April 24, 2024

Bhavana Tv

Its Your Channel

ಜಿಲ್ಲೆಯ ಪ್ರತಿ ಗ್ರಾಮ ಪಂಚಾಯತಿಗಳಲ್ಲಿ ಕೋವಿಡ್ ಕಾರ್ಯಪಡೆ ರಚನೆ ಹಾಗೂ ಗ್ರಾಮ ಮಟ್ಟದ ಸಹಾಯವಾಣಿ,ಹೆಲ್ಪಡೆಸ್ಕ್ ಆರಂಭಿಸಲು ನಿರ್ದೇಶನ

ಧಾರವಾಡ ಮೇ 01: ಕೊರೋನಾ 2ನೇ ಅಲೆ ವ್ಯಾಪಕವಾಗಿ ಹರಡುತ್ತಿರುವುದರಿಂದ ಧಾರವಾಡ ಜಿಲ್ಲೆಯ ಎಲ್ಲ ಗ್ರಾಮ ಪಂಚಾಯತಿ ಮಟ್ಟದಲ್ಲಿ ಕೋವಿಡ್ ಕಾರ್ಯಪಡೆ ಹಾಗೂ ಗಾಮಮಟ್ಟದಲ್ಲಿ ಸಾರ್ವಜನಿಕರಿಗೆ ದಿನದ 24 ಗಂಟೆ ಲಭ್ಯವಿರುವಂತೆ ಸಹಾಯವಾಣಿ, ಹೆಲ್ಪಡೆಸ್ಕ್ ಆರಂಭಿಸುವ ಮೂಲಕ ಗ್ರಾಮಸ್ಥರಿಗೆ ನಿರಂತರ ನೆರವು ನೀಡಿ ಸಂಪರ್ಕದಲ್ಲಿರಲು ಪಿಡಿಓಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಸುಶೀಲಾ.ಬಿ.ಅವರು ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಕೋವಿಡ್ ಸೋಂಕು ಗ್ರಾಮೀಣ ಪ್ರದೇಶದಲ್ಲಿ ಹರಡದಂತೆ ಮುಂಜಾಗೃತಿವಹಿಸಿ, ಗ್ರಾಮಗಳಲ್ಲಿ ಡಂಗುರ ಸಾರುವ ಮೂಲಕ ಹಾಗೂ ಧ್ವನಿವರ್ಧಕ ಬಳಕೆ ಮಾಡಿ ಪ್ರತಿದಿನ ಕೋವಿಡ್ ಮಾರ್ಗಸೂಚಿಗಳು,‌ಮಾಸ್ಕ್ ಧಾರಣೆ,‌ಸಾಮಾಜಿಕ ಅಂತರ ಕಾಪಾಡಲು ಮತ್ತು ಸ್ಯಾನಿಟೈಜರ್ ಅಥವಾ ಸೋಪ್ ಬಳಿಸಿ ಕೈ ತೊಳೆಯಲು ಮಾಹಿತಿ‌ ನೀಡಲಾಗಿದೆ.
ಪಿಡಿಓ ಹಾಗೂ ಸಿಬ್ಬಂದಿಗಳು ಮನೆಮನೆಗೆ ತೆರಳಿ‌ ಕೋವಿಡ್ ಸುರಕ್ಷತಾ ಕ್ರಮಗಳ ಪಾಲನೆ, ಕಡ್ಡಾಯವಾಗಿ ಮಾಸ್ಕ್ ಧಾರಿಸುವ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ.

ಹೊರಗಿನ ಜಿಲ್ಲೆಗಳಿಂದ ಅದರಲ್ಲೂ ವಿಶೇಷವಾಗಿ ಬೆಂಗಳೂರಿನಿಂದ ಗ್ರಾಮಗಳಿಗೆ ಆಗಮಿಸುವವರ ಬಗ್ಗೆ ಆಯಾ ಕುಟುಂಬದವರು ಹಾಗೂ ನೆರೆಹೊರೆಯವರು, ಗ್ರಾಮವಾಸಿಗಳು ಮಾಹಿತಿ ನೀಡುತ್ತಿದ್ದಾರೆ. ಇದರಿಂದ ಹೊರಗಿನಿಂದ ಆಗಮಿಸುವವರ ಗುರುತಿಸುವಿಕೆ ಮತ್ತು ಅವರ ಕೋವಿಡ್ ಟೆಸ್ಟಿಂಗ್ ಸುಲಭವಾಗಿದೆ. ಕೋವಿಡ್ ಸೋಂಕು ನಿಯಂತ್ರಣಕ್ಕೆ ಗ್ರಾಮಸ್ಥರು ಸ್ವಯಂ ಪ್ರೇರಣೆಯಿಂದ ಸ್ವಯಂ ನಿರ್ಭಂದ ಹಾಕಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.

ಹೊರ ಜಿಲ್ಲೆ, ರಾಜ್ಯಗಳಿಂದ ನಮ್ಮ ಜಿಲ್ಲೆಗೆ ಆಗಮಿಸಿರುವವರ ಟೆಸ್ಟಿಂಗ್ ಕಾರ್ಯ ಶೇ. 60 ರಷ್ಟು ಪೂರ್ಣಗೊಂಡಿದ್ದು, ಮುಂದಿನ ಎರಡಮೂರು ದಿನಗಳಲ್ಲಿ ಎಲ್ಲರ ಟೆಸ್ಟಿಂಗ್ ಪೂರ್ಣ ಗೊಳಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಗ್ರಾಮೀಣ ಭಾಗದಲ್ಲಿಯೂ ಜಾರಿಯಲ್ಲಿರುವ 14 ದಿನಗಳ ಕರ್ಪ್ಯೂ ಯಶಸ್ವಿಗೊಳಿಸಲು ಗ್ರಾಮಗಳಲ್ಲಿ ಬೆಳಿಗ್ಗೆ 6 ಗಂಟೆಯಿಂದ 10 ಗಂಟೆಯವರೆಗೆ ಅಗತ್ಯ ಸೇವೆಗಳ ಅಂಗಡಿಗಳು ಮಾತ್ರ ತೆರೆಯಲು ಹಾಗೂ ಬೆಳಿಗ್ಗೆ 10 ಗಂಟೆ ನಂತರ ಆಸ್ಪತ್ರೆ, ಔಷಧಿ ಅಂಗಡಿ, ನಂದಿನಿ ಹಾಲಿನ ಕೇಂದ್ರಗಳನ್ನು ಹೊರತುಪಡಿಸಿ, ಎಲ್ಲ ರೀತಿಯ ಅಂಗಡಿಗಳನ್ನು ಮುಚ್ಚಿಸುವಲ್ಲಿ ಗ್ರಾಮ ಪಂಚಾಯತ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಕೋವಿಡ್ ಸೋಂಕು ನಿಯಂತ್ರಣಕ್ಕೆ ಗ್ರಾಮಸ್ಥರು ಸಹಕಾರ ನೀಡುತ್ತಿದ್ದು, ಕೋವಿಡ್, ಆಸ್ಪತ್ರೆ, ಅಂಬುಲೆನ್ಸ್ ಮಾಹಿತಿಗಳನ್ನು ತಕ್ಷಣಕ್ಕೆ ನೀಡಿ, ನೆರವಾಗಲು ಗ್ರಾಮ ಮಟ್ಟದಲ್ಲಿ ಸಹಾಯವಾಣಿ, ಹೆಲ್ಪ್ ಡೆಸ್ಕ್ ಆರಂಭಿಸಲು ಗ್ರಾಮಮಟ್ಟದಲ್ಲಿ ಅಧಿಕಾರಿಗಳು ನಿರ್ದೇಶಿಸಿದ್ದು, ಕಾರ್ಯ ಆರಂಭಿಸಿದ್ದಾರೆ ಎಂದು ಜಿ.ಪಂ.ಸಿಇಓ ಡಾ.ಸುಶೀಲಾ.ಬಿ. ಅವರು ತಿಳಿಸಿದ್ದಾರೆ.

ಬೆಳಗಲಿ ಗ್ರಾಮ ಸಹಾಯವಾಣಿ:
ಹುಬ್ಬಳ್ಳಿ ತಾಲೂಕಿನ ಬೆಳಗಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ವಿವಿಧ ಗ್ರಾಮಗಳಲ್ಲಿ ಕಾರ್ಯಪಡೆಗಳನ್ನು ರಚಿಸಲಾಗಿದ್ದು, ಕೋವಿಡ್ ಗೆ ಸಂಬಂಧಿಸಿದ ಸಹಾಯ ಕೋರಿ ಸಹಾಯವಾಣಿಗೆ ಕರೆ ಮಾಡಿದರೆ, ಕೂಡಲೇ ಸ್ಪಂದಿಸಲಾಗುವುದು. ಇವು ದಿನದ 24 ಗಂಟೆ ಕಾರ್ಯನಿರ್ವಹಿಸುತ್ತವೆ.

ಬೆಳಗಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಳಗಲಿ ವಾರ್ಡ್ – 1,2 ಬಮ್ಮಸಮುದ್ರ, ಇನಾಂವೀರಾಪೂರ, ಪಾಳೆ ಗ್ರಾಮಗಳಲ್ಲಿ ಸಹಾಯವಾಣಿ ಆರಂಭಿಸಲಾಗಿದೆ. ಶರೀಫ ಚಿಗಳ್ಳಿ (9902065126), ಸುರೇಶ ಬಸರೀಕಟ್ಟಿ (9908344520) ಹಾಗೂ ನಾಗನಗೌಡ ಪಾಟೀಲ (9513611556) ಅವರನ್ನು ಸಂಪರ್ಕಿಸಬಹುದು ಎಂದು ಬೆಳಗಲಿ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವರದಿ ; ಮಹೇಶ ಶರ್ಮಾ.

error: