April 20, 2024

Bhavana Tv

Its Your Channel

ಜೂನ್ 1ರಿಂದ ಆರಂಭಗೊಳ್ಳಲಿರುವ ಎಲ್ಲಾ ನ್ಯಾಯಾಲಯಗಳಿಗೆ ಹೈಕೋರ್ಟ್ ಮಾರ್ಗಸೂಚಿ

ಬೆಂಗಳೂರು : ಲಾಕ್ ಡೌನ್ ಬಳಿಕ ಸ್ಥಗಿತಗೊಂಡಿದ್ದ ರಾಜ್ಯದ ಎಲ್ಲ ನ್ಯಾಯಾಲಯಗಳು ಜೂನ್ 1ರಿಂದ ಕಾರ್ಯರಂಭ ಮಾಡಲು ಹೈಕೋರ್ಟ್ ಸೂಚಿಸಿದೆ. ಇದೇ ವೇಳೆ ನ್ಯಾಯಾಲಯಗಳು ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಹೇಗೆ ಕಾರ್ಯನಿರ್ವಹಿಸಬೇಕು ಎಂಬುದಕ್ಕೆ ಸಂಬಂಧಿಸಿದಂತೆ ಪ್ರಮಾಣಿತ ಕಾರ್ಯಾಚರಣೆ ವಿಧಾನ (ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ -ಎಸ್‌ಒಪಿ) ವನ್ನು ತಿಳಿಸಿದೆ.

ಈ ಕುರಿತು ಮುಖ್ಯ ನ್ಯಾಯಮೂರ್ತಿ ಎ ಎಸ್ ಓಕ ಅವರ ಆದೇಶದ ಮೇರೆಗೆ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ರಾಜೇಂದ್ರ ಬಾದಾಮಿಕರ್ ಅವರು ಮಂಗಳವಾರ ನೋಟಿಫಿಕೇಶನ್ ಹೊರಡಿಸಿದ್ದು ಜಿಲ್ಲಾ ನ್ಯಾಯಾಲಯಗಳು ಮತ್ತು ನ್ಯಾಯಾಂಗ ಅಧಿಕಾರಿಗಳು ಹೇಗೆ ಕಾರ್ಯ ನಿರ್ವಹಿಸಬೇಕು ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

ಎಸ್ ಓ ಪಿ ಮಾರ್ಗಸೂಚಿಗಳು :

  1. ಎಲ್ಲ ನ್ಯಾಯಾಂಗ ಅಧಿಕಾರಿಗಳು ಜೂನ್ 1ರಿಂದ ಕಾರ್ಯಗಳನ್ನು ಎಂದಿನಂತೆ ಆರಂಭಿಸಬೇಕು.
  2. ಮೊದಲ ಎರಡು ವಾರ ಸುನಾವಣೆ(ಹೀಯರಿಂಗ್) ಹಂತದ ಪ್ರಕರಣಗಳನ್ನು ಲಿಸ್ಟ್ ಮಾಡಬೇಕು. ಬೆಳಗಿನ ಕಲಾಪ 10 ಮತ್ತು ಮಧ್ಯಾಹ್ನದ ಕಲಾಪದಲ್ಲಿ 10 ಪ್ರಕರಣಗಳನ್ನು ವಿಚಾರಣೆ ನಡೆಸಬೇಕು. ಈ ಅವಧಿಯಲ್ಲಿ ವಕೀಲರು ಗೈರುಹಾಜರಾದಲ್ಲಿ ವಿಚಾರಣೆ ನಡೆಸಿ ಕೂಡದು.
  3. ವಕೀಲರಷ್ಟೇ ಹಾಜರಾಗಿ ವಾದ ಮಂಡಿಸಬೇಕು. ಖುದ್ದು ವಾದ ಮಂಡಿಸುವ ಪಾರ್ಟಿ ಇನ್ ಪರ್ಸನ್ ವ್ಯಕ್ತಿಗಳಿಗೆ ಕೋರ್ಟ್ ಗೆ ಬರಲು ಅನುಮತಿಸಬಾರದು. ಇವರಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕವಷ್ಟೇ ಅವಕಾಶ ನೀಡಬೇಕು. 65 ವರ್ಷ ಮೇಲ್ಪಟ್ಟ ವಕೀಲರಿಗೆ ವಿಡಿಯೋಕಾನ್ ಫ್ರೆಂಡ್ಸ್ ಸೌಲಭ್ಯ ಒದಗಿಸಬಹುದು.
  4. ವಕೀಲರ ಗುಮಾಸ್ತರಿಗೆ ಮತ್ತು ಪಕ್ಷ ಗಾರರಿಗೆ ಕೋರ್ಟ್ ಹಾಲ್ ಒಳಗೆ ಬರಲು ಅನುಮತಿಸಬಾರದು.* ಎರಡು ವಾರಗಳ ಬಳಿಕ ಹೈಕೋರ್ಟ್ ಸೂಚನೆ ನೀಡಿದ ಮೇಲೆ, ಹಿಯರಿಂಗ್ ಪ್ರಕರಣಗಳ ಜೊತೆಗೆ ಸಾಕ್ಷ್ಯ ನುಡಿಯುವ ಹಂತದ ಪ್ರಕರಣಗಳ ವಿಚಾರಣೆ ನಡೆಸಬಹುದು.
  5. ಸಾಕ್ಷಿಗಳ ವಿಚಾರಣೆಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕವೇ ನಡೆಸಬೇಕು.
  6. ವಿಚಾರಣೆ ಸಂದರ್ಭದಲ್ಲಿ ನ್ಯಾಯಾಲಯದ ಒಳಗೆ ಇಪ್ಪತ್ತಕ್ಕಿಂತ ಹೆಚ್ಚು ಜನ ಇರಬಾರದು. ಒಂದು ವೇಳೆ ಇಪ್ಪತ್ತಕ್ಕಿಂತ ಹೆಚ್ಚು ಜನರು ಸೇರಿದ್ದರೆ ಅದನ್ನು ನ್ಯಾಯಾಂಗ ಅಧಿಕಾರಿಯೇ ಜವಾಬ್ದಾರಿಯುತವಾಗಿ ನಿರ್ವಹಿಸಬೇಕು.
  7. ಲಿಸ್ಟ್ ಆಗಿದ್ದಂತಹ ಪ್ರಕರಣಗಳ ವಿಚಾರಣೆ ಮುಂದೂಡಲ್ಪಟ್ಟಲ್ಲಿ ಆ ಕುರಿತು ವಕೀಲರಿಗೆ ಮುಂಚಿತವಾಗಿ ಎಸ್‌ಎಂಎಸ್ ಕಳುಹಿಸುವುದು.
  8. ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರು ತಮ್ಮ ವ್ಯಾಪ್ತಿಗೊಳಪಡುವ ನ್ಯಾಯಾಂಗ ಅಧಿಕಾರಿಗಳಿಗೆ ಕೆಲಸದ ಅವಧಿ ಮತ್ತು ಯಾವ ಕೆಲಸ ನಿರ್ವಹಿಸಬೇಕು ಎಂಬುದನ್ನು ಸೂಚಿಸಬೇಕು. ಯಾವುದೇ ಜಿಲ್ಲೆ ಅಥವಾ ತಾಲ್ಲೂಕಿನ ಕೋರ್ಟ್ ಸಮುಚ್ಚಯದಲ್ಲಿ ಹತ್ತಕ್ಕಿಂತ ಹೆಚ್ಚು ಕೋರ್ಟ್ ಗಳಿದ್ದರೆ ಅವುಗಳಲ್ಲಿ ಶೇಕಡಾ 50 ರಷ್ಟು ನ್ಯಾಯಾಂಗ ಅಧಿಕಾರಿಗಳು ರೊಟೇಷನ್ ಆಧಾರದ ಮೇಲೆ ನ್ಯಾಯಾಲಯದ ಮತ್ತು ಆಡಳಿತದ ಕಾರ್ಯಗಳನ್ನು ನಿರ್ವಹಿಸಬೇಕು.
  9. ವಕೀಲರು, ಸಿಬ್ಬಂದಿ ಮತ್ತು ಕಕ್ಷೀದಾರರು ಕಡ್ಡಾಯವಾಗಿ ಒಂದು ಮೀಟರ್ ಆದರೂ ಸಮಾಜಿಕ ಅಂತರ ಕಾಯ್ದುಕೊಳ್ಳಬೇಕು. ರಾಜ್ಯ ಮತ್ತು ಕೇಂದ್ರ ಸರ್ಕಾರದ ಆರೋಗ್ಯ ಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು.
  10. ಸಿ ಗ್ರೂಪ್ ಸಿಬ್ಬಂದಿಯನ್ನು ಪಾಳಿ(ಶಿಫ್ಟ್) ಮತ್ತು ರೊಟೇಷನ್ ಆಧಾರದ ಮೇಲೆ ನಿಯೋಜಿಸಬೇಕು. ಗ್ರೀನ್ ಮತ್ತು ಆರೆಂಜ್ ಜೋನ್ ಜಿಲ್ಲೆಗಳ ಬಿ ಮತ್ತು ಡಿ ಗ್ರೂಪ್ ಸಿಬ್ಬಂದಿ ಎಲ್ಲರೂ ಕರ್ತವ್ಯಕ್ಕೆ ಹಾಜರಾಗಬೇಕು. ರೆಡ್ ಜೋನ್ ಜಿಲ್ಲೆಗಳಲ್ಲಿ ಪ್ರಧಾನ ಜಿಲ್ಲಾ ನ್ಯಾಯಾಧೀಶರು ಅಗತ್ಯ ಕ್ರಮ ಕೈಗೊಳ್ಳಬೇಕು.
  11. ಕಂಟೈನ್ಮೆಂಟ್ ಏರಿಯಾಗಳಾಗಿದ್ದರೆ ಸುಪ್ರೀಂ ಮತ್ತು ಹೈಕೋರ್ಟ್ ಮಾರ್ಗಸೂಚಿಗಳನ್ನು ಅಳವಡಿಸಿಕೊಂಡು ವೀಡಿಯೋ ಕಾನ್ಫರೆನ್ಸ್ ಮೂಲಕ ಅಷ್ಟೇ ಪ್ರಕರಣಗಳ ವಿಚಾರಣೆ ನಡೆಸಬೇಕು.
  12. ಹೊಸ ಪ್ರಕರಣಗಳನ್ನು ನೇರವಾಗಿ ಬಂದು ದಾಖಲಿಸುವ ಮುನ್ನ ಇ-ಮೇಲ್ ಮೂಲಕ ಪೂರ್ವಾನುಮತಿ ಪಡೆದುಕೊಂಡಿರಬೇಕು.‌ಇದಕ್ಕೆ ಅಗತ್ಯ ಪ್ರಮಾಣದ ಕೌಂಟರ್ ಗಳನ್ನು ಕೋರ್ಟ್ ಮುಖ್ಯ ಕಟ್ಟಡದ ಹೊರಗೆ ಅಥವಾ ಬದಲಿ ಕಟ್ಟಡದಲ್ಲಿ ಸ್ಥಾಪಿಸಬೇಕು. ಫೈಲಿಂಗ್ ಸಂದರ್ಭದಲ್ಲಿ ಸಾಮಾಜಿಕ ಅಂತರ ಕಡ್ಡಾಯ. ಫೈಲಿಂಗ್ ಕಾರಣಕ್ಕಾಗಿ ಯಾವುದೇ ಸಂದರ್ಭದಲ್ಲಿ ವಕೀಲರು, ಗುಮಾಸ್ತರು ಅಥವಾ ಪಾರ್ಟಿ ಇನ್ ಪರ್ಸನ್ ಮುಖ್ಯ ಕೋರ್ಟ್ ಕಟ್ಟಡ ಪ್ರವೇಶಿಸಕೂಡದು. ಈ ವಿಚಾರದಲ್ಲಿ ಜಿಲ್ಲಾ ಪ್ರಧಾನ ನ್ಯಾಯಾಧೀಶರು ಮೇಲುಸ್ತುವಾರಿ ಮಾಡಬೇಕು.
  13. ಪ್ರಕರಣ ದಾಖಲಿಸಲು ಬರುವವರನ್ನು ಮುಖ್ಯ ದ್ವಾರದಲ್ಲೇ ಕಡ್ಡಾಯವಾಗಿ ವೈದ್ಯಕೀಯ ತಪಾಸಣೆಗೆ ಒಳಪಡಿಸಿ ನಂತರ ಒಳ ಬಿಡಬೇಕು. ಎಲ್ಲ ಕೋರ್ಟ್ ಸಿಬ್ಬಂದಿಗೆ ಮಾಸ್ಕ್, ಗ್ಲೌಸ್, ಸ್ಯಾನಿಟೈಸರ್ ಸೇರಿದಂತೆ ಎಲ್ಲ ಅಗತ್ಯ ಸುರಕ್ಷತಾ ಸಾಧನಗಳನ್ನು ಒದಗಿಸಬೇಕು.
  14. ಕಕ್ಷೀದಾರರು ಮತ್ತು ಸಂದರ್ಶಕರಿಗೆ ಕೋರ್ಟ್ ಪ್ರವೇಶ ಸಂಪೂರ್ಣ ನಿಷಿದ್ಧ. ಸಾಕ್ಷಿದಾರರು ಸಮನ್ಸ್ ಹೊಂದಿದ್ದರೆ ಮಾತ್ರ ಪ್ರವೇಶಕ್ಕೆ ಅವಕಾಶ.
  15. ಪ್ರವೇಶ ದ್ವಾರಗಳನ್ನು ಕಡಿಮೆಗೊಳಿಸಬೇಕು. ಪೊಲೀಸ್ ಬಂದೋಬಸ್ತ್ ಇರಬೇಕು.
  16. ಕೋರ್ಟ್ ಆರಂಭಕ್ಕೆ ಮೊದಲು ಮತ್ತು ವಾರಕ್ಕೆ ಒಮ್ಮೆ ಇಡೀ ಕೋರ್ಟ್ ಆವರಣ ಸ್ಯಾನಿಟೈಸ್ ಮಾಡಬೇಕು.
  17. ಸಿಆರ್ ಪಿಸಿ ಸೆಕ್ಷನ್ 164 ರ ಅಡಿ ಹೇಳಿಕೆ ದಾಖಲಿಸುವುದನ್ನು ವೀಡಿಯೋ ಕಾನ್ಫರೆನ್ಸ್ ಮೂಲಕವೇ ಮಾಡಬೇಕು. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಾಗ ನೇರವಾಗಿ ಒಪ್ಪಿಸಬೇಕಿದ್ದರೂ, ಅಗತ್ಯ ಎನ್ನಿಸಿದಾಗ ಮ್ಯಾಜಿಸ್ಟ್ರೇಟ್ ವೀಡಿಯೋ ಕಾನ್ಫರೆನ್ಸ್ ಮೂಲಕ ಪ್ರಕ್ರಿಯೆ ಪೂರ್ಣಗೊಳಿಸಬಹುದು.
  18. ಕೋರ್ಟ್ ಆವರಣದಲ್ಲಿ ಇರುವ ವಕೀಲರ ಕ್ಯಾಂಟೀನ್ ಗಳನ್ನು ಮುಂದಿನ ಆದೇಶದವರೆಗೆ ತೆರೆಯಬಾರದು.
  19. ವಕೀಲರಿಗೆ ಈ ಫೈಲಿಂಗ್ ಮತ್ತು ವಿಡಿಯೋ ಕಾನ್ಫರೆನ್ಸ್ ತಿಳುವಳಿಕೆ ಮೂಡಿಸಲು ಜಿಲ್ಲಾ ಪ್ರಧಾನ ನ್ಯಾಯಾಧೀಶರು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯರು ಮ್ಯಾನೇಜರ್ ಮತ್ತು ಸಾಫ್ಟ್ವೇರ್ ತಂತ್ರಜ್ಞರನ್ನು ಒಳಗೊಂಡ ಸಮಿತಿ ರಚಿಸಬೇಕು.
  20. ನ್ಯಾಯಾಲಯದ ಆವರಣದೊಳಗೆ ಬರಲು ನ್ಯಾಯಾಂಗ ಅಧಿಕಾರಿಗಳ ವಾಹನಗಳನ್ನು ಹೊರತುಪಡಿಸಿ ಬೇರೆ ಯಾವುದೇ ವಾಹನಗಳಿಗೂ ಅನುಮತಿಸಬಾರದು.
  21. ನೋಟರಿ ಮತ್ತು ಓತ್ ಕಮಿಷನರ್ ಗಳಿಗೆ ಕೋರ್ಟ್ ಹೊರಗೆ ಪ್ರತ್ಯೇಕವಾಗಿ ಕೆಲಸ ಮಾಡಲು ವ್ಯವಸ್ಥೆ ಮಾಡಿಕೊಡಬೇಕು.
  22. ಹೈಕೋರ್ಟ್ ಮಾರ್ಗಸೂಚಿಗಳನ್ನು ಉಲ್ಲಂಘಿಸಿದರೆ ಅಂತಹ ನ್ಯಾಯಾಲಯಗಳನ್ನು ಪ್ರಧಾನ ಜಿಲ್ಲಾ ನ್ಯಾಯಾಧೀಶರ ಮಾಹಿತಿ ಮೇರೆಗೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಮುಚ್ಚಿಸಬಹುದು.
  23. ಮೇ 29 ರ ಒಳಗೆ ಎಲ್ಲಾ ಜಿಲ್ಲೆಗಳ ಪ್ರಧಾನ ನ್ಯಾಯಾಧೀಶರು ಕೋರ್ಟ್ ಕಾರ್ಯಕಲಾಪಗಳಿಗೆ ಅನುಕೂಲವಾಗುವಂತೆ ಹೈಕೋರ್ಟ್ ಮಾರ್ಗಸೂಚಿಗಳನ್ವಯ ವ್ಯವಸ್ಥೆಗಳನ್ನು ಮಾಡಿರುವುದನ್ನು ಮೇ 30 ರಂದು ಫೋಟೋಗಳ ಸಹಿತ ಆನ್ಲೈನ್ ಮೂಲಕ ರಿಪೋರ್ಟ್ ಸಲ್ಲಿಸಬೇಕು.
  24. ಮಾರ್ಗಸೂಚಿಗಳನ್ವಯ ಕೋರ್ಟ್ ಕಲಾಪಗಳನ್ನು ಸುಗಮವಾಗಿ ನಡೆಸಲು ಅನುಕೂಲವಾಗುವ ನಿಟ್ಟಿನಲ್ಲಿ ಪ್ರಧಾನ ಜಿಲ್ಲಾ ನ್ಯಾಯಾಧೀಶರು ತಮ್ಮ ವ್ಯಾಪ್ತಿಯ ಜಿಲ್ಲಾಧಿಕಾರಿಗಳು, ಪೊಲೀಸ್ ಅಧೀಕ್ಷಕರು/ಪೊಲೀಸ್ ಆಯುಕ್ತರು, ವಕೀಲರ ಸಂಘಟನೆಗಳು ಮತ್ತು ಆರೋಗ್ಯ ಅಧಿಕಾರಿಗಳ ಜೊತೆ ಆಗಾಗ್ಗೆ ಸಭೆಗಳನ್ನು ನಡೆಸಬೇಕು. ಇಂತಹ ಒಂದು ಸಭೆ ಮೇ 27ರಂದು ನಡೆಸಬೇಕು.

Source: News Hunt

error: