April 19, 2024

Bhavana Tv

Its Your Channel

ಮಂಗಳಾ ಅಂಗಡಿ ಜಯದ ಹಿಂದೆ ಶೆಟ್ಟರ್ ಸೂತ್ರ ; ಕ್ಷೇತ್ರದಲ್ಲಿ ಅವಿರತ ಪ್ರಚಾರ ಹಾಗೂ ರಾಜಕೀಯ ತಂತ್ರಗಾರಿಕೆಗೆ ಒಲಿದ ಫಲ.

ಬೆಳಗಾವಿ ; ಟಿ-೨೦ ಮ್ಯಾಚ್‌ನಂತೆಯೇ ಎಲ್ಲರು ಉಸಿರು ಬಿಗಿಹಿಡಿದು ಫಲಿತಾಂಶಕ್ಕೆ ಕಾಯುವಂತೆ ಮಾಡಿದ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯ ರೋಚಕ ಜಯದ ಹಿಂದೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರಾದ ಜಗದೀಶ್ ಶೆಟ್ಟರ್ ಅವರ ತಂತ್ರಗಾರಿಕೆ ಭಾಗವಾಗಿ ಹೆಣೆದ ರಾಜಕೀಯ ಸಮೀಕರಣದ ಸೂತ್ರ ಯಶಸ್ವಿಯಾಗಿದೆ.
ಚುನಾವಣೆ ಘೋಷಣೆ ಆದ ದಿನದಿಂದ ಕ್ಷೇತ್ರದಲ್ಲಿಯೇ ಠಿಕಾಣಿ ಹೂಡಿದ್ದ ಸಚಿವ ಶೆಟ್ಟರ್, ಕ್ಷೇತ್ರದ ಬಿಜೆಪಿ ಜನಪ್ರತಿನಿಧಿಗಳನ್ನು ಒಗ್ಗೂಡಿಸುವ ಕಾರ್ಯವನ್ನು ವ್ಯವಸ್ಥಿತವಾಗಿ ಮಾಡುವಲ್ಲಿ ಯಶಸ್ವಿಯಾದರು. ರಮೇಶ್ ಜಾರಕೀಹೊಳಿ ಅವರ ಪ್ರಕರಣದ ಚುನಾವಣೆ ಮೇಲೆ ಪ್ರಭಾವ ಬೀರದಂತೆ ಇನ್ನಷ್ಟು ರಾಜಕೀಯ ತಂತ್ರಗಾರಿಕೆಯನ್ನು ಹೆಣೆದರು. ಅರಭಾವಿ ಕ್ಷೇತ್ರದಲ್ಲಿ ಮತ ವಿಭಜನೆ ಆಗದಂತೆ ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಜಾರಕೀಹೊಳಿ ಸಹೋದರರನ್ನು ಜೊತೆಯಾಗಿಟ್ಟುಕೊಂಡು ಕಾಂಗ್ರೆಸ್ ಅಭ್ಯರ್ಥಿಗೆ ಮತ ಹೋಗದಂತೆ ತಡೆಯುವಲ್ಲೂ ಯಶಸ್ವಿಯಾಗಿದ್ದಾರೆ.


ದಿವಂಗತ ಸುರೇಶ್ ಅಂಗಡಿ ಅವರ ಪತ್ನಿ ಮಂಗಲಾ ಅಂಗಡಿ ಅವರಿಗೆ ಟಿಕೆಟ್ ನೀಡುವಂತೆ ಹೈಕಮಾಂಡ್ ಅವರ ಮನವೊಲಿಸುವ ಮೂಲಕ ಕ್ಷೇತ್ರದ ಬಿಜೆಪಿ ನಾಯಕರಲ್ಲಿ ಒಡಕು ಮೂಡದಂತೆ ತಡೆಯುವಲ್ಲಿ ಯಶಸ್ವಿಯಾದರು. ಅಲ್ಲದೆ, ಎಲ್ಲಾ ಜನಪ್ರತಿನಿಧಿಗಳನ್ನು ಒಗ್ಗಟ್ಟಾಗಿ ಶ್ರಮಿಸುವಂತೆ ಮಾಡಿದ್ದು ಸಚಿವ ಜಗದೀಶ್ ಶೆಟ್ಟರ್.
ಉಪಚುನಾವಣೆ ಘೋಷಣೆ ಆದ ನಂತರ ಕ್ಷೇತ್ರದಲ್ಲೇ ಠಿಕಾಣಿ ಹೂಡಿದ ಶೆಟ್ಟರ್, ರಾಜ್ಯದ ಪ್ರತಿಯೊಬ್ಬ ಪ್ರಮುಖ ನಾಯಕರಿಂದ ಪ್ರಚಾರ ಮಾಡಿಸುವಲ್ಲಿ ಯಶಸ್ವಿಯಾದರು. ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರನ್ನು ಎರಡು ಬಾರಿ ಪ್ರಚಾರಕ್ಕೆ ಕರೆಸಿಕೊಳ್ಳುವ ಮೂಲಕ ಕ್ಷೇತ್ರದ ಲಿಂಗಾಯತ ಮತಗಳನ್ನು ಸೆಳೆಯುವ ಕಾರ್ಯ ಮಾಡಿದರು.
ದಿವಂಗತ ಸುರೇಶ್ ಅಂಗಡಿ ಒಬ್ಬ ಅಜಾತ ಶತ್ರು, ಅದೇ ವರ್ಚಸ್ಸು ಶೆಟ್ಟರ್ ಅವರದ್ದುಎಂದರೆ ತಪ್ಪಾಗಲಾರದು. ಕ್ಷೇತ್ರದ ಹಾಗೂ ಬೆಳಗಾವಿ ಉಸ್ತುವಾರಿ ಆಗಿದ್ದ ಸಂಧರ್ಭದಲ್ಲಿ ಸುರೇಶ ಅಂಗಡಿ ಅವರ ಮಾರ್ಗದಲ್ಲಿಯೇ ನಡೆದರು. ಒಗ್ಗಟ್ಟಿನ ಸೂತ್ರವನ್ನು ಹೆಣೆದರು. ಯಾವ ನಾಯಕರೂ, ಯಾವ ಹಂತದಲ್ಲಿಯೂ ಗೊಳ್ಳದಂತೆ ಎಚ್ಚರಿಕೆ ವಹಿಸಿದರು. ಆ ಮೂಲಕ ರೋಚಕ ವಿಜಯಕ್ಕೆ ಕಾರಣರಾಗಿದ್ದಾರೆ.


ಅಥಣಿ ಹಾಗೂ ಕಾಗವಾಡ ಉಪಚುನಾವಣೆಯ ಉಸ್ತುವಾರಿ ವಹಿಸಿದ್ದ ಶೆಟ್ಟರ್, ಲಿಂಗಾಯತ ಸಮುದಾಯದ ವೋಟ್‌ಗಳನ್ನು ಕೇಂದ್ರೀಕರಿಸುವ ಮೂಲಕ ಆ ಎರಡೂ ಕ್ಷೇತ್ರಗಳಲ್ಲೂ ಗೆಲವು ಸಾಧಿಸುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದರು.
ವರದಿ ; ಮಹೇಶ ಶರ್ಮಾ, ಬೆಳಗಾವಿ

error: