March 23, 2024

Bhavana Tv

Its Your Channel

ಹೆಚ್ಚು ಊಟ ಕೇಳಿದ್ದಕ್ಕೆ 2 ವರ್ಷದ ಮೊಮ್ಮಗನನ್ನೇ ಸುಟ್ಟ ಅಜ್ಜಿ!

ಬೆಂಗಳೂರು: ಹೆಚ್ಚು ಊಟ ಕೇಳುತ್ತಾನೆಂಬ ಕಾರಣಕ್ಕೆ ಅಜ್ಜಿಯೊಬ್ಬರು ಎರಡು ವರ್ಷದ ಮೊಮ್ಮಗನನ್ನು ಸುಟ್ಟಿರುವ ಘಟನೆ ನಗರದಲ್ಲಿ ನಡೆದಿದೆ.
ಮೊಮ್ಮಗ ಕಳೆದ 15 ದಿನಗಳಿಂದ ಹೆಚ್ಚು ಊಟ ಕೇಳುತ್ತಿದ್ದಾನೆ ಎಂದು ಮೈಕೋ ಲೇ ಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಗುರಪ್ಪನಪಾಳ್ಯದ ನಿವಾಸಿಯಾಗಿರುವ ಅಜ್ಜಿ ಮುಬೀನಾ ಈ ಕೃತ್ಯವೆಸಗಿದ್ದಾಳೆ. ಅಜ್ಜಿ ಮಗುವನ್ನು ಸುಡುವಾಗ ತಾಯಿ ಅಜೀರಾ ಪಕ್ಕದಲ್ಲೇ ಇದ್ದರೂ ಏನನ್ನೂ ಹೇಳದಿರುವುದು ಅಚ್ಚರಿಗೆ ಕಾರಣವಾಗಿದೆ.
ಬೆಂಗಳೂರಿನ ಗುರಪ್ಪನಪಾಳ್ಯದಲ್ಲಿ ವಾಸವಿರುವ ಇಮ್ರಾನ್ ಪಾಷಾ ಹಾಗೂ ಅಜೀರಾ ದಂಪತಿಯ 4 ಮಕ್ಕಳ ಪೈಕಿ ನಾಲ್ಕನೇ ಹಾಗೂ ಕೊನೆಯ 2 ವರ್ಷದ ಮಗುವಿಗೆ ಅಜ್ಜಿ ಮತ್ತು ತಾಯಿ ಸೇರಿಕೊಂಡು ಹಲ್ಲೆ ಮಾಡಿರುವ ವೀಡಿಯೋ ಇದೀಗ ವೈರಲ್ ಆಗಿದೆ. ಮಗುವಿನ ಮುಖ, ಕಣ್ಣಿಗೆ ಗಾಯವಾಗಿದ್ದು, ಇಂದಿರಾಗಾಂಧಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಸಂಬಂಧ ಇಮ್ರಾನ್ ಪಾಷಾ, ಪತ್ನಿ ಮತ್ತು ಅತ್ತೆ ವಿರುದ್ಧ ಸುದ್ದಗುಂಟೆಪಾಳ್ಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಇಬ್ಬರೂ ಮಹಿಳೆಯರನ್ನು ಪೊಲೀಸರು ಬಂಧಿಸಿದ್ದಾರೆ. ಮತ್ತೊಂದು ಮಗುವಿನ ಹೆರಿಗೆಗಾಗಿ ತಾಯಿ ತನ್ನ ತಾಯಿಯ ಮನೆಗೆ ಬಂದಿದ್ದು, ಈ ವೇಳೆ ಅಜ್ಜಿ ಹಾಗೂ ತಾಯಿ ಇಬ್ಬರು ಸೇರಿಕೊಂಡು ಮಗುವಿಗೆ ಚಿತ್ರಹಿಂಸೆ ನೀಡಿದ್ದಾರೆ.
ಕಳೆದ 15 ದಿನಗಳಿಂದ ಈ ಮಗುವಿಗೆ ರಕ್ತ ಬರುವಂತೆ ಥಳಿಸಿದ್ದಾರೆ. ಮಗು ಬಾಯಿಗೆ ಪ್ಲಾಸ್ಟರ್ ಹಾಕಿ, ಹೊಟ್ಟೆ ಮುಖಕ್ಕೆ ಗುದ್ದಿ ಅಜ್ಜಿ ಮುಬೀನಾ ಕೂಡ ಚಿತ್ರಹಿಂಸೆ ಕೊಟ್ಟಿದ್ದಾಳೆ. ಮಗು ಅಳುವುದನ್ನು ನಿಲ್ಲಿಸಲ್ಲ ಎಂಬ ಕಾರಣಕ್ಕೆ ಮನಸೋಇಚ್ಛೆ ಥಳಿಸಿದ್ದು, ಮಗುವಿನ ಮೈ ಕೈಯನ್ನು ಸುಟ್ಟು ಹಲ್ಲೆ ಮಾಡಿದ್ದಾಳೆ ಎಂದು ದೂರಲಾಗಿದೆ. ಇಮ್ರಾನ್ ಪಾಷಾ ಹಾಗೂ ಅಜೀರಾ ಪ್ರೀತಿಸಿ ಮದುವೆಯಾಗಿದ್ದರು. ಇದು ಅಜೀರಾ ತಾಯಿ ಮುಬೀನಾಗೆ ಇಷ್ಟವಿರಲಿಲ್ಲ. ಇದೇ ವಿಚಾರಕ್ಕೆ ಅತ್ತೆ ಮತ್ತು ಅಳಿಯನ ನಡುವೆ ವೈಮನಸ್ಸಿತ್ತು. ಮಗು ಅಪ್ಪ ಬೇಕು ಎಂದು ಹಠ ಮಾಡಿದೆ. ಈ ಕಾರಣಕ್ಕೆ ಮಗುವನ್ನು ಅಜ್ಜಿ ಮತ್ತು ತಾಯಿ ಸೇರಿಕೊಂಡು ಥಳಿಸಿದ್ದಾರೆ ಎಂದು ತಿಳಿದುಬಂದಿದೆ

error: