April 25, 2024

Bhavana Tv

Its Your Channel

ಭೂವರಹನಾಥ ದೇವಾಲಯದಲ್ಲಿ ನಡೆದ ರೇವತಿ ನಕ್ಷತ್ರದ ವಿಶೇಷ ಪೂಜಾ ಕಾರ್ಯಕ್ರಮ

ಕೃಷ್ಣರಾಜಪೇಟೆ: ಪುರಾಣ ಪ್ರಸಿದ್ಧವಾದ ಪುಣ್ಯಕ್ಷೇತ್ರ ಭೂವರಹನಾಥ ಕಲ್ಲಹಳ್ಳಿಯನ್ನು ಪ್ರವಾಸೋಧ್ಯಮದ ಭೂಪಟದಲ್ಲಿ ಪ್ರಖ್ಯಾತವಾಗಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗುವುದಾಗಿ ರಾಜ್ಯ ಪ್ರವಾಸೋಧ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಕಾಪು ಸಿದ್ಧಲಿಂಗಸ್ವಾಮಿ ಹೇಳಿದರು.

ಅವರು ಇಂದು ತಾಲೂಕಿನ ಬೂಕನಕೆರೆ ಹೋಬಳಿಯ ಕಲ್ಲಹಳ್ಳಿ ಗ್ರಾಮದಲ್ಲಿ ಶ್ರೀಲಕ್ಷ್ಮೀ ಸಮೇತನಾಗಿ ನೆಲೆಸಿರುವ ಭೂವರಹನಾಥ ದೇವಾಲಯದಲ್ಲಿ ನಡೆದ ರೇವತಿ ನಕ್ಷತ್ರದ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ದಿನವಹಿ ಸಾವಿರಾರು ಭಕ್ತರು ಹಾಗೂ ಯಾತ್ರಿಕರು ಬಂದು ಹೋಗುತ್ತಿರುವ ಭೂವರಹನಾಥಕಲ್ಲಹಳ್ಳಿ ಕ್ಷೇತ್ರವು ದಿನದಿಂದ ದಿನಕ್ಕೆ ಪ್ರವರ್ಧಮಾನಕ್ಕೆ ಬರುತ್ತಿದೆಯಲ್ಲದೇ ನಾಡಿನ ಪ್ರವಾಸೋಧ್ಯಮದ ಭೂಪಟದಲ್ಲಿ ಪ್ರಖ್ಯಾತವಾಗುತ್ತಿದೆ. ಶ್ರೀಕ್ಷೇತ್ರಕ್ಕೆ ಆಗಮಿಸುವ ಭಕ್ತರಿಗೆ ಕನಿಷ್ಠ ಮೂಲಭೂತ ಸೌಲಭ್ಯಗಳನ್ನು
ದೊರಕಿಸಿಕೊಡುವ ನಿಟ್ಟಿನಲ್ಲಿ ಬದ್ಧತೆಯಿಂದ ಕೆಲಸ ಮಾಡುತ್ತೇನೆ. ಶ್ರೀ ಕ್ಷೇತ್ರಕ್ಕೆ ಆಗಮಿಸುವ ಭಕ್ತಾಧಿಗಳು ಕ್ಷೇತ್ರದಲ್ಲಿ ಉಳಿಯಲು ಅನುಕೂಲವಾಗುವಂತೆ ಪ್ರವಾಸೋಧ್ಯಮ ಇಲಾಖೆಯ ವತಿಯಿಂದ ಹೈಟೆಕ್ ವಸತಿಗೃಹಗಳನ್ನು ಕಟ್ಟಿಸಲು ಕ್ರಮಕೈಗೊಳ್ಳುವುದಾಗಿ ತಿಳಿಸಿದ ಕಾಪು ಸಿದ್ಧಲಿಂಗಸ್ವಾಮಿ ದೇಶದಲ್ಲಿಯೇ ಅಪರೂಪದ್ದಾಗಿರುವ ೧೭ ಅಡಿ ಎತ್ತರದ ಸಾಲಿಗ್ರಾಮ ಕೃಷ್ಣಶಿಲೆಯ
ಭೂ ವರಹನಾಥಸ್ವಾಮಿಯ ಮೂರ್ತಿಯು ನಯನ ಮನೋಹರ ವಾಗಿದ್ದು ಭಕ್ತರು ಹಾಗೂ ಪ್ರವಾಸಿಗರಲ್ಲಿ ಧನ್ಯತಾ ಭಾವನೆಯನ್ನು ಮೂಡಿಸುತ್ತಿದೆ. ಸಧ್ಯದಲ್ಲಿಯೇ ರಾಜ್ಯದ ಪ್ರವಾಸೋಧ್ಯಮ ಸಚಿವರಾದ ಆನಂದ್ ಸಿಂಗ್ ಅವರನ್ನು ಕರೆದುಕೊಂಡು ಬಂದು ಶ್ರೀಕ್ಷೇತ್ರದ ಸಮಗ್ರವಾದ ಅಭಿವೃದ್ಧಿಗೆ ಕಾಯಕಲ್ಪ ನೀಡುವುದಾಗಿ ಸಿದ್ಧಲಿಂಗಸ್ವಾಮಿ ಹೇಳಿದರು.

ಪರಕಾಲಶ್ರೀಗಳಿಂದ ವಿಶೇಷ ಪೂಜೆ: ಭೂವರಹನಾಥ ಕ್ಷೇತ್ರಕ್ಕೆ ಇಂದು ನಡೆದ ರೇವತಿನಕ್ಷತ್ರದ ವಿಶೇಷಪೂಜಾ ಸಮಾರಂಭದಲ್ಲಿ ಭಾಗವಹಿಸಿದ್ದ ಮೈಸೂರಿನ ಪರಕಾಲ ಮಠದ ಶ್ರೀಗಳು ದೇವರ ಶಿಲಾಮೂರ್ತಿಯ ಸುತ್ತಲೂ ಹನ್ನೊಂದು ಸುತ್ತು ಪ್ರದಕ್ಷಿಣೆಯನ್ನು ಹಾಕಿ ಲೋಕಕಲ್ಯಾಣಕ್ಕಾಗಿ ವಿಶೇಷ
ಪ್ರಾರ್ಥನೆ ಸಲ್ಲಿಸಿದರು.
ರೇವತಿ ನಕ್ಷತ್ರ ಅಂಗವಾಗಿ ವಿಶೇಷ ಅಭಿಷೇಕ: ರೇವತಿ ನಕ್ಷತ್ರದ ಅಂಗವಾಗಿ ಇಂದು ನಡೆದ ವಿಶೇಷ ಪೂಜೆ ಹಾಹೂ ಅಭಿಷೇಕದಲ್ಲಿ ಒಂದು ಸಾವಿರ ಲೀಟರ್ ಹಾಲು, ಐನೂರು ಲೀಟರ್ ಕಬ್ಬಿನಹಾಲು, ಐನೂರು ಲೀಟರ್ ಎಳನೀರು, ಜೇನುತುಪ್ಪ, ಹಸುವಿನತುಪ್ಪ, ಪವಿತ್ರ ಗಂಗಾಜಲ ಸೇರಿದಂತೆ ಐವತ್ತೆಂಟು ಬಗೆಯ ವಿಶೇಷವಾದ ಹೂವುಗಳಿಂದ ಪುಷ್ಪಾಭಿಷೇಕ ಮಾಡಲಾಯಿತು. ಮಲ್ಲಿಗೆ, ಜಾಜಿ, ಸಂಪಿಗೆ, ಗುಲಾಬಿ, ತುಳಸಿ, ಜವನ, ಪವಿತ್ರ ಪತ್ರೆಗಳು, ಕಮಲದ ಹೂವು ಸೇರಿದಂತೆ ಅಪರೂಪದ ಹೂವುಗಳಿಂದ ಅಭಿಷೇಕ ಮಾಡಲಾಯಿತು. ದೇವಾಲಯದ ವ್ಯವಸ್ಥಾಪನಾ ಸಮಿತಿಯ
ಮ್ಯಾನೇಜಿಂಗ್ ಟ್ರಸ್ಟಿ ಶ್ರೀನಿವಾಸರಾಘವನ್ ಪೂಜಾ ವಿಧಿ ವಿಧಾನಗಳ ನೇತೃತ್ವ ವಹಿಸಿದ್ದರು.
ಚಿತ್ರದುರ್ಗ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಜಯಣ್ಣ, ಮಂಡ್ಯ ಜಿಲ್ಲಾ ಸಂಯುಕ್ತ ಜನತಾದಳದ ಅಧ್ಯಕ್ಷ ಎಂ.ಕೃಷ್ಣ, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಸಾಯಿ ಟ್ರಾಕ್ಟರ್ ರವೀಂದ್ರ, ಬಲ್ಲೇನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಕನ್ಯಾಬೋರೇಗೌಡ, ಉಪಾಧ್ಯಕ್ಷ ನಂದೀಶ್, ಗಂಜಿಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅಶ್ವಿನಿಕೃಷ್ಣ, ರಾಜ್ಯದ ಮಾಜಿಸಚಿವ ಅರವಿಂದ ಲಿಂಬಾವಳಿ ಅವರ ಧರ್ಮಪತ್ನಿ
ಮಂಜುಳಾ ಲಿಂಬಾವಳಿ, ಸಮಾಜಸೇವಕರಾದ ಮಾಗಡಿ ಮಹೇಶ್, ಬೂಕಹಳ್ಳಿ ಮಂಜು, ರಾಜ್ಯ ಬಿಜೆಪಿ ಎಸ್‌ಟಿ ಮೋರ್ಚಾ ಕಾರ್ಯಕಾರಿಣಿಸದಸ್ಯ ಅಗ್ರಹಾರಬಾಚಹಳ್ಳಿ ಜಗಧೀಶ್, ಗಂಜಿಗೆರೆ ವಿಜಯಕುಮಾರ್ ಸೇರಿದಂತೆ ಸಾವಿರಾರು ಭಕ್ತರು ರೇವತಿ ನಕ್ಷತ್ರದ ಅಂಗವಾಗಿನಡೆದ ವಿಶೇಷ ಪೂಜಾ ಸಮಾರಂಭದಲ್ಲಿ ಭಾಗವಹಿಸಿದ್ದರು.

ವಿಶೇಷ ವರದಿ.
ಡಾ.ಕೆ.ಆರ್.ನೀಲಕಂಠ.
ಕೃಷ್ಣರಾಜಪೇಟೆ

error: