March 29, 2024

Bhavana Tv

Its Your Channel

ದಲಿತ ಸಂಘರ್ಷ ಸಮಿತಿಯ ತಾಲ್ಲೂಕು ಪದಾಧಿಕಾರಿಗಳ ಸಮಾಲೋಚನಾ ಸಭೆ

. ಮಂಡ್ಯ : ಬುದ್ಧ, ಬಸವ, ಮಹಾತ್ಮಗಾಂಧಿ ಹಾಗೂ ಅಂಬೇಡ್ಕರ್ ಅವರ ಆಶಯಗಳಂತೆ ಆರೋಗ್ಯವಂತ ಸಮಾಜದ ನಿರ್ಮಾಣಕ್ಕೆ ನಾಗರಿಕ ಸಮಾಜದ ಎಲ್ಲರೂ ಮುಂದಾಗಬೇಕು. ದಲಿತ ಚಳವಳಿಗಳು ಸಮಾಜದಲ್ಲಿ ಸಾಮರಸ್ಯ ಮೂಡಿಸುವ ಕೆಲಸ ಮಾಡಬೇಕೇ ಹೊರತು ಸಮಾಜದಲ್ಲಿ ಅಶಾಂತಿ ಮೂಡಿಸುವ ಕೆಲಸ ಮಾಡಬಾರದು ಎಂದು ರಾಜ್ಯ ದಲಿತ ಸಂಘರ್ಷ ಸಮಿತಿಯ ಸಂಚಾಲಕ ಡಾ.ಎಂ.ಬಿ.ಶ್ರೀನಿವಾಸ್ ಮನವಿ ಮಾಡಿದರು .

ಅವರು ಇಂದು ಕೆ.ಆರ್.ಪೇಟೆ ಪಟ್ಟಣದ ಪ್ರವಾಸಿ ಮಂದಿರದ ನಾಲ್ವಡಿ ಶ್ರೀಕೃಷ್ಣರಾಜೊಡೆಯರ್ ಸಭಾಂಗಣದಲ್ಲಿ ನಡೆದ ದಲಿತ ಸಂಘರ್ಷ ಸಮಿತಿಯ ತಾಲ್ಲೂಕು ಪದಾಧಿಕಾರಿಗಳ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು..

ದಲಿತರಲ್ಲಿ ಸ್ವಾಭಿಮಾನ ತುಂಬಿ ಸಂವಿಧಾನದ ಆಶಯಗಳ ಈಡೇರಿಕೆಗಾಗಿ ಆರಂಭವಾದ ದಲಿತ ಸಂಘರ್ಷ ಸಮಿತಿಯ ಚಳವಳಿಯು ಇಂದು ದಿಕ್ಕು ತಪ್ಪುತ್ತಿದೆ. ದಲಿತರನ್ನೇ ಎತ್ತಿಕಟ್ಟಿ ಒಡೆದು ಆಳುವ ನೀತಿಯನ್ನು ಅನುಸರಿಸಲಾಗುತ್ತಿದೆ. ದಲಿತ ಚಳವಳಿಗಳು ಸಮಾಜದಲ್ಲಿ ಸಾಮರಸ್ಯವನ್ನು ಮೂಡಿಸುವ ಕೆಲಸ ಮಾಡಬೇಕು. ಅದನ್ನು ಬಿಟ್ಟು ಸಮಾಜದ ದಿಕ್ಕು ತಪ್ಪಿಸಿ ಗ್ರಾಮೀಣ ಜನರ ನೆಮ್ಮದಿಯ ಜೀವನಕ್ಕೆ ಧಕ್ಕೆ ತರುವ ಕೆಲಸವನ್ನು ಯಾವುದೇ ಚಳವಳಿಗಳು ಮಾಡಬಾರದು ಎಂದು ಕೈಮುಗಿದು ಮನವಿ ಮಾಡಿದ ಡಾ.ಎಂ.ಬಿ.ಶ್ರೀನಿವಾಸ್ ಬುದ್ಧ, ಬಸವ ಅಂಬೇಡ್ಕರ್ ಅವರ ಆಶಯಗಳ ಈಡೇರಿಕೆಗೆ ದಲಿತ ಬಂಧುಗಳು ಸಂಘಟಿತ ಹೋರಾಟ ನಡೆಸಬೇಕು ಎಂದು ಕರೆ ನೀಡಿದರು.

ಆಗಷ್ಟ್ ೭ ರಂದು ಮಂಡ್ಯದ ಅಂಬೇಡ್ಕರ್ ಭವನದಲ್ಲಿ ಅಭಿನಂದನಾ ಗ್ರಂಥ ಬಿಡುಗಡೆ..

ಆಗಷ್ಟ್ ೭ರಂದು ಮಂಡ್ಯದಲ್ಲಿ ಬುದ್ಧ, ಬಸವ ಹಾಗೂ ಅಂಬೇಡ್ಕರ್ ಅವರ ಜಯಂತಿ ಸಮಾರಂಭ ಹಾಗೂ ದಲಿತ ನಾಯಕರಾದ ಡಾ.ಎಂ.ಬಿ.ಶ್ರೀನಿವಾಸ್ ಅವರ ೬೦ರ ಅಭಿನಂದನಾ ಸಮಾರಂಭ ಹಾಗೂ ದಲಿತರ ಅಂತರಾಳದ ಧ್ವನಿ ಅಭಿನಂದನಾ ಗ್ರಂಥ ಬಿಡುಗಡೆ ಸಮಾರಂಭಕ್ಕೆ ಕೆ.ಆರ್.ಪೇಟೆ ತಾಲ್ಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ದಲಿತ ಬಂಧುಗಳು ಭಾಗವಹಿಸಬೇಕು ಎಂದು ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಸಂತೋಷ್ ಕುಮಾರ್ ಮನವಿ ಮಾಡಿದರು.

ಅಭಿನಂದನಾ ಗ್ರಂಥ ಬಿಡುಗಡೆ ಸಮಾರಂಭದಲ್ಲಿ ರಾಜ್ಯದ ಮಾಜಿಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಮಾಜಿ ಸಚಿವರಾದ ಡಾ.ಹೆಚ್.ಸಿ.ಮಹದೇವಪ್ಪ, ಸಿ.ಎಸ್.ಪುಟ್ಟರಾಜು, ಡಿ.ಸಿ.ತಮ್ಮಣ್ಣ, ಶಾಸಕರಾದ ರವೀಂದ್ರ ಶ್ರೀಕಂಠಯ್ಯ, ಸುರೇಶ್ ಗೌಡ, ಡಾ.ಅನ್ನದಾನಿ, ಎಂ.ಶ್ರೀನಿವಾಸ್, ಕೆ.ಟಿ.ಶ್ರೀಕಂಠೇಗೌಡ, ಅಪ್ಪಾಜಿಗೌಡ, ಸಾಹಿತಿಗಳಾದ ಡಾ.ಹೆಚ್.ಎಸ್.ಮುದ್ದೇಗೌಡ, ಡಾ.ಶ್ರೀನಿವಾಸಶೆಟ್ಟಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಎಂ.ಬಿ.ಶ್ರೀನಿವಾಸ್ ಮನವಿ ಮಾಡಿದರು.

ಸಮಾಲೋಚನಾ ಸಭೆಯಲ್ಲಿ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಜವರಯ್ಯ, ಪಾಂಡವಪುರ ಧರ್ಮ, ವಿಠಲಾಪುರ ಗ್ರಾಮಪಂಚಾಯಿತಿ ಉಪಾಧ್ಯಕ್ಷ ಗಣೇಶ್, ದಲಿತ ಮುಖಂಡರಾದ ಚಿಕ್ಕಗಾಡಿಗನಹಳ್ಳಿ ಪರಮೇಶ್, ಚಿನ್ನಸ್ವಾಮಿ, ಸೋಮರಾಜು, ನಿಂಗಯ್ಯ, ಧನುಷ್, ಧನಂಜಯ ಸೇರಿದಂತೆ ಕಾರ್ಯಕಾರಿ ಸಮಿತಿಯ ಸದಸ್ಯರು ಭಾಗವಹಿಸಿದ್ದರು.

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ . ಮಂಡ್ಯ

error: