April 20, 2024

Bhavana Tv

Its Your Channel

ಹಲವು ಪ್ರಕರಣ ದಲ್ಲಿ ಭಾಗಿಯಾಗಿದ್ದ ಭೂಗತ ಪಾತಕಿ ರವಿ ಪೂಜಾರಿ ವಿರುದ್ಧದ ಕೇಸ್​ಗಳು ಸಿಸಿಬಿಗೆ ಹೋಗುವ ಶಂಕೆ?

ಬೆಂಗಳೂರು: ಭೂಗತ ಪಾತಕಿ ರವಿ ಪೂಜಾರಿ ವಿರುದ್ಧ ದಾಖಲಾಗಿರುವ 97 ಪ್ರಕರಣಗಳ ತನಿಖೆಯನ್ನು ಸಿಸಿಬಿಗೆ ವಹಿಸಲು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ನಿರ್ಧರಿಸಿದ್ದಾರೆ.

ಮೊದಲ ಹಂತದಲ್ಲಿ 2009ರಲ್ಲಿ ಮಂಗಳೂರಿನಲ್ಲಿ ನಡೆದಿದ್ದ ಭೂಗತ ಪಾತಕಿ ರಶೀದ್ ಮಲಬಾರಿ ಪರ ವಕೀಲ ನೌಶಾದ್ ಕೊಲೆ ಪ್ರಕರಣದ ತನಿಖೆಯನ್ನು ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ನೇತೃತ್ವದ ಸಿಸಿಬಿಗೆ ವಹಿಸಲಾಗಿದೆ. ಹಂತಹಂತವಾಗಿ ಇನ್ನುಳಿದ ಪ್ರಕರಣಗಳನ್ನು ಸಿಸಿಬಿಗೆ ಹಸ್ತಾಂತರಿಸಲು ಡಿಜಿಪಿ ತೀರ್ವನಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ರವಿ ಪೂಜಾರಿ ಪತ್ತೆ ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಸಂದೀಪ್ ಪಾಟೀಲ್​ಗೆ ಪಾತಕಿಯ ಹಿನ್ನೆಲೆ ಕುರಿತು ಸಮಗ್ರ ಮಾಹಿತಿ ಇದೆ. ಒಂದೇ ಸಂಸ್ಥೆ ತನಿಖೆ ನಡೆಸಿದರೆ ಶೀಘ್ರ ಮುಗಿಯಲಿದೆ. ಪೂಜಾರಿಗೆ ಭದ್ರತೆ ಕಲ್ಪಿಸಲು ಅನುಕೂಲವಾಗಲಿದೆ ಎನ್ನುವ ಕಾರಣಕ್ಕೆ ಈ ನಿರ್ಧಾರಕ್ಕೆ ಬರಲಾಗಿದೆ. ಈಗಾಗಲೇ ಬೆಂಗಳೂರಿನಲ್ಲಿ ದಾಖಲಾಗಿದ್ದ 47 ಪ್ರಕರಣ ಕುರಿತು ಸಿಸಿಬಿ ತನಿಖೆ ಕೈಗೊಂಡಿದೆ. ಹೀಗಾಗಿ ಮಂಗಳೂರಿನಲ್ಲಿ ದಾಖಲಾಗಿದ್ದ ನೌಶಾದ್ ಕೊಲೆ ತನಿಖೆಯನ್ನು ಸಿಸಿಬಿ ಕೈಗೆತ್ತಿಕೊಂಡಿದೆ. ಹಳೆಯ ಪ್ರಕರಣಗಳಲ್ಲಿ ಆತನ ಕೆಲ ಸಹಚರರು ಶಿಕ್ಷೆಗೆ ಗುರಿಯಾಗಿದ್ದರೆ, ಕೆಲವರು ಸಾಕ್ಷ್ಯಾರ ಕೊರತೆಯಿಂದ ದೋಷಮುಕ್ತರಾಗಿದ್ದಾರೆ. ಬಹುಪಾಲು ಪ್ರಕರಣಗಳ ತನಿಖಾಧಿಕಾರಿಗಳು ಕೂಡ ಬದಲಾಗಿದ್ದಾರೆ. ನಿವೃತ್ತಿ ಸಹ ಹೊಂದಿದ್ದಾರೆ. ಹೀಗಾಗಿ ಮತ್ತೆ ಪೂಜಾರಿ ವಿರುದ್ಧ ತನಿಖೆ ಜವಾಬ್ದಾರಿಯನ್ನು ಸ್ಥಳೀಯ ಪೊಲೀಸರಿಗೆ ವಹಿಸಿದರೆ ಹಾದಿ ತಪ್ಪಬಹುದು ಎಂಬುದು ಸಿಸಿಬಿ ವಹಿಸಲು ಪ್ರಮುಖ ಕಾರಣವಾಗಿದೆ.

.ರವಿ ಪೂಜಾರಿ ವಿರುದ್ಧ ಬೆಂಗಳೂರಿನಲ್ಲಿ 47, ಮಂಗಳೂರು 39, ಮೈಸೂರು, ಉಡುಪಿಯಲ್ಲಿ ಸೇರಿ ಒಟ್ಟು 97 ಪ್ರಕರಣಗಳು ದಾಖಲಾಗಿವೆ. ಸಂಸದ ಡಿ.ಕೆ. ಸುರೇಶ್, ಮಾಜಿ ಶಾಸಕ ವಿನಯ್ ಕುಲಕರ್ಣಿ, ಮಾಜಿ ಸಚಿವ ಯು.ಟಿ. ಖಾದರ್ ಸೇರಿ ಹಲವು ಗಣ್ಯರಿಗೆ ಬೆದರಿಕೆ ಕರೆಗಳು ಮಾಡಿದ್ದ ಪ್ರಕರಣಗಳು ದಾಖಲಾಗಿವೆ. ಮಹಾರಾಷ್ಟ್ರ, ಗುಜರಾತ್ ಮತ್ತು ದೆಹಲಿ ಸೇರಿ ಇತರೆ ರಾಜ್ಯಗಳಲ್ಲಿ ಕೂಡ ಪ್ರಕರಣಗಳಿವೆ

error: