April 24, 2024

Bhavana Tv

Its Your Channel

ವಿಧಾನ ಪರಿಷತ್ ಸಭಾಪತಿಗಳ ಅವಿರತ ಪ್ರಯತ್ನ – 204 ಬೋಧಕ ಹುದ್ದೆಗಳಿಗೆ ವೇತನಾನುದಾನ – ಬಸವರಾಜ ಎಸ್. ಹೊರಟ್ಟಿರವರ ಕಾರ್ಯಕ್ಷಮತೆಗೆ ಶಿಕ್ಷಕ ವೃಂದದಿoದ ಅಭಿನಂದನೆಗಳ ಮಹಾಪೂರ. .

ಬೆಂಗಳೂರು:- ಸಾರ್ವಜನಿಕ ಶಿಕ್ಷಣ ಇಲಾಖೆಯ ಧಾರವಾಡ ಕಛೇರಿ ಅಧೀನದಲ್ಲಿ ಬರುವ 07 ಶೈಕ್ಷಣಿಕ ಜಿಲ್ಲೆಯ ವ್ಯಾಪ್ತಿಯಲ್ಲಿನ ಖಾಸಗಿ ಅನುದಾನಿತ ಪ್ರೌಢಶಾಲೆಗಳಲ್ಲಿ ನಿವೃತ್ತಿ, ನಿಧನ, ರಾಜೀನಾಮೆ ಮತ್ತು ಇತ್ಯಾದಿ ಕಾರಣಗಳಿಂದ ದಿನಾಂಕಃ 31-12-2015ರ ಅಂತ್ಯಕ್ಕೆ ಖಾಲಿ ಆಗಿದ್ದ ಬೋಧಕ ಹುದ್ದೆಗಳ ಭರ್ತಿಗೆ ಸಭಾಪತಿ ಶ್ರೀ ಬಸವರಾಜ ಹೊರಟ್ಟಿರವರು ನಡೆಸಿದ 7 ವರ್ಷಗಳ ನಿರಂತರ ಪ್ರಯತ್ನ, ಹೋರಾಟ ಹಾಗೂ ಪರಿಶ್ರಮದ ಫಲವಾಗಿ ರಾಜ್ಯಸರ್ಕಾರ 204 ಬೋಧಕ ಹುದ್ದೆಗಳಿಗೆ ಅನುದಾನ ನೀಡಲು ಒಪ್ಪಿಗೆ ಸೂಚಿಸಿದೆ ಎಂದು ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘ(ರಿ) ಮತ್ತು ಉತ್ತರ ಕನ್ನಡ ಜಿಲ್ಲಾ ಪ್ರೌಢಶಾಲಾ ಮುಖ್ಯಾಧ್ಯಾಪಕರ ಸಂಘ (ರಿ) ಎಲ್ಲಾ ಪದಾಧಿಕಾರಿಗಳು, ಶಿಕ್ಷಕರು ಸಂತಸ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ಈ ಆದೇಶದಿಂದಾಗಿ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಯ ಖಾಸಗಿ ಅನುದಾನಿತ ಪ್ರೌಢಶಾಲೆಗಳಲ್ಲಿ ನಿವೃತ್ತಿ, ನಿಧನ, ರಾಜೀನಾಮೆ ಮತ್ತು ಇತ್ಯಾದಿ ಕಾರಣಗಳಿಂದ ಖಾಲಿ ಇದ್ದ ಹುದ್ದೆಗಳಿಗೆ ವೇತನಾನುದಾನ ನೀಡಿ, ಭರ್ತಿ ಮಾಡಿಕೊಳ್ಳಲು ಅವಕಾಶ ದೊರೆತಿದೆ. ಖಾಲಿ ಹುದ್ದೆಗಳ ಭರ್ತಿಗೆ ಅನುಮತಿ ನೀಡುವಂತೆ ಸಭಾಪತಿ ಶ್ರೀ ಬಸವರಾಜ ಹೊರಟ್ಟಿ ರವರು ಹಲವು ಬಾರಿ ಮಾನ್ಯ ಮುಖ್ಯಮಂತ್ರಿಗಳು, ಶಿಕ್ಷಣ ಸಚಿವರು ಹಾಗೂ ಶಿಕ್ಷಣ ಇಲಾಖೆ ಮತ್ತು ಆರ್ಥಿಕ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಒತ್ತಡ ಹೇರಿದ್ದಲ್ಲದೇ, ಶಿಕ್ಷಕರ ಖಾಲಿ ಹುದ್ದೆಗಳಿಂದಾಗಿ ಉತ್ತರ ಕರ್ನಾಟಕದ ಬಹುತೇಕ ಖಾಸಗಿ ಅನುದಾನಿತ ಶಾಲೆಗಳಲ್ಲಿ ಶೈಕ್ಷಣಿಕ ಪ್ರಗತಿ ಇಳಿಮುಖವಾಗುತ್ತಿರುವ ಬಗ್ಗೆ ಸರ್ಕಾರದ ಗಮನ ಸೆಳೆದಿದ್ದರು. ಅನುದಾನಿತ ಪ್ರೌಢಶಾಲೆಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿ ಕುರಿತಂತೆ ಸರ್ಕಾರದ ಮೇಲೆ ತೀವ್ರ ಒತ್ತಡ ಹೇರುವ ನಿಟ್ಟಿನಲ್ಲಿ ಮಾನ್ಯ ಸಭಾಪತಿ ಬಸವರಾಜ ಹೊರಟ್ಟಿರವರ ಅಧ್ಯಕ್ಷತೆಯಲ್ಲಿ ಹಾಗೂ ಸನ್ಮಾನ್ಯ ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿರವರ ನೇತೃತ್ವದಲ್ಲಿ ಮಾನ್ಯ ಶಿಕ್ಷಣ ಸಚಿವರಾದ ಶ್ರೀ ಬಿ.ಸಿ.ನಾಗೇಶ್, ಸೇರಿದಂತೆ ಹಿರಿಯ ಅಧಿಕಾರಿಗಳ ಸಭೆ ದಿಃ 21-12-2021ರಂದು ನಡೆಸಲಾಗಿತ್ತು. ಅದರ ಫಲಶೃತಿಯಾಗಿ ಸುಮಾರು 300ಕ್ಕೂ ಹೆಚ್ಚು ಖಾಲಿ ಇರುವ ಶಿಕ್ಷಕ ಹುದ್ದೆಗಳ ಭರ್ತಿಗೆ ಅನುಮತಿ ದೊರೆತಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಸಭಾಪತಿ ಮಾನ್ಯ ಶ್ರೀ ಬಸವರಾಜ ಹೊರಟ್ಟಿರವರ ಅಚಲ ಪ್ರಯತ್ನ ಹಾಗೂ ನಿರಂತರ ಅನುಸರಣೆಯ ಫಲವಾಗಿ ವಿಶೇಷವಾಗಿ ಉತ್ತರ ಕರ್ನಾಟಕ ಭಾಗದ ಶಿಕ್ಷಕರ ಖಾಲಿ ಹುದ್ದೆ ಭರ್ತಿ, ಶಿಕ್ಷಕರ ಬಾಕಿ ವೇತನ ಪಾವತಿ, ಪದವಿ ಪೂರ್ವ ಅನುದಾನಿತ ಕಾಲೇಜುಗಳ ಸಿಬ್ಬಂದಿಗಳ ಬಾಕಿ ವೇತನ ತುಟಿಭತ್ಯೆ ಪಾವತಿ, ಪದೋನ್ನತ್ತಿ ಬಡ್ತಿ, ವಾರ್ಷಿಕ ವೇತನ ಬಡ್ತಿ ಹಾಗೂ ನಿವೃತ್ತಿ ಹೊಂದಿದವರ ಗಳಿಕೆ ರಜ ನಗದೀಕರಣ ಹಾಗೂ ಬಿಲ್ಲುಗಳ ಪಾವತಿ ಸೇರಿದಂತೆ, ಶೈಕ್ಷಣಿಕ ಕ್ಷೇತ್ರದ ಹಲವಾರು ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗಿದೆ.
ಕಳೆದ ಫೆಬ್ರವರಿ ತಿಂಗಳಿನಲ್ಲಿ 114 ಬೋಧಕ ಹುದ್ದೆಗಳ ನೇಮಕಾತಿಗೆ ಅನುಮೋದನೆ ನೀಡಿ, ಅವುಗಳನ್ನು ವೇತನಾನುದಾನಕ್ಕೆ ಒಳಪಡಿಸುವಲ್ಲಿಯೂ ಸಹ ಮಾನ್ಯ ಸಭಾಪತಿಗಳ ಅವಿರತ ಪ್ರಯತ್ನ ಶ್ಲಾಘನೀಯವಾದುದು ಎಂದು ನೌಕರರ ಸಂಘ ತಿಳಿಸಿದೆ.
ದಿನಾಂಕಃ 21-02-2022 ರಂದು ರಾಜ್ಯದ ದಕ್ಷಿಣ ಭಾಗದ 110 ಬೋಧಕ ಹುದ್ದೆಗಳನ್ನು ವೇತನಾನುದಾನಕ್ಕೆ ಒಳಪಡಿಸಲು ಸಹ ಮಾನ್ಯ ಸಭಾಪತಿಯವರು ಬಹುವಾಗಿ ಶ್ರಮಿಸಿ, ಸಮಸ್ತ ಕರ್ನಾಟಕದ ಶಿಕ್ಷಕ ಬಂಧುಗಳಿಗೆ ನ್ಯಾಯ ಒದಗಿಸಿದ್ದಾರೆ.
ಇಂದು ದಿನಾಂಕಃ 22-04-2022 ರಂದು ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದ್ದು, 204 ಬೋಧಕ ಹುದ್ದೆಗಳನ್ನು ವೇತನಾನುದಾನಕ್ಕೆ ಒಳಪಡಿಸಲು ಅನುಮತಿ ನೀಡಲಾಗಿದೆ.
ಕಳೆದ 4 ದಶಕಗಳಿಂದ ಶಿಕ್ಷಕರು, ಶಿಕ್ಷಕ ಸಮುದಾಯ ಮತ್ತು ಶೈಕ್ಷಣಿಕ ವಲಯದ ಸಮಗ್ರ ಬೆಳವಣಿಗೆಗಾಗಿ ನಿರಂತರವಾಗಿ ಶ್ರಮಿಸುತ್ತಿರುವ ಮಾನ್ಯ ವಿಧಾನ ಪರಿಷತ್ತಿನ ಸಭಾಪತಿ ಶ್ರೀ ಬಸವರಾಜ ಹೊರಟ್ಟಿಯವರಿಗೆ ಮಾಧ್ಯಮಿಕ ಶಾಲಾ ನೌಕರರ ಸಂಘ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸುತ್ತದೆ ಎಂದು ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘ (ರಿ) ಜಿಲ್ಲಾಧ್ಯಕ್ಷ ಪ್ರಭಾಕರ ಬಂಟ, ಮತ್ತು ಉತ್ತರ ಕನ್ನಡ ಜಿಲ್ಲಾ ಪ್ರೌಢಶಾಲಾ ಮುಖ್ಯಾಧ್ಯಾಪಕರ ಸಂಘ (ರಿ) ಅಧ್ಯಕ್ಷರಾದ ಎಲ್.ಎಮ್.ಹೆಗಡೆಯವರು ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

error: