April 19, 2024

Bhavana Tv

Its Your Channel

ಕೇಂದ್ರ ಸರ್ಕಾರವು ಕನ್ನಡಿಗರ ಮೇಲೆ ಹಿಂದಿ ಹೇರಿಕೆ ಮಾಡುತ್ತಾ ದಬ್ಬಾಳಿಕೆ ಮಾಡುತ್ತಿರುವುದನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರಿಂದ ಪ್ರತಿಭಟನೆ

ಕೆ.ಆರ್.ಪೇಟೆ : ಕೆ.ಆರ್.ಪೇಟೆ ತಾಲ್ಲೂಕು ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಕೇಂದ್ರ ಸರ್ಕಾರವು ಕನ್ನಡಿಗರ ಮೇಲೆ ಹಿಂದಿ ಹೇರಿಕೆ ಮಾಡುತ್ತಾ ದಬ್ಬಾಳಿಕೆ ಮಾಡುತ್ತಿರುವುದನ್ನು ಖಂಡಿಸಿ ಪಟ್ಟಣದ ವಿವಿಧ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳ ಮುಂದೆ ಪ್ರತಿಭಟನೆ ನಡೆಸಿದರು .

ತಾಲ್ಲೂಕು ಕರವೇ ಅಧ್ಯಕ್ಷ ಹೊನ್ನೇನಹಳ್ಳಿ ವೇಣು ಅವರ ನೇತೃತ್ವದಲ್ಲಿ ಪಟ್ಟಣದ ಎಸ್.ಬಿ.ಐ, ಬ್ಯಾಂಕ್ ಆಫ್ ಬರೋಡ ಮತ್ತು ಕೆನರಾ ಬ್ಯಾಂಕ್ ಶಾಖೆಗಳ ಮುಂದೆ ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

ಸೆಪ್ಟೆಂಬರ್ ೧೪ ನ್ನು ಕರ್ನಾಟಕದಲ್ಲಿ ಹಿಂದಿ ದಿನವೆಂದು ಆಚರಣೆ ಮಾಡುತ್ತಿರುವುದು ಖಂಡನೀಯವಾದುದು. ಕೇಂದ್ರ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳು, ರೈಲ್ವೆ ಮತ್ತು ಅಂಚೆ ಇಲಾಖೆಗಳಲ್ಲಿ ಇರುವ ಖಾಲಿ ಹುದ್ದೆಗಳ ಭರ್ತಿಗೆ ಹಿಂದಿ ಮತ್ತು ಇಂಗ್ಲೀಷ್ ಭಾಷೆಯಲ್ಲಿ ನಡೆಸಲಾಗುತ್ತಿದೆ ಇದರಿಂದ ಕರ್ನಾಟಕದ ಬ್ಯಾಂಕುಗಳಿಗೆ ಕನ್ನಡೇತರರು ಆಯ್ಕೆಯಾಗುತ್ತಿದ್ದಾರೆ ಇದರಿಂದ ಕನ್ನಡಿಗರು ಬ್ಯಾಂಕುಗಳಲ್ಲಿ ವ್ಯವಹರಿಸಲು ಕಷ್ಟವಾಗುತ್ತಿದೆ. ಹಾಗಾಗಿ ಕೂಡಲೇ ಕೇಂದ್ರ ಸರ್ಕಾರವು ನಡೆಸುವ ಎಲ್ಲಾ ಪರೀಕ್ಷೆಗಳನ್ನು ಕನ್ನಡ ಭಾಷೆಯಲ್ಲಿಯೂ ನಡೆಸಬೇಕು. ಕರ್ನಾಟಕದಲ್ಲಿ ಇರುವ ಎಲ್ಲಾ ಬ್ಯಾಂಕುಗಳಿಗೆ ಕನ್ನಡ ಬಲ್ಲಂತಹ ಅಧಿಕಾರಿಗಳನ್ನೇ ನೇಮಕ ಮಾಡಬೇಕು. ಹಿಂದಿ ಭಾಷೆಯನ್ನು ಬಲವಂತವಾಗಿ ಹೇರಿಕೆ ಮಾಡುವುದನ್ನು ನಿಲ್ಲಿಸಬೇಕು. ಹಿಂದಿ ರಾಷ್ಟ್ರೀಯ ಭಾಷೆ ಎಂದು ಹೇಳುತ್ತಾ ಕನ್ನಡಿಗರ ಮೇಲೆ ಹಿಂದಿಯನ್ನು ಹೇರುವುದನ್ನು ಸಹಿವುದಿಲ್ಲ. ಸುಮಾರು ಎರಡೂವರೆ ಸಾವಿರ ವರ್ಷಗಳ ಇತಿಹಾಸ ವಿರುವ ಕನ್ನಡ ಭಾಷೆಯನ್ನು ಕರ್ನಾಟಕದ ಅಧಿಕೃತ ಭಾಷೆ ಎಂದು ಪರಿಗಣಿಸಬೇಕು. ಬ್ಯಾಂಕುಗಳಲ್ಲಿ, ರೈಲ್ವೆ ಇಲಾಖೆಯಲ್ಲಿ, ಅಂಚೆ ಕಚೇರಿಗಳಲ್ಲಿ ಕನ್ನಡ ಭಾಷೆ ಬಳಕೆ ಕಡ್ಡಾಯವಾಗಬೇಕು. ಕನ್ನಡ ಭಾಷೆ ಓದಲು ಬರೆಯಲು ಗೊತ್ತಿಲ್ಲದ ಅಧಿಕಾರಿಗಳನ್ನು ಕರ್ನಾಟಕಕ್ಕೆ ನೇಮಕ ಮಾಡಬಾರದು ಎಂದು ಆಗ್ರಹಿಸಿದರು.
ರಾಜ್ಯ ಸರ್ಕಾರವು ಕನ್ನಡ ಭಾಷೆಯಲ್ಲಿ ಉದ್ಯೋಗ ನೇಮಕಾತಿ ಪರೀಕ್ಷೆಗಳಲ್ಲಿ ಕನ್ನಡ ಭಾಷೆಯಲ್ಲೂ ಬರೆಯಲು ಅವಕಾಶ ಕಲ್ಪಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ರಾಜ್ಯ ವಿಧಾನ ಮಂಡಳದಲ್ಲಿ ನಿರ್ಣಯ ಕೈಗೊಂಡು ಕೇಂದ್ರಕ್ಕೆ ಒತ್ತಾಯಿಸಬೇಕು ಎಂದು ವೇಣು ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ತಾಲ್ಲೂಕು ಕರವೇ ಉಪಾಧ್ಯಕ್ಷ ಶ್ರೀನಿಧಿ ಶ್ರೀನಿವಾಸ್, ತಾಲ್ಲೂಕು ಕಾರ್ಯದರ್ಶಿ ಟೆಂಪೋ ಶ್ರೀನಿವಾಸ್, ಗೌರವ ಸಲಹೆಗಾರ ಶೇಖರ್ ಗೌಡ, ನಗರ ಘಟಕದ ಅಧ್ಯಕ್ಷ ಮದನ್, ತಾಲ್ಲೂಕು ಯುವ ಘಟಕದ ಅಧ್ಯಕ್ಷ ಆನಂದ್, ಕಾರ್ಯದರ್ಶಿ ಮನು, ತಾಲ್ಲೂಕು ಸಂಘಟನಾ ಕಾರ್ಯದರ್ಶಿ ಡಿ.ಸ್ವಾಮಿ, ಗೋಪಿ, ತಾಲ್ಲೂಕು ಸಂಚಾಲಕರಾದ ಅಶ್ವತ್, ಜಾಹೀರ್, ತಾಲ್ಲೂಕು ವಿದ್ಯಾರ್ಥಿ ಘಟಕದ ಅಧ್ಯಕ್ಷ ರೋಹಿತ್ ಗೌಡ, ಗಿರೀಶ್, ಎಚ್.ಎಂ.ರೋಹಿತ್, ಈಶ್ವರ್, ಯಡಹಳ್ಳಿ ಚೇತನ್ ಸೇರಿದಂತೆ ನೂರಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಪ್ರತಿಭಟನೆಯ ನಂತರ ತಾಲ್ಲೂಕು ಕಚೇರಿಗೆ ತೆರಳಿ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.

ವರದಿ.ಡಾ.ಕೆ.ಆರ್.ನೀಲಕಂಠ.
ಕೃಷ್ಣರಾಜಪೇಟೆ, ಮಂಡ್ಯ

error: