February 1, 2023

Bhavana Tv

Its Your Channel

ಮಹಿಳಾ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ವಿದ್ಯಾರ್ಥಿನಿಯರಿಗೆ ಆಯೋಜಿಸಿದ್ದ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶ್ರಮದಾನ ಶಿಬಿರದ ಸಮಾರೋಪ ಸಮಾರಂಭ

ಕೃಷ್ಣರಾಜಪೇಟೆ :- ಹೆಣ್ಣು ಮಕ್ಕಳು ಈ ರಾಷ್ಟ್ರದ ಶಕ್ತಿಯಾಗಿದ್ದು ದೇಶದ ಸಮಗ್ರವಾದ ಮುನ್ನಡೆ ಹಾಗೂ ಅಭಿವೃದ್ಧಿಗೆ ಹೆಣ್ಣು ಮಕ್ಕಳ ಕೊಡುಗೆಯು ಅಪಾರವಾಗಿದೆ ಎಂದು ರಾಜ್ಯದ ಯುವಸಬಲೀಕರಣ ಕ್ರೀಡೆ ಹಾಗೂ ರೇಷ್ಮೆ ಸಚಿವರಾದ ಡಾ.ನಾರಾಯಣಗೌಡ ಹೇಳಿದರು ..

ಅವರು ಕೆ.ಆರ್.ಪೇಟೆ ತಾಲ್ಲೂಕಿನ ಹಳೆಅತ್ತಿಗುಪ್ಪೆ ಗ್ರಾಮದಲ್ಲಿ ಪಟ್ಟಣದ ಮಹಿಳಾ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ವಿದ್ಯಾರ್ಥಿನಿಯರಿಗೆ ಆಯೋಜಿಸಿದ್ದ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶ್ರಮದಾನ ಶಿಬಿರದ ಸಮಾರೋಪ
ಸಮಾರಂಭದಲ್ಲಿ ಭಾಗವಹಿಸಿ ಸುರಿಯುವ ಮಳೆಯ ಮಧ್ಯದಲ್ಲಿಯೇ ಶಿಬಿರಾರ್ಥಿಗಳು ಹಾಗೂ ಗ್ರಾಮಸ್ಥರನ್ನು ಉದ್ಧೇಶಿಸಿ ಮಾತನಾಡಿದರು..

ಕೃಷ್ಣರಾಜಪೇಟೆ ತಾಲ್ಲೂಕಿನ ಗ್ರಾಮೀಣ ಪ್ರದೇಶದ ವಿದ್ಯಾರ್ಥಿನಿಯರಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಾ ಫಲಿತಾಂಶದಲ್ಲಿ ಮೈಸೂರು ವಿಭಾಗ ಮಟ್ಟದಲ್ಲಿ ಪ್ರಥಮ ಸ್ಥಾನಗಳಿಸಿದೆ. ಕೆ.ಆರ್.ಪೇಟೆಯ ಮಹಿಳಾ ಸರ್ಕಾರಿ ಕಾಲೇಜು ರಾಜ್ಯದ ಇತರೆ ಕಾಲೇಜುಗಳಿಗೆ ಮಾದರಿಯಾದ ವಿದ್ಯಾಸಂಸ್ಥೆಯಾಗಿದೆ. ಇಂತಹ ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿನಿಯರು ಹಳೆ ಅತ್ತಿಗುಪ್ಪೆ ಗ್ರಾಮಕ್ಕೆ ಬಂದು ಸ್ವಚ್ಛತೆ, ಗ್ರಾಮ ನೈರ್ಮಲ್ಯ ಹಾಗೂ ಸರ್ಕಾರದ ವಿವಿಧ ಯೋಜನೆಯ ಸೌಲಭ್ಯಗಳು ಶ್ರೀಸಾಮಾನ್ಯರಿಗೆ ತಲುಪಿಸುವ ನಿಟ್ಟಿನಲ್ಲಿ ರೈತಬಾಂಧವರು ಹಾಗೂ ಗ್ರಾಮಸ್ಥರಿಗೆ ಅರಿವಿನ ಜಾಗೃತಿ ಮೂಡಿಸಿ ಇತರರಿಗೆ ಮಾದರಿಯಾಗಿದ್ದಾರೆ ಎಂದು ಅಭಿಮಾನದಿಂದ ಹೇಳಿದ ಸಚಿವರು ರಾಷ್ಟ್ರೀಯ ಸೇವಾ ಯೋಜನೆಯ ಹೆಸರಿನಲ್ಲಿ ಶಿಬಿರಾರ್ಥಿಗಳಾಗಿ ಗ್ರಾಮಕ್ಕೆ ಆಗಮಿಸಿರುವ ಹೆಣ್ಣುಮಕ್ಕಳು ತಮ್ಮ ಮನೆಯಲ್ಲಿ ಕೆಲಸ ಮಾಡಿ ತಂದೆತಾಯಿಗಳಿಗೆ ಸಹಾಯ ಮಾಡುತ್ತಾರೋ ಇಲ್ಲವೋ ಗೊತ್ತಿಲ್ಲ, ಆದರೆ ಹಳೆಅತ್ತಿಗುಪ್ಪೆಯ ಗಿಡಗಂಟೆಗಳನ್ನು ಸ್ವಚ್ಛಗೊಳಿಸಿ, ತಿಪ್ಪೆಗುಂಡಿಗಳನ್ನು ಗ್ರಾಮದಿಂದ ಹೊರಕ್ಕೆ ಸ್ಥಳಾಂತರಿಸಿ ಬಯಲಿನಲ್ಲಿ ಮಲ ವಿಸರ್ಜನೆ ಮಾಡುವುದರಿಂದ ಆಗುವ ಆರೋಗ್ಯ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸಿ ಕುಡಿಯಲು ಶುದ್ಧವಾದ ನೀರನ್ನು ವಯಕ್ತಿಕ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು ಎಂದು ಜಾಗೃತಿ ಮೂಡಿಸಿದ್ದಾರೆ. ಗಿಡಮರಗಳ ನಾಶದಿಂದ ಆಗುವ ದುಷ್ಪರಿಣಾಮಗಳು, ಪರಿಸರ ನಾಶದಿಂದ ಮನುಕುಲಕ್ಕೆ ಆಗುವ ತೊಂದರೆ, ಹಸಿರೀಕರಣದಿಂದ ಸಮಾಜಕ್ಕೆ ಆಗುವ ಲಾಭ ನಷ್ಟಗಳ ಬಗ್ಗೆ ಬೆಳಕು ಚೆಲ್ಲುವ ಕೆಲಸ ಮಾಡಿದ್ದಾರೆ ಎಂದು ಸಚಿವರು ಶ್ಲಾಘಿಸಿದರು..

ತಂದೆತಾಯಿಗಳು ಹಾಗೂ ಗುರುಹಿರಿಯರನ್ನು ಗೌರವಿಸಬೇಕು, ನಮ್ಮ ನಡೆನುಡಿಯು ಇತರರಿಗೆ ಮಾದರಿಯಾಗಬೇಕು, ಜೀವನದಲ್ಲಿ ಸೇವಾಮನೋಭಾವನೆ ಹಾಗೂ ಪರೋಪಕಾರ ಗುಣಗಳನ್ನು ಮೈಗೂಡಿಸಿಕೊಂಡು ಸಮಾಜಮುಖಿಯಾಗಿ ಹೆಜ್ಜೆ ಹಾಕಬೇಕು ಎಂದು ಕಿವಿಮಾತು ಹೇಳಿದ ಸಚಿವ ನಾರಾಯಣಗೌಡ ಅವರು ಸುರಿವ ಮಳೆಯಲ್ಲಿಯೂ ಜಗ್ಗದೇ ಮಳೆಯಲ್ಲಿಯೇ ನೆಂದು ಕಾರ್ಯಕ್ರಮ ವೀಕ್ಷಿಸಿದ ಗ್ರಾಮಸ್ಥರು ಹಾಗೂ ಶಿಬಿರಾರ್ಥಿಗಳ ಆತ್ಮವಿಶ್ವಾಸವನ್ನು ಕೊಂಡಾಡಿದರು..

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ತಹಶೀಲ್ದಾರ್ ಎಂ.ವಿ.ರೂಪ ಮಾತನಾಡಿ ಹೆಣ್ಣುಮಕ್ಕಳು ತಮ್ಮಲ್ಲಿನ ಕೀಳರಿಮೆಯನ್ನು ಅಳಿಸಿಹಾಕಿ ಆತ್ಮವಿಶ್ವಾಸವನ್ನು ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆದು ಗುರಿಸಾಧನೆ ಮಾಡಬೇಕು. ಜೀವನದಲ್ಲಿ ಎದುರಾಗುವ ಸೋಲಿಗೆ ಹೆದರದೇ ಸೋಲನ್ನೇ ಗೆಲುವಿನ ಮೆಟ್ಟಿಲನ್ನಾಗಿಸಿಕೊಳ್ಳಬೇಕು. ಹೆಣ್ಣು ಸಂಸಾರದ ಕಣ್ಣು ಎಂಬ ಸತ್ಯವನ್ನು ಅರಿತು ಸಾಧನೆ ಮಾಡಬೇಕು ಎಂದು ಮನವಿ ಮಾಡಿದರು..

ಜಿಲ್ಲಾ ಪಂಚಾಯತಿ ಮಾಜಿ ಉಪಾಧ್ಯಕ್ಷ ಶೀಳನೆರೆ ಅಂಬರೀಶ್, ಪುರಸಭೆ ಸದಸ್ಯ ಕೆ.ಆರ್.ನೀಲಕಂಠ, ಟಿಎಪಿಸಿಎಂಎಸ್ ಮಾಜಿಅಧ್ಯಕ್ಷ ಅಘಲಯಶ್ರೀಧರ್, ಗ್ರಾಮದ ಮುಖಂಡರಾದ ಶಾಂತರಾಜು, , ಕೆಂಪರಾಜು, ನಾಗರಾಜೇಗೌಡ, ದುಷ್ಯಂತ್, ಶಿಬಿರಾಧಿಕಾರಿ ಬಿ.ಎಸ್.ಶಶಿಕುಮಾರ್, ಸಹಪ್ರಾಧ್ಯಾಪಕರಾದ ವಿನಯ್, ಎಂ.ಕೆ.ಮAಜುನಾಥ್, ನಾಗೇಶ್, ಮಹೇಶ್, ಕೆ.ಟಿ.ಚಂದ್ರು ಸೇರಿದಂತೆ ನೂರಾರು ಗ್ರಾಮಸ್ಥರು ಉಪಸ್ಥಿತರಿದ್ದರು.. ಕಾಲೇಜಿನ ಹಿರಿಯ ವ್ಯವಸ್ಥಾಪಕರಾದ ಬಳ್ಳೇಕೆರೆ ಮಂಜುನಾಥ್ ಕಾರ್ಯಕ್ರಮ ನಡೆಸಿಕೊಟ್ಟರು.. ಎನ್.ಎಸ್.ಎಸ್ ಶಿಬಿರದ ಯಶಸ್ಸಿಗೆ ಸಹಕಾರ ನೀಡಿದ ಗ್ರಾಮಸ್ಥರು ಹಾಗೂ ಗಣ್ಯರನ್ನು ಇದೇ ಸಂದರ್ಭದಲ್ಲಿ ಮಹಿಳಾ ಕಾಲೇಜಿನ ವತಿಯಿಂದ ಸನ್ಮಾನಿಸಿ ಗೌರವಿಸಿದರು..

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ, ಮಂಡ್ಯ

About Post Author

error: