March 29, 2024

Bhavana Tv

Its Your Channel

ಬೀದರ್ ನಗರಸಭೆ ಚುನಾವಣೆ: ಶಾಸಕ ಬಂಡೆಪ್ಪ ಖಾಶೆಂಪುರ್ ಹಾಗೂ ಕುಟುಂಬಸ್ಥರಿಂದ ಮತದಾನ

ಬೀದರ್ (ಎ.27): ಬೀದರ್ ನಗರಸಭೆ ಚುನಾವಣೆಗೆ ಮಂಗಳವಾರ ಮತದಾನ ನಡೆದಿದ್ದು, ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರಾಗಿರುವ ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಬಂಡೆಪ್ಪ ಖಾಶೆಂಪುರ್ ಹಾಗೂ ಅವರ ಸಹೋದರರಾದ ಮಾರುತಿ ಖಾಶೆಂಪುರ್ ಮತ್ತು ಅವರ ಪತ್ನಿ ಗೀತಾ ಖಾಶೆಂಪುರ್, ರವಿ ಖಾಶೆಂಪುರ್ ಸೇರಿದಂತೆ ಶಾಸಕರ ಕುಟುಂಬಸ್ಥರು ವಾರ್ಡ್ ನಂಬರ್ 08ರ ಬೂತ್ ನಂಬರ್ 38ರಲ್ಲಿ ಮತದಾನ ಮಾಡಿದರು.
ಮತದಾನ ಮಾಡಿದ ಬಳಿಕ ಮಾತನಾಡಿದ ಶಾಸಕ ಬಂಡೆಪ್ಪ ಖಾಶೆಂಪುರ್ ರವರು, ಬಿರು ಬಿಸಿಲು, ಕೊರೊನಾ ವೈರಸ್ ಹಾವಳಿಯ ನಡುವೆಯೂ ಬೀದರ್ ನಗರಸಭೆಗೆ ಶಾಂತಿಯುತ ಮತದಾನ ನಡೆದಿದೆ. ನಾವು ನಮ್ಮ ಕುಟುಂಬಸ್ಥರು ಮತದಾನ ಮಾಡಿದ್ದೇವೆ. ನಮ್ಮ ಪಕ್ಷದ ಅಭ್ಯರ್ಥಿಗಳ ಕಡೆಗೆ ಬೀದರ್ ನಗರದ ಮತದಾರರ ಒಲವು ಹೆಚ್ಚಾಗಿ ಕಂಡುಬಂದಿದ್ದು, ನಮ್ಮ ಪಕ್ಷದ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಲ್ಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬೀದರ್ ಜಿಲ್ಲೆ ಸೇರಿದಂತೆ ರಾಜ್ಯ, ರಾಷ್ಟ್ರದಲ್ಲಿ ಕೊರೊನಾ ಹಾವಳಿ ಹೆಚ್ಚಾಗುತ್ತಿದೆ. ಜನರು ಸಾಮಾಜಿಕ ಅಂತರ, ಮಾಸ್ಕ್, ಸ್ಯಾನಿಟೈಸರ್ ಗಳನ್ನು ಬಳಕೆ ಮಾಡಬೇಕು. ಅನಾವಶ್ಯಕವಾಗಿ ಸುತ್ತಾಡುವುದನ್ನು ಬಿಡಬೇಕು. ಬಹಳಷ್ಟು ಎಚ್ಚರಿಕೆಯಿಂದ ಜೀವನ ನಡೆಸಬೇಕು. ಕೊರೊನಾ ವೈರಸ್ ಹರಡದಂತೆ ಮುನ್ನೆಚ್ಚರಿಕೆಯ ಕ್ರಮಗಳನ್ನು ಪ್ರತಿಯೊಬ್ಬರೂ ಅನುಸರಿಸುವ ಕೆಲಸ ಮಾಡಬೇಕೆಂದು ಸಾರ್ವಜನಿಕರಿಗೆ ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಮನವಿ ಮಾಡಿದರು.
ಇನ್ನೂ ಇದೇ ವೇಳೆ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅವರು, ರಾಜ್ಯದಲ್ಲಿ ಕೊರೊನಾ ವೈರಸ್ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸಾವಿನ ಸಂಖ್ಯೆಯಲ್ಲಿ ಕೂಡ ಹೆಚ್ಚಳವಾಗುತ್ತಿದೆ. ಇಂತಹ ಸಂದರ್ಭದಲ್ಲಿ ರೋಗಿಗಳಿಗೆ ಬೇಕಾಗುವ ಸೂಕ್ತ ಆಂಬುಲೆನ್ಸ್ ಸೇವೆ, ಬೆಡ್ ಗಳು, ಆಕ್ಸಿಜನ್, ವೆಂಟಿಲೇಟರ್ ಗಳನ್ನು ಒದಗಿಸುವ ಕೆಲಸ ಮಾಡುವಲ್ಲಿ ಸರ್ಕಾರ ವಿಫಲವಾಗಿದೆ. ಕೊರೊನಾದಿಂದ ತಮ್ಮ ಕುಟುಂಬದ ಸದಸ್ಯರನ್ನು ಕಳೆದುಕೊಂಡ ಅನೇಕರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸರ್ಕಾರ ಎಚ್ಚೆತ್ತುಕೊಂಡು ಅವಶ್ಯಕ ಸೇವೆಗಳನ್ನು ನೀಡುವ ಕೆಲಸ ಮಾಡಬೇಕು.
ರಾಜ್ಯದಲ್ಲಿ 14 – 15 ದಿನಗಳ ಕಾಲ ಲಾಕ್ ಡೌನ್ ಮಾಡಿ ಆದೇಶ ನೀಡಿರುವ ಸರ್ಕಾರ ರಾಜ್ಯದಲ್ಲಿನ ಜನಸಾಮಾನ್ಯರಿಗೆ ಪ್ಯಾಕೇಜ್ ನೀಡಬೇಕಿತ್ತು. ಲಾಕ್ ಡೌನ್ ಅಂತ ಹೆಸರಿಟ್ರೆ ಪ್ಯಾಕೇಜ್ ನೀಡಬೇಕಾಗುತ್ತೆ ಎಂಬ ಕಾರಣದಿಂದಾಗಿ ಕಟ್ಟುನಿಟ್ಟಿನ ಕ್ರಮದ ಹೆಸರಲ್ಲಿ ಅಘೋಷಿತ ಲಾಕ್ ಡೌನ್ ಮಾಡಿದೆ. ಆದ್ರೆ ದುಡಿದು ತಿನ್ನುವ ಬಡ, ಮಧ್ಯಮ ವರ್ಗದ ಜನರಿಗೆ ಯಾವುದೇ ರೀತಿಯ ಪ್ಯಾಕೇಜ್ ನೀಡಿಲ್ಲ. ಇನ್ನೂ ರೈತರ ಸಂಕಷ್ಟಗಳನ್ನು ಪರಿಹರಿಸುವ ಕೆಲಸವನ್ನು ಈ ಸರ್ಕಾರ ಮಾಡುತ್ತಿಲ್ಲ. ದಿನಕ್ಕೊಂದು, ಕ್ಷಣಕ್ಕೊಂದು ಎಂಬಂತೆ ಆದೇಶಗಳನ್ನು ಬದಲಾವಣೆ ಮಾಡುವುದು, ಮಾರ್ಪಾಡು ಮಾಡುವುದನ್ನು ಮಾಡುವ ಮೂಲಕ ಜನರನ್ನು ಗೊಂದಲಕ್ಕೆ ಸಿಲುಕಿಸುವ ಕೆಲಸವನ್ನು ಈ ಸರ್ಕಾರ ಮಾಡುತ್ತಿದೆ ಎಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಶಾಸಕ ಬಂಡೆಪ್ಪ ಖಾಶೆಂಪುರ್ ರವರ ಸಹೋದರರಾದ ಮಾರುತಿ ಖಾಶೆಂಪುರ್ ಮತ್ತು ಅವರ ಪತ್ನಿ ಗೀತಾ ಖಾಶೆಂಪುರ್, ರವಿ ಖಾಶೆಂಪುರ್ ಸೇರಿದಂತೆ ಶಾಸಕರ ಕುಟುಂಬಸ್ಥರು, ಇತರರು ಇದ್ದರು.

error: