March 28, 2024

Bhavana Tv

Its Your Channel

ಬೆಂಗಳೂರಿನಲ್ಲಿ ಬೃಹತ್ ಡ್ರಗ್ಸ್ ಜಾಲ ಪತ್ತೆ; ನಟ ನಟಿಯರು, ಮ್ಯೂಸಿಕ್ ಡೈರೆಕ್ಟರ್ಸ್ ಇವರ ಗ್ರಾಹಕರು

ಬೆಂಗಳೂರು: ಸುಶಾಂತ್ ಸಿಂಗ್ ರಾಜಪೂತ್ ಆತ್ಮಹತ್ಯೆ ಪ್ರಕರಣದ ತನಿಖೆಯ ಸುಶಾಂತ್ ಗೆಳತಿ ರಿಯಾ ಚಕ್ರಬರ್ತಿ ವಿರುದ್ಧ ಡ್ರಗ್ಸ್ ವ್ಯವಹಾರ ಆರೋಪದ ಸದ್ದು ಕೇಳಿಬರುತ್ತಿದೆ. ಇದರ ಬೆನ್ನಲ್ಲೇ ದೇಶದ ವಿವಿಧೆಡೆ ಡ್ರಗ್ಸ್ ಜಾಲ ಭೇದಿಸುವ ಕಾರ್ಯವೂ ನಡೆಯುತ್ತಿದೆ. ಇದೇ ಹೊತ್ತಲ್ಲಿ ಬೆಂಗಳೂರಿನಲ್ಲಿ ಡ್ರಗ್ಸ್ ದಂಧೆಯೊಂದನ್ನು ಬಯಲಿಗೆಳೆಯಲಾಗಿದೆ. ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್​ಸಿಬಿ) ಅಧಿಕಾರಿಗಳು ಬೆಂಗಳೂರಿನಲ್ಲಿ ಡ್ರಗ್ಸ್ ಜಾಲವನ್ನು ಭೇದಿಸಿರುವ ವಿಚಾರ ಬೆಳಕಿಗೆ ಬಂದಿದೆ. ಬೆಂಗಳೂರಿನ ಮೂರು ಸ್ಥಳಗಳ ಮೇಲೆ ರೇಡ್ ಮಾಡಿ ಅನೇಕ ಮಾದಕವಸ್ತುಗಳನ್ನ ವಶಪಡಿಸಿಕೊಳ್ಳಲಾಗಿದೆ. ಕಲ್ಯಾಣನಗರದ ರಾಯಲ್ ಸೂಟ್ಸ್ ಹೋಟೆಲ್ ಅಪಾರ್ಟ್ಮೆಂಟ್, ಥಣಿಸಂದ್ರದ ನಿಕೂ ಹೋಮ್ಸ್ ಮತ್ತು ದೊಡ್ಡಗುಬ್ಬಿಯ ಮನೆಯೊಂದರಲ್ಲಿ ಕೋಟ್ಯಂತರ ಮೌಲ್ಯದ ಮಾದಕ ವಸ್ತುಗಳು ಪತ್ತೆಯಾಗಿವೆ. ಒಬ್ಬ ಮಹಿಳೆ ಸೇರಿದಂತೆ ಮೂವರು ಆರೋಪಿಗಳನ್ನೂ ಬಂಧಿಸಲಾಗಿದೆ. ಆ. 21ರಂದು ಈ ರೇಡ್ ನಡೆದಿರುವುದು ತಿಳಿದುಬಂದಿದೆ.
ಡಿ ಅನಿಕಾ, ಅನೂಪ್ ಮತ್ತು ರಾಜೇಶ್ ಬಂಧಿತ ಮೂವರು. ಇವರಿಂದ ವಶಪಡಿಸಿಕೊಳ್ಳಲಾದ ಮಾದಕವಸ್ತುವಿನಲ್ಲಿ 511 ಎಂಡಿಎಂಎ ಗುಳಿಗೆಗಳು ಹಾಗೂ 180 ಎಲ್​ಎಸ್​ಡಿ ಮಾತ್ರೆಗಳು ಸೇರಿವೆ. ಇವುಗಳ ಮೌಲ್ಯ 2 ಕೋಟಿ ರೂಗೂ ಹೆಚ್ಚು ಇರಬಹುದು ಎಂದು ಅಧಿಕಾರಿಗಳು ಅಂದಾಜು ಮಾಡಿದ್ದಾರೆ.

ಕ್ರಿಮಿನಲ್​ ಕೇಸ್​ ದಾಖಲಿಸಿಕೊಂಡ ಎನ್​ಸಿಬಿ
ದೇವನಹಳ್ಳಿಯಲ್ಲಿ ಗ್ರಾಹಕರಿಗೆ ಡಗ್ಸ್ ಸಪ್ಲೈ ಮಾಡಲು ಈ ಮೂವರ ಗ್ಯಾಂಗ್ ಸಜ್ಜಾಗಿತ್ತು. ಈ ವೇಳೆ ಮಾಹಿತಿ ಪಡೆದ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಇವರನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪೊಲೀಸರ ಪ್ರಕಾರ, ಈ ದಂಧೆಯ ಕಿಂಗ್​ಪಿನ್ ಕೈಸರ್ ಎನ್ನಲಾಗಿದೆ. ಈತ ಮೈಸೂರು ಪಾಲಿಕೆ ಚುನಾವಣೆಯಲ್ಲಿ ಶಾಂತಿನಗರ ವಾರ್ಡ್​ನಿಂದ ಸ್ಪರ್ಧಿಸಿ ಕೇವಲ 150 ಮತಗಳಿಂದ ಪರಾಭವಗೊಂಡಿದ್ದ. ಈತನ ಡ್ರಗ್ಸ್ ಜಾಲ ವಿಶಾಖಪಟ್ಟಣದಿಂದ ಮೈಸೂರಿನವರೆಗೆ ಚಾಚಿದೆ.
ಗಮನಾರ್ಹ ಸಂಗತಿ ಎಂದರೆ ಈ ಡ್ರಗ್ಸ್ ಜಾಲಕ್ಕೆ ಸ್ಯಾಂಡಲ್ವುಡ್​ನ ಅನೇಕ ಸೆಲಬ್ರಿಟಿಗಳು ಗ್ರಾಹಕರಾಗಿದ್ದಾರಂತೆ. ಬಂಧಿತಳಾಗಿರುವ ಅನಿಕಾಳ ವಿಚಾರಣೆಯ ವೇಳೆ ಈ ಸ್ಫೋಟಕ ಮಾಹಿತಿ ಸಿಕ್ಕಿದೆ. ಸ್ಯಾಂಡಲ್​​ವುಡ್​ನ ನಟ, ನಟಿಯರು, ಸಂಗೀತ ನಿರ್ದೇಶಕರು ಈ ಡ್ರಗ್ಸ್​ಗೆ ದಾಸರಾಗಿದ್ದಾರೆ ಎಂದು ಈಕೆ ಬಾಯಿಬಿಟ್ಟಿದ್ದಾಳೆ. ಯುವಕರು, ಯುವತಿಯರು, ಕಾಲೇಜು ವಿದ್ಯಾರ್ಥಿಗಳೂ ಕೂಡ ಇವರಿಗೆ ಗ್ರಾಹಕರಾಗಿದ್ದಾರೆನ್ನಲಾಗಿದೆ. ಈಗ ಇನ್ನಷ್ಟು ವಿಚಾರಣೆ ನಡೆಸಲಾಗುತ್ತಿದೆ.

ಜುಲೈ 31ರಂದು ಜರ್ಮನಿಯಿಂದ ತರಿಸಲಾಗಿದ್ದ 750 ಎಂಡಿಎಂಎ ಮಾತ್ರೆಗಳನ್ನ ಬೆಂಗಳೂರಿನಲ್ಲಿ ವಶಪಡಿಸಿಕೊಳ್ಳಲಾಗಿತ್ತು. ಆ ಸುಳಿವಿನ ಆಧಾರದ ಮೇಲೆ ಆ. 21ರಂದು ಮೂರು ಕಡೆ ರೇಡ್ ಮಾಡಿ ಇನ್ನಷ್ಟು ಮಾದಕವಸ್ತುಗಳನ್ನ ಸೀಜ್ ಮಾಡಲಾಗಿದೆ.
ಮುಂಬೈನಲ್ಲಿ ಆಗಸ್ಟ್ 10ರಂದು ಬರೋಬ್ಬರಿ 3010 ಎಂಡಿಎಂಎ ಪಿಲ್​ಗಳನ್ನ ವಶಪಡಿಸಿಕೊಳ್ಳಲಾಗಿತ್ತು. ಕಳೆದ ಎರಡು ವಾರದಗಳಲ್ಲಿ ಬೆಂಗಳೂರು ಮತ್ತು ಮುಂಬೈನಲ್ಲಿ ಒಟ್ಟು 4,317 ಎಂಡಿಎಂಎ ಮಾತ್ರೆಗಳು ಹಾಗೂ 180 ಎಲ್​ಎಸ್​ಡಿ ಬ್ಲಾಟ್​ಗಳನ್ನ ಎನ್​ಸಿಬಿ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಂತಾಗಿದೆ.

error: