April 18, 2024

Bhavana Tv

Its Your Channel

ಕನ್ನಡ ಸಾಹಿತ್ಯ ಪರಿಷತ್ ಕನ್ನಡ ರಾಜ್ಯೋತ್ಸವ ಅಂಗವಾಗಿ ಆಯೋಜಿಸಿದ್ದ 34ನೇ ವರ್ಷದ ಶಾಲೆಗೊಂದು ಕಾರ್ಯಕ್ರಮ

ಕೃಷ್ಣರಾಜಪೇಟೆ :- ವಿದ್ಯಾರ್ಥಿಗಳು ಪುಸ್ತಕಗಳು ಹಾಗೂ ಪತ್ರಿಕೆಗಳನ್ನು ಓದುವ ಹವ್ಯಾಸವನ್ನು ಜೀವನದಲ್ಲಿ ಅಳವಡಿಸಿಕೊಂಡು ಸೃಜನಶೀಲರಾಗಿ ಮುನ್ನಡೆಯಬೇಕು ಎಂದು ಮಂಡ್ಯ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ರವಿಕುಮಾರ್ ಚಾಮಲಾಪುರ ಹೇಳಿದರು ..

ಅವರು ಇಂದು ಕೆ.ಆರ್.ಪೇಟೆ ಪಟ್ಟಣದ ಬಿಜಿಎಸ್ ಶಿಕ್ಷಣ ಸಂಸ್ಥೆಯಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಕನ್ನಡ ರಾಜ್ಯೋತ್ಸವ ಅಂಗವಾಗಿ ಆಯೋಜಿಸಿದ್ದ 34ನೇ ವರ್ಷದ ಶಾಲೆಗೊಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರಶಸ್ತಿಪತ್ರ ನೀಡಿ ಗೌರವಿಸಿ ಮಾತನಾಡಿದರು..

ವಿದ್ಯಾರ್ಥಿಗಳು ಶಾಲೆಯ ಪಠ್ಯಪುಸ್ತಕಗಳ ಅಭ್ಯಾಸದ ಜೊತೆಗೆ ಕನ್ನಡ ಸಾಹಿತಿಗಳು, ಹೋರಾಟಗಾರರು ಹಾಗೂ ಸಮಾಜಕ್ಕೆ ಕೊಡುಗೆ ನೀಡಿರುವ ಸಾಧಕರ ಜೀವನ ಚರಿತ್ರೆಯನ್ನು ಓದಿ ಲೋಕಜ್ಞಾನವನ್ನು ಮೈಗೂಡಿಸಿಕೊಂಡು ತಮ್ಮ ವ್ಯಕ್ತಿತ್ವವನ್ನು ಸಮಗ್ರವಾಗಿ ವಿಕಸನಗೊಳಿಸಿಕೊಂಡು ಸಾಧನೆ ಮಾಡಬೇಕು ಎಂದು ಕಿವಿಮಾತು ಹೇಳಿದ ರವಿಕುಮಾರ್ ಕೆ.ಆರ್.ಪೇಟೆ ತಾಲ್ಲೂಕಿನ ಅಕ್ಕಿಹೆಬ್ಬಾಳು ಸುಬ್ಬರಾಯರ ಪುತ್ರರಾಗಿ ಜನಿಸಿದ ಎ.ಎಸ್.ಮೂರ್ತಿ ಅವರು ರಂಗಕರ್ಮಿಯಾಗಿ, ರಂಗನಿರ್ದೇಶಕರಾಗಿ, ನಟರಾಗಿ ಎಲ್ಲಾ ಕ್ಷೇತ್ರದಲ್ಲಿಯೂ ಸಾಧನೆ ಮಾಡಿದ್ದಾರೆ. ಆಕಾಶವಾಣಿಯಲ್ಲಿ ಪ್ರಸಾರವಾಗುತ್ತಿದ್ದ ಜಗಲಿಕಟ್ಟೆ ಕಾರ್ಯಕ್ರಮದಲ್ಲಿ ಮಾತುಗಾರ ಈರಣ್ಣನಾಗಿ ಕಾಣಿಸಿಕೊಂಡು ತನ್ನ ವಿಡಂಬನಾತ್ಮಕ ಮಾತಿನ ಮೂಲಕವೇ ಜನರ ಮೆಚ್ವುಗೆ ಗಳಿಸಿ ನಾಡಿನಾದ್ಯಂತ ಜನಪ್ರಿಯರಾಗಿದ್ದರು..ಎ.ಎಸ್.ಮೂರ್ತಿ ಅವರು ರಚಿಸಿದ ಡೊಂಕುಬಾಲ ನಾಟಕದ ಮೂಲಕ ಜನಪ್ರಿಯತೆಗಳಿಸಿಕೊಂಡ ಪ್ರಕಾಶರೈ ಇಂದು ಖ್ಯಾತ ನಟರಾಗಿದ್ದಾರೆ. ಒಂದು ಸಾವಿರಕ್ಕೂ ಹೆಚ್ಚಿನ ರಂಗಪ್ರದರ್ಶನ ಕಂಡ ಡೊಂಕುಬಾಲ ನಾಟಕವು ಮೂರ್ತಿ ಅವರಲ್ಲಿನ ಕ್ರಿಯಾಶೀಲ ವ್ಯಕ್ತಿತ್ವವನ್ನು ಹೊರಚೆಲ್ಲಿದ ಮಹಾನ್ ಪುಸ್ತಕವಾಗಿದೆ. ಒಂದು ತಿಂಗಳ ಪೂರ್ಣ ಎ.ಎಸ್.ಮೂರ್ತಿ ಅವರನ್ನು ವಿದ್ಯಾರ್ಥಿಗಳಿಗೆ ಪರಿಚಯ ಮಾಡಿಕೊಡುವ ಈ ಶಾಲೆಗೊಂದು ಕಾರ್ಯಕ್ರಮವು ಕೆ.ಆರ್.ಪೇಟೆ ಕಸಾಪ ಘಟಕದ ವಿಶೇಷ ಕಾರ್ಯಕ್ರಮವಾಗಿದೆ ಎಂದು ರವಿಕುಮಾರ್ ಚಾಮಲಾಪುರ ಅಭಿಮಾನದಿಂದ ಹೇಳಿದರು..

ತಹಶೀಲ್ದಾರ್ ಎಂ.ವಿ.ರೂಪ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಕನ್ನಡ ಸಾಹಿತ್ಯ ಪರಿಷತ್ತಿನ ಸಾಹಿತ್ಯ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ವಿದ್ಯಾರ್ಥಿಗಳಿಗೆ ಸಾಹಿತ್ಯಾಭಿರುಚಿ ಹಾಗೂ ಕನ್ನಡ ಭಾಷೆಯ ಬಗ್ಗೆ ಅಭಿಮಾನ ಮೂಡಿಸಲು ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಳ್ಳುವ ಕನ್ನಡಪರ ಕಾರ್ಯಕ್ರಮಗಳು ವರದಾನವಾಗಿವೆ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಅರ್.ಎಸ್.ಸೀತಾರಾಮ್ ಕೃಷ್ಣರಾಜನುಡಿ ಮಾಸಿಕ ಪತ್ರಿಕೆಯನ್ನು ಬಿಡುಗಡೆ ಮಾಡಿ ಕನ್ನಡ ಸಾಹಿತ್ಯ ಪರಿಷತ್ ಕಳೆದ 34 ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಶಾಲೆಗೊಂದು ಕಾರ್ಯಕ್ರಮವು ವಿದ್ಯಾರ್ಥಿಗಳಿಗೆ ಕನ್ನಡ ಭಾಷೆ ಹಾಗೂ ಕನ್ನಡ ಸಾಹಿತ್ಯದ ಬಗ್ಗೆ ಅಭಿರುಚಿಯನ್ನು ಮೂಡಿಸುವ ವಿಶಿಷ್ಠವಾದ ಕಾರ್ಯಕ್ರಮವಾಗಿದೆ ಎಂದು ಹೇಳಿದರು..

ವಿಶ್ರಾಂತ ಪ್ರಾಂಶುಪಾಲರಾದ ಶಿ.ಕುಮಾರಸ್ವಾಮಿ ಎ.ಎಸ್.ಮೂರ್ತಿ ಅವರ ಜೀವನ ಸಾಧನೆಗಳು, ರಂಗನಾಟಕ ಕೃತಿಗಳು ಹಾಗೂ ಅವರ ಸಮಾಜಮುಖಿ ಅಭಿವ್ಯಕ್ತಿ ಕುರಿತು ಮಾತನಾಡಿ ವಿದ್ಯಾರ್ಥಿಗಳಿಗೆ ಅರಿವಿನ ಜಾಗೃತಿಯನ್ನು ಮೂಡಿಸಿದರು..

ಕಸಾಪ ಅಧ್ಯಕ್ಷ ಪೂರ್ಣಚಂದ್ರ ತೇಜಸ್ವಿ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ನುಡಿಗಳನ್ನಾಡಿ ಕಸಾಪ ತಾಲ್ಲೂಕು ಘಟಕವು ರಾಜ್ಯದಲ್ಲಿಯೇ ಮಾದರಿಯಾಗಿ ಕಳೆದ 34 ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಶಾಲೆಗೊಂದು ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರಲ್ಲದೇ ತಾಲ್ಲೂಕು ಆಡಳಿತವು ಸಾಹಿತ್ಯ ಭವನದ ನಿರ್ಮಾಣಕ್ಕಾಗಿ ಕನ್ನಡ ಸಾಹಿತ್ಯ ಪರಿಷತ್ ಘಟಕಕ್ಕೆ ಸುಸಜ್ಜಿತವಾದ ನಿವೇಶನ ಒದಗಿಸಿಕೊಡಬೇಕೆಂದು ತಹಶೀಲ್ದಾರ್ ರೂಪ ಅವರಿಗೆ ಮನವಿ ಮಾಡಿದರು..

ಕಾರ್ಯಕ್ರಮದಲ್ಲಿ ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಲ್.ಎಸ್.ಧರ್ಮಪ್ಪ, ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಬಸವರಾಜು, ಉಪನ್ಯಾಸಕರ ಸಂಘದ ಅಧ್ಯಕ್ಷ ಹೆಚ್.ಟಿ.ಗಿರೀಶ್, ಕಸಾಪ ತಾಲ್ಲೂಕು ಘಟಕದ ಮಾಜಿ ಅಧ್ಯಕ್ಷರಾದ ಡಾ.ಶ್ರೀನಿವಾಸಶೆಟ್ಟಿ, ಕೆ.ಎಸ್.ಸೋಮಶೇಖರ್, ಕೆ.ಆರ್.ನೀಲಕಂಠ, ಹರಿಚರಣತಿಲಕ್, ಡಾ.ಕೆ.ಎಸ್.ರಾಜೇಶ್, ಶೀಳನೆರೆ ಸಿದ್ಧೇಶ್, ಶ್ರೀಕಾಂತ್ ಚಿಮ್ಮಲ್, ಜಯಶ್ರೀ ಚಿಮ್ಮಲ್, ರವಿಶಿವಕುಮಾರ್, ಸವಿತಾರಮೇಶ್, ಬಲ್ಲೇನಹಳ್ಳಿ ಮಂಜುನಾಥ್, ಚಾಶಿ.ಜಯಕುಮಾರ್ ಸೇರಿದಂತೆ ನೂರಾರು ಸಾಹಿತ್ಯಾಭಿಮಾನಿಗಳು ಹಾಗೂ ಬಿಜಿಎಸ್ ಶಿಕ್ಷಣ ಸಂಸ್ಥೆಯ ಶಿಕ್ಷಕರು, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ, ಮಂಡ್ಯ

error: