February 1, 2023

Bhavana Tv

Its Your Channel

ಕೆ.ಆರ್.ಪೇಟೆಯಲ್ಲಿ ಕಾನೂನು ಅರಿವು ಕುರಿತು ನಡೆದ ಜಾಗೃತಿ ಜಾಥಾ

ಕೃಷ್ಣರಾಜಪೇಟೆ :- ರಾಷ್ಟ್ರೀಯ ಕಾನೂನು ಸೇವಾ ದಿನಾಚರಣೆ ಮತ್ತು ನಾಗರಿಕರ ಸಬಲೀಕರಣ ಕಾನೂನು ಅರಿವು ಕುರಿತು ಇಂದು ಪಟ್ಟಣದ ಮುಖ್ಯ ರಸ್ತೆಗಳು ಹಾಗೂ ಎಪಿಎಂಸಿ ಮಾರುಕಟ್ಟೆಯಲ್ಲಿ ಜಾಗೃತಿ ಜಾಥಾ ನಡೆಸಿದ ನ್ಯಾಯಾಧೀಶರು, ವಕೀಲರು ಹಾಗೂ ಪೋಲಿಸರು ಜನಸಾಮಾನ್ಯರಿಗೆ ಕರಪತ್ರ ವಿತರಿಸಿ ಕಾನೂನಿನ ಬಗ್ಗೆ ಜಾಗೃತಿ ಮೂಡಿಸಿದರು ..

ಕೆ.ಆರ್.ಪೇಟೆ ತಾಲ್ಲೂಕು ಕಾನೂನು ಸೇವಾ ಸಮಿತಿ ಮತ್ತು ವಕೀಲರ ಸಂಘದ ಸಂಯುಕ್ತಾಶ್ರಯದಲ್ಲಿ ಕಾನೂನು ಅರಿವು ಕುರಿತು ನಡೆದ ಜಾಗೃತಿ ಜಾಥಾಕ್ಕೆ ಹಿರಿಯಶ್ರೇಣಿ ಸಿವಿಲ್ ನ್ಯಾಯಾಧೀಶರಾದ ಸಮೀರ್ ಪಿ.ನಂಧ್ಯಾಲ್ ಮತ್ತು ಕಿರಿಯಶ್ರೇಣಿ ನ್ಯಾಯಾಧೀಶರಾದ ಹೆಚ್.ಓಂಕಾರಮೂರ್ತಿ ಹಸಿರು ನಿಶಾಲೆಯನ್ನು ತೋರಿಸಿ ಚಾಲನೆ ನೀಡಿದರು..

ರಾಷ್ಟ್ರೀಯ ಕಾನೂನು ಸೇವಾ ದಿನಾಚರಣೆಯ ಅಂಗವಾಗಿ ನಡೆದ ಜಾಗೃತಿ ಜಾಥಾದಲ್ಲಿ ಭಾಗವಹಿಸಿದ್ದ ನ್ಯಾಯಾಧೀಶರಾದ ಸಮೀರ್.ಪಿ ನಂಧ್ಯಾಲ್, ಹೆಚ್.ಓಂಕಾರಮೂರ್ತಿ, ಶಕುಂತಲಾ , ಕೆ.ವಿ.ಅರ್ಪಿತಾ, ವಕೀಲರ ಸಂಘದ ಅಧ್ಯಕ್ಷ ಎನ್.ಆರ್.ರವಿಶಂಕರ್, ಪ್ರಧಾನಕಾರ್ಯದರ್ಶಿ ಆರ್.ಕೆ.ರಾಜೇಗೌಡ, ಪಟ್ಟಣ ಪೋಲಿಸ್ ಠಾಣೆ ಇನ್ಸ್ ಪೆಕ್ಟರ್ ಎಂ.ಕೆ.ದೀಪಕ್ ಜನಸಾಮಾನ್ಯರಿಗೆ ಕರಪತ್ರಗಳನ್ನು ವಿತರಿಸಿ ಕಾನೂನು ಅರಿವಿನ ಮಾಹಿತಿ ನೀಡಿದರು..

ಹಿರಿಯಶ್ರೇಣಿ ಸಿವಿಲ್ ನ್ಯಾಯಾಧೀಶರಾದ ಸಮೀರ್ ಪಿ.ನಂಧ್ಯಾಲ್ ಮಾತನಾಡಿ ಮಾನವರಾದ ನಾವು ಹುಟ್ಟಿನಿಂದ ಸಾಯುವವರೆಗೂ ಕಾನೂನಿನ ನಡುವಿನಲ್ಲಿಯೇ ಜೀವನ ನಡೆಸುವುದರಿಂದ ಕಾನೂನಿನ ಬಗ್ಗೆ ಅರಿವು ಮೂಡಿಸಿಕೊಂಡು ಕಾನೂನನ್ನು ಗೌರವಿಸಿ ಜೀವನ ನಡೆಸಬೇಕು. ಕಾನೂನಿನ ಅಡಿಯಲ್ಲಿ ಎಲ್ಲರೂ ಒಂದು, ಕಾನೂನಿಗಿಂತ ಯಾರೂ ದೊಡ್ಡವರಲ್ಲವಾದ್ದರಿಂದ, ಬಡವರು ಶ್ರೀಮಂತರು ಎಂಬ ಬೇಧಬಾವ ಇಲ್ಲದಂತೆ ನಾಗರಿಕ ಸಮಾಜದಲ್ಲಿ ವಾಸಿಸುವ ಎಲ್ಲರೂ ನ್ಯಾಯವನ್ನು ಪಡೆಯಬಹುದಾಗಿದೆ. ತಾಲ್ಲೂಕು ಕಾನೂನು ಸೇವಾ ಸಮಿತಿಯನ್ನು ಸಂಪರ್ಕಿಸಿ ತುಳಿತಕ್ಕೊಳಗಾದ ಬಡಜನರು ಹಾಗೂ ಶೋಷಿತರು ಉಚಿತವಾಗಿ ಕಾನೂನು ನೆರವನ್ನು ಪಡೆಯಬಹುದಾಗಿದೆ ಎಂದು ನ್ಯಾಯಾಧೀಶರು ಹೇಳಿದರು..

ಜಾಗೃತಿ ಜಾಥಾದಲ್ಲಿ ಸರ್ಕಾರಿ ಅಭಿಯೋಜಕರಾದ ಬಿ.ಸಿ.ರಾಜೇಶ್, ವಕೀಲರ ಸಂಘದ ಉಪಾಧ್ಯಕ್ಷ, ಕಾರ್ಯದರ್ಶಿ ಆರ್.ಕೆ.ರಾಜೇಗೌಡ, ಬಿ.ಸಿ.ದಿನೇಶ್, ಪದಾಧಿಕಾರಿಗಳಾದ ನಿರಂಜನ್, ರಾಣಿ, ಹೆಚ್.ವಿ.ಆಶಾ, ಸೇರಿದಂತೆ ಹಿರಿಯ ವಕೀಲರಾದ ವಿಜಯಕುಮಾರ್, ಅನಂತರಾಮಯ್ಯ, ದೇವರಾಜು ಸೇರಿದಂತೆ ನೂರಾರು ವಕೀಲರು ನ್ಯಾಯಾಲಯದ ಸಿಬ್ಬಂಧಿಗಳು ಭಾಗವಹಿಸಿದ್ದರು…
ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ, ಮಂಡ್ಯ

About Post Author

error: