April 19, 2024

Bhavana Tv

Its Your Channel

ಎನ್.ಇ.ಪಿ ನಿಂದ ಸಾಮಾಜಿಕ ಹಿಂದುಳಿದ ಸಮುದಾಯಗಳನ್ನು ಶಿಕ್ಷಣದಿಂದ ವಂಚನೆ: ಶಿವ ಸುಂದರ್

ಬಾಗೇಪಲ್ಲಿ:-ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯು ಸಾಮಾಜಿಕವಾಗಿ ಹಿಂದುಳಿದ ಸಮುದಾಯಗಳನ್ನು ಶಿಕ್ಷಣದಿಂದ ವಂಚಿಸಲು ಮಾಡಿದ ಕರಡು ಪ್ರತಿಯಾಗಿದೆ ಹಾಗೂ ಈ ಹೊಸ ನೀತಿಯಿಂದ ಶಿಕ್ಷಣ ಮೊಟಕುಗೊಳಿಸುವವರ ಸಂಖ್ಯೆ ಹೆಚ್ಚಾಗುವುದರೊಂದಿಗೆ ಶಿಕ್ಷಕರು ಕೂಡ ಉದ್ಯೋಗ ಕಳೆದುಕೊಳ್ಳುವ ಸಂಭವ ಹೆಚ್ಚಿದೆ ಎಂದು ಹಿರಿಯ ಪತ್ರಕರ್ತರೂ ಸಾಮಾಜಿಕ ಚಿಂತಕ ಶಿವಸುಂದರ್ ರವರು ಹೇಳಿದರು.

ಅವರು ಬಾಗೇಪಲ್ಲಿ ಪಟ್ಟಣದ ವಿಕಾಸ್ ಪ್ರಥಮ ದರ್ಜೆ ಕಾಲೇಜು ಹಾಗೂ ಎಸ್.ಎಫ್. ಐ ಬಾಗೇಪಲ್ಲಿ ತಾಲ್ಲೂಕು ಘಟಕ ಸಂಯುಕ್ತಾಶಯದಲ್ಲಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಬಗ್ಗೆ ಚರ್ಚಾಕೂಟದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿ
ಹೊಸ ರಾಷ್ಟೀಯ ಶಿಕ್ಷಣ ನೀತಿಯು ಕೇಂದ್ರೀಕರಣ, ಕೇಸರೀಕರಣ ಹಾಗೂ ಖಾಸಗೀಕರಣಕ್ಕೆ ಒತ್ತು ನೀಡುವ ಒಂದು ಕರಡು ಪ್ರತಿಯಾಗಿದ್ದು, ದೇಶದ ಭವಿಷ್ಯದ ಮೇಲೆ ತೀವ್ರ ಪರಿಣಾಮ ಬೀರಲಿದ್ದು ಇದರ ವಿರುಧ್ದ ಹೋರಾಟದ ಅಗತ್ಯತೆ ಇದೆ ಎಂದು ಹೇಳಿದರು

ಹಿಂಬದಿ ಬಾಗಿಲಿನ ಮುಖಾಂತರ ಜಾರಿ ಮಾಡಲು ಹೊರಟಿರುವ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಇದೀಗ ಕರ್ನಾಟಕದಲ್ಲಿ ಜಾರಿ ಮಾಡಲು ಹೊರಟಿದ್ದು ಈ ಅಪ್ರಜಾಸತ್ತಾತ್ಮಕ ಹಾಗೂ ಒಕ್ಕೂಟ ವ್ಯವಸ್ಥೆಗೆ ಮಾರಕವಾದ ಈ ನೀತಿಯ ವಿರುಧ್ದ ಎಲ್ಲಾ ಸಮಾನ ಮನಸ್ಕರನ್ನು ಒಟ್ಟುಗೂಡಿಸಿಕೊಂಡು ಕರ್ನಾಟಕದಾದ್ಯಂತ ಜನಾಂದೋಲನವನ್ನು ಪ್ರಾರಂಭಿಸಲಿದ್ದೇವೆ ತಾವು ನಮ್ಮೊಂದಿಗೆ ಕೈ ಜೋಡಿಸಬೇಕು ಎಂದು ಹೇಳಿದರು.

ನ್ಯಾಷನಲ್ ಕಾಲೇಜು ಭೌತಶಾಸ್ತ್ರ ಉಪನ್ಯಾಸಕರಾದ ವೆಂಕಟಶಿವಾರೆಡ್ಡಿ ಮಾತನಾಡಿ
ಈ ಹೊಸ ನೀತಿಯು ಶಿಕ್ಷಣ ಕ್ಷೇತ್ರವು ಎದುರಿಸುತ್ತಿರುವ ಸಮಸ್ಯೆಗಳಿಗೆ ನಿರ್ದಿಷ್ಟ ಉಪಾಯ ರೂಪಿಸಿಲ್ಲ, ಪ್ರೌಢ ಶಿಕ್ಷಣವನ್ನು ಒಳಗೊಂಡು ಪದವಿ ಮತ್ತು ಉನ್ನತ ಶಿಕ್ಷಣಕ್ಕೆ ಗಣನೀಯ ಪ್ರಮಾಣದಲ್ಲಿ ದಾಖಲಾತಿ ಕುಸಿಯುತ್ತಿದೆ. ಶಿಕ್ಷಣದ ಗುಣಮಟ್ಟ ಕ್ಷೀಣ, ಖಾಸಗೀ ಕರಣದಿಂದ ಏರುತ್ತಿರುವ ಶುಲ್ಕ ಹೀಗೆ ಅನೇಕ ಸಮಸ್ಯೆಗಳಿದ್ದು, ಅವುಗಳ ಪರಿಹಾರಕ್ಕೆ ಹೊಸ ಶಿಕ್ಷಣ ನೀತಿ ಉಪಾಯ ಸೂಚಿಸಿಲ್ಲ. ಶಿಕ್ಷಣ ಕ್ಷೇತ್ರದ ಸಮಸ್ಯೆಗಳನ್ನು ಬಗೆಹರಿಸದ ಈ ಶಿಕ್ಷಣ ನೀತಿ ಹೇಗೆ ಜನಪರ, ವಿದ್ಯಾರ್ಥಿ ಪರವಾಗಿರಲು ಸಾಧ್ಯ ಎಂದು ತಿಳಿಸಿದರು.

ರಾಷ್ಟ್ರೀಯ ಶಿಕ್ಷಣ ನೀತಿಯು ಈಗಾಗಲೇ ಎಲ್ಲೆಡೆ ವಿಜೃಂಭಿಸುತ್ತಿರುವ ಖಾಸಗೀಕರಣವನ್ನು ಇನ್ನಷ್ಟು ಬೆಳೆಸುವ ನೀಲಿ ನಕ್ಷೆಯಾಗಿದೆಯಷ್ಟೆ. ದೇಶದ ಜನಸಂಖ್ಯೆಯ ಬಹುದೊಡ್ಡ ಭಾಗವಾಗಿರುವ ಬಡವರಿಂದ ಶಿಕ್ಷಣವನ್ನು ಬಹುದೂರ ಕೊಂಡೊಯ್ಯುವ ಈ ನೀತಿ ಖಂಡನೀಯ ಎಂದು ಹೇಳಿದರು

ಐದನೇ ತರಗತಿಯವರೆಗೂ ಚಟುವಟಿಕೆ ಆಧಾರಿತ ಶಿಕ್ಷಣ ಎಂಬ ಹೆಸರಿನಲ್ಲಿ ಕ್ರಮಬದ್ಧ ಕಲಿಕೆಯನ್ನು ನಾಶಗೊಳಿಸಿ ಈ ಮೂಲಕ ಸರ್ಕಾರಿ ಶಾಲೆಗಳ ಗುಣಮಟ್ಟವನ್ನು ಕುಂಠಿತಗೊಳಿಸಿ ಖಾಸಗಿ ಶಾಲೆಗಳತ್ತ ಪಾಲಕರು ಮುಖ ಮಾಡಲು ಸರ್ಕಾರವೇ ನೀಡಿರುವ ಕರೆ ನೀಡಿದೆ ಎಂದು ಅಪಾದಿಸಿದರು.

ಈ ಸಂದರ್ಭದಲ್ಲಿ ವಿಕಾಸ ಕಾಲೇಜು ಸಂಸ್ಥಾಪಕರಾದ ಪಿ.ಎನ್. ಶಿವಣ್ಣ,ಟಿ.ಎನ್.ರವಿ , ಉಪನ್ಯಾಸಕರಾದ ಸುಬ್ರಹ್ಮಣ್ಯಂ,ಎಸ್. ಎಫ್. ಐ.ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಸೋಮಶೇಖರ,ತಾಲ್ಲೂಕು ಅದ್ಯಕ್ಷ ಸತೀಶ್, ಹಾಗೂ ಇನ್ನೂ ಮುಂತಾದವರು ಇದ್ದರು.

ವರದಿ:ಗೋಪಾಲ ರೆಡ್ಡಿ ಬಾಗೇಪಲ್ಲಿ

error: