March 28, 2024

Bhavana Tv

Its Your Channel

ಸರಕಾರಿ ಶಾಲೆಯಲ್ಲಿ ಆಂಗ್ಲ ಮಾಧ್ಯಮಕ್ಕೆ ಬಿಇಓ ಎಸ್.ಸಿದ್ದಪ್ಪ ಚಾಲನೆ

ಬಾಗೇಪಲ್ಲಿ:-ಸ್ಪರ್ಧಾತ್ಮಕ ಯುಗದಲ್ಲಿ ಆಂಗ್ಲ ಭಾಷೆಯ ಅನಿವಾರ್ಯತೆ ಇದ್ದು, ಬಡ ಕುಟುಂಬದ ಪ್ರತಿ ಮಗುವಿಗೂ ಗುಣಾತ್ಮಕ ಶಿಕ್ಷಣ ಒದಗಿಸುವ ಉದ್ದೇಶದಿಂದ ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಆರಂಭಿಸಲಾಗಿದೆ’ ಎಂದು ಬಾಗೇಪಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್. ಸಿದ್ದಪ್ಪ ತಿಳಿಸಿದರು.

ಬಾಗೇಪಲ್ಲಿ ಕಸಬಾ ದೇವರಗುಡಿಪಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ ಒಂದನೇ ತರಗತಿ ಆಂಗ್ಲ ಮಾಧ್ಯಮ ಆರಂಭ ಕಾರ್ಯಕ್ರಮಕ್ಕೆ ವಿದ್ಯಾರ್ಥಿನಿಯನ್ನು ದಾಖಲಿಸುವ ಮೂಲಕ ಚಾಲನೆ ನೀಡಿ ಮಾತನಾಡಿ ಸರ್ಕಾರವು ಸಮಾನ ಶಿಕ್ಷಣದ ಧ್ಯೇಯದೊಂದಿಗೆ ಸರ್ಕಾರಿ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಮಾತೃ ಭಾಷೆಗೆ ಧಕ್ಕೆಯಾಗದಂತೆ ಆಂಗ್ಲ ಮಾಧ್ಯಮದ ಶಿಕ್ಷಣಕ್ಕೆ ಅವಕಾಶ ನೀಡಲು ಮುಂದಾಗಿದೆ ಎಂದರು.
ಪೋಷಕರ ಆಶಯಕ್ಕೆ ತಕ್ಕಂತೆ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ತಾಲ್ಲೂಕಿನ ೩ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಆರಂಭವಾಗುತ್ತಿದ್ದು,
ಬಾಗೇಪಲ್ಲಿ ತಾಲೂಕಿನಲ್ಲಿ ಚೇಳೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಮಾರ್ಗನುಕುಂಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಬಾಗೇಪಲ್ಲಿ ಪಟ್ಟಣದಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ಆರಂಭವಾಗುತ್ತಿದೆ ಎಂದು ಹೇಳಿದರು.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಬಾಗೇಪಲ್ಲಿ ಕಸಬಾ ತಾಲ್ಲೂಕು ದೇವರಗುಡಿಪಲ್ಲಿ ಪ್ರಾಥಮಿಕ ಶಾಲೆಯಲ್ಲಿ ಆಂಗ್ಲ ಮಧ್ಯಮ ಪ್ರಾರಂಭವಾಗಿದ್ದು ಈ ಭಾಗದ ಪೋಷಕರಿಗೆ ಅತ್ಯಂತ ಸಂತಸದ ವಿಷಯವಾಗಿದೆ
ಆದ್ದರಿಂದ ಶಿಕ್ಷಕರು ಮಕ್ಕಳ ದಾಖಲಾತಿ ಹೆಚ್ಚಿಸಲು ಬದ್ಧತೆಯಿಂದ ಕಾರ್ಯ ನಿರ್ವಹಿಸಬೇಕು ಎಂದು ಹೇಳಿದರು.

ತಾಲ್ಲೂಕಿನ ಕ್ಷೇತ್ರ ಸಮನ್ವಯ ಅಧಿಕಾರಿ ವೆಂಕಟರಾಮ್ ಮಾತನಾಡಿ ಪ್ರಸಕ್ತ ವರ್ಷದ ದೇವರಗುಡಿಪಲ್ಲಿ ಶಾಲೆಯಲ್ಲಿ ೧ನೇ ತರಗತಿಗೆ ೩೦ ಮಕ್ಕಳನ್ನು ಮಾತ್ರ ದಾಖಲು ಮಾಡಿಕೊಳ್ಳಲು ಅವಕಾಶ ಇದೆ. ಆಯಾ ಶಾಲಾ ವ್ಯಾಪ್ತಿಯಲ್ಲಿ ಪೋಷಕರ ಸಭೆ ನಡೆಸಿ, ಈ ಬಗ್ಗೆ ಮಾಹಿತಿ ,ಮನೆ ಮನೆ ಭೇಟಿ, ಜಾಥಾದ ಮೂಲಕ ಜಾಗೃತಿ ಮೂಡಿಸಬೇಕು’ ಎಂದು ಹೇಳಿದರು.

‘ಸರ್ಕಾರಿ ಶಾಲೆಗಳಲ್ಲಿ ರೇಡಿಯೊ ತರಗತಿ, ಅನುಭವಿ ಶಿಕ್ಷಕರಿಂದ ಬೋಧನೆ, ಆಕರ್ಷಕ ಶಾಲಾ ವಾತಾವರಣ, ಉಚಿತ ಪಠ್ಯಪುಸ್ತಕ, ಕ್ಷೀರ ಭಾಗ್ಯ, ಮಧ್ಯಾಹ್ನ ಬಿಸಿಯೂಟ, ಸಮವಸ್ತ್ರ, ಶೂ, ಸಾಕ್ಸ್, ವಿದ್ಯಾರ್ಥಿವೇತನ ಸೌಲಭ್ಯ ಕಲ್ಪಿಸಲಾಗಿದೆ. ಜತೆಗೆ ಆಂಗ್ಲ ಮಾಧ್ಯಮ ಆರಂಭಿಸುತ್ತಿರುವುದು ಸಂತಸದ ವಿಷಯವಾಗಿದ್ದು, ಪೋಷಕರು ಈ ಬಗ್ಗೆ ಚಿಂತನ ಮಂಥನ ನಡೆಸಿ ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲಿಸಬೇಕು’ ಎಂದರು

ದೇವರಗುಡಿಪಲ್ಲಿ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ವೆಂಕಟೇಶ್ ಮಾತನಾಡಿ ‘ಆಂಗ್ಲ ಮಾಧ್ಯಮದ ಆರಂಭ ಸ್ವಾಗತಾರ್ಹ. ಪೋಷಕರು ಖಾಸಗಿ ಶಾಲಾ ವ್ಯಾಮೋಹ ಬಿಟ್ಟು ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ದಾಖಲು ಮಾಡಬೇಕು. ಇತ್ತೀಚಿನ ವರ್ಷಗಳಲ್ಲಿ ಸರ್ಕಾರಿ ಶಾಲೆಗಳಲ್ಲಿ ಉತ್ತಮ ಫಲಿತಾಂಶ ಬರುತ್ತಿದೆ’ ಆದ್ದರಿಂದ ಪೋಷಕರು ಸರ್ಕಾರಿ ಶಾಲೆಗೆ ಸೇರಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ದೈಹಿಕ ಶಿಕ್ಷಣ ಪರವೀಕ್ಷಕರಾದ ಜಯರಾಮ್, ಬಿ.ಆರ್.ಪಿ ಶ್ರೀಮತಿ ಮಂಜುಳಾ, ಪದ್ಮಶ್ರೀ,ಮುಖ್ಯ ಶಿಕ್ಷಕಿ ಪ್ರಮೀಳಾ, ಶಿಕ್ಷಕರಾದ ವಿ.ರಮಾ ದೇವಿ, ವರಲಕ್ಷ್ಮೀ,ಗ್ರಾಮದ ಮುಖಂಡರಾದ ಶಿವರಾಮ ರೆಡ್ಡಿ, ಬಾಬು, ರವಿ.ಕೃಷ್ಣಪ್ಪ, ಪ್ರಭಾವತಿ,ಲಕ್ಷ್ಮೀ ಇನ್ನೂ ಮುಂತಾದವರು ಪ್ರಮುಖರು ಪಾಲ್ಗೊಂಡಿದ್ದರು.

ವರದಿ :-ರಾ.ನ.ಗೋಪಾಲ ರೆಡ್ಡಿ ಬಾಗೇಪಲ್ಲಿ ತಾಲ್ಲೂಕು

error: