April 16, 2024

Bhavana Tv

Its Your Channel

ಸಚಿವ ಡಾ.ನಾರಾಯಣಗೌಡ ಮಾಜಿ ಸಿಎಂ ಸಿದ್ಧರಾಮಯ್ಯ ವಿರುದ್ಧ ಕೆಂಡಾ ಮಂಡಲ

ಕೆ.ಆರ್.ಪೇಟೆ ಪಟ್ಟಣದ ಗ್ರಾಮಭಾರತಿ ಶಾಲೆಯ ಪಕ್ಕದ ಮೈದಾನದಲ್ಲಿ ತಾಲೂಕು ಕಾಂಗ್ರೆಸ್ ಪಕ್ಷವು ಮಾಜಿ ಸಿಎಂ ಸಿದ್ಧರಾಮಯ್ಯ ಅವರನ್ನು ಕರೆಸಿ ಮೂರು ಸಾವಿರಕ್ಕೂ ಹೆಚ್ಚಿನ ಜನಸೇರಿಸಿ ಫುಡ್ ಕಿಟ್ ವಿತರಣಾ ಕಾರ್ಯಕ್ರಮ ನಡೆಸಿದ್ದಕ್ಕೆ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಡಾ.ನಾರಾಯಣಗೌಡ ಕೆಂಡಾ ಮಂಡಲರಾಗಿದ್ದಾರೆ ..

ಕೋವಿಡ್ ಸೋಂಕು ಹರಡುವುದನ್ನು ತಡೆಯಲು ಕಾಂಗ್ರೆಸ್ ಪಕ್ಷವು ರಾಜ್ಯ ಸರ್ಕಾರಕ್ಕೆ ಮುಖ್ಯಮಂತ್ರಿಗಳಿಗೆ ಸಹಕಾರ ನೀಡದೇ ಸಾವಿರಾರು ಜನರನ್ನು ಸೇರಿಸಿ, ಸಾಮಾಜಿಕ ಅಂತರವಿಲ್ಲದೇ ಫುಡ್ ಕಿಟ್ ವಿತರಣಾ ಕಾರ್ಯಕ್ರಮ ನಡೆಸಿ ಸೋಂಕು ಹರಡುತ್ತಿದೆ. ಇದಕ್ಕೆ ಜವಾಬ್ದಾರಿ ಯಾರು ಎಂದು ಆಕ್ರೋಶ ವ್ಯಕ್ತಪಡಿಸಿದ ಸಚಿವ ನಾರಾಯಣಗೌಡ ಕಾಂಗ್ರೆಸ್ ಮುಖಂಡ ಡಾಲುರವಿ ಅದ್ದೂರಿಯಾಗಿ ಗೃಹಪ್ರವೇಶ ಮಾಡಿ ನಾಲ್ಕೈದು ಸಾವಿರ ಜನಸೇರಿಸಿ ಕನಿಷ್ಠ ೨೦೦ ಜನರಿಗೆ ಸೋಂಕು ಹರಡಿಸಿದರಲ್ಲದೇ ಗೃಹಪ್ರವೇಶಕ್ಕೆ ಭಾಗವಹಿಸಿದ್ದವರಲ್ಲಿ ಕನಿಷ್ಠ ೪೦ಕ್ಕೂ ಹೆಚ್ಚಿನ ಜನರು ಸತ್ತಿದ್ದಾರೆ. ಈಗ ಮತ್ತೆ ಫುಡ್ ಕಿಟ್ ವಿತರಣೆಯ ನೆಪದಲ್ಲಿ ಕೊರೋನಾ ಸೋಂಕು ಹರಡಲು ಮುಂದಾಗಿದೆ. ನಾನು ಸಿದ್ಧರಾಮಯ್ಯ ಅವರಲ್ಲಿ ಕೈಮುಗಿದು ಮನವಿ ಮಾಡ್ತೀನಿ, ಸರ್ ದಯಮಾಡಿ ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿ ಸೋಂಕನ್ನು ಹೆಚ್ಚಿಸುವ ಕೆಲಸ ಮಾಡಬೇಡಿ, ಜನರ ಪ್ರಾಣ ಉಳಿಸುವ, ಸೋಂಕನ್ನು ಹರಡುವುದನ್ನು ತಡೆಯುವ ಕೆಲಸ ಮಾಡುತ್ತಿರುವ ಸರ್ಕಾರಕ್ಕೆ, ಮುಖ್ಯಮಂತ್ರಿಗಳಿಗೆ ಸಹಕಾರ ನೀಡಿ, ಇದು ರಾಜಕಾರಣ ಮಾಡುವ ಸಮಯವಲ್ಲ, ರಾಜಕಾರಣ ಬರುತ್ತೆ ಹೋಗುತ್ತೆ, ಈಗ ಜನರ ಪ್ರಾಣ ಉಳಿಸುವ ಕೆಲಸ ಮಾಡೋಣ ಎಂದು ಸಿದ್ಧರಾಮಯ್ಯ ಅವರಲ್ಲಿ ಕೈಮುಗಿದು ಸಚಿವ ನಾರಾಯಣಗೌಡ ಮನವಿ ಮಾಡಿದರು.

ಇನ್ನು ೩ ತಿಂಗಳಲ್ಲಿ ಕಸಬಾ ಹೋಬಳಿಯ ಕೆರೆಕಟ್ಟೆಗಳನ್ನು ತುಂಬಿಸುವ ಹೇಮಾವತಿ ಜಲಾಶಯದ ಎಡದಂಡ ನಾಲೆಯ ನಂ.೫೪ನೇ ವಿತರಣಾ ನಾಲೆಯ ಆಧುನೀಕರಣ ಕಾಮಗಾರಿಗೆ ಚಾಲನೆ ನೀಡ್ತೇನೆ. ನಾನು ನಾಲೆಯ ಆಧುನೀಕರಣ ಕಾಮಗಾರಿ ಮಾಡಿಸದಿದ್ದರೆ ಏನು ಶಿಕ್ಷೆಕೊಡ್ತೀರೋ ಕೊಡಿ, ನಾನು ಸ್ವೀಕರಿಸಲು ಸಿದ್ಧನಿದ್ದೇನೆ. ನಾನು ಸಚಿವನಾಗಿ ಸುಮ್ಮನೆ ಕೂತಿಲ್ಲ, ಜಿಲ್ಲೆಯಾಧ್ಯಂತ ಸಂಚರಿಸಿ ಕೋವಿಡ್ ಸೋಂಕು ಹರಡದಂತೆ ತಡೆಯುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡ್ತಿದ್ದೇನೆ. ತಾಲೂಕಿನ ಸಮಗ್ರವಾದ ಅಭಿವೃದ್ಧಿ ನನ್ನ ಮುಖ್ಯ ಗುರಿಯಾಗಿದೆ. ಏಕೆಂದರೆ ನಾನು ಹಣ ಆಸ್ತಿ ಮಾಡಲು ರಾಜಕಾರಣಕ್ಕೆ ಬಂದಿಲ್ಲ, ನನ್ನ ಜೀವದ ಕೊನೆಯ ಉಸಿರಿನವರೆಗೂ ಒಬ್ಬ ಸೇವಕನಂತೆ ಜನರ ಸೇವೆ ಮಾಡ್ತೀನಿ ಎಂದು ಸಚಿವ ನಾರಾಯಣಗೌಡ ಭಾವುಕರಾದರು.

ಕೆ.ಆರ್.ಪೇಟೆ ತಾಲೂಕಿನ ಮಾಕವಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕರೋಟಿ ಗ್ರಾಮದಲ್ಲಿ ನಡೆದ ಕೋವಿಡ್ ತಡೆ ಜಾಗೃತಿ ಕಾರ್ಯಕ್ರಮದಲ್ಲಿ ಮಂಡ್ಯ ಜಿಲ್ಲಾ ಬಿಜೆಪಿ ಅಧ್ಯಕ್ಷ ಕೆ.ಜೆ.ವಿಜಯಕುಮಾರ್, ಮೂಡಾ ಅಧ್ಯಕ್ಷ ಕೆ.ಶ್ರೀನಿವಾಸ್, ಜಿಪಂ ಮಾಜಿಉಪಾಧ್ಯಕ್ಷ ಶೀಳನೆರೆ ಅಂಬರೀಶ್, ಮಾಕವಳ್ಳಿ ಗ್ರಾಮ ಪಂಚಾಯತಿ ಮಾಜಿಅಧ್ಯಕ್ಷ ಮಂಜುನಾಥ್, ತಾಲೂಕು ಬಿಜೆಪಿ ಅಧ್ಯಕ್ಷ ಪರಮೇಶ್ ಅರವಿಂದ್, ಪ್ರಧಾನ ಕಾರ್ಯದರ್ಶಿ ಚೋಕನಹಳ್ಳಿ ಪ್ರಕಾಶ್, ಬಿಸಿಎಂ ಮೋರ್ಚಾ ಅಧ್ಯಕ್ಷ ಸಾರಂಗಿ ನಾಗರಾಜು, ಗ್ರಾ.ಪಂ ಸದಸ್ಯ ಅನಿಲ್, ಮುಖಂಡರಾದ ಮಂಜುನಾಥಗೌಡ, ಅಲೋಕ, ಸೋಮಶೇಖರ್, ಸಚಿವರ ಆಪ್ತಸಹಾಯಕರಾದ ಕಿಕ್ಕೇರಿ ಕುಮಾರ್, ಲಕ್ಷ್ಮೀನಾರಾಯಣ, ಬಸವರಾಜು ಮತ್ತಿತರರು ಉಪಸ್ಥಿತರಿದ್ದರು.

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ . ಮಂಡ್ಯ

error: