April 26, 2024

Bhavana Tv

Its Your Channel

ಕುಡಿಯುವ ನೀರಿನ ಪೂರೈಕೆಗಾಗಿ ಜಾರಿಯಾದ ಬಹುಗ್ರಾಮ ಯೋಜನೆ ಸ್ಥಳ ಪರಿಶೀಲನೆ ನಡೆಸಿದ ಸಚೀವರು

ಕುಮಟಾ :ತಾಲೂಕಿನ 6-7 ಗ್ರಾಮ ಪಂಚಾಯಿತಿಗಳಿಗೆ ಕುಡಿಯುವ ನೀರು ಪೂರೈಸುವುದಕ್ಕೆ ಪ್ರಸ್ತಾವಿತ ಬಹುಗ್ರಾಮ ಯೋಜನೆಗಾಗಿ ಜಿಲ್ಲಾ ಉಸ್ತುವಾರಿ ಹಾಗೂ ಕಾರ್ಮಿಕ, ಸಕ್ಕರೆ ಖಾತೆ ಸಚಿವ ಶಿವರಾಮ ಹೆಬ್ಬಾರ ಉಪ್ಪಿನಪಟ್ಟಣದ ಅಘನಾಶಿನಿ ನದಿ ದಡಕ್ಕೆ ಮಂಗಳವಾರ ಸ್ಥಳ ಪರಿಶೀಲನೆ ನಡಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾಲೂಕಿನ ಹಲವು ಗ್ರಾಮ ಪಂಚಾಯಿತಿಗಳಿಗೆ ಇಲ್ಲಿನ ಚಂಡಿಕಾ ಹಾಗೂ ಅಘನಾಶಿನಿ ನದಿ ಸೇರುವ ಸ್ಥಳದಲ್ಲಿ ಡ್ಯಾಮ್ ಕಟ್ಟಿ ಶಾಶ್ವತ ನೀರಿನ ಪೂರೈಕೆಗೆ ಪ್ರಸ್ತಾವನೆ ಪರಿಶೀಲಿಸಲು ಸ್ಥಳೀಯ ಶಾಸಕ ದಿನಕರ ಶೆಟ್ಟಿ ಕೋರಿದ್ದರು. ಅವರ ಒತ್ತಾಸೆಯ ಮೇರೆಗೆ ಅಧಿಕಾರಿಗಳ ತಂಡದೊಂದಿಗೆ ಸ್ಥಳವನ್ನು ನೋಡುವುದಕ್ಕಾಗಿ ಬಂದಿದ್ದೇನೆ. ಪಂಚಾಯತ ಹಾಗೂ ಸುತ್ತಮುತ್ತಲ ಜನರ ಅಹವಾಲನ್ನು ತಿಳಿದುಕೊಳ್ಳುವ ಉದ್ದೇಶವೂ ಇದರಲ್ಲಿದೆ. ಈ ಯೋಜನೆಗೆ ಮೊದಲು ತಜ್ಞರಿಂದ ಸಾಧ್ಯತೆ ವರದಿ ಸಿದ್ಧಪಡಿಸಲಾಗುವುದು.
ನಮ್ಮ ಜಿಲ್ಲೆಯಲ್ಲಿ ಏನೇ ಮಾಡಲು ಹೋದರೂ ವದಂತಿಗಳು ಜನರಲ್ಲಿ ಗೊಂದಲ ಹುಟ್ಟಿಸಿ ಗಲಾಟೆಗೆ ಕಾರಣವಾಗುತ್ತದೆ. ಆದ್ದರಿಂದ ಇಲ್ಲಿ ಮಾಡಲು ಹೊರಟಿರುವುದು ಕುಡಿಯುವ ನೀರು ಪೂರೈಕೆ ಯೋಜನೆಯೇ ಹೊರತು ಇನ್ನೇನೂ ಇಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತೇನೆ. ಇಲ್ಲಿ ನದಿಯಲ್ಲಿ ಸಿಹಿ ನೀರಿದೆ. ಇದನ್ನು ನೀರಿಗೆ ತತ್ವಾರ ಇರುವ ಹಲವು ಪಂಚಾಯಿತಿ ವ್ಯಾಪ್ತಿಯ ಜನರಿಗೆ ಕೊಡಬೇಕೆಂಬ ಒಂದೇ ಉದ್ದೇಶ ಯೋಜನೆಯಲ್ಲಿದೆ. ದೊಡ್ಡ ಡ್ಯಾಮ್ ಕಟ್ಟಿ ಮುಳುಗಡೆ ಮಾಡುವ ಯಾವ ಯೋಜನೆಯೂ ಇಲ್ಲಿಲ್ಲ. ಬೇಸಿಗೆಯಲ್ಲಿ ಸಿಹಿ ನೀರು ಸಂಗ್ರಹಣೆ ಮತ್ತು ಮಳೆಗಾಲದಲ್ಲಿ ಗೇಟ್ ತೆರೆದು ಬಿಡುವ ವ್ಯವಸ್ಥೆ ಇರಲಿದೆ. ಇದರಿಂದ ಸುತ್ತಮುತ್ತಲ ಪ್ರದೇಶದಲ್ಲಿ ಅಂತರ್ಜಲವೂ ಹೆಚ್ಚಲಿದೆ. ಕುಡಿಯುವ ನೀರಿನ ಸಮಸ್ಯೆಯೂ ಶಾಶ್ವತವಾಗಿ ನೀಗಲಿದೆ ಎಂದರು.

ಶಾಸಕ ದಿನಕರ ಶೆಟ್ಟಿ, ಜಿಪಂ ಮುಖ್ಯಕಾರ್ಯದರ್ಶಿ ಎಂ.ರೋಷನ್, ಉಪವಿಭಾಗಾಧಿಕಾರಿ ಅಜಿತ್ ಎಂ.ರೈ, ಇತರ ಅಧಿಕಾರಿಗಳು, ಜಿಪಂ ಸದಸ್ಯ ಗಜಾನನ ಪೈ, ಅಳಕೋಡ ಪಂಚಾಯಿತಿ ಅಧ್ಯಕ್ಷ ಕೃಷ್ಣಾನಂದ ವೆರ್ಣೇಕರ ಇನ್ನಿತರರು ಇದ್ದರು.

error: