March 29, 2024

Bhavana Tv

Its Your Channel

ಗೊರ್ತಪಲ್ಲಿ ಗ್ರಾಮ ಪಂಚಾಯತಿಯಲ್ಲಿ ಲಕ್ಷಾಂತರ ರೂಗಳ ಭ್ರಷ್ಟಾಚಾರದ ಬಗ್ಗೆ ತನಿಖೆ : ಜಿ.ಪಂ.ಮುಖ್ಯ ಯೋಜನಾಧಿಕಾರಿ ವಿ.ಧನುರೇಣುಕಾ
ಭೇಟಿ ನೀಡಿ ತನಿಖೆ

ಬಾಗೇಪಲ್ಲಿ: ತಾಲೂಕಿನ ಗೊರ್ತಪಲ್ಲಿ ಗ್ರಾಮ ಪಂಚಾಯತಿಯಲ್ಲಿ ನಡೆದಿರುವ ಲಕ್ಷಾಂತರ ರೂಗಳ ಭ್ರಷ್ಟಾಚಾರದ ಬಗ್ಗೆ ತನಿಖಾ ತಂಡ ಸಮಗ್ರ ತನಿಖೆ ನಡೆಸಿ 10 ತಿಂಗಳ ಹಿಂದೆಯೇ ಜಿಲ್ಲಾ ಪಂಚಾಯತಿ ಸಿಇಓಗೆ ವರದಿ ಸಲ್ಲಿಸಿದ್ದರೂ ಶಿಸ್ತು ಕ್ರಮ ಜರುಗಿಸದ ಹಿನ್ನಲೆಯಲ್ಲಿ ಸ್ಥಳೀಯ ಗ್ರಾಮ ಪಂಚಾಯತಿ ಸದಸ್ಯರು, ನಾಗರೀಕರು ಗ್ರಾಮ ಪಂಚಾಯತಿ ಕಚೇರಿಗೆ ಬೀಗ ಜಡಿದು ಪ್ರತಿಭಟನೆಗೆ ಮುಂದಾಗಿ ಜೂನ್ 16 ರಂದು ಮನವಿ ಸಲ್ಲಿಸಿದ್ದು ಜಿ.ಪಂ.ಮುಖ್ಯ ಯೋಜನಾಧಿಕಾರಿ ವಿ.ಧನುರೇಣುಕಾ ಸೋಮವಾರ ಗೊರ್ತಪಲ್ಲಿ ಗ್ರಾ.ಪಂ.ಕಚೇರಿಗೆ ಭೇಟಿ ನೀಡಿ ತನಿಖೆಗೆ ಮುಂದಾಗಿದ್ದಾರೆ.
ಬಾಗೇಪಲ್ಲಿ ತಾಲೂಕಿನ ಗೊರ್ತಪಲ್ಲಿ ಗ್ರಾಮ ಪಂಚಾಯತಿಯ 14 ಮತ್ತು 15 ನೇ ಹಣಕಾಸು ಯೋಜನೆ ಸೇರಿದಂತೆ ವಿವಿಧ ಯೋಜನೆಗಳಲ್ಲಿ ನಡೆದಿರುವ ಅವ್ಯವಹಾರಗಳ ಬಗ್ಗೆ ಸಮಗ್ರ ತನಿಖೆ ನಡೆಸಿ ವರದಿ ನೀಡುವಂತೆ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ರವರೇ 2021ರ ವಿಧಾನಸಭಾ ಅಧಿವೇಶನ ಸಮಯದಲ್ಲಿ ಪ್ರಶ್ನಿಸಿದ್ದು, ಜಿಲ್ಲಾ ಪಂಚಾಯತಿ ಮುಖ್ಯ ಯೋಜನಾಧಿಕಾರಿ ನೇತೃತ್ವದಲ್ಲಿ ಗೊರ್ತಪಲ್ಲಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನಡೆದಿರುವ ವಿವಿಧ ಯೋಜನೆಯ ಕಾಮಗಾರಿಗಳ ಹಾಗೂ ಹಣಕಾಸು ವ್ಯವಹಾರದ ಸಂಪೂರ್ಣ ದಾಖಲೆಗಳನ್ನು ಪರಿಶೀಲಿಸಿ ಲೋಪ ವ್ಯಸಗಿರುವ ಅಧಿಕಾರಿಗಳ ವಿರುದ್ದ ಶಿಸ್ತು ಕ್ರಮ ಜರುಗಿಸುವಂತೆ ಜಿಲ್ಲಾ ಪಂಚಾಯತಿ ಸಿಇಓ ಕಚೇರಿಗೆ 2021 ಆಗಸ್ಟ್ ತಿಂಗಳಿನಲ್ಲಿ ವರದಿ ಸಲ್ಲಿಸಲಾಗಿತ್ತು. ಶಿಸ್ತು ಕ್ರಮ ಜರುಗಿಸುವಂತೆ ವರದಿ ಸಲ್ಲಿಸಿ 10 ತಿಂಗಳು ಕಳೆದರೂ ತಪ್ಪಿತಸ್ಥ ಅಧಿಕಾರಿಗಳ ವಿರುದ್ದ ಕ್ರಮಕ್ಕೆ ಮುಂದಾಗದ ಅಧಿಕಾರಿಗಳ ನಡೆಗೆ ಬೇಸತ್ತ ಗೊರ್ತಪಲ್ಲಿ ಗ್ರಾಮ ಪಂಚಾಯತಿಯ ಬಿಜೆಪಿ ಕಾರ್ಯಕರ್ತರು ಸಮಗ್ರ ತನಿಖೆ ನಡೆಸುವಂತೆ ಒತ್ತಾಯಿಸಿ ಗ್ರಾಮ ಪಂಚಾಯತಿ ಕಚೇರಿಗೆ ಬೀಗ ಜಡಿದು ಪ್ರತಿಭಟನೆಗೆ ಮುಂದಾಗಿದ್ದಾರೆ.
ತಾಲೂಕು ಪಂಚಾಯತಿ ಮಾಜಿ ಅಧ್ಯಕ್ಷ ಕೆ.ಆರ್.ನರೇಂದ್ರ ಮಾತನಾಡಿ, ಗೊರ್ತಪಲ್ಲಿ ಗ್ರಾಮ ಪಂಚಾಯತಿ ಹಾಲಿ ಅಧ್ಯಕ್ಷೆ ಹಾಗೂ ಉಪಾಧ್ಯಕ್ಷರ ಅವಧಿಯಲ್ಲಿ ಯಾವುದೇ ರೀತಿಯ ಅವ್ಯವಹಾರ ನಡೆದಿಲ್ಲ, ಗ್ರಾಮ ಪಂಚಾಯತಿ ಆಡಳಿತ ಅಧಿಕಾರಿ ಮತ್ತು ಪಿಡಿಓ ಅವಧಿಯಲ್ಲಿ ನಡೆದಿರುವ ಅವ್ಯವಹಾರಕ್ಕೆ ಹಾಲಿ ಗ್ರಾಮ ಪಂಚಾಯತಿ ಸದಸ್ಯರ ಸಮಿತಿಯನ್ನು ಹೊಣೆ ಮಾಡಬಾರದು, ಆಡಳಿತಾಧಿಕಾರಿ ಅವಧಿಯಲ್ಲಿ ನಡೆದಿರುವ ಅವ್ಯವಹಾರಗಳ ತನಿಖೆಗೆ ನಮ್ಮ ಬೆಂಬಲಿಗರ ಬೆಂಬಲ ಇದೆ ಎಂದರು.
ಬಿಜೆಪಿ ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಆರ್.ವೆಂಕಟೇಶ್ ಮಾತನಾಡಿ, ಗೊರ್ತಪಲ್ಲಿ ಗ್ರಾಮ ಪಂಚಾಯತಿಯಲ್ಲಿ ನಡೆದಿರುವ ಅವ್ಯವಹಾರಗಳ ಬಗ್ಗೆ ತನಿಖೆ ನಡೆಸುವಂತೆ ದಾಖಲೆ ಸಮೇತ ಪ್ರತಿಭಟನೆ ನಡೆಸಿದ್ದೇವೆ, ಗೊರ್ತಪಲ್ಲಿ ಗ್ರಾಮ ಪಂಚಾಯತಿಯಲ್ಲಿ ನಡೆದಿರುವ ಅವ್ಯವಹಾರದ ಬಗ್ಗೆ ಈ ಕ್ಷೇತ್ರದ ಕಾಂಗ್ರೆಸ್ ಶಾಸಕರೇ ಅಧಿವೇಶನದಲ್ಲಿ ಧ್ವನಿ ಎತ್ತಿದ್ದು ಅಧಿಕಾರಿಗಳು ತನಿಖೆ ನಡೆಸಿ ಅವ್ಯವಹಾರ ಪ್ರಕರಣವನ್ನು ಮುಚ್ಚುಹಾಕುವ ಪ್ರಯತ್ನ ಮಾಡಿದ್ದಾರೆ. ಈ ಹಿನ್ನಲೆಯಲ್ಲಿ ಗ್ರಾ.ಪಂ.ನಲ್ಲಿ ಮತ್ತಷ್ಟು ಅವ್ಯವಹಾರಗಳು ನಡೆಯಲು ಪುಷ್ಠಿ ನೀಡಿದಂತಾಗಿ ಅವ್ಯವಹಾರ ಪ್ರಮಾಣ ಹೆಚ್ಚಾಗಿ ನಡೆಯುತ್ತಿರುವ ಕಾರಣ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕೆಂದು ಪ್ರತಿಭಟನೆಗೆ ಮುಂದಾಗಿದ್ದೇವೆ.
ಜಿಲ್ಲಾ ಪಂಚಾಯತಿ ಮುಖ್ಯ ಯೋಜನಾಧಿಕಾರಿ ವಿ.ಧನುರೇಣುಕಾ ಮಾತನಾಡಿ, ಗೊರ್ತಪಲ್ಲಿ ಗ್ರಾಮ ಪಂಚಾಯತಿಯಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ಪ್ರತಿಭಟನೆ ನಡೆಸಿ ದೂರು ಸಲ್ಲಿಸಿರುವ ಹಿನ್ನಲೆಯಲ್ಲಿ ತನಿಖೆ ನಡೆಸತ್ತಿದ್ದು 2020-21 ನೇ ಸಾಲಿನಲ್ಲಿ ಅಡಳಿತ ಆಧಿಕಾರಿಗಳು ಆಡಳಿತ ವ್ಯವಹಾರ ನಡೆಸಿದ್ದು ಹಣಕಾಸಿನ ವ್ಯವಹಾರಗಳ ಬಗ್ಗೆ ಸಮರ್ಪಕ ದಾಖಲೆ ಸಲ್ಲಿಸಿಲ್ಲ, 2021-22 ನೇ ಸಾಲಿನ ದಾಖಲೆಗಳನ್ನು ಪರಿಶೀಲಿಸಿದಾಗ ಇ-ಗ್ರಾಮ ಸ್ವರಾಜ್ ಮತ್ತು ಕ್ರೀಯಾ ಯೋಜನೆ ಪಟ್ಟಿಗೆ ತಾಳೆ ಆಗುತ್ತಿಲ್ಲ, ಅದ್ದರಿಂದ ಕ್ಯಾಷ್ ಬುಕ್, ರಶೀದಿ ಮತ್ತು ಕಾಮಗಾರಿಗಳ ಸ್ಥಳ ಪರಿಶೀಲನೆ ನಡೆಸಿ ಮುಂದಿನ ಕ್ರಮ ಜರುಗಿಸುತ್ತೇವೆ.
ಈ ಸಂದರ್ಭದಲ್ಲಿ ತಾಲೂಕು ಪಂಚಾಯತಿ ಇಓ ಮಂಜುನಾಥಸ್ವಾಮಿ, ಆಡಳಿತ ಅಧಿಕಾರಿ ಗ್ರಾಮ ಪಂಚಾಯತಿ ಅಧ್ಯಕ್ಷೆ ನಿರ್ಮಲಾ ಶ್ರೀನಿವಾಸ್, ಉಪಾಧ್ಯಕ್ಷೆ ರೇಣುಕಾ ಶ್ರೀರಾಮ, ಸದಸ್ಯರಾದ ಅಂಜಿನಪ್ಪ, ವೈ.ಸಧಾಶಿವಾರೆಡ್ಡಿ, ಉಮಾದೇವಿ, ರಜಿನಿಬಾಯಿ, ರಮಣ, ಈರಪ್ಪ, ನರಸಿಂಹಪ್ಪ ಪಿಡಿಓ ನಾರಾಯಣಸ್ವಾಮಿ ಮತ್ತಿತರರು ಇದ್ದರು.

ವರದಿ::- ರಾ.ನ.ಗೋಪಾಲ ರೆಡ್ಡಿ ಬಾಗೇಪಲ್ಲಿ ತಾಲ್ಲೂಕು

error: