April 25, 2024

Bhavana Tv

Its Your Channel

ಜನಸಾಮಾನ್ಯರಿಗೆ ತೊಂದರೆ ನೀಡುತ್ತಿರುವ ಅಧಿಕಾರಿಗಳು ಹಾಗೂ ನೌಕರರ ವಿರುದ್ಧ ಮಾಹಿತಿ ನೀಡಲು ಕೆ.ಆರ್.ಎಸ್ ಪಕ್ಷದ ರಾಜ್ಯಾಧ್ಯಕ್ಷ ರವಿಕೃಷ್ಣಾರೆಡ್ಡಿ ಮನವಿ

ಕೃಷ್ಣರಾಜಪೇಟೆ :- ಭ್ರಷ್ಟಾಚಾರದ ವಿರುದ್ಧ ಕೆ.ಆರ್.ಎಸ್ ಪಕ್ಷದ ಹೋರಾಟ ನಿರಂತರ .. ಜನಸಾಮಾನ್ಯರಿಗೆ ತೊಂದರೆ ನೀಡುತ್ತಿರುವ ಅಧಿಕಾರಿಗಳು ಹಾಗೂ ನೌಕರರ ವಿರುದ್ಧ ಮಾಹಿತಿ ನೀಡಲು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯಾಧ್ಯಕ್ಷ ರವಿಕೃಷ್ಣಾರೆಡ್ಡಿ ಮನವಿ .

ದೇಶದ ಅಭಿವೃದ್ಧಿಗೆ ಮಾರಕವಾಗಿರುವ ಭ್ರಷ್ಟಾಚಾರದ ನಿರ್ಮೂಲನೆಗೆ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವು ನಿರಂತರವಾಗಿ ಹೋರಾಟ ನಡೆಸುತ್ತಿದೆ. ಮುಂಬರುವ ತಾಲ್ಲೂಕು, ಜಿಲ್ಲಾ ಪಂಚಾಯತಿ ಹಾಗೂ 2023ರ ರಾಜ್ಯ ವಿಧಾನಸಭೆಯ ಎಲ್ಲಾ 224 ಸ್ಥಾನಗಳಿಗೂ ನಮ್ಮ ಪಕ್ಷದ ವತಿಯಿಂದ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದಾರೆ ಎಂದು ಕೆ.ಆರ್.ಎಸ್ ಪಕ್ಷದ ರಾಜ್ಯಾಧ್ಯಕ್ಷ ರವಿಕೃಷ್ಣಾರೆಡ್ಡಿ ಹೇಳಿದರು..

ಅವರು ಇಂದು ಕೆ.ಆರ್.ಪೇಟೆ ಪಟ್ಟಣದ ಪ್ರವಾಸಿ ಮಂದಿರದ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು..

ರಾಜ್ಯದ ಸಮಗ್ರವಾದ ಅಭಿವೃದ್ಧಿಗೆ ಭ್ರಷ್ಠಾಚಾರವು ಮಾರಕವಾಗಿದೆ. ಭ್ರಷ್ಟಾಚಾರದ ನಿರ್ಮೂಲನೆಗೆ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವು ಜನಸಾಮಾನ್ಯರಿಗೆ ಅರಿವಿನ ಜಾಗೃತಿ ಮೂಡಿಸುವ ಮೂಲಕ ಭ್ರಷ್ಟಾಚಾರದ ನಿರ್ಮೂಲನೆಗೆ ನಿರಂತರ ಹೋರಾಟ ನಡೆಸುತ್ತಿದೆ. ಹಣ, ಹೆಂಡ ಸೇರಿದಂತೆ ಯಾವುದೇ ಆಮಿಷಗಳನ್ನು ಒಡ್ಡದೇ ಪ್ರಜಾಪ್ರಭುತ್ವದ ಮೌಲ್ಯವನ್ನು ಎತ್ತಿಹಿಡಿಯುವ ನಿಟ್ಟಿನಲ್ಲಿ ಪ್ರಾಮಾಣಿಕ ಅಭ್ಯರ್ಥಿಗಳನ್ನು ಗುರುತಿಸಿ ಅಭ್ಯರ್ಥಿಯಾಗಿ ಕಣಕ್ಕಿಳಿಸುವ ಮೂಲಕ ಜನಸಾಮಾನ್ಯರ ಶೋಷಣೆ ಮಾಡುತ್ತಿರುವ ಬಿಜೆಪಿ, ಕಾಂಗ್ರೆಸ್ ಜೆಡಿಎಸ್ ಸೇರಿದಂತೆ ಇತರೆ ಪಕ್ಷಗಳಿಗೆ ಕೆ.ಆರ್.ಎಸ್ ಪಕ್ಷವು ಪ್ರಭಲ ಸ್ಪರ್ಧೆಯನ್ನು ನೀಡಲಿದೆ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯಾಧ್ಯಕ್ಷ ರವಿಕೃಷ್ಣಾರೆಡ್ಡಿ ಹೇಳಿದರು..

ಭ್ರಷ್ಠ ಅಧಿಕಾರಿಗಳ ವಿರುದ್ಧ ನಿರಂತರ ಹೋರಾಟ ನಡೆಸುವ ಜೊತೆಗೆ ಲೋಕಾಯುಕ್ತ ಸಂಸ್ಥೆಗೆ ದೂರು ದಾಖಲಿಸುವ ಕೆಲಸವನ್ನು ನಮ್ಮ ಪಕ್ಷವು ಮಾಡುತ್ತಿದೆ. ತಮ್ಮ ಕಾನೂನುಬದ್ಧವಾದ ಕೆಲಸ ಕಾರ್ಯಗಳನ್ನು ಮಾಡಿಕೊಡಲು ಸತಾಯಿಸಿ ಗೋಳುಹೊಯ್ದುಕೊಳ್ಳುವ, ಲಂಚದ ಹಣಕ್ಕಾಗಿ ಪೀಡಿಸುವ ಅಧಿಕಾರಿಗಳ ವಿರುದ್ಧ ನಮ್ಮ ಹೋರಾಟ ನಿರಂತರ ಎಂದು ಗುಡುಗಿದ ರಾಜ್ಯಾಧ್ಯಕ್ಷ ರೆಡ್ಡಿ ನಿಗಧಿತ ಅವಧಿಯೊಳಗೆ ಕೆಲಸ ಮಾಡದ, ಭ್ರಷ್ಟಾಚಾರವನ್ನು ಪೋಷಿಸುವ ನೌಕರರ ವಿರುದ್ಧ ಜನಾಂದೋಲನ ನಡೆಸಲಾಗುವುದು ಎಂದು ಹೇಳಿದರು..

ರಾಜ್ಯದ ಕೆಲವೆಡೆ ಪೋಲಿಸರು ಸೇರಿದಂತೆ ಕೆಲವು ಅಧಿಕಾರಿಗಳು ನಮ್ಮ ಪಕ್ಷದ ಕಾರ್ಯಕರ್ತರ ವಿರುದ್ಧ ಸುಳ್ಳು ದೂರುಗಳನ್ನು ದಾಖಲಿಸಿ ಹೋರಾಟಗಾರರನ್ನು ಹೆದರಿಸಿ, ಚಳವಳಿಯನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ. ಕೆ.ಆರ್.ಎಸ್ ಪಕ್ಷವು ಇಂತಹ ಗೊಡ್ಡು ಬೆದರಿಕೆಗಳಿಗೆ ಜಗ್ಗುವುದಿಲ್ಲ. ನಮ್ಮ ಪಕ್ಷದ ಕಾರ್ಯಕರ್ತರ ಹೋರಾಟವು ನಿರಂತರವಾಗಿ ನಡೆಯಲಿದ್ದು ಈಗಾಗಲೇ ಭ್ರಷ್ಠ ಅಧಿಕಾರಿಗಳಿಗೆ ನಮ್ಮ ಕಾರ್ಯಕರ್ತರು ಚಳಿ ಹುಟ್ಟಿಸಿದ್ದಾರೆ. ಭ್ರಷ್ಠ ಅಧಿಕಾರಿಯಾಗಿರುವ ಪ್ರಸ್ತುತ ಮಂಡ್ಯ ತಹಶೀಲ್ದಾರ್ ಆಗಿ ಕೆಲಸ ಮಾಡುತ್ತಿರುವ ಕುಂಇ ಅಹಮದ್ ವಿರುದ್ಧ ನಮ್ಮ ಹೋರಾಟ ನಿರಂತರವಾಗಿ ನಡೆಯುತ್ತದೆ ಎಂದು ರವಿಕೃಷ್ಣಾರೆಡ್ಡಿ ಹೇಳಿದರು.

ಕೆ.ಆರ್.ಪೇಟೆ ತಾಲ್ಲೂಕು ಕೆ.ಆರ್.ಎಸ್ ಪಕ್ಷದ ಅಧ್ಯಕ್ಷರಾದ ವಕೀಲ ಕೆರೆಮೇಗಳಕೊಪ್ಪಲು ಶಂಕರೇಗೌಡ ಮಾತನಾಡಿ ಪೋಲಿಸ್ ಠಾಣೆ, ತಾಲ್ಲೂಕು ಕಛೇರಿ, ಸಾರ್ವಜನಿಕ ಆಸ್ಪತ್ರೆ ಸೇರಿದಂತೆ ಜಿಲ್ಲೆಯಲ್ಲಿ ಎಲ್ಲೆ ಅನ್ಯಾಯ ನಡೆದರೆ ನಮ್ಮ ಪಕ್ಷದ ಕಾರ್ಯಕರ್ತರು ಶ್ರೀಸಾಮಾನ್ಯರಿಗೆ ಸಹಾಯ ಮಾಡಲು, ಅನ್ಯಾಯದ ವಿರುದ್ಧ ಹೋರಾಟ ಮಾಡಲು ಸದಾ ಸಿದ್ಧರಿರುತ್ತಾರೆ. ಅವಶ್ಯಕತೆ ಬಿದ್ದಾಗ ಜನಸಾಮಾನ್ಯರು ನಮ್ಮ ಸಂಘಟನೆಯ ಸಹಾಯ ಪಡೆದುಕೊಳ್ಳಬೇಕು ಎಂದು ಶಂಕರೇಗೌಡ ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಮಂಡ್ಯ ಜಿಲ್ಲಾಧ್ಯಕ್ಷ ರಮೇಶಗೌಡ, ಕಾರ್ಯಾಧ್ಯಕ್ಷ ಮಹೇಂದ್ರ, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಆರ್.ನಟರಾಜ್, ಕೆ.ಆರ್.ಎಸ್ ಪಕ್ಷದ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಸೂರ್ಯಾನಿ, ಉಪಾಧ್ಯಕ್ಷ ಮುರುಗೇಶ್ ಸೇರಿದಂತೆ ಪಕ್ಷದ ಕಾರ್ಯಕರ್ತರು ಪದಾಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು..
ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ , ಮಂಡ್ಯ

error: