April 19, 2024

Bhavana Tv

Its Your Channel

ಕೆ.ಆರ್.ಪೇಟೆಯಲ್ಲಿ ವರ್ಣರಂಜಿತ ಆರ್.ಎಸ್.ಎಸ್ ಪಥಸಂಚಲನ, ಶಿಸ್ತುಬದ್ಧ ಮೆರಣಿಗೆಯ ಮೂಲಕ ತಾಲ್ಲೂಕಿನಲ್ಲಿ ಸಂಚಲನ

ಕೆ.ಆರ್.ಪೇಟೆ: ವಿಜಯದಶಮಿಯ ಶುಭ ದಿನದಂದು ದೇಶದಲ್ಲಿ ಆರಂಭವಾದ ರಾಷ್ಟ್ರೀಯ ಸ್ವಯಂ ಸೇವಕ ಸಂಘವು ೯೭ ವರ್ಷಗಳನ್ನು ಸಂಪೂರ್ಣಗೊಳಿಸಿ ಸಾರ್ಥಕವಾಗಿ ಮುನ್ನಡೆಯುತ್ತಿದೆಯಲ್ಲದೇ ಯುವಜನರು ಹಾಗೂ ವಿದ್ಯಾರ್ಥಿಗಳಿಗೆ ದೇಶಭಕ್ತಿ ಹಾಗೂ ರಾಷ್ಟ್ರಾಭಿಮಾನದ ಕಿಚ್ಚನ್ನು ಹಚ್ಚುತ್ತಿದೆ ಎಂದು ಆರ್.ಎಸ್.ಎಸ್ ಮೈಸೂರು ವಿಭಾಗದ ಸಂಚಾಲಕ ಅಕ್ಷಯ್ ಜೀ ಅಭಿಮಾನದಿಂದ ಹೇಳಿದರು…

ಅವರು ಇಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಂಸ್ಥಾಪನಾ ದಿನವಾದ ಇಂದು ಕೆ.ಆರ್.ಪೇಟೆ ಪಟ್ಟಣದಲ್ಲಿ ನಡೆದ ಆರ್.ಎಸ್.ಎಸ್ ಗಣವೇಶಧಾರಿಗಳ ಆಕರ್ಷಕ ಪಥಸಂಚಲನದ ನಂತರ ಶತಮಾನದ ಶಾಲೆಯ ಆವರಣದಲ್ಲಿ ನಡೆದ ವಿಶೇಷ ಭೌದ್ಧಿಕ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಅಕ್ಷಯ್ ಜಿ ಭಾರತಾಂಭೆಯ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು..

ಯುವಜನರು, ವಿದ್ಯಾರ್ಥಿಗಳು ಹಾಗೂ ಗ್ರಾಮೀಣ ಪ್ರದೇಶದ ಜನರಿಗೆ ದೇಶಪ್ರೇಮ ಹಾಗೂ ರಾಷ್ಟ್ರಭಕ್ತಿಯ ಬಗ್ಗೆ ಅರಿವು ಮೂಡಿಸಿ ಮುನ್ನಡೆಯುತ್ತಿರುವ ಆರ್.ಎಸ್.ಎಸ್ ಒಂದು ಶಾಖೆಯಿಂದ ಆರಂಭವಾಗಿ ಇಂದು ದೇಶಾಧ್ಯಂತ ಲಕ್ಷಾಂತರ ಶಾಖೆಗಳನ್ನು ಹೊಂದಿದೆಯಲ್ಲದೇ ಯುವಜನರಲ್ಲಿ ಆತ್ಮಾಭಿಮಾನ, ಸ್ವಾವಲಂಬನೆ ಹಾಗೂ ದೇಶಭಕ್ತಿಯ ಅರಿವನ್ನು ಮೂಡಿಸುತ್ತಾ ಮುನ್ನಡೆಯುತ್ತಿದೆ. ವಿನಯ, ಶಿಸ್ತು, ಸಂಯಮ, ಗುರುಹಿರಿಯರು ಹಾಗೂ ತಂದೆತಾಯಿಗಳ ಬಗ್ಗೆ ಭಕ್ತಿಯ ಭಾವನೆಯನ್ನು ತುಂಬುತ್ತಾ ರಾಷ್ಟ್ರಪ್ರೇಮದ ಬಗ್ಗೆ ಕಿಚ್ಚನ್ನು ಹಚ್ವುತ್ತಿರುವ ಸಂಘವು ನಮ್ಮ ಸಂಸ್ಕೃತಿ ಪರಂಪರೆ ಮತ್ತು ಆಚಾರ ವಿಚಾರಗಳ ಬಗ್ಗೆ ಬೆಳಕು ಚೆಲ್ಲುವ ಮಹತ್ಕಾರ್ಯವನ್ನು ಮಾಡುತ್ತಾ ಸೇವೆ, ಸಮಾನತೆ ಹಾಗೂ ಸಂಘಟನೆಗೆ ಒತ್ತು ನೀಡುತ್ತಾ ಮುನ್ನಡೆಯುತ್ತಿದೆ. ಶೂನ್ಯದಿಂದ ಸಾಮ್ರಾಜ್ಯವನ್ನು ಸ್ಥಾಪಿಸಿದ ಶಿವಾಜಿ ಮಹರಾಜ, ಮರ್ಯಾದಾ ಪುರುಷೋತ್ತಮ ಶ್ರೀರಾಮನ ಆದರ್ಶ ಗುಣಗಳು ಯುವಜನರಿಗೆ ಮಾದರಿಯಾಗಬೇಕು. ಸೋಮಾರಿಗಳಾಗಿ ವ್ಯರ್ಥವಾಗಿ ಕಾಲಹರಣ ಮಾಡದೇ, ನಾನು ನನ್ನದು ಎಂದು ಸ್ವಾರ್ಥಿಗಳಾಗದೇ ಕಾಯಕ ತತ್ವದ ಮಹತ್ವವನ್ನು ಅರಿತು ಕಷ್ಟಪಟ್ಟು ಜೀವನ ನಡೆಸುತ್ತಾ ಸಮಾಜ ಮತ್ತು ದೇಶಕ್ಕಾಗಿ ನಾವು ಎಂಬ ವಿಶಾಲವಾದ ಮನೋಭಾವನೆಯೊಂದಿಗೆ ಹೆಜ್ಜೆಹಾಕಬೇಕು. ಪರೋಪಕಾರ ಗುಣಗಳು ಹಾಗೂ ಸೇವಾಮನೋಭಾವನೆಯು ಜೀವನದ ಉಸಿರಾಗಬೇಕು ಎಂದು ಕೈಮುಗಿದು ಮನವಿ ಮಾಡಿದ ಅಕ್ಷಯ್ ಜೀ ಯುವಜನರು ತಮ್ಮ ರಕ್ತದ ಕಣಕಣಗಳಲ್ಲಿಯೂ ದೇಶಭಕ್ತಿಯನ್ನು ಮೈಗೂಡಿಸಿಕೊಂಡು ಸಮಾಜಮುಖಿಯಾಗಿ ಮುನ್ನಡೆಯಬೇಕು. ನಮ್ಮ ದೇಶದ ಸಂಸ್ಕೃತಿಯ ಸೊಗಡನ್ನು ವಿಶ್ವಕ್ಕೆ ಸಾರಿದ ಧೀರಸನ್ಯಾಸಿ ಸ್ವಾಮಿ ವಿವೇಕಾನಂದರ ಆದರ್ಶಗಳು ನಮ್ಮ ಮುನ್ನಡೆಗೆ ದಾರಿದೀಪವಾಗಬೇಕು ಎಂದು ಅಕ್ಷಯ್ ಜೀ ಹೇಳಿದರು.

ಮಂಡ್ಯ ಜಿಲ್ಲಾ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಚಾರಕ ರವಿಕುಮಾರ್ ಬೌದ್ಧಿಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಕೆ.ಆರ್.ಪೇಟೆ ಪಟ್ಟಣದ ಮುಖ್ಯ ರಸ್ತೆಗಳಲ್ಲಿ ನಡೆದ ಆರ್.ಎಸ್.ಎಸ್ ಗಣವೇಶಧಾರಿಗಳ ಪಥಸಂಚಲನದಲ್ಲಿ ಗಣ ವೇಶವನ್ನು ತೊಟ್ಟು ಕೈಯ್ಯಲ್ಲಿ ದಂಢವನ್ನು ಹಿಡಿದು ಇದೇ ಮೊದಲ ಬಾರಿಗೆ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಜಿಲ್ಲಾ ಪಂಚಾಯತಿ ಮಾಜಿಉಪಾಧ್ಯಕ್ಷ ಶೀಳನೆರೆ ಅಂಬರೀಶ್, ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಶ್ರೀನಿವಾಸ್, ಮಂಡ್ಯ ಜಿಲ್ಲಾ ಬಿಜೆಪಿ ಅಧ್ಯಕ್ಷ ಕೆ.ಜೆ.ವಿಜಯಕುಮಾರ್, ಮುಂಬೈ ಸಮಾಜಸೇವಕ ಶಿರಬಿಲ್ಲೇನಹಳ್ಳಿ ಮಂಜೇಗೌಡ, ಶೀಳನೆರೆ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಎಸ್.ಪ್ರಕಾಶ್, ಹರಳಹಳ್ಳಿ ಗ್ರಾಮ ಪಂಚಾಯತಿ ಮಾಜಿಅಧ್ಯಕ್ಷ ಕರ್ತೇನಹಳ್ಳಿ ಸುರೇಶ್, ಭಾರತಿಪುರ ಎಳನೀರು ಪುಟ್ಟಣ್ಣ, ತಾಲ್ಲೂಕು ಬಿಜೆಪಿ ಅಧ್ಯಕ್ಷ ಪರಮೇಶ್ ಅರವಿಂದ್, ಕಾರ್ಯದರ್ಶಿ ಚೋಕನಹಳ್ಳಿ ಪ್ರಕಾಶ್, ತಾಲ್ಲೂಕು ಎಸ್.ಸಿ ಮೋರ್ಚಾ ಅಧ್ಯಕ್ಷ ರವಿಶಿವಕುಮಾರ್, ಎಸ್.ಟಿ ಮೋರ್ಚಾ ಅಧ್ಯಕ್ಷ ಮಹೇಶನಾಯಕ, ಓಬಿಸಿ ಮೋರ್ಚಾ ಅಧ್ಯಕ್ಷ ಸಾರಂಗಿನಾಗರಾಜು, ಮಾಧ್ಯಮ ಸಂಚಾಲಕರಾದ ಡಾ.ಕೆ.ಕಾಳೇಗೌಡ, ಸಾರಂಗಿ ಮಂಜುನಾಥಗೌಡ, ಬಿಜೆಪಿ ಹಿರಿಯ ಮುಖಂಡರಾದ ಬಳ್ಳೇಕೆರೆ ವರದರಾಜೇಗೌಡ, ಪ್ರೆಸ್ ಕುಮಾರಸ್ವಾಮಿ, ತಾಲ್ಲೂಕು ವಿತರಕರ ಸಂಘದ ಅಧ್ಯಕ್ಷರಾದ ಡಾ.ಕೆ.ಎಸ್.ರಾಜೇಶ್, ಆಸರೆ ಸಮಾಜಸೇವಾ ಟ್ರಸ್ಟ್ ಅಧ್ಯಕ್ಷ ಹೆಚ್.ಬಿ.ಮಂಜುನಾಥ್, ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಅಪ್ಪನಹಳ್ಳಿ ಅರುಣ್, ಪ್ರಥಮದರ್ಜೆ ಗುತ್ತಿಗೆದಾರ ಸಂತೋಷ್ ಸೇರಿದಂತೆ ೧೫೦ಕ್ಕೂ ಹೆಚ್ಚು ಜನರು ಪಥಸಂಚಲನದ ಮೆರವಣಿಗೆಯಲ್ಲಿ ಶಿಸ್ತುಬದ್ಧವಾಗಿ ಸಾಗಿ ಸಂಚಲನ ಮೂಡಿಸಿದರು …

ಕ್ಷೇತ್ರದ ಶಾಸಕರಾದ ರಾಜ್ಯದ ರೇಷ್ಮೆ ಹಾಗೂ ಯುವಜನ ಸಬಲೀಕರಣ ಹಾಗೂ ಕ್ರೀಡಾ ಸಚಿವರಾದ ಡಾ.ನಾರಾಯಣಗೌಡ ಮೆರವಣಿಗೆಯಲ್ಲಿ ಭಾಗವಹಿಸುತ್ತಾರೆ ಎಂಬ ವದಂತಿ ಹರಡಿದ್ದರೂ ಸಚಿವರ ಗೈರು ಹಾಜರಿಯು ಕಾರ್ಯಕ್ರಮದಲ್ಲಿ ಎದ್ದು ಕಾಣುತ್ತಿತ್ತು..ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ಕಟ್ಟೇಕ್ಯಾತನಹಳ್ಳಿ ಪಾಪಣ್ಣ ಗಣವೇಶ ಧರಿಸದೇ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಕೆ.ಆರ್.ಪೇಟೆ ಪೋಲಿಸ್ ಇನ್ಸ್ ಪೆಕ್ಟರ್ ಎಂ.ಕೆ.ದೀಪಕ್ ಅವರ ನೇತೃತ್ವದಲ್ಲಿ ಮೆರವಣಿಗೆಯು ಸಾಗಿಹೋಗುವ ದಾರಿಯುದ್ದಕ್ಕೂ ಬಿಗಿ ಪೋಲಿಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಹೊಯ್ಸಳ ಕೃಷಿ ಸಾವಯವ ಪರಿವಾರದ ಸಂಚಾಲಕ ಹೊಸಹೊಳಲು ಹರೀಶ್ ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ತಾಲ್ಲೂಕು ಕಾರ್ಯವಾಹ ಯುವರಾಜು ಮತ್ತು ಮುರುಗೇಶ್ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ , ಮಂಡ್ಯ

error: