April 20, 2024

Bhavana Tv

Its Your Channel

ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ನೂತನ ಕಚೇರಿ ಲಾಂಛನ, ಜಾಲತಾಣ ಉದ್ಘಾಟನೆ

ಬೆಂಗಳೂರು: ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ನೂತನ ಕಚೇರಿಯ ಲಾಂಛನ ಮತ್ತು ಜಾಲತಾಣವನ್ನು ಇಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ಉದ್ಘಾಟನೆ ‌ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಯಾವುದೇ ಒಂದು ಸಮುದಾಯವನ್ನು ಸಾರಾಸಗಟಾಗಿ ಮುಂದುವರೆದ ಸಮುದಾಯ ಎಂದು ಹೇಳಲು ಸಾಧ್ಯವಿಲ್ಲ. ಎಲ್ಲ ಸಮುದಾಯಗಳಲ್ಲೂ ಮುಂದುವರೆದವರು ಮತ್ತು ಹಿಂದುಳಿದವರು ಇರುತ್ತಾರೆ. ಅದೇ ರೀತಿ ಪಾರಂಪರಿಕವಾಗಿ ಬ್ರಾಹ್ಮಣ ಸಮುದಾಯವನ್ನು ಮುಂದುವರೆದ ಸಮುದಾಯ ಎಂದು ಗುರುತಿಸಿದ್ದರೂ, ಆರ್ಥಿಕವಾಗಿ ಅಶಕ್ತರಾಗಿರುವ ಹಲವಾರು ಮಂದಿ ಈ ಸಮುದಾಯದಲ್ಲಿದ್ದಾರೆ. ಅಂತಹವರ ಭ್ಯುದಯಕ್ಕಾಗಿ ಬ್ರಾಹ್ಮಣರ ಅಭಿವೃದ್ಧಿ ಮಂಡಳಿಯನ್ನು ಸ್ಥಾಪಿಸಲಾಯಿತು ಎಂದರು.

ದೇಶದ ಇತಿಹಾಸದಲ್ಲಿ ಬ್ರಾಹ್ಮಣ ಸಮುದಾಯದವರ ಕೊಡುಗೆ ಉಲ್ಲೇಖಾರ್ಹವಾದುದು. ವಿಶೇಷವಾಗಿ ಶಿಕ್ಷಣ ಹಾಗೂ ಸಾಂಸ್ಕೃತಿಕ ಪರಂಪರೆಯ ರಕ್ಷಣೆಯಲ್ಲಿ ಈ ಸಮುದಾಯದ ಸಾಧನೆ ಅದ್ವಿತೀಯವಾದುದು. ಶಂಕರಾಚಾರ್ಯರು, ರಾಮಾನುಜಾಚಾರ್ಯರು, ಮಧ್ವಾಚಾರ್ಯರಂತಹ ಗುರುಶ್ರೇಷ್ಠರ ತತ್ವ ಹಾಗೂ ಆದರ್ಶಗಳ ಹಾದಿಯಲ್ಲಿ ನಡೆದು ಸಮಾಜ ಒಳಿತನ್ನು ಕಂಡಿದೆ. ವೇದೋಪನಿಷತ್ತುಗಳನ್ನು ಅಭ್ಯಸಿಸುವ ಮೂಲಕ ಆಧ್ಯಾತ್ಮಿಕತೆಯನ್ನು ಮನುಕುಲಕ್ಕೆ ವಿಪ್ರ ಸಮಾಜ ಭೋದಿಸುತ್ತಾ ಬಂದಿದೆ ಎಂದರು.

ಬ್ರಾಹ್ಮಣ ಸಮುದಾಯವು ಸಾವಿರಾರು ವರ್ಷಗಳ ಇತಿಹಾಸ ಹಾಗೂ ಪರಂಪರೆಯನ್ನು ಹೊಂದಿದ್ದು, ರಾಷ್ಟ್ರ ನಿರ್ಮಾಣದಲ್ಲಿ ಅಪೂರ್ವ ಕೊಡುಗೆ ನೀಡಿದೆ. ಬ್ರಾಹ್ಮಣ ಸಮುದಾಯ ಹಣ, ಆಸ್ತಿ, ಸಂಪತ್ತಿಗಿಂತ ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡುವ ಮೂಲಕ ಸಂಸ್ಕಾರಯುತ ಸಮಾಜದ ನಿರ್ಮಾಣಕ್ಕೆ ಶ್ರಮಿಸುತ್ತಿದೆ. ಅಶಕ್ತರಾದ ಬ್ರಾಹ್ಮಣರು ಆರ್ಥಿಕವಾಗಿ ಸಶಕ್ತರಾಗಲು ಮಂಡಳಿಯ ವತಿಯಿಂದ ಅನೇಕ ವಿಭಿನ್ನ ಯೋಜನೆಗಳನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದು ಸಿಎಂ ಬಿಎಸ್ ವೈ ಹೇಳಿದರು.

ಈ ಸಂದರ್ಭದಲ್ಲಿ ‌ ಮಂಡಳಿಯ ಅಧ್ಯಕ್ಷ ಸಚ್ಚಿದಾನಂದ‌ಮೂರ್ತಿ, ಸಚಿವರಾದ ಆರ್ ಅಶೋಕ್, ರಮೇಶ್ ಜಾರಕಿಹೊಳಿ, ಅಶ್ವಥ್ ನಾರಾಯಣ್, ಸಂಸದ ತೇಜಸ್ವಿ ಸೂರ್ಯ, ರಾಜಕೀಯ ಕಾರ್ಯದರ್ಶಿ ವಿಶ್ವನಾಥ್ ‌ಶಂಕರ್ ಗೌಡ ಪಾಟೀಲ್, ಶಾಸಕರಾದ ರಾಜು ಗೌಡ, ರಾಮದಾಸ್, ರವಿಸುಬ್ರಮಣ್ಯ, ಅರ್.ವಿ ದೇಶಪಾಂಡೆ ಮುಖಂಡರಾದ ಎಂಟಿಬಿ‌ ನಾಗರಾಜ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು

error: