March 29, 2024

Bhavana Tv

Its Your Channel

ಮಳೆ ಏಟಿಗೆ ಬೆದರಿದ ರಾಜಧಾನಿ

ಬೆಂಗಳೂರು: ಉದ್ಯಾನನಗರಿಯಲ್ಲಿ ಮಂಗಳವಾರ ರಾತ್ರಿ ಹಾಗೂ ಬುಧವಾರ ಸಂಜೆಯಿಂದ ಸುರಿದ ಧಾರಾಕಾರ ಮಳೆಯಿಂದಾಗಿ 300ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದ್ದು, ಬಹುತೇಕ ರಸ್ತೆ ಮತ್ತು ಅಂಡರ್​ಪಾಸ್​ಗಳು ಜಲಾವೃತಗೊಂಡಿವೆ.

ಗುಡುಗು- ಮಿಂಚು ಸಮೇತ ಸುರಿದ ಭಾರಿ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಮಂಗಳವಾರ ರಾತ್ರಿ 10.30ಕ್ಕೆ ಆರಂಭವಾದ ಮಳೆ ತಡರಾತ್ರಿ 3 ಗಂಟೆವರೆಗೂ ಸುರಿಯಿತು. ಮಳೆಯಿಂದ ಹಾನಿ ಅನುಭವಿಸಿದವರು ಚೇತರಿಸಿಕೊಳ್ಳುವ ಮೊದಲೇ ಬುಧವಾರ ಸಂಜೆ 6.30ರಿಂದ ಆರಂಭವಾಗಿ ತಡರಾತ್ರಿವರೆಗೆ ಸುರಿದ ಮಳೆಯಿಂದಾಗಿ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಜಕಾಲುವೆ ಮಾರ್ಗ ಒತ್ತುವರಿ ಮಾಡಿ ನಿರ್ವಿುಸಿಕೊಂಡ ಮನೆಗಳ ಸುತ್ತಲಿನ ಪ್ರದೇಶದಲ್ಲಿ ನೀರು ನುಗ್ಗಿದೆ. 300ಕ್ಕೂ ಅಧಿಕ ಮನೆಗಳ ನಿವಾಸಿಗಳು ರಾತ್ರಿ ವೇಳೆ ಮನೆ ಮೇಲೆ ಆಶ್ರಯ ಪಡೆದು ಜೀವ ಉಳಿಸಿಕೊಂಡಿದ್ದು, ಸಂತ್ರಸ್ತರನ್ನು ತಾತ್ಕಾಲಿಕ ಪರಿಹಾರ ಕೆಂದ್ರಗಳಿಗೆ ಸ್ಥಳಾಂತರಿಸಲಾಯಿತು

ಮನೆಗೆ ನೀರು ನುಗ್ಗಿದ ಪ್ರದೇಶಗಳು

ಭರ್ಜರಿ ಮಳೆಗೆ ಎಚ್​ಬಿಆರ್ ಲೇಔಟ್​ನ 5ನೇ ಬ್ಲಾಕ್, ಹೆಣ್ಣೂರು, ಹೊರಮಾವು ಹಾಗೂ ಆರ್​ಎಂವಿ 2ನೇ ಹಂತದ ಡಾಲರ್ಸ್ ಕಾಲನಿ ಯಲ್ಲಿ ಬಹುತೇಕ ಮನೆಗಳಿಗೆ ನೀರು ನುಗ್ಗಿತ್ತು. ಕೆ.ಆರ್. ಪುರ, ಟಾಟಾ

ನಗರ, ಆರ್.ಟಿ. ನಗರದ ನಂಜಪ್ಪ ಲೇಔಟ್, ಕೆಂಪಾಪುರದ ಮರಿಯಪ್ಪನಪಾಳ್ಯ, ಕೋಡಿಗೇಹಳ್ಳಿ ಭದ್ರಪ್ಪ ಲೇಔಟ್, ನಾಗಸಂದ್ರದ ಕೆಂಪಾಪುರ, ಮಹದೇವಪುರದ ಮಾನ್ಯತಾ ಟೆಕ್​ಪಾರ್ಕ್, ಬಸವನ ಪುರ ಅಮರಜ್ಯೋತಿ ಲೇಔಟ್​ಗಳಲ್ಲಿ ಮನೆಗಳಿಗೆ ನೀರು ನುಗ್ಗಿ ನಿವಾಸಿಗಳು ಇನ್ನಿಲ್ಲದ ಸಮಸ್ಯೆ ಎದುರಿಸಬೇಕಾಯಿತು. ರಾಧಾಕೃಷ್ಣ ದೇವಸ್ಥಾನ ವಾರ್ಡ್, ಮನೋರಾಯನಪಾಳ್ಯ, ಹೆಣ್ಣೂರು, ಸಹಕಾರ ನಗರ, ಕೋರಮಂಗಲ, ದ್ವಾರಕನಗರ, ಎಚ್​ಎಸ್​ಆರ್ ಲೇಔಟ್, ವಡ್ಡರಪಾಳ್ಯ, ಗರುಡಾಚರ್​ಪಾಳ್ಯ, ಕಾವೇರಿನಗರ, ಟಿ.ಸಿ. ಪಾಳ್ಯ, ರಾಮಮೂರ್ತಿನಗರ, ಸಾಯಿಬಾಬಾ ಲೇಔಟ್, ದಿಣ್ಣೂರು, ಬನಶಂಕರಿ, ಶಿವಾಜಿನಗರ ಕಮರ್ಷಿಯಲ್ ಬೀದಿಗಳು ಜಲಾವೃತಗೊಂಡಿದ್ದವು. ಮಳೆಯಿಂದಾಗಿ ನಂದಿನಿ ಲೇಔಟ್, ಮಲ್ಲೇಶ್ವರ, ಬಸವನಗುಡಿ, ಹೆಬ್ಬಾಳ, ಹೆಣ್ಣೂರು ಪ್ರದೇಶಗಳಲ್ಲಿ ತಲಾ ಒಂದು ಮರಗಳು ಬಿದ್ದಿದ್ದು, ಸುಮಾರು 50ಕ್ಕೂ ಹೆಚ್ಚು ಮರದ ಕೊಂಬೆಗಳು ಬಿದ್ದಿರುವ ಬಗ್ಗೆ ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬಿಬಿಎಂಪಿ ಆಯುಕ್ತರಿಂದ ಸ್ಥಳ ಪರಿಶೀಲನೆ

ಕೆ.ಆರ್. ಪುರದ ವಡ್ಡರಪಾಳ್ಯ, ಗೆದ್ದಲಹಳ್ಳಿ ಸುತ್ತಮುತ್ತಲಿನ ಪ್ರದೇಶಗಳಿಗೆ ಮಳೆ ನೀರು ನುಗ್ಗಿ ಹಾನಿಯಾಗಿದ್ದು, ಸ್ಥಳಕ್ಕೆ ಸಚಿವ ಬಿ.ಎ. ಬಸವರಾಜ ಹಾಗೂ ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಮಾತನಾಡಿದ ಆಯುಕ್ತರು, ಮಂಗಳವಾರ ರಾತ್ರಿ 100ರಿಂದ 150 ಮಿ.ಮೀ ಮಳೆ ಸುರಿದಿದೆ. ರಾಜಕಾಲುವೆಗಳಲ್ಲಿ ಹರಿಯಬೇಕಾದ ನೀರು ಒತ್ತುವರಿಯಿಂದಾಗಿ ಮನೆಗಳಿಗೆ ಸೇರಿದೆ. ಯಲಹಂಕ ಕೆಲ ಭಾಗಗಳಲ್ಲಿ ರಾಜಕಾಲುವೆ ಪಕ್ಕದ ಅಪಾರ್ಟ್​ವೆುಂಟ್​ಗಳು ರಾಜಕಾಲುವೆಗೆ ಅನಧಿಕೃತವಾಗಿ ಸಂಪರ್ಕ ನೀಡಿವೆ. ರಾಜಕಾಲುವೆಗೆ ನೀರಿನ ಪ್ರಮಾಣ ಹೆಚ್ಚಾದಾಗ ನೀರು ಹಿಂದಿರುಗಿ ಅಪಾರ್ಟ್​ವೆುಂಟ್ ತಳಮಹಡಿಗೆ ನುಗ್ಗಿದೆ. ನೀರು ತೆರವುಗೊಳಿಸಿದ್ದು, ಮುಂದಿನ ದಿನಗಳಲ್ಲಿ ಒತ್ತುವರಿ ತೆರವು ಮಾಡಲಾಗುವುದು ಎಂದು ತಿಳಿಸಿದರು.

ನೀರಿನಲ್ಲಿ ತೇಲಾಡಿದ ವಾಹನಗಳು

ಹೆಣ್ಣೂರಿನ ಸಾಯಿಬಾಬಾ ಲೇಔಟ್, ಡಾಲರ್ಸ್ ಕಾಲನಿಯ ವಿಸ್ಪರಿಂಗ್ ಮಿಡೋಸ್, ಹೊರಮಾವಿನ ಮಾರುತಿ ಎನ್​ಕ್ಲೇವ್ ಅಪಾರ್ಟ್​ವೆುಂಟ್​ಗಳ ವಾಹನ ನಿಲುಗಡೆ ಜಾಗಕ್ಕೆ ನೀರು ನುಗ್ಗಿದ್ದು, ಒಟ್ಟು 150ಕ್ಕೂ ಹೆಚ್ಚು ಕಾರುಗಳು ಮುಳುಗಿವೆ. ನಗರದ ವಿವಿಧ ಭಾಗದಲ್ಲಿನ ರಸ್ತೆಗಳಲ್ಲಿ 3 ಅಡಿಗೂ ಹೆಚ್ಚು ನೀರು ನಿಂತುಕೊಂಡಿದ್ದು, ರಸ್ತೆ ಪಕ್ಕ ನಿಲ್ಲಿಸಿದ್ದ ಸಾವಿರಾರು ಬೈಕ್​ಗಳು ನೀರಿನಲ್ಲಿ ಮುಳುಗಿದ್ದವು. ಹೆಣ್ಣೂರಿನ ಸಾಯಿಮಂದಿರ ಸಂಪೂರ್ಣ ಜಲಾವೃತಗೊಂಡಿದೆ. ವಿವಿಧೆಡೆ ಸೂಪರ್ ಮಾರುಕಟ್ಟೆ, ಅಂಗಡಿ ಮಳಿಗೆಗಳಿಗೆ ನೀರು ತುಂಬಿಕೊಂಡಿದ್ದು, ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಹಾನಿಗೀಡಾಗಿವೆ.

ಪರಿಹಾರ ಕಾರ್ಯದಲ್ಲಿ ನಿರತ ಪಾಲಿಕೆ

ಮಳೆಯ ಅವಾಂತರ ನೈಸರ್ಗಿಕ ವಿಕೋಪವಾಗಿದ್ದು, ಅದರಿಂದಾಗುವ ಪ್ರವಾಹ ಮತ್ತು ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಪಾಲಿಕೆ ಸಿದ್ಧವಾಗಿದೆ. ಮಳೆ ಸುರಿದ ತಡರಾತ್ರಿಯಿಂದಲೇ ಪರಿಹಾರ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಮಳೆಯ ದುರಂತದ ಬಗ್ಗೆ ಎಲ್ಲ ನಿಯಂತ್ರಣ ಕೊಠಡಿಗಳಿಗೆ ಮಾಹಿತಿ ನೀಡಿ, ಹಲವು ತಂಡಗಳನ್ನು ಸಿದ್ಧಗೊಳಿಸಿ ಪ್ರವಾಹಪೀಡಿತ ಪ್ರದೇಶ ಹಾಗೂ ಮಳೆಯ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಸಮಸ್ಯೆಗಳನ್ನು ಪರಿಹಾರ ಮಾಡಲಾಗಿದೆ. ಆಯುಕ್ತರು ಸೇರಿ ಹಲವು ಪಾಲಿಕೆ ಸದಸ್ಯರು ಕೌನ್ಸಿಲ್ ಸಭೆಗೆ ಹಾಜರಾಗದೆ ಪ್ರವಾಹ ಸ್ಥಳದಲ್ಲಿದ್ದು, ಸಂತ್ರಸ್ತರಿಗೆ ಸಾಂತ್ವನ ಹೇಳಿ ಪರಿಹಾರ ವ್ಯವಸ್ಥೆ ಒದಗಿಸುವಲ್ಲಿ ನಿರತರಾಗಿದ್ದಾರೆ ಎಂದು ಮೇಯರ್ ಎಂ. ಗೌತಮ್ುಮಾರ್ ತಿಳಿಸಿದರು.

ಅಂಡರ್​ಪಾಸ್​ಗಳಲ್ಲಿ ಆಪತ್ತು

ಹೆಬ್ಬಾಳದ ಬಳಿ ಅಂಡರ್​ಪಾಸ್​ನಲ್ಲಿ, ಕಸ್ತೂರಿನಗರ, ಕೊಡಿಗೇಹಳ್ಳಿ, ನಾಗಶೆಟ್ಟಿಹಳ್ಳಿ ಹಾಗೂ ಶಿವಾನಂದ ವೃತ್ತದ ರೈಲ್ವೆ ಅಂಡರ್​ಪಾಸ್​ಗಳಲ್ಲಿ ನೀರು ತುಂಬಿಕೊಂಡಿತ್ತು. ಈ ವೇಳೆ ಕೆಲವು ಕಾರು ಸೇರಿ ಇತರೆ ವಾಹನಗಳು ಅಂಡರ್​ಪಾಸ್​ಗಳಲ್ಲಿ ಸಿಕ್ಕಿಕೊಂಡಿದ್ದರಿಂದ ಒಳಗಿದ್ದವರು ಪರದಾಡಿದ ಘಟನೆಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಕೆ.ಆರ್. ಪುರದ ಪೈ ಲೇಔಟ್ ಹಾಗೂ ಟಿನ್ ಫ್ಯಾಕ್ಟರಿ ಜಂಕ್ಷನ್​ನಲ್ಲಿ 2 ಅಡಿಗೂ ಹೆಚ್ಚು ನೀರು ನಿಂತು ವಾಹನ ಸಂಚಾರಕ್ಕೆ ತೊಂದರೆಯಾಗಿತ್ತು.

ಮನೆ ಸಾಮಗ್ರಿಗಳೆಲ್ಲ ನೀರುಪಾಲು

ಮಳೆಯಿಂದ ಮನೆಗೆ ನೀರು ನುಗ್ಗಿದಾಗ ಮನೆಯಲ್ಲಿರುವ ಟಿವಿ, ವಾಷಿಂಗ್ ಮಷಿನ್, ಸೋಫಾ ಸೆಟ್, ದಿನಸಿ, ಹಾಸಿಗೆ ಹಾಗೂ ದಿನಬಳಕೆ ವಸ್ತುಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ಜತೆಗೆ ಕಾರು ಸೇರಿ ಬಹುತೇಕ ವಸ್ತುಗಳು ನೀರಿನಲ್ಲಿ ಮುಳುಗಡೆಯಾಗಿದ್ದು, ಅದರಲ್ಲಿದ್ದ ದಾಖಲೆಗಳು ಬಳಕೆ ಮಾಡಲು ಬರದ ಸ್ಥಿತಿ ತಲುಪಿವೆ. ಹೀಗಾಗಿ ವಾಹನ ವಿಮೆ ಪಡೆದುಕೊಳ್ಳುವುದು ಸವಾಲಾಗಿ ಪರಿಣಮಿಸಿದೆ ಎಂದು ಜನರು ಅಳಲು ತೋಡಿಕೊಂಡರು.

ಎಲ್ಲೆಲ್ಲಿ ಎಷ್ಟು ಮಳೆ?

ಕಳೆದ 24 ಗಂಟೆಗಳಲ್ಲಿ ಹೆಸರಘಟ್ಟದಲ್ಲಿ 150 ಮಿ.ಮೀ. ಮಳೆಯಾಗಿದೆ. ನೆಲಗುಡಿ, ಮಂಡೂರು, ಅಗ್ರಹಾರ ದಾಸರಹಳ್ಳಿಯಲ್ಲಿ ಸರಾಸರಿ 50ರಿಂದ 60 ಮಿ.ಮೀ., ಪಟ್ಟಾಭಿರಾಮನಗರ, ಹೆಮ್ಮಿಗೆಪುರ, ಸಾರಕ್ಕಿ, ದೊಡ್ಡಬಿದಿರಕಲ್ಲು, ಮಾರುತಿ ಮಂದಿರ, ಗಾಳಿ ಆಂಜನೇಯ ದೇವಸ್ಥಾನ, ಅರಕೆರೆ, ಶಿವನಗರದಲ್ಲಿ ಸರಸರಿ 30ರಿಂದ 40 ಮಿ.ಮೀ., ಮಳೆಯಾಗಿದೆ. ನಗರದಾದ್ಯಂತ ಒಟ್ಟು 45 ಮಿ.ಮೀಟರ್ ಮಳೆ ದಾಖಲಾಗಿದೆ.

Source: vijayavani

error: