಂದ ತಮ್ಮ ತಂದೆಯವರಾದ ರೇಲ್ವೆ ಬಾಬು ಅವರ ಸ್ಮರಣಾರ್ಥ ಕಂಪ್ಲಿಯಲ್ಲಿ ೫೦ ಹಾಸಿಗೆಯ ಹಾಗೂ ೧೦ ಆಕ್ಸಿಜನ್ ಬೆಡ್ ಸೌಕರ್ಯ ಹೊಂದಿರುವ ಕೋವಿಡ್ ಆಸ್ಪತ್ರೆಯನ್ನು ಕಂಪ್ಲಿ ಭಾಗದ ಜನತೆಗೆ ಅರ್ಪಿಸಿದ್ದಾರೆ.

೫೦ ಹಾಸಿಗೆಯ ಈ ಆಸ್ಪತ್ರೆಯನ್ನು ಮುಂದೆ ಅವಶ್ಯಕತೆ ಬಿದ್ದರೆ, ೨೦೦ ಹಾಸಿಗೆಯ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೆ ಏರಿಸುವ ಯೋಜನೆಯನ್ನು ಮಾಜಿ ಶಾಸಕರಾದ ಸುರೇಶಬಾಬು ಅವರು ಹೊಂದಿದ್ದಾರೆ. ಇತ್ತೀಚೆಗೆ ಜಿಲ್ಲೆಯ ಜಿಂದಾಲ್ ನಲ್ಲಿ ಕೊರೋನಾ ಸೋಂಕಿತರಿಗೆ ೩೦೦ ಹಾಸಿಗೆಯ ಆಸ್ಪತ್ರೆಯನ್ನು ಹಾಗೂ ಆಕ್ಸಿಜನ್ ಸೇರಿದಂತೆ ಎಲ್ಲಾ ಸೌಲಭ್ಯವನ್ನು ಕಲ್ಪಿಸಿ ಆಸ್ಪತ್ರೆಯನ್ನು ಪ್ರಾರಂಭಿಸಿರುವ ಬೆನ್ನಲ್ಲೇ ಜಿಲ್ಲೆಯ ಕಂಪ್ಲಿ ಮತ್ತು ಕುರಗೋಡು ಪಟ್ಟಣಗಳಲ್ಲಿ ಈ ಆಸ್ಪತ್ರೆಗಳು ಪ್ರಾರಂಭವಾಗುತ್ತಿರುವುದು ನಿಜಕ್ಕೂ ಸಂತಸದ ಸಂಗತಿ. ಮುಂಬರುವ ದಿನಗಳಲ್ಲಿ ಕಂಪ್ಲಿ ಕ್ಷೇತ್ರದ ಕುರಗೋಡು ಪಟ್ಟಣದಲ್ಲಿ ಮಾಜಿ ಶಾಸಕರು ಇದೇ ತರಹದ ಆಸ್ಪತ್ರೆ ಪ್ರಾರಂಭಿಸಲು ಯೋಜನೆಯನ್ನು ರೂಪಿಸುತ್ತಿದ್ದಾರೆ. ಕೆಲವೇ ದಿನಗಳಲ್ಲಿ ಈ ಯೋಜನೆಯೂ ಜಾರಿಗೆ ಬರಲಿದೆ.

ಈಗ ಕೊರೋನಾ ಮಹಾಮಾರಿಯಿಂದ ಜಿಲ್ಲೆಯ ಜನರು ತ್ತತ್ತಿರಸಿಹೋಗಿದ್ದಾರೆ. ಶ್ರೀಮಂತರು ದುಡ್ಡು ತೆಗೆದುಕೊಂಡು ರಾಜ್ಯದ ದೊಡ್ಡ, ದೊಡ್ಡ ಆಸ್ಪತ್ರೆಗಳಿಗೆ ಅಲೆದರೂ ಬೆಡ್ ಸಿಗದ ಗಂಭೀರ ಪರಸ್ಥಿತಿ ಇದೆ. ಇನ್ನೂ ಬಡವರ ಪಾಡು ಆ ಭಗವಂತನೇ ಬಲ್ಲ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಮಾಜಿ ಶಾಸಕರಾದ ಟಿ.ಎಚ್.ಸುರೇಶಬಾಬು ಅವರ ಈ ಮಹತ್ವದ ಕಾರ್ಯದಿಂದ ಕ್ಷೇತ್ರದ ಜನತೆ ನಿಟ್ಟುಸಿರು ಬಿಟ್ಟಿದ್ದಾರೆ. ಈ ಕೊರೋನಾ ರೋಗವನ್ನು ನಾವು ಗೆದ್ದು ಬರಬಹುದು ಎಂಬ ವಿಶ್ವಾಸವನ್ನು ಹೊಂದಿದ್ದಾರೆ. ಮಾಜಿ ಶಾಸಕ ಸುರೇಶಬಾಬು ಅವರು “ಕಾಯಕವೇ ಕೈಲಾಸ” ವೆಂದು ಸಾರಿದ ಅಣ್ಣ ಬಸವಣ್ಣವರ ವಚನದಂತೆ ಹಾಗೂ ಅಂಬೇಡ್ಕರ್ ಮತ್ತು ಮದರ ತೇರೇಸಾ ಅವರ ಆಸೆಯದಂತೆ ಜನ ಸೇವೆಯಲ್ಲಿಯೇ ಕೈಲಾಸನ್ನು ಹಾಗೂ ಮಾಡುವ ಕಾರ್ಯದಲ್ಲಿ ತೃಪ್ತಿಯನ್ನು ಕಾಣುವ ಆಸೆಯನ್ನು ಹೊಂದಿದ್ದಾರೆ.

ಈ ಸಂದರ್ಭದಲ್ಲಿ ಎಮ್ಮಿಗನೂರಿನ ಶ್ರೀ ವಾಮದೇವ ಮಹಾಂತ ಶಿವಾಚಾರ್ಯ ಸ್ವಾಮೀಜಿ, ಸಮಾಜ ಕಲ್ಯಾಣ ಇಲಾಖೆಯ ಸಚಿವರಾದ ಬಿ ಶ್ರೀರಾಮುಲು, ಮಾಜಿ ಸಂಸದರಾದ ಸಣ್ಣ ಪಕೀರಪ್ಪ, ತಹಸೀಲ್ದಾರ್ ಗೌಸಿಯಾ, ತಾಲೂಕಾ ಆರೋಗ್ಯ ಅಧಿಕಾರಿ ಡಾ: ರಾಧಿಕಾ ಮುಂತಾದವರು ಉಪಸ್ಥಿತರಿದ್ದರು.
ವರದಿ ; ಮಹೇಶ ಶರ್ಮಾ, ಬೆಳಗಾವಿ

ಹೆಚ್ಚಿನ ಮಾಹಿತಿ ಹಾಗೂ ಸುದ್ದಿ ವಿವರಕ್ಕೆ ಹಾಗೂ ವಿಡಿಯೊ ನ್ಯೂಸ್ ವೀಕ್ಷಿಸಲು ಭಾವನ ಟಿವಿ ವೀಕ್ಷಿಸಿ. ಭಾವನ ಟಿವಿ ಇದು ನಿಮ್ಮ ವಾಹಿನಿ.
ಭಾವನಾ ಟಿವಿಯಲ್ಲಿ ಮತ್ತು ವೆಬ್ ಸೈಟ್‌ನಲ್ಲಿ ಜಾಹಿರಾತು ನೀಡಲು ಕರೆ ಮಾಡಿ, 9740723670, 9590906499

error: