April 26, 2024

Bhavana Tv

Its Your Channel

ಮಾಡಪಲ್ಲಿಗೆ ಜಿಲ್ಲಾಧಿಕಾರಿ ಭೇಟಿ, ಹಲವು ಸಮಸ್ಯೆಗಳನ್ನು ಪರಿಹರಿಸುವಂತೆ ಮನವಿ ಮಾಡಿದ ಗ್ರಾಮಸ್ಥರು.

ಬಾಗೇಪಲ್ಲಿ: ಜಿಲ್ಲಾಧಿಕಾರಿ ಲತಾರವರು ಗುರುವಾರ ಸಂಜೆ ಬಾಗೇಪಲ್ಲಿ ತಾಲ್ಲೂಕಿನ ಮಾಡಪಲ್ಲಿ ಗ್ರಾಮಕ್ಕೆ ಕೊರೋನಾ ಲಸಿಕಾ ಅಭಿಯಾನದ ಹಿನ್ನೆಲೆಯಲ್ಲಿ ಆಗಮಿಸಿ ಜನರು ವ್ಯಾಕ್ಸಿನ್ ಪಡೆಯುವಂತೆ ತಿಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಲತಾರವರು, ಕೊರೋನಾ ವ್ಯಾಕ್ಸಿನ್‌ನ್ನು ತಪ್ಪದೇ ಹಾಕಿಸಿಕೊಳ್ಳಬೇಕು ಎಂದು ತಿಳಿಸಿದರು. ಮಾಡಪಲ್ಲಿ ಗ್ರಾಮದಲ್ಲಿ ಸುಮಾರು ಶೇ.೨೦ ರಷ್ಟು ಜನರಿಗೆ ಮಾತ್ರ ವ್ಯಾಕ್ಸಿನ್ ಹಾಕಿಸಲಾಗಿದ್ದು, ನಿರ್ಲಕ್ಷ್ಯ ಮಾಡಬಾರದು ಎಂದರು. ಗ್ರಾಮದ ಪ್ರಜ್ಞಾವಂತರು, ಅನಕ್ಷರಸ್ಥ ಯುವ ಜನರು ಮುಗ್ಧರಿಗೆ ತಿಳುವಳಿಕೆ ಕೊಡುವಂತಹ ಕೆಲಸ ಮಾಡಬೇಕು ಎಂದರು. ಕೊರೋನಾ ವ್ಯಾಕ್ಸಿನ್ ನೀಡಲು ಆರೋಗ್ಯ ಇಲಾಖೆ ,ತಾಲ್ಲೂಕು ಆಡಳಿತಗಳ ಹಲವು ಅಧಿಕಾರಿಗಳು ಗ್ರಾಮದ ಮನೆಗಳಿಗೆ ತೆರಳಿ ವ್ಯಾಕ್ಸಿನ್ ಹಾಕಿಸಿಕೊಳ್ಳುವಂತೆ ಅರಿವು ಮೂಡಿಸಿ ವ್ಯಾಕ್ಸಿನ್ ಹಾಕಿಸಿದರು.

ಈ ಸಂದರ್ಭದಲ್ಲಿ ಗ್ರಾಮದ ಯುವ ಮುಖಂಡರು ಕಲ್ಲುಗಣಿಗಾರಿಕೆಯಿಂದ ಉಂಟಾಗುತ್ತಿರುವ ಅನಾಹುತಗಳ ಬಗ್ಗೆ ಮನವಿ ಸಲ್ಲಿಸಿದರು. ಕಲ್ಲುಗಣಿಗಾರಿಕೆಯಿಂದಾಗಿ ಜಲಮೂಲಗಳ ಸಂಪೂರ್ಣ ನಾಶವಾಗುತ್ತಿವೆ, ರಸ್ತೆಗಳು ಹಾಳಾಗಿವೆ ಎಂದು ಅದನ್ನು ಸರಿಪಡಿಸುವಂತೆ ಜಿಲ್ಲಾಧಿಕಾರಿಯವರಿಗೆ ಮನವಿ ಪತ್ರ ನೀಡಿದರು.

ಇನ್ನು ವಿದ್ಯಾರ್ಥಿಗಳು ಶಾಲಾ,ಕಾಲೇಜುಗಳಿಗೆ ನಡೆದುಕೊಂಡು ಹೋಗಲು ತುಂಬಾ ಪ್ರಯಾಸ ಪಡುತ್ತಿದ್ದೇವೆ. ಯಾವುದೇ ರೀತಿ ಸಾರಿಗೆ ಸೌಕರ್ಯವಿಲ್ಲದೆ ಪ್ರತಿದಿನ ೫ ಕಿ.ಮೀ ಹೋಗುವುದು ಮತ್ತು ೫ ಕಿ.ಮೀ ಬರುವುದಾಗಿದೆ. ಬಸ್ ವ್ಯವಸ್ಥೆ ಕಲ್ಪಿಸಬೇಕೆಂದು ಜಿಲ್ಲಾಧಿಕಾರಿಯವರನ್ನು ಮನೆಗೆ ಆಹ್ವಾನಿಸಿ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ವಿದ್ಯಾರ್ಥಿ ಸ್ಪಂದನ ,ನಮ್ಮೂರಲ್ಲಿ ಚೆನ್ನಾಗಿ ಓದುವ ಮಕ್ಕಳಿದ್ದಾರೆ. ಆದರೆ ಅವರಿಗೆ ಸುಲಭವಾಗಿ ಶಾಲಾ ವಾತಾವರಣ ಸಿಗುತ್ತಿಲ್ಲ. ನಮ್ಮೂರ ಕಿರಿಯ ಪ್ರಾಥಮಿಕ ಶಾಲೆಗೆ ಖಾಯಂ ಶಿಕ್ಷಕರೇ ಇಲ್ಲವಾಗಿದೆ. ಮತ್ತು ನಾವು ಪ್ರತಿನಿತ್ಯ ಒಂದೂವರೆ ಗಂಟೆಯಿAದ, ಎರಡು ಗಂಟೆಗಳ ಕಾಲ ಕಾಲ್ನಡಿಯಲ್ಲೇ ಶಾಲೆಗೆ ತಲುಪಬೇಕು. ಆದಷ್ಟು ತುರ್ತಾಗಿ ನಮ್ಮೂರ ರಸ್ತೆಗೆ ಡಾಂಬರೀಕರಣ ಮಾಡಿಸಿ ,ಬಸ್ ಸೌಲಭ್ಯ ಒದಗಿಸಿ ಎಂದು ಮನವಿ ಮಾಡಿಕೊಂಡರು. ಜಿಲ್ಲಾಧಿಕಾರಿಯವರು ಸಮಸ್ಯೆ ಬಗೆಹರಿಸುವ ಭರವಸೆ ಕೊಟ್ಟರು.

ಗ್ರಾಮದಲ್ಲಿ ಸ್ವಚ್ಛತೆ ಮರೆಯಾಗಿ ಗಬ್ಬುನಾರುತ್ತಿದ್ದ ಚರಂಡಿಗಳನ್ನು ತೋರಿಸಿ ಬೇಸರ ವ್ಯಕ್ತ ಪಡಿಸಿದರು. ತಕ್ಷಣ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಯವರಿಗೆ ಸ್ವಚ್ಛತೆ ಕಾಪಾಡುವಂತೆ ಎಚ್ಚರಿಕೆ ನೀಡಿ, ಸರ್ಕಾರದ ಅನುದಾನ ಸದ್ಬಳಕೆ ಮಾಡಿಕೊಳ್ಳುವಂತೆ ಸೂಚಿಸಿದರು.

ಇಂತಹ ಹತ್ತು ಹಲವು ಮನವಿಗಳನ್ನು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ, ರಾಜಕಾರಣಿಗಳಿಗೆ ಸಲ್ಲಿಸಿದ್ದೇವೆ. ಆದರೆ ನಮ್ಮ ಸಮಸ್ಯೆಗಳು ಹೆಚ್ಚಾಗುತ್ತಲೇ ಇವೆ, ಪರಿಹಾರಗಳು ಮಾತ್ರ ಕಾಣುತ್ತಿಲ್ಲ. ಕಲ್ಲುಗಣಿಗಾರಿಕೆಯವರು ತಡೆಗೋಡೆ ನಿರ್ಮಿಸುವಂತೆ ಹಾಗೂ ಕೆರೆ ಹಾಳಾಗದಂತೆ ಕ್ರಮ ಕೈಗೊಳ್ಳುವ ನೋಟಿಸ್ ಕೊಡುತ್ತೇನೆಂದು ಜಿಲ್ಲಾಧಿಕಾರಿಗಳು ಮೌಖಿಕ ಭರವಸೆ ಕೊಟ್ಟಿದ್ದಾರೆ, ಕಾದು ನೋಡೋಣ ಎಂದು ಗ್ರಾಮಸ್ಥ ಮಾಡಪಲ್ಲಿ ನರಸಿಂಹಮೂರ್ತಿ ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಅಧಿಕಾರಿ ಇಂದಿರಾ ಆರ್ ಕಬಾಡೆ, ತಹಶಿಲ್ದಾರರಾದ ಡಿ.ಎ ದಿವಾಕರ್, ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಸತ್ಯನಾರಾಯಣ ರೆಡ್ಡಿ ,ತಾಲ್ಲೂಕು ಪಂಚಾಯತಿಯ ಕಾರ್ಯ ನಿರ್ವಹಣಾಧಿಕಾರಿ ಮಂಜುನಾಥಸ್ವಾಮಿ,ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಬಾಬು ಸಾಹೇಬ ಸೇರಿದಂತೆ ಹಲವರು ಹಾಜರಿದ್ದರು.
ವರದಿ:ಗೋಪಾಲ ರೆಡ್ಡಿ ಬಾಗೇಪಲ್ಲಿ

error: