April 20, 2024

Bhavana Tv

Its Your Channel

ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

ಕೃಷ್ಣರಾಜಪೇಟೆ:- ಗ್ರಾಮೀಣ ಪ್ರದೇಶದ ಸಮಗ್ರವಾದ ಅಭಿವೃದ್ಧಿಗೆ ಕೇಳಿದ್ದನ್ನೆಲ್ಲಾ ಕೊಡುವ ಕಾಮಧೇನು ಕಲ್ಪವೃಕ್ಷದಂತೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಕೆಲಸ ಮಾಡಿ ಸದೃಢ ಸಶಕ್ತ ಭಾರತದ ನಿರ್ಮಾಣಕ್ಕೆ ಮುಂದಾಗಿದೆ ಎಂದು ಪ್ರಗತಿಪರ ಚಿಂತಕರಾದ ಬಳ್ಳೇಕೆರೆ ಮಂಜುನಾಥ್ ಹೇಳಿದರು ..

ಅವರು ಇಂದು ತಾಲ್ಲೂಕಿನ ಶೀಳನೆರೆ ಹೋಬಳಿಯ ಶೀಳನೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸಿ ಧಾರ್ಮಿಕ ಜಾಗೃತಿ ಮೂಡಿಸಿ ಮಾತನಾಡಿದರು..

ನಮ್ಮ ಪಾಲಿನ ಕೆಲಸಗಳನ್ನು ನಾವು ಪ್ರಾಮಾಣಿಕವಾಗಿ ಮಾಡುವ ಮೂಲಕ ನಮ್ಮ ಸಂಸ್ಕೃತಿ ಹಾಗೂ ಪರಂಪರೆಯನ್ನು ಉಳಿಸಿ ಬೆಳೆಸುವ ಮೂಲಕ ಧಾರ್ಮಿಕ ಜಾಗೃತಿಯನ್ನು ಉಳಿಸಿ ಬೆಳೆಸುವ ಕೆಲಸವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಾವಿರಾರು ಕಾರ್ಯಕರ್ತರು ಹಾಗೂ ಸೇವಾ ಪ್ರತಿನಿಧಿಗಳು ಬದ್ಧತೆಯಿಂದ ಕೆಲಸ ಮಾಡುತ್ತಿದ್ದಾರೆ. ಇಂದು ಸಾವಿರಾರು ಮಹಿಳೆಯರನ್ನು ಸಂಘಟಿಸಿ ಇಂದು ಸಾಮಾಜಿಕವಾಗಿ ಸತ್ಯನಾರಾಯಣ ಸ್ವಾಮಿಯ ಪೂಜೆಯನ್ನು ಮಾಡಿಸುವ ಮೂಲಕ ಗ್ರಾಮೀಣ ಪ್ರದೇಶದ ಶ್ರೀಸಾಮಾನ್ಯರಲ್ಲಿ ಧಾರ್ಮಿಕ ಪ್ರಜ್ಞೆ ಹಾಗೂ ಮನೋಭಾವನೆಯನ್ನು ತುಂಬಿ ನ್ಯಾಯ, ನೀತಿ, ಧರ್ಮ ಹಾಗೂ ಸತ್ಯದ ಹಾದಿಯಲ್ಲಿಯೇ ಸಾಗಿ ಗುರಿಮುಟ್ಟಲು ಪ್ರೇರಕ ಶಕ್ತಿಯಾಗಿರುವ ಧರ್ಮಸ್ಥಳ ಸಂಸ್ಥೆಯು ಒಂದು ಸರ್ಕಾರವು ಮಾಡಲಾಗದ ಕೆಲಸವನ್ನು ಯಶಸ್ವಿಯಾಗಿ ಮಾಡುತ್ತಿದೆ ಎಂದು ತಿಳಿಸಿದ ಮಂಜುನಾಥ್ ತಾಲ್ಲೂಕಿನ 5 ಸಾವಿರಕ್ಕೂ ಹೆಚ್ಚಿನ ಪ್ರಗತಿಬಂಧು ಮಹಿಳಾ ಸ್ವಸಹಾಯ ಸಂಘಗಳಿಗೆ 85 ಕೋಟಿಗೂ ಹೆಚ್ಚು ಸಾಲಸೌಲಭ್ಯವನ್ನು ವಿತರಿಸುವ ಮೂಲಕ ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಿ ಗ್ರಾಮಾಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡುತ್ತಿದೆ ಎಂದರು..

ಜಿಲ್ಲಾ ಪಂಚಾಯತಿ ಮಾಜಿಉಪಾಧ್ಯಕ್ಷ ಶೀಳನೆರೆ ಅಂಬರೀಶ್ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ನಮ್ಮ ತಾಲ್ಲೂಕಿಗೆ 10 ವರ್ಷಗಳ ಹಿಂದೆ ವರವಾಗಿ ಬಂದು ಇಂದು ಹೆಮ್ಮರವಾಗಿ ಬೆಳೆದು ನಿಂತಿದೆ. ಒಂದೇ ಒಂದು ರೂಪಾಯಿ ಸಾಲವು ಸುಸ್ತಿಯಾಗದಂತೆ ಸಕಾಲದಲ್ಲಿ ಶೇ.100ಕ್ಕೆ 100ರಷ್ಟು ಸಾಲ ಮರುಪಾವತಿ ಮಾಡಿ ದಾಖಲೆಯನ್ನು ನಿರ್ಮಿಸಿದೆ. ಶ್ರೀ ಸತ್ಯನಾರಾಯಣಸ್ವಾಮಿ ಪೂಜೆಯನ್ನು ನಡೆಸಿ ಇಂದು ಪೂಜಾಫಲವು ನಮ್ಮ ತಾಲ್ಲೂಕಿನ ಎಲ್ಲಾ ಮಹಿಳೆಯರಿಗೆ ದೊರೆಯುವಂತೆ ಮಾಡಿದ್ದಾರೆ ಎಂದು ಅಭಿಮಾನದಿಂದ ಹೇಳಿದರು..

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಮಹಾಬಲ ಕುಲಾಲ್ ಪ್ರಗತಿಬಂಧು ಮಹಿಳಾ ಸ್ವಸಹಾಯ ಗುಂಪುಗಳಿಗೆ ದಾಖಲೆಗಳನ್ನು ಹಸ್ತಾಂತರಿಸಿದರು..

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ, ಮಂಡ್ಯ

error: