June 30, 2022

Bhavana Tv

Its Your Channel

ಕೆ.ಆರ್.ಪೇಟೆಯಲ್ಲಿ ಹೃದಯಸ್ಪರ್ಶಿಯಾಗಿ ನಡೆದ ಮಾಜಿಸ್ಪೀಕರ್ ಕೃಷ್ಣರ ನುಡಿನಮನ ಕಾರ್ಯಕ್ರಮ

ಕೆ.ಆರ್.ಪೇಟೆ:- ಕೃಷ್ಣ ರಾಜಕೀಯ ರಂಗದ ಧೃವತಾರೆ. ರಾಜಕೀಯಕ್ಷೇತ್ರಕ್ಕೆ ಹಾಗೂ ಪ್ರಜಾಪ್ರಭುತ್ವ ವ್ಯವಸ್ತೆಗೆ ಮೌಲ್ಯವನ್ನು ತಂದುಕೊಟ್ಟ ಮಂಡ್ಯದ ಗಾಂಧಿ..ಕೆಲವರು ಬದುಕಿದ್ದು ಸತ್ತಂತಿರುತ್ತಾರೆ. ಆದರೆ ಕೃಷ್ಣ ಅವರು ಸತ್ತ ಮೇಲೆಯೂ ಜನಮಾನಸದಲ್ಲಿ ಶಾಶ್ವತ ಸ್ಥಾನಪಡೆದು ಜೀವಂತವಾಗಿರುವ ರಾಜಕಾರಣಿಗಳಾಗಿದ್ದಾರೆ ಎಂದು ಸಚಿವ ಡಾ.ನಾರಾಯಣಗೌಡ ಹೇಳಿದರು..

ಅವರು ಇಂದು ಕೆ.ಆರ್.ಪೇಟೆ ಪಟ್ಟಣದ ಹೊರವಲಯದ ನಾಗಮಂಗಲ ರಸ್ತೆಯಲ್ಲಿರುವ ಜಯಮ್ಮರಾಮಸ್ವಾಮಿ ಸಮುದಾಯ ಭವನದಲ್ಲಿ ಕೆ.ಆರ್.ಪೇಟೆ ಕೃಷ್ಣ ಪ್ರತಿಷ್ಠಾನವು ಕೃಷ್ಣರ ಒಂದು ವರ್ಷದ ಸವಿನೆನಪಿಗಾಗಿ ಆಯೋಜಿಸಿದ್ದ ನುಡಿನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಕೃಷ್ಣರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು..
ತಮ್ಮ ಜೀವನದುದ್ದಕ್ಕೂ ಸರಳವಾಗಿ ಜೀವನ ನಡೆಸಿ ಪ್ರಜಾಪ್ರಭುತ್ವದ ಮೌಲ್ಯಗಳ ಉಳಿವಿಗೆ ಹಾಗೂ ಭ್ರಷ್ಟಾಚಾರದ ನಿರ್ಮೂಲನೆಗೆ ಹೋರಾಟ ನಡೆಸಿದ ಕೃಷ್ಣ ನುಡಿದಂತೆ ನಡೆದ, ದಕ್ಷ ಪ್ರಾಮಾಣಿಕ ಆಡಳಿತ ನೀಡಿದ ಧೀಮಂತ ರಾಜಕಾರಣಿಯಾಗಿದ್ದಾರೆ. ಕೃಷ್ಣ ಅವರಿಂದಾಗಿ ಕೆ.ಆರ್.ಪೇಟೆಯ ಗೌರವ ಹೆಚ್ಚಾಯಿತು. ಕೃಷ್ಣರ ಹೆಸರನ್ನು ಚಿರಸ್ಥಾಯಿಯನ್ನಾಗಿಸುವ ನಿಟ್ಟಿನಲ್ಲಿ ಕೆ.ಆರ್.ಪೇಟೆ ಸರ್ಕಾರಿ ಎಂಜಿನಿಯರಿAಗ್ ಕಾಲೇಜಿಗೆ ಕೃಷ್ಣ ಅವರ ಹೆಸರನ್ನಿಟ್ಟು ಕೃಷ್ಣರ ಪುತ್ಥಳಿಯನ್ನು ಕಾಲೇಜಿನ ಆವರಣದಲ್ಲಿ ಸ್ಥಾಪಿಸಲು ಕ್ರಮಕೈಗೊಳ್ಳುತ್ತೇನೆ. ಕೃಷ್ಣ ಪ್ರತಿಷ್ಠಾನದ ಶೈಕ್ಷಣಿಕ ಚಟುವಟಿಕೆಗಳನ್ನು ಕಾರ್ಯಗತಗೊಳಿಸಲು ಅನುಕೂಲವಾಗುವಂತೆ ನನ್ನ ತಂದೆತಾಯಿಗಳ ಹೆಸರಿನಲ್ಲಿ ವಯಕ್ತಿಕವಾಗಿ 5ಲಕ್ಷರೂ ಹಣ ನೀಡುತ್ತೇನೆ ಎಂದು ಸಚಿವ ನಾರಾಯಣಗೌಡ ಘೋಷಿಸಿದರು..

ಮಾಜಿಸಚಿವರು ಹಾಗೂ ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಸಿ.ಎಸ್.ಪುಟ್ಟರಾಜು ಮಾತನಾಡಿ ನನ್ನಂತ ನೂರಾರು ಯುವ ರಾಜಕಾರಣಿಗಳಿಗೆ ಆದರ್ಶವಾಗಿದ್ದ ಕೃಷ್ಣ ಗಾಂಧಿವಾದಿಗಳಾಗಿದ್ದು ಮಂಡ್ಯದ ಗಾಂಧಿಯಾಗಿ ಜಿಲ್ಲೆಯ ಕೀರ್ತಿ ಬೆಳಗಿದ ಮಹಾಪುರುಷರಾಗಿದ್ದಾರೆ. ಇಂದಿನ ಯುವಜನರು ಕೃಷ್ಣ ಅವರ ಜೀವನದ ಆದರ್ಶಗಳನ್ನು ಮೈಗೂಡಿಸಿಕೊಂಡು ಸಮಾಜಮುಖಿಯಾಗಿ ಮುನ್ನಡೆಯುವ ಮೂಲಕ ಆದರ್ಶ ಜೀವನ ನಡೆಸಬೇಕು. ಕೃಷ್ಣ ಅವರಂತಹ ಸಜ್ಜನ ರಾಜಕಾರಣಿಗಳು ಕಲುಷಿತಗೊಂಡಿರುವ ಇಂದಿನ ರಾಜಕೀಯ ವ್ಯವಸ್ಥೆಯನ್ನು ಶುದ್ಧೀಕರಿಸಲು ಬೇಕಾಗಿದ್ದಾರೆ. ಇಂದಿನ ರಾಜಕಾರಣದ ಕಲುಷಿತ ವ್ಯವಸ್ಥೆಯಲ್ಲಿ ಮಹಾತ್ಮಗಾಂಧಿ ಅವರೇ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದರೂ ಅವರನ್ನು ನಮ್ಮ ಜನತೆ ಸೋಲಿಸಿ ಮನೆಗೆ ಕಳಿಸುತ್ತಾರೆ ಎಂದು ಪುಟ್ಟರಾಜು ವಿಷಾಧ ವ್ಯಕ್ತಪಡಿಸಿದರು.

ಅರಕಲಗೂಡು ಕ್ಷೇತ್ರದ ಶಾಸಕ ಎ.ಟಿ.ರಾಮಸ್ವಾಮಿ ಮಾತನಾಡಿ ಕೃಷ್ಣ ಅವರ ಗರಡಿಯಲ್ಲಿ ಪಳಗಿರುವ ನಾನು ಅವರಂತೆ ಜೀವನ ನಡೆಸಲು ಸಾಧ್ಯವಾಗದಿದ್ದರೂ, ಪ್ರಾಮಾಣಿಕ ಜೀವನ ನಡೆಸಿ, ಮೌಲ್ಯಗಳು ಹಾಗೂ ತತ್ವಸಿದ್ಧಾಂತಗಳ ಉಳಿವಿಗಾಗಿ ಹೋರಾಡುತ್ತಾ ಬಂದಿದ್ದೇನೆ. ಕೃಷ್ಣ ಅವರಿಂದಾಗಿ ಕೆ.ಆರ್.ಪೇಟೆಗೆ ಹೆಸರು ಬಂತು. ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುವ ಅವರ ಮನಸ್ಥಿತಿಯು ಅವರನ್ನು ರಾಜ್ಯಮಟ್ಟದ ನಾಯಕರನ್ನಾಗಿ ರೂಪಿಸಿತು ಎಂದು ಹೇಳಿದರು..

ಚನ್ನರಾಯಪಟ್ಟಣ ಕ್ಷೇತ್ರದ ಮಾಜಿಶಾಸಕ ಸಿ.ಎಸ್.ಪುಟ್ಟೇಗೌಡ ಮಾತನಾಡಿ ಒಬ್ಬ ಸಾಮಾನ್ಯ ರೈತನ ಮಗನಾಗಿ ಹುಟ್ಟಿದ ಕೃಷ್ಣ ಅವರು ಶಾಸಕರಾಗಿ, ಸಚಿವರಾಗಿ, ಲೋಕಸಭಾ ಸದಸ್ಯರಾಗಿ ಹಾಗೂ ವಿಧಾನಸಭಾ ಅಧ್ಯಕ್ಷರಾಗಿ ಕೆಲಸ ಮಾಡಿದರೂ ಸರಳತೆಯನ್ನು ಬಿಡದೇ ಜೀವನದುದ್ದಕ್ಕೂ ಪಾಲಿಸಿಕೊಂಡು ಇತರರಿಗೆ ಮಾದರಿಯಾದರು..ಅವರು ಕೊನೆಯುಸಿರೆರೆಯುವವರೆಗೂ ಒಬ್ಬ ಸಾಮಾನ್ಯ ನಾಗರೀಕನಂತೆ ಬಸ್ಸಿನಲ್ಲಿಯೇ ಓಡಾಟ ಮಾಡಿದರು ಎಂದು ಗುಣಗಾನ ಮಾಡಿದರು..

ಕಾರ್ಯಕ್ರಮದಲ್ಲಿ ಮಾಜಿಶಾಸಕರಾದ ರಮೇಶಬಾಬು ಬಂಡಿಸಿದ್ಧೇಗೌಡ, ಬಿ.ಪ್ರಕಾಶ್, ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಶ್ರೀನಿವಾಸ್, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಹೆಚ್.ಕೆ.ಅಶೋಕ್, ಮನ್ ಮುಲ್ ನಿರ್ದೇಶಕ ಹೆಚ್.ಟಿ.ಮಂಜು, ಟಿಎಪಿಸಿಎಂಎಸ್ ಅಧ್ಯಕ್ಷ ಬಿ.ಎಲ್.ದೇವರಾಜು, ಕೃಷ್ಣರ ಆಪ್ತಸ್ನೇಹಿತರಾದ ಶೂದ್ರ ಶಕ್ತಿ ಪತ್ರಿಕೆಯ ಸಂಪಾದಕ ರಾಮೇಗೌಡ, ಕೆಯುಐಡಿಎಫ್ ಸಿ ಮಾಜಿಅಧ್ಯಕ್ಷ ಮತ್ತಿಘಟ್ಟ ಕೃಷ್ಣಮೂರ್ತಿ, ಸಮಾಜಸೇವಕ ವಿಜಯರಾಮೇಗೌಡ, ಸಂತೇಬಾಚಹಳ್ಳಿ ನಾಗರಾಜು, ಆಲೇನಹಳ್ಳಿ ಜಯರಾಜ್, ಅಘಲಯ ಮಂಜುನಾಥ್, ಶೀಳನೆರೆ ಅಂಬರೀಶ್, ಹಾದನೂರು ಪರಮೇಶ್, ಕೃಷ್ಣ ಪ್ರತಿಷ್ಠಾನದ ಅಧ್ಯಕ್ಷ ಗೂಡೆಹೊಸಳ್ಳಿ ಜವರಾಯಿಗೌಡ, ಪದಾಧಿಕಾರಿಗಳಾದ ಕತ್ತರಘಟ್ಟ ವಾಸು, ಅಂಚಿ ಸಣ್ಣಸ್ವಾಮಿಗೌಡ, ಬಿ.ಜವರಾಯಿಗೌಡ, ಹೆಮ್ಮನಹಳ್ಳಿ ರಮೇಶ್, ಐಚನಹಳ್ಳಿ ಶಿವಣ್ಣ, ಕೃಷ್ಣರ ಧರ್ಮಪತ್ನಿ ಇಂದಿರಮ್ಮ, ಅಳಿಯ ಶ್ರೀಧರ್, ಪುತ್ರಿ ಮಂಜುಳಾ ಸೇರಿದಂತೆ ಸಾವಿರಾರು ಜನರು ಹಾಗೂ ಕೃಷ್ಣರ ಅಭಿಮಾನಿಗಳು ನುಡಿನಮನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ , ಮಂಡ್ಯ .

error: