March 28, 2024

Bhavana Tv

Its Your Channel

ರೇವತಿ ನಕ್ಷತ್ರದ ಅಂಗವಾಗಿ ಭೂವರಹನಾಥ ಸ್ವಾಮಿಗೆ ಅಭಿಷೇಕ, ಪುಷ್ಪಾಭಿಷೇಕ ಹಾಗೂ ಅಡ್ಡಪಲ್ಲಕಿ ಉತ್ಸವದ ಸಂಭ್ರಮ

ಕೃಷ್ಣರಾಜಪೇಟೆ :– ಭೂವರಹನಾಥ ಸ್ವಾಮಿಯ 17 ಅಡಿ ಎತ್ತರದ ಶಿಲಾಮೂರ್ತಿಗೆ ರೇವತಿ ನಕ್ಷತ್ರದ ಅಂಗವಾಗಿ, ಅಭಿಷೇಕ, ಪುಷ್ಪಾಭಿಷೇಕ ಹಾಗೂ ಅಡ್ಡಪಲ್ಲಕಿ ಉತ್ಸವದ ಸಂಭ್ರಮ .. ಶ್ರೀಕ್ಷೇತ್ರಕ್ಕೆ ಹರಿದುಬಂದ ಭಕ್ತಸಾಗರ .. ಒಂದು ಸಾವಿರ ಲೀಟರ್ ಹಾಲಿನಲ್ಲಿ ಮಿಂದು ಕಂಗೊಳಿಸಿದ ಭೂವರಹನಾಥಸ್ವಾಮಿ ..

ಭೂವೈಕುಂಠವೆAದೇ ಪ್ರಖ್ಯಾತವಾಗಿರುವ ಕೃಷ್ಣರಾಜಪೇಟೆ ವರಹನಾಥ ಕಲ್ಲಹಳ್ಳಿಯಲ್ಲಿ ಶ್ರೀ ಲಕ್ಷ್ಮೀ ಸಮೇತವಾಗಿ ನೆಲೆಸಿರುವ ಭೂವರಹನಾಥ ಸ್ವಾಮಿಯ 17 ಅಡಿ ಎತ್ತರದ ಸಾಲಿಗ್ರಾಮ ಶ್ರೀಕೃಷ್ಣ ಶಿಲೆಯ ಬೃಹತ್ ಮೂರ್ತಿಗೆ ರೇವತಿ ನಕ್ಷತ್ರದ ಅಂಗವಾಗಿ ಅಭಿಷೇಕ, ಪುಷ್ಪಾಭಿಷೇಕ ಹಾಗೂ ಪಟ್ಟಾಭಿಷೇಕ ಕಾರ್ಯಕ್ರಮಗಳು ಶ್ರಧ್ಧಾಭಕ್ತಿಯಿಂದ ನಡೆದವು ..

1ಸಾವಿರ ಲೀಟರ್ ಹಾಲು, 500ಲೀಟರ್ ಎಳನೀರು, 500ಲೀಟರ್ ಕಬ್ಬಿನಹಾಲು, ಪವಿತ್ರಗಂಗಾಜಲ, ಜೇನುತುಪ್ಪ, ಹಸುವಿನ ತುಪ್ಪ, ಅರಿಶಿನ, ಶ್ರೀಗಂಧ ಹಾಗೂ ಸುಗಂಧ ದ್ರವ್ಯಗಳಿಂದ ಅಭಿಷೇಕ ಮಾಡಿ ಮಲ್ಲಿಗೆ, ಜಾಜಿ, ಸುಗಂಧರಾಜ, ಸಂಪಿಗೆ ಸೇವಂತಿಗೆ, ಕನಕಾಂಬರ, ಗುಲಾಬಿ, ಪವಿತ್ರ ಪತ್ರೆಗಳು, ಜವನ, ತುಳಸಿ, ಕಮಲದ ಹೂ ಸೇರಿದಂತೆ 58 ಬಗೆಯ ವಿವಿಧ ಅಪರೂಪದ ಹೂಗಳಿಂದ ಪುಷ್ಪಾಭಿಷೇಕ ಮಾಡಲಾಯಿತು..

ಭೂವರಹನಾಥಸ್ವಾಮಿಯ ಉತ್ಸವ ಮೂರ್ತಿಯನ್ನು ನೂರಾರು ಭಕ್ತರು ಹೆಗಲ ಮೇಲೆ ಹೊತ್ತು ಅಡ್ಡಪಲ್ಲಕಿ ಉತ್ಸವ ಮಾಡಿ ವರಹನಾಥ ಸ್ವಾಮಿಯ ಪಟ್ಟಾಭಿಷೇಕ ನಡೆಸಿ ಸಂಭ್ರಮಿಸಿದರು.. ಗೋವಿಂದ, ಶ್ರೀನಿವಾಸ, ಭೂವರಹನಾಥ, ವೆಂಕಟೇಶ ಎಂಬ ಜಯಘೋಷಗಳು ಮುಗಿಲು ಮುಟ್ಟಿದ್ದವು…

ಶ್ರೀ ಲಕ್ಷ್ಮೀ ಸಮೇತನಾಗಿ ನೆಲೆಸಿರುವ ಭೂವರಹನಾಥ ಸ್ವಾಮಿಯ ದೇವಾಲಯವನ್ನು ತಿರುಮಲ ತಿರುಪತಿಯ ಮಾದರಿಯಲ್ಲಿ ಮೂರು ಪ್ರಾಕಾರಗಳ 108 ಕಂಬಗಳ ದೇವಾಲಯವನ್ನಾಗಿ ಹೊಯ್ಸಳ ವಾಸ್ತುಶಿಲ್ಪದ ಮಾದರಿಯಲ್ಲಿ ಮೈಸೂರಿನ ಪರಕಾಲ ಮಠದ ಪೀಠಾಧಿಪತಿಗಳಾದ ಶ್ರೀ ಲಕ್ಷ್ಮೀ ಹಯಗ್ರೀವ ಪರಕಾಲ ಸ್ವಾಮೀಜಿಯವರ ನೇತೃತ್ವದಲ್ಲಿ ಸಮಗ್ರವಾಗಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಹೊಯ್ಸಳ ಚಕ್ರವರ್ತಿ ಶ್ರೀ ವಿಷ್ಣುವರ್ಧನನ ಮೊಮ್ಮಗನಾದ ಮೂರನೇ ವೀರಬಲ್ಲಾಳನ ಸವಿನೆನಪಿಗಾಗಿ ಭೂವರಹನಾಥ ಸ್ವಾಮಿಯ ದೇವಾಲಯವನ್ನು 25 ಕೋಟಿ ರೂಪಾಯಿಗಳ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ.

ಮಹಾಬಲಿಪುರಂ, ಮುರುಡೇಶ್ವರ ಹಾಗೂ ಕುಂಭಕೋಣA ನಿಂದ ಆಗಮಿಸಿರುವ ಶಿಲ್ಪಿಗಳು ಸ್ಥಪತಿಗಳಾದ ಡಾ.ದೇವರಾಜನ್ ಅವರ ಮಾರ್ಗದರ್ಶನದಲ್ಲಿ ಕಂಬಗಳು ಹಾಗೂ ದೇವಾಲಯದ ಮೇಲ್ಛಾವಣಿಯ ನಕ್ಷತ್ರಗಳ ಪಟ್ಟಿಕೆಗಳು ಹಾಗೂ ಭುವನೇಶ್ವರಿಗಳ ಕುಸುರಿಯ ಕೆತ್ತನೆಯ ಕಾರ್ಯವು ಭರದಿಂದ ಸಾಗಿದೆ. ರಾಜ್ಯದಲ್ಲಿಯೇ ಎರಡನೇ ಅತಿ ಎತ್ತರದ 172ಅಡಿಗಳ ಬೃಹತ್ ರಾಜಗೋಪುರದ ನಿರ್ಮಾಣಕ್ಕೆ ರಾಜ್ಯದ ಮುಖ್ಯಮಂತ್ರಿಗಳಾದ ಶ್ರೀ.ಬಸವರಾಜಬೊಮ್ಮಾಯಿ ಅವರು ಮತ್ತು ಯುವಸಬಲೀಕರಣ ಕ್ರೀಡೆ ಹಾಗೂ ರೇಷ್ಮೆ ಸಚಿವರಾದ ಡಾ.ನಾರಾಯಣಗೌಡ ಅವರ ನೇತೃತ್ವದಲ್ಲಿ ಸಧ್ಯದಲ್ಲಿಯೇ ಭೂಮಿಪೂಜೆ ಮಾಡಿಸಿ ಚಾಲನೆ ನೀಡಲಾಗುವುದು. ಮೂರು ವರ್ಷಗಳ ಅವಧಿಯಲ್ಲಿ ದೇವಾಲಯವನ್ನು ಲೋಕಾರ್ಪಣೆ ಮಾಡಲು ಸಿದ್ಧತೆ ನಡೆಸಲಾಗಿದೆ ಎಂದು ತಿಳಿಸಿದ ದೇವಾಲಯ ವ್ಯವಸ್ಥಾಪನಾ ಸಮಿತಿಯ ಮ್ಯಾನೇಜಿಂಗ್ ಟ್ರಸ್ಟಿ ಶ್ರೀನಿವಾಸರಾಘವನ್ ಶ್ರೀ ಕ್ಷೇತ್ರದಲ್ಲಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಶೈಕ್ಷಣಿಕ ವಿಕಾಸಕ್ಕೆ ಅನುಕೂಲವಾಗುವಂತೆ ಹೈಟೆಕ್ ಶಾಲೆಯನ್ನು ಆರಂಭಿಸಿ ವೇದ, ಸಂಸ್ಕೃತ ಅಧ್ಯಯನದ ಜೊತೆಗೆ ಕನ್ನಡ ಹಾಗೂ ಆಂಗ್ಲಮಾಧ್ಯಮ ಶಿಕ್ಷಣಕ್ಕೆ ಅನುಕೂಲ ಮಾಡಿಕೊಡಲು ಆಲೋಚಿಸಲಾಗಿದ್ದು ಪರಕಾಲ ಶ್ರೀಗಳು ಸಂಕಲ್ಪ ಮಾಡಿದ್ದಾರೆ. ಗ್ರಾಮೀಣ ಪ್ರದೇಶದ ರೈತ ಕುಟುಂಬಗಳ ಬಡ ವಿದ್ಯಾರ್ಥಿಗಳಿಗೆ ವಸತಿ ಸಹಿತವಾಗಿ ಉಚಿತ ಶಿಕ್ಷಣ ನೀಡಲು ಆಲೋಚಿಸಲಾಗಿದೆ ಎಂದು ಶ್ರೀನಿವಾಸರಾಘವನ್ ತಿಳಿಸಿದರು .

ರೇವತಿ ನಕ್ಷತ್ರದ ಇಂದಿನ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ರಾಜ್ಯ ಹಾಲು ಒಕ್ಕೂಟದ ನಿರ್ದೇಶಕ ಎಸ್‌ಸಿ.ಅಶೋಕ್, ಜಿಲ್ಲಾ ಪಂಚಾಯತಿ ಮಾಜಿಸದಸ್ಯೆ ಭವಾನಿರೇವಣ್ಣ, ಶ್ರೀಮತಿ ಮಂಜುಳಾ ಲಿಂಬಾವಳಿ, ಸಚಿವ ನಾರಾಯಣಗೌಡರ ಆಪ್ತಸಹಾಯಕರಾದ ದಯಾನಂದ ಸೇರಿದಂತೆ ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ್ದ ಹತ್ತು ಸಾವಿರಕ್ಕೂ ಹೆಚ್ಚಿನ ಭಕ್ತಾದಿಗಳು ಭಾಗವಹಿಸಿದ್ದರು…

ರೇವತಿ ನಕ್ಷತ್ರದ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಭಕ್ತಾದಿಗಳಿಗೆ ಸಿಹಿಪೊಂಗಲ್, ಬಿಸಿಬೇಳೆಬಾತ್, ಚೌಚೌ ಭಾತ್ ಪ್ರಸಾದವನ್ನು ವಿತರಿಸಲಾಯಿತು.

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ . ಮಂಡ್ಯ

error: