October 20, 2021

Bhavana Tv

Its Your Channel

ಪ್ರಸಿದ್ಧ ಭಾಗವತ ಕೃಷ್ಣ ಭಂಡಾರಿ ನಿಧನ

ಹೊನ್ನಾವರ: ಯಕ್ಷ ರಂಗದ ಸಮರ್ಥ ಕಲಾವಿದ, ಪ್ರಸಿದ್ಧ ಭಾಗವತ ಕೃಷ್ಣ ಭಂಡಾರಿ ಗುಣವಂತೆಯವರಯ ಕೆಲವು ತಿಂಗಳುಗಳಿoದ ಅನಾರೋಗ್ಯದಿಂದ ಬಳಲುತ್ತಿದ್ದು ಶನಿವಾರ ನಿಧನರಾದರು.

ಕೃಷ್ಣ ಭಂಡಾರಿ ಗುಣವಂತೆ ಎನ್ನುವ ಹೆಸರನ್ನು ಕೇಳದ ಯಕ್ಷಪ್ರಿಯರಿಲ್ಲ. ಜಿಲ್ಲೆಯಾದ್ಯಂತ ಯಕ್ಷಗಾನದ ಗುರುಗಳಾಗಿ, ಸರಳತೆ, ಸಹಜತೆ ಅವರ ಜೀವನದ ಅತೀ ದೊಡ್ಡ ಆಭರಣವನ್ನಾಗಿಸಿಕೊಂಡಿದ್ದರು.

.ಅವರ ಒಡನಾಟಕ್ಕೆ ಬಂದವರು ಯಾರು ಇವರನ್ನು ಮರೆಯಲು ಸಾಧ್ಯವಿಲ್ಲಾ.ಯಕ್ಷ ರಂಗ ಸ್ಥಳದಲ್ಲೂ ಯಾವ ಕಲಾವಿದನಿಗೂ ತೊಡಕಾದವರಲ್ಲ. ಎಲ್ಲಿಯೂ ಹಣಕ್ಕಾಗಿ ಕೈಚಾದವರಲ್ಲ.
ಯಾವ ಚಟವು ಇವರ ಹತ್ತಿರ ಸುಳಿಯಲ್ಲಿಲ್ಲ. ಇರುವ ಸತ್ಯವನ್ನು ಎಂದು ಅಲ್ಲಗಳೆದವರಲ್ಲ. ಇವರ ಭಾಗವತಿಕೆಯನ್ನು ಕೇಳಿ ನೋಡಿದವರೆಲ್ಲ ಇವರ ಹೃದಯ ರಂಗಸ್ಥಳದ ಕಲಾ ಸಾಮರ್ಥ್ಯಕ್ಕೆ ತಲೆ ದೂಗಿದವರೇ. ಯಕ್ಷಗಾನದ ಭಾಗತಿಕೆಯ ಹೊರತಾಗಿ, ಚಂಡೆ, ಮೃದಂಗ, ನುಡಿಸಬಲ್ಲ ವೇಷ ಮಾಡ ಬಲ್ಲ ಆಲ್ ರೌಂಡರ್ ವ್ಯಕ್ತಿತ್ವ. ಈ ಕಾರಣಕ್ಕಾಗಿಯೇ ಯಕ್ಷಗಾನದ ಪದ್ಮಶ್ರೀ ಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆಯವರ ಬಾಯಲ್ಲಿ ” ಕೃಷ್ಣ ಭಂಡಾರಿ ನನಗಿಂತ ದೊಡ್ಡ ಕಲಾವಿದ ಎಂದಿದ್ದರು.

ಉಡುಪಿಯ ಕಾರಂತರ ಕಲಾ ಕೇಂದ್ರದಲ್ಲಿ ಪಳಗಿದವರು, ಯಕ್ಷಗಾನದ ಕೆರಮನೆಯ ಶ್ರೀ ‘ಮಹಾ’ “ಬಲ”ರಲ್ಲಿ ರಾಗದ ಬಗ್ಗೆ ಹೆಚ್ಜಿನ ಅಧ್ಯಯನ ಮಾಡಿದವರು. ಬಹುಷ್ಯ ಅದಕ್ಕಾಗಿಯೇ ಯಕ್ಷಗಾನದಲ್ಲಿ ಇರುವ “ತನ್ನ ತನ” ಎಂದು ಬಿಟ್ಟವರಲ್ಲ ಕೃಷ್ಣ ಭಂಢಾರಿಯವರು. ಕೆರಮನೆಯ ಶ್ರೀ ಶಂಭು ಹೆಗಡೆಯವರ ಯೋಗ್ಯತೆಯ ಮಾನದಂಡದಲ್ಲಿ ಹೆಚ್ಚು ಅಂಕ ಪಡೆದ ಕಾರಣವೆ ಫ್ರಾನ್ಸ್, ಜರ್ಮನಿ, ಸ್ಪೇನ್ ದೇಶಗಳಿಗೆ ಹೋಗುವಾಗ ಭಾಗವತರನ್ನಾಗಿ ಜೊತೆಗೆ ಕರೆದು ಕೊಂಡರು. ಇದು ಕೃಷ್ಣ ಭಂಡಾರಿಯವರ ಒಟ್ಟು ಕಲಾ ಶಕ್ತಿಯ ಗಟ್ಟಿ ತನಕ್ಕೆ ಮೈಲಿಗಲ್ಲು. ತಾನು ಹುಟ್ಟಿದ ಕೇರಿಯಿಂದ ಹಿಡಿದು ಜಿಲ್ಲೆಯಾದ್ಯಂತ ಸಾವಿರಾರು ಮಕ್ಕಳಿಗೆ ಯಕ್ಷಗಾನದ ಗೆಜ್ಜೆ ಕಟ್ಟಿ, ಹೆಜ್ಜೆ ಇಡಿಸಿದವರು.
ಎಲ್ಲಿಯೂ ಹುಟ್ಟಿದ ಊರಿಗೆ ಅಪಕೀರ್ತಿ ತರದೇ, ಯಾರ ಬಾಯಲ್ಲೂ ಜಗಿದು ಉಗಿಯುವ ಕವಳವಾಗದೆ, ಬಾಳಿದವರು. ಸಾಲಿಗ್ರಾಮ ಮೇಳದ ತಿರುಗಾಟದಲ್ಲೂ ತನ್ನ ಅವಧಿ ಬರುವ ಐದು ನಿಮಿಷ ಮುಂಚಿತವಾಗಿಯೇ ವೇದಿಕೆಯ ಮೇಲೆ ಮೊದಲಿದ್ದ ಭಾಗವತರ ಪಕ್ಕ ನಿಂತು ಕೊಳ್ಳುವ ಶಿಸ್ತಿನ ಸಿಪಾಯಿ. ಜಿಲ್ಲೆಯ ಹೆಮ್ಮೆಯ ಕಲಾವಿದ, ಎಲ್ಲಾ ರೀತಿಯಿಂದಲೂ ಹೃದಯಕ್ಕೆ ಮೆಚ್ಚುಗೆಯಾಗುವ ಶ್ರೀಕೃಷ್ಣ ಭಂಢಾರಿಯವರಿಗೆ ಕಳೆದ ವರ್ಷ ಧಾರವಾಡದಿಂದ ಯಕ್ಷಗಾನ ಮುಗಿಸಿ ತಂಡದ ಮಕ್ಕಳೊಟ್ಟಿಗೆ ವಾಪಾಸ್ ಬರುವಾಗ ಆದ ರಸ್ತೆ ಅಪಘಾತ ತಂದ ಸಂಕಟ ಬಗೆಹರಿಯದೆ ಸಾವಿನ ಮನೆ ಸೇರುವ ಹಾಗೆ ಮಾಡಿತು.

ಹೆಮ್ಮೆಯ ಹಾಗೂ ಊರಿನ ಹೆಸರು ಬೆಳಗಿದ, ಗುಣ ನಡತೆಯಲ್ಲಿ ಹೃದಯಕ್ಕೆ ಹತ್ತಿರ ಆಗುವ ಗುಣವಂತೆಯ ಶ್ರೀ ಕೃಷ್ಣ ಭಂಡಾರಿಯವರು ಪತ್ನಿ, ಒಬ್ಬ ಮಗ, ಒಬ್ಬಳು ಮಗಳು ಮತ್ತು ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.

ಶಾಸಕ ಸುನೀಲ ನಾಯ್ಕ,ಮಾಜಿ ಶಾಸಕ ಮಂಕಾಳ ವೈದ್ಯ ,ಕಲಾವಿದರಾದ ಜಿ.ಎಸ್ ಹೆಗಡೆ ಸಪ್ತಕ ಬೆಂಗಳೂರು, ನಾರಾಯಣ ಯಾಜಿ ಸಾಲೇಬೈಲ್, ಶಿವಾನಂದ ಹೆಗಡೆ ಗುಣವಂತೆ, ವಿ.ಎಸ್.ಎಸ್. ಬ್ಯಾಂಕ್ ಅಧ್ಯಕ್ಷ ಗಣಪಯ್ಯ ಗೌಡ ಮುಗಳಿ ಇನ್ನೂ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.
ರಮೇಶ ಭಂಢಾರಿ, ಮಂಕಿ ಈಶ್ವರ ನಾಯ್ಕ, ಕರ್ಕಿ ಪರಮೇಶ್ವರ ಬಂಢಾರಿ, ಮುಗ್ವಾ ಗಣೇಶ ನಾಯ್ಕ, ಚಂದ್ರಹಾಸ ಹೊಸಪಟ್ಟಣ, ಮಾಜಿ ಸೈನಿಕ ತಿಮ್ಮಪ್ಪ ಗೌಡ, ಶಂಕರ ಗೌಡ ಹುಡುಕಣಿ,ಯಮುನಾ ಗಾಂವಕರ್ ಊರಿನ ಬಹುತೇಕ ಎಲ್ಲಾ ಕಲಾವಿದರು, ಅಭಿಮಾನಿಗಳು ಪಾರ್ಥಿವ ಶರೀರದ ದರ್ಶನ ಪಡೆದರು.

error: