April 18, 2024

Bhavana Tv

Its Your Channel

ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ-2022ದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಹೊರತಾಗಿರುವುದಿಲ್ಲ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಪರಿಷತ್ತಿನ ಆವರಣದಲ್ಲಿ ಕನ್ನಡ ತಾಯಿ ಭುವನೇಶ್ವರಿ ಪುತ್ಥಳಿ ಅನಾವರಣ

ಬೆಂಗಳೂರು: ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ-2022ನ್ನು ಸರ್ವಕಾಲಕ್ಕೂ ಪರಿಣಾಮಕಾರಿಯಾಗಿ ಸಮ್ಮತವಾಗಿ ಕಾರ್ಯಗತವಾಗಬೇಕು. ಈ ಹಿನ್ನೆಲೆಯಲ್ಲಿ ವಿಧೇಯಕದ ಕುರಿತು ಸಮಗ್ರ ಚರ್ಚೆಯಾಗಲಿ ಎನ್ನುವ ಕಾರಣಕ್ಕೆ ಕಳೆದ ಅಧಿವೇಶನದಲ್ಲಿ ಮಂಡನೆ ಮಾಡಲಾಗಿದೆ. ಎಲ್ಲರ ಅಭಿಪ್ರಾಯಗಳನ್ನು ಗೌರವಪೂರ್ವಕವಾಗಿ ಸ್ವೀಕರಿಸಲಾಗುವುದು. ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ -2022ದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪಾತ್ರ ಬಹಳ ಮುಖ್ಯ. ವಿಧೇಯಕದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಒಳಗೊಳ್ಳಲಿದೆ. ಎಲ್ಲರ ಮನದಾಳದ ಭಾವನೆಯನ್ನು ಪಡೆದು, ನಮ್ಮ ಕಾಲಾವಧಿಯಲ್ಲಿಯೇ ಸಮಗ್ರ ಭಾಷಾ ಅಭಿವೃದ್ಧಿ ವಿಧೇಯಕ ಕಾನೂನು ಮಾಡುತ್ತೇವೆ ಎಂಬ ಭರವಸೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನೀಡಿದರು.
ಗುರುವಾರ ಸಂಜೆ ನಗರದ ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನ ಆವರಣದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ‘ಕನ್ನಡ ತಾಯಿ ಭುವನೇಶ್ವರಿ’ಯ ಪುತ್ಥಳಿಯನ್ನು ಅನಾವರಣಗೊಳಿಸಿ ಮಾತನಾಡುತ್ತಿದ್ದರು. ಕನ್ನಡ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಲು ವಿಜ್ಞಾನ ತಂತ್ರಜ್ಞಾನವನ್ನು ಬಳಸಿಕೊಂಡು ಶಕ್ತಿಯುತವಾಗಿ ಮುನ್ನುಗ್ಗಬೇಕು. ಹಿಂದಿನ ಸಾಧನೆ ಹಾಗೂ ಮುಂದಿನ ಯೋಜನೆಗಳನ್ನು ಕನ್ನಡದ ಮೂಲಕ ಸಮಾಜಕ್ಕೆ ನೀಡುವ ಮೂಲಕ ಕನ್ನಡವನ್ನು ಅರ್ಥಪೂರ್ಣವಾಗಿ ಬೆಳೆಸಬೇಕು. ನಾಗರಿಕತೆ ಬೆಳೆದಂತೆ ನಮ್ಮ ಸಂಸ್ಕೃತಿ ಕಳೆದು ಹೋಗಬಾರದು. ಕನ್ನಡ ಸಂಸ್ಕೃತಿಯಲ್ಲಿ ಸಾಕಷ್ಟು ಶಕ್ತಿ ಇದೆ. ನಾಗರಿಕತೆಯೊಂದಿಗೆ ನಮ್ಮ ಸಂಸ್ಕೃತಿಯನ್ನೂ ಬೆಳೆಸಬೇಕು. ನಮ್ಮ ಹತ್ತಿರ ಇರುವುದು ನಾಗರಿಕತೆ, ಬೆಳೆಸಬೇಕಾಗಿರುವುದು ಸಂಸ್ಕೃತಿ ಎಂದು ಹೇಳಿದರು.

ತಾಯಿ ಭುವನೇಶ್ವರಿಯ ಆಶೀರ್ವಾದಿದಂದ ಕನ್ನಡ ನಾಡಿನಲ್ಲಿ ದೊಡ್ಡ ಸಾಮ್ರಾಜ್ಯವೇ ಬೆಳೆದುನಿಂತಿದೆ. ಮುಂದೆಯೂ ತಾಯಿಯ ಆಶೀರ್ವಾದ ಕನ್ನಡ ಸಾಹಿತ್ಯ ಪರಿಷತ್ತಿನ ಎಲ್ಲ ಕೆಲಸಗಳಿಗೂ ಇರಲಿ. ಹಾವೇರಿಯಲ್ಲಿ ನಡೆಯಲಿರುವ 86ನೇ ಸಾಹಿತ್ಯ ಸಮ್ಮೇಳನವನ್ನು ಅದ್ಭುತವಾಗಿ ಸಂಘಟಿಸಲಾಗುವುದು. ಇದು ಎಲ್ಲಾ ಕಾಲಕ್ಕೂ ಮಾದರಿಯಾಗುವಂತೆ ನಡೆಯಲಿದೆ ಎನ್ನುವುದು ನನ್ನ ವಿಶ್ವಾಸ ಎಂದು ಹೇಳಿದರು. ಶಾಂತಚಿತ್ತಳಾಗಿ ನಮ್ಮೆಲ್ಲರಿಗೂ ಜ್ಞಾನವನ್ನು ನೀಡುವ ಮೂಲಕ ನಮ್ಮ ಬದುಕನ್ನು ಕಟ್ಟಿಕೊಳ್ಳುವ ಅವಕಾಶ ಮಾಡಿಕೊಟ್ಟು,ಕನ್ನಡಕ್ಕೆ ಆತ್ಮವನ್ನು ಕೊಟ್ಟ ತಾಯಿ ಭುವನೇಶ್ವರಿಯ ಪುತ್ಥಳಿ ಸ್ಥಾಪನೆ ಆಗಿರಲಿಲ್ಲ ಎನ್ನುವುದೇ ಆಶ್ಚರ್ಯ ಹಾಗೂ ಬೇಸರದ ಸಂಗತಿಯಾಗಿದೆ. ಅದರೆ ಯಾವ ಕಾಲಕ್ಕೆ ಏನು ಆಗಬೇಕು ಅದು ಆಗೇ ಆಗುತ್ತದೆ. ನಾಡೋಜ ಡಾ. ಮಹೇಶ ಜೋಶಿ ಅವರ ಕಾಲದಲ್ಲಿ ತಾಯಿ ಭುವನೇಶ್ವರಿಯ ಪುತ್ಥಳಿ ಸ್ಥಾಪನೆಯಾಗಬೇಕು ಎನ್ನುವುದು ದೈವ ಸಂಕಲ್ಪವೇ ಸರಿ. ಕನ್ನಡ ಹರಿದು ಹಂಚಿ ಹೋದಾಗ ಕನ್ನಡವನ್ನು ಒಟ್ಟುಗೂಡಿಸುವ ಹಿನ್ನೆಲೆಯಲ್ಲಿ ಚಳವಳಿ ಮಾಡಿ ಒಂದುಗೂಡಿಸದಿದ್ದರೆ ನಾವೆಲ್ಲಾ ಒಂದಾಗುತ್ತಿರಲಿಲ್ಲ. ಅಂಥವರನ್ನು ನಾವು ಗುರುತಿಸಬೇಕು, ನೆನೆಯಕೊಳ್ಳಬೇಕು. ನಮ್ಮ ಇತಿಹಾಸವನ್ನು ನಾವು ಅಭಿಮಾನ ಪೂರ್ವಕವಾಗಿ ಗುರುತಿಸಿದರೆ ಹೊರಗಿಂದ ಬಂದವರು ನಮ್ಮ ಸಂಸ್ಕೃತಿ ಭಾಷೆಯನ್ನು ಗೌರವಿಸುತ್ತಾರೆ.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಮಾತನಾಡಿ, ನಾಡಿಗೊಂದು ಅಧಿದೇವತೆ, ಭಾಷೆಗೊಂದು ಸುಂದರ ಲಾಂಛನವನ್ನು ಹೊಂದಿರುವ ಅಪರೂಪದ ಭಾಷೆ ನಮ್ಮ ಕನ್ನಡ. “ಕನ್ನಡದ ಕುಲದೇವತೆ ಭುವನೇಶ್ವರಿ ತಾಯಿ”ಯನ್ನು ಮಡಿಲಿನಲ್ಲಿ ಇಟ್ಟುಕೊಂಡು, ಕನ್ನಡತನವನ್ನು ಎದೆಯ ಗುಂಡಿಯಲ್ಲಿ ತುಂಬಿಟ್ಟುಕೊAಡು ಕನ್ನಡ ಸಾಮ್ರಾಜ್ಯ ಕಟ್ಟಿದೆ. “ಕನ್ನಡಿಗರ ಕಾಶಿ” ಎಂದು ಕನ್ನಡಿಗರಿಂದ ಪೂಜಿತವಾದ ಈ ತಾಯಿ ಭುವನೇಶ್ವರಿ. ವಿಜಯನಗರ ಸಾಮ್ರಾಜ್ಯದ ಸ್ಥಾಪನೆಗೆ ಕಾರಣರಾದ ವಿದ್ಯಾರಣ್ಯರು ಕನ್ನಡಿಗರ ಸಾಮ್ರಾಜ್ಯ ಸ್ಥಾಪನೆಗೆ ಆಶೀರ್ವಾದ ಕೋರಿ ಭುವನೇಶ್ವರಿ ದೇವಿಯನ್ನು ಕುರಿತು ತಪಸ್ಸು ಮಾಡಿದರು ಎಂಬ ಚರಿತ್ರೆಯನ್ನು ನೆನಪಿಸಿದರು.
ಕನ್ನಡ ನಾಡಿನಲ್ಲಿ ಮೊಟ್ಟ ಮೊದಲ ಬಾರಿಗೆ ಕನ್ನಡ ತಾಯಿ ಭುವನೇಶ್ವರಿ ಪುತ್ಥಳಿಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಆವರಣದಲ್ಲಿ ಸ್ಥಾಪಿಸಿ, ಅನಾವರಣಗೊಳಿಸಿದ್ದು ಸಮಸ್ತ ಕನ್ನಡಿಗರ ಹೆಮ್ಮೆಗೆ ಕಾರಣವಾಗಿದೆ. ಈ ಪುತ್ಥಳಿಯು 6.25 ಅಡಿ ಎತ್ತರವಿದ್ದು, ಪ್ರಭಾವಳಿ, ಚತುರ್ಭುಜ, ಪದ್ಮಪೀಠಾಸೀನ, ಪಾಶಾಂಕುಶ, ಅಭಯವರದ ಮುದ್ರೆಯುಳ್ಳ, ಕನ್ನಡ ಧ್ವಜವನ್ನು ಬಲಗೈಯಲ್ಲಿ ಹಿಡಿದಿರುವ ಭುವನೇಶ್ವರಿಯ ಚಿತ್ತಾಕರ್ಷಕ ಪುತ್ಥಳಿ ಕನ್ನಡಿಗರಲ್ಲಿ ಭಕ್ತಿ-ಭಾವವನ್ನು ಉದ್ದೀಪನಗೊಳಿಸುತ್ತದೆ ಎಂದು ನಾಡೋಜ ಡಾ. ಮಹೇಶ ಜೋಶಿ ಹೇಳಿದರು.
“ತಾಯಿ ಭುವನೇಶ್ವರಿ ದೇವಿ ರಥವನ್ನು ಏರಿಹಳು, ದಾರಿ ಬಿಡಿ ದಾರಿ ಬಿಡಿ; ಅಡ್ಡ ಬಾರದಿರಿ” ಎಂದು ಕನ್ನಡದ ಕಣ್ವ ಬಿ.ಎಂ. ಶ್ರೀಕಂಠಯ್ಯ ಅವರು ಹಾಡಿ ಹೊಗಳಿದ್ದರು. ಮೈಸೂರು ಅರಸರು ಭುವನೇಶ್ವರಿಯ ಆರಾಧಕರಾಗಿದ್ದರು, ಅವರ ಆಸ್ಥಾನ ವಿದ್ವಾಂಸರಾದ ಮುತ್ತಯ್ಯ ಭಾಗವತರ್ ಅವರು “ಭುವನೇಶ್ವರಿಯ ನೆನೆ ಮಾನಸವೇ, ಭವ ಬಂಧನಗಳ ಭೀತಿಯ ಬಿಡುವೆ” ಎಂಬ ಕೀರ್ತನೆ ರಚಿಸಿ ಹಾಡಿದ್ದರು. ಕನ್ನಡದ ಕುಲಪುರೋಹಿತರಾದ ಆಲೂರು ವೆಂಕಟರಾಯರು ಕರ್ನಾಟಕದ ಏಕೀಕರಣಕ್ಕಾಗಿ ಭುವನೇಶ್ವರಿ ತಾಯಿಯನ್ನು ಆರಾಧಿಸಿ, ಸ್ಫೂರ್ತಿ ಪಡೆದಿರುವ ಐತಿಹಾಸವನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಸ್ಮರಿಸಿದರು.
ಮುಖ್ಯ ಅತಿಥಿಗಳಾಗಿ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಶಿವರಾಜ ಪಾಟೀಲ್ ಮಾತನಾಡಿ, ಈ ದಿನ ಕನ್ನಡ ಸಾಹಿತ್ಯ ಪರಿಷತ್ತಿಗೆ ಐತಿಹಾಸಿಕ ದಿನ. 108 ವರ್ಷಗಳ ಸಮಗ್ರ ಇತಿಹಾಸದಲ್ಲಿ ಇಂದು ಕನ್ನಡ ಸಾಹಿತ್ಯ ಪರಿಷತ್ತಿಗೆ ಮರೆಯಲಾಗದ ದಿನ. ಕನ್ನಡ ತಾಯಿ ಭುವನೇಶ್ವರಿ ಪುತ್ಥಳಿ ಅನಾವರಣ ಮಾಡಿದ್ದು ಕನ್ನಡಿಗರ ಹೆಮ್ಮೆಗೆ ಕಾರಣವಾಗಿದೆ. ಕನ್ನಡಿಗರು ನಾಡಿನ ಒಳಗೆ ನಾಡಿನ ಹೊರಗೆ ಎಲ್ಲೇ ಇದ್ದರೂ ಕನ್ನಡಿಗರು ಯಾವ ಧರ್ಮದವರಾಗಿರಲಿ ಯಾವುದೇ ಪಂಥದವರಾಗಿರಲಿ ಅವರಿಗೆ ತಾಯಿ ಭುವನೇಶ್ವರಿಯೇ ಕುಲದೇವತೆ. ಆಗಿನ ಕನ್ನಡ ಸಾಹಿತ್ಯ ಪರಿಷತ್ತಿಗೂ ಈಗಿನ ಸಾಹಿತ್ಯ ಪರಿಷತ್ತಿಗೂ ಅಜಾಗಜಾಂತರ ವ್ಯತ್ಯಾಸವಿದೆ. ಈಗ ಇಲ್ಲಿನ ವಾತಾವರಣವೇ ಕನ್ನಡ ಮಯವಾಗಿದೆ. ಇದಕ್ಕೆ ಕಾರಣ ನಾಡೋಜ ಡಾ. ಮಹೇಶ ಜೋಶಿ ಅವರ ಕನ್ನಡದ ಮೇಲಿನ ಅಭಿಮಾನವೇ ಕಾರಣ ಎಂದು ಅಭಿಮಾನ ವ್ಯಕ್ತಪಡಿಸಿದರು.
ಮುಖ್ಯ ಅತಿಥಿಗಳಾಗಿ “ತರಂಗ”ವಾರಪತ್ರಿಕೆ ವ್ಯವಸ್ಥಾಪಕ ಸಂಪಾದಕರಾದ ಸಂಧ್ಯಾ ಎಸ್. ಪೈ ಮಾತನಾಡಿ, ಕನ್ನಡ ಸೊಗಡಿನ ಭಾಷೆ. ಇಲ್ಲಿ ಧ್ವನಿಸಿದರೆ ಸಂಗೀತದAತೆ ಇರುತ್ತದೆ ಆದರೂ ಕನ್ನಡದಲ್ಲಿ ಮಾತನಾಡುವುದೇ ಕಡಿಮೆಯಾಗಿದೆ. ಮಕ್ಕಳಲ್ಲಿ ಕನ್ನಡ ಮಾತನಾಡದೆ ಇಂಗ್ಲಿಷ ಮಾತನಾಡಿದರೆ ಭವಿಷ್ಯ ಉಜ್ವಲವಾಗುತ್ತದೆ ಎನ್ನುವ ಭಾವನೆ ಪೋಷಕರಿಗೆ ಇದೆ. ಯಾರ ಭವಿಷ್ಯವನ್ನು ಯಾರೂ ಕಂಡಿಲ್ಲ ಎನ್ನುವ ಸತ್ಯ ಅರಿಯಬೇಕಾಗಿದೆ. ಕನ್ನಡ ಓದುವ, ಬರೆಯವ ಹವ್ಯಾಸ ಕಮ್ಮಿಯಾಗುತ್ತಿದೆ. ಮಕ್ಕಳಿಗೆ ಕನ್ನಡ ಕಡ್ಡಾಯ ಮಾಡುವ ಬದಲಿಗೆ ಪಾಲಕರಲ್ಲಿ ಕನ್ನಡದ ಅಭಿಮಾನ ಹುಟ್ಟಿಕೊಳ್ಳಬೇಕು ಎಂದರು.
ದಿವ್ಯ ಸಾನ್ನಿಧ್ಯವಹಿಸಿದ ಶ್ರೀಮತ್ ಸುತ್ತೂರು ವೀರ ಸಿಂಹಾನಾಧೀಶ್ವರ ಪರಮ ಪೂಜ್ಯ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ತಮ್ಮ ಆಶೀರ್ವಚನದಲ್ಲಿ ಮೈಸೂರಿನ ಒಡೆಯರು ಕನ್ನಡ ತಾಯಿ ಭುವನೇಶ್ವರಿಯನ್ನು ತಮ್ಮ ಅರಮನೆಯ ದಕ್ಷಿಣ ದ್ವಾರದಲ್ಲಿ ಸ್ಥಾಪನೆ ಮಾಡಿ ನಿತ್ಯ ಪೂಜೆ ಮಾಡುತ್ತಿರುವುದು ಕನ್ನಡ ತಾಯಿಗೆ ನೀಡಿದ ಹೆಮ್ಮೆಯ ಸಂಗತಿ. ಭಾಷೆ ಬೆಳೆಯುವಾಗ ಅನ್ಯ ಭಾಷೆಗಳು ಕನ್ನಡದಲ್ಲಿ ಸೇರಿ ಸಮೀಕರಣಗೊಂಡಿದೆ. ಅದನ್ನು ಬಳಸುವುದು ತಪ್ಪು ಅಂತ ಅಲ್ಲ. ಆದರೆ ಆದರೆ ಕನ್ನಡ ಬೆಳೆಸಬೇಕು ಎಂದರೆ ಕನ್ನಡವನ್ನು ಓದಬೇಕು, ಬರೆಯಬೇಕು. ಕನ್ನಡವನ್ನು ಬೆಳೆಸುವ ಕೆಲಸ ಕನ್ನಡ ಸಾಹಿತ್ಯ ಪರಿಷತ್ತಿನದ್ದು ಮಾತ್ರವಲ್ಲ ಸಮಸ್ತ ಕನ್ನಡಿಗರ ಕೆಲಸವಾಗಿದೆ. ಇಂದಿನ ದಿನಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಸಾಕಷ್ಟು ಉತ್ತಮ ಕಾರ್ಯಚಟುವಟಿಕೆಗಳನ್ನು ಹಾಕಿಕೊಂಡಿದೆ. ಪರಿಷತ್ತು ನಿರಂತರವಾಗಿ ಕೆಲಸ ಕಾರ್ಯಗಳನ್ನು ನಿರ್ವಹಿಸಲಿ ಅದಕ್ಕೆ ಕನ್ನಡ ತಾಯಿ ಭುವನೇಶ್ವರಿಯ ಆಶೀರ್ವಾದ ಇರಲಿ ಎಂದರು.
ಇದೇ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿಗೆ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮದವರು ನೀಡಿದ ಎಲ್‌ಇಡಿ ಪರದೆಯನ್ನು ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ಅನಾವರಣ ಆಡಿದರು. ಈ ಸಂದರ್ಭದಲ್ಲಿ ಕ್ರೆಡಲ್‌ನ ವ್ಯವಸ್ಥಾಪಕ ನಿರ್ದೇಶಕರಾದ ಎಂ.ಜಿ. ಹಿರೇಮಠ ಉಪಸ್ಥಿತರಿದ್ದರು. ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ನೇ.ಭ. ರಾಮಲಿಂಗ ಶೆಟ್ಟಿ ಅವರು ಸಾಗತಿಸಿದರು. ಕೆ. ಮಹಾಲಿಂಗಯ್ಯ ಅವರು ವಂದಿಸಿದರು. ಗೌರವ ಕೋಶಾಧ್ಯಕ್ಷರಾದ . ಬಿ.ಎಂ. ಪಟೇಲ್‌ಪಾಂಡು ಅವರು ಕಾರ್ಯಕ್ರಮ ನಿರೂಪಿಸಿದರು.
ತಾಯಿ ಭುವನೇಶ್ವರಿ ಆಶಿರ್ವಾದ ರೆವರೆಂಡ್ ಫರ್ಡಿನಂಡ್ ಕಿಟ್ಟಲ್ರಿಗಿತ್ತು
ತಾಯಿ ಭುವನೇಶ್ವರಿ ಪುತ್ಥಳಿ ಅನಾವರಣದ ಹೆಮ್ಮೆಯ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿಯಾಗಲು ಕನ್ನಡದ ಮೊದಲ ನಿಘಂಟುಕಾರ ರೆವರೆಂಡ್ ಫರ್ಡಿನಂಡ್ ಕಿಟ್ಟಲ್’ ಅವರ ಮರಿಮೊಮ್ಮಗಳಾದ ಆಲ್ಮುತ್ ಕಿಟ್ಟಲ್ ಅವರು ಹಾಗೂ ಕಿಟ್ಟಲ್ ಕುಟುಂಬ ಸ್ನೇಹಿತರಾದ ಶ್ರೀ ಯಾನ್ ಸ್ಟಾರ್ಮರ್’ ಅವರು ಜರ್ಮನಿಯಿಂದ ಆಗಮಿಸಿದ್ದರು. ರೆವರೆಂಡ್ ಫರ್ಡಿನಂಡ್ ಕಿಟ್ಟಲ್’ ಅವರ ಮರಿಮೊಮ್ಮಗಳಾದ ಆಲ್ಮುತ್ ಕಿಟ್ಟಲ್ ಮಾತನಾಡಿ, ತಾಯಿ ಭುವನೇಶ್ವರಿಯ ಪುತ್ಥಳಿ ಕಂಡು ಭಾವಾವೇಶಗೊಂಡಿದ್ದೇನೆ, ಕನ್ನಡ ಭಾಷೆ ಗಟ್ಟಿಯಾಗಿರಲು ಕನ್ನಡ ತಾಯಿಯ ಕೃಪೆಯೆ ಕಾರಣ. ತಮ್ಮ ಕುಟುಂಬದ ಹಿರಿಯರಿಗೆ ಈ ತಾಯಿ ಭುವನೇಶ್ವರಿಯ ಆರ್ಶಿವಾದವಿತ್ತು ಎಂದು ಹೇಳಿದರು.
ಕನ್ನಡಿಗರ ಭಕ್ತಿ-ಭಾವ ಉದ್ದೀಪನಗೊಳಿಸುವ ಭಾವನಾತ್ಮಕ ಭುವನೇಶ್ವರಿ ಪುತ್ಥಳಿ.
ಕನ್ನಡ ಸಾಹಿತ್ಯ ಪರಿಷತ್ತಿನ ಆವರಣದಲ್ಲಿ ಸ್ಥಾಪಿಸಲಾದ ತಾಯಿ ಭುವನೇಶ್ವರಿ ಪುತ್ಥಳಿಯನ್ನು ಸ್ತಪತಿ ಕ್ರಿಯೇಶನ್ಸ್ನ ಕಲಾ ನಿರ್ದೇಶಕ ಶ್ರೀ ಎನ್. ಶಿವದತ್ತ ಅವರು ನಿರ್ಮಿಸಿದ್ದು, ಈ ಪುತ್ಥಳಿಯು 6.25 ಅಡಿ ಎತ್ತರವಿದೆ. ಪ್ರಭಾವಳಿ, ಚತುರ್ಭುಜ, ಪದ್ಮಪೀಠಾಸೀನ, ಪಾಶಾಂಕುಶ, ಅಭಯವರದ ಮುದ್ರೆಯುಳ್ಳ, ಕನ್ನಡ ಧ್ವಜವನ್ನು ಬಲಗೈಯಲ್ಲಿ ಹಿಡಿದಿರುವ ಭುವನೇಶ್ವರಿ ಪುತ್ಥಳಿ ಇದಾಗಿದೆ. ಕನ್ನಡಿಗರಲ್ಲಿ ಭಕ್ತಿ-ಭಾವವನ್ನು ಉದ್ದೀಪನಗೊಳಿಸುವ ಭಾವನಾತ್ಮಕ ಕನ್ನಡ ತಾಯಿ ಭುವನೇಶ್ವರಿ ಪುತ್ಥಳಿ ಲೋಕಾರ್ಪಣೆಯಾಗಿದೆ.

error: