March 26, 2024

Bhavana Tv

Its Your Channel

ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಪಕ್ಷದ ವತಿಯಿಂದ ಬೃಹತ್ ಸೈಕಲ್ ಜಾಥ

ಮಂಡ್ಯ: ಪೆಟ್ರೋಲ್, ಡೀಸೆಲ್, ಅಡುಗೆ ಅನಿಲಗ್ಯಾಸ್ ಸಿಲಿಂಡರ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಪಕ್ಷದ ವತಿಯಿಂದ ಬೃಹತ್ ಸೈಕಲ್ ಮೆರವಣಿಗೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದ ಕಾಂಗ್ರೆಸ್ ನಾಯಕರು ..

ಕೆ.ಆರ್.ಪೇಟೆ ಪಟ್ಟಣದ ಮೈಸೂರು ಚನ್ನರಾಯಪಟ್ಟಣ ರಸ್ತೆಯ ಎಂ.ಕೆ.ಬೊಮ್ಮೇಗೌಡ ವೃತ್ತದಿಂದ ಪಟ್ಟಣದ ಮುಖ್ಯ ರಸ್ತೆಯಲ್ಲಿ ಮಾಜಿಶಾಸಕರಾದ ಕೆ.ಬಿ.ಚಂದ್ರಶೇಖರ್, ಬಿ.ಪ್ರಕಾಶ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕಿಕ್ಕೇರಿ ಸುರೇಶ್, ಬಿ.ನಾಗೇಂದ್ರಕುಮಾರ್, ಆದಿಹಳ್ಳಿ ಮೀನಾಕ್ಷಿ, ಎಂ.ಡಿ.ಕೃಷ್ಣಮೂರ್ತಿ ಅವರ ನೇತೃತ್ವದಲ್ಲಿ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಮಿನಿ ವಿಧಾನಸೌಧದವರೆಗೆ ಬೈಸಿಕಲ್ ಸವಾರಿ ಮಾಡಿ ತಹಶೀಲ್ದಾರ್ ಶಿವಮೂರ್ತಿ ಅವರಿಗೆ ಮನವಿ ಸಲ್ಲಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು…

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮತ್ತು ರಾಜ್ಯದ ಬಿಜೆಪಿ ಸರ್ಕಾರಗಳು ಜನವಿರೋಧಿ ಸರ್ಕಾರಗಳಾಗಿವೆ. ಪೆಟ್ರೋಲ್ ಪ್ರತಿ ಲೀಟರ್ ಗೆ ೧೦೬ ರೂಗಳಾಗಿದ್ದರೆ ಡೀಸೆಲ್ ೧೦೦ರೂ ಗಡಿ ಮುಟ್ಟಿದೆ, ಗ್ಯಾಸ್ ಸಿಲಿಂಡರ್ ೯೦೦ ರೂಗಳಾಗಿದೆ, ಅಡುಗೆ ಎಣ್ಣೆ ಲೀಟರ್ ಗೆ ೧೬೦ ರೂಗಳಾಗಿವೆ. ಬೆಲೆ ಏರಿಕೆಯಿಂದ ಶ್ರೀಸಾಮಾನ್ಯ ಹೈರಾಣಾಗಿದ್ದಾನೆ. ಬೆಲೆ ಏರಿಕೆಯನ್ನು ತಡೆಯಲು ಬಿಜೆಪಿ ನೇತೃತ್ವದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಂಪೂರ್ಣವಾಗಿ ವಿಫಲವಾಗಿವೆ. ಆದ್ದರಿಂದ ಜನವಿರೋಧಿ ಬಿಜೆಪಿ ಸರ್ಕಾರಗಳು ತೊಲಗಬೇಕು. ಕಾಂಗ್ರೆಸ್ ಪಕ್ಷದಿಂದ ಮಾತ್ರ ಜನಸಾಮಾನ್ಯರ ಹಿತವನ್ನು ಕಾಪಾಡಲು ಸಾಧ್ಯವಾದ್ದರಿಂದ ಕಾರ್ಯಕರ್ತರು ಈಗಿನಿಂದಲೇ ಪಕ್ಷ ಸಂಘಟನೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಮಾಜಿಶಾಸಕರಾದ ಕೆ.ಬಿ.ಚಂದ್ರಶೇಖರ್, ಬಿ.ಪ್ರಕಾಶ್ ಮತ್ತು ಮಂಡ್ಯ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಗಂಗಾಧರ್ ಮನವಿ ಮಾಡಿದರು..

ಜನವಿರೋಧಿ ಬಿಜೆಪಿ ಸರ್ಕಾರಗಳು ಬೆಲೆ ಏರಿಕೆ ತಡೆಯಲು ವಿಫಲವಾಗಿರುವುದರಿಂದ ನೈತಿಕಹೊಣೆಹೊತ್ತು ಪ್ರಧಾನಿ ನರೇಂದ್ರ ಮೋದಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಮಾಜಿಶಾಸಕ ಕೆ.ಬಿ.ಚಂದ್ರಶೇಖರ್ ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಪುರಸಭಾ ಸದಸ್ಯರಾದ ಡಿ.ಪ್ರೇಮಕುಮಾರ್, ಕೆ.ಆರ್.ರವೀಂದ್ರಬಾಬು, ಹೆಚ್.ಎನ್.ಪ್ರವೀಣ್, ಜಿ.ಪಂ ಮಾಜಿ ಸದಸ್ಯ ಕೋಡಿಮಾರನಹಳ್ಳಿ ದೇವರಾಜು, ಯುವಕಾಂಗ್ರೆಸ್ ಅಧ್ಯಕ್ಷ ಚೇತನ್ ಕುಮಾರ್, ವಕೀಲ ಚಟ್ಟಂಗೆರೆ ಬಿ.ನಾಗೇಶ್ ಸೇರಿದಂತೆ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ . ಮಂಡ್ಯ

error: