September 22, 2023

Bhavana Tv

Its Your Channel

ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರುವುದೇ ನನ್ನ ಕೊನೆಯ ಆಸೆ -ಎಚ್.ಡಿ.ದೇವೆಗೌಡ

ನಾಗಮಂಗಲ:- ಡಾ.ಬಿ.ಆರ್. ಅಂಬೇಡ್ಕರ್ ಅವರ ೧೩೧ನೇ ಜನ್ಮದಿನ ಪ್ರಯುಕ್ತ ಹಾಗೂ ನಾಗಮಂಗಲ ತಾಲೂಕು ಆಡಳಿತ ಸೌಧದ ಆವರಣದಲ್ಲಿ ಅಂಬೇಡ್ಕರ್ ಪ್ರತಿಮೆಗೆ ಪುಷ್ಪರ್ಚನೆ ಹಾಗೂ ಅಂಬೇಡ್ಕರ್ ಪ್ರತಿಮೆ ನಿರ್ಮಾಣಕ್ಕೆ ಸಹಕಾರ ನೀಡಿದ ಗಣ್ಯರಿಗೆ ಸನ್ಮಾನ ಕಾರ್ಯಕ್ರಮವನ್ನು ನಾಗಮಂಗಲದಲ್ಲಿ ಏರ್ಪಡಿಸಲಾಗಿತ್ತು

ಪಟ್ಟಣದ ಆಡಳಿತ ಸೌಧದ ಅವರಣದಲ್ಲಿ ಪ್ರತಿಷ್ಠಾಪಿಸಿರುವ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಭಾನುವಾರ ಮಧ್ಯಾಹ್ನ ಪುಷ್ಪಾರ್ಚನೆ ಮಾಡಿ ಗೌರವ ನಮನ ಸಲ್ಲಿಸಿದರು.
ಶಾಸಕ ಸುರೇಶ್ ಗೌಡ ಸೇರಿದಂತೆ ಹಲವರು ದಲಿತ ಮುಖಂಡರು ಜೊತೆಯಲ್ಲಿದ್ದರು. ನಂತರ ವೇದಿಕೆ ಕಾರ್ಯಕ್ರಮದಲ್ಲಿ ಜೆ.ಡಿ.ಎಸ್ ವರಿಷ್ಠ ದೇವೇಗೌಡರಿಗೆ ಸನ್ಮಾನಿಸಿ ಬೆಳ್ಳಿ ಕಿರೀಟಧಾರಣೆ ಮಾಡಲಾಯಿತು

ವೇದಿಕೆ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದ ಎಚ್.ಡಿ. ದೇವೇಗೌಡ ರವರು ಪಟ್ಟಣದಲ್ಲಿ ಅಂಬೇಡ್ಕರ್ ಪ್ರತಿಮೆ ಸ್ಥಾಪಿಸಲು ಉದ್ಭವಿಸಿದ್ದ ಹಲವು ತೊಡಕುಗಳನ್ನು ನಿವಾರಿಸಿ ಶಾಸಕ ಸುರೇಶ್ ಗೌಡ ನೇತೃತ್ವದಲ್ಲಿ ಪ್ರತಿಮೆ ಸ್ಥಾಪನೆ ಮಾಡಲಾಗಿದೆ. ಈ ಒಂದು ಮಹತ್ವದ ಕೆಲಸದಲ್ಲಿ ನನ್ನದೂ ಸೇವೆ’ ಇರಬಹುದು. ಸಂವಿಧಾನ ಶಿಲ್ಪಿ ಮಾನವತಾವಾದಿ ಮಹಾನ್ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಯನ್ನು ಪಟ್ಟಣದಲ್ಲಿ ನಿರ್ಮಾಣ ಮಾಡಿ ಬಹಳ ಪುಣ್ಯದ ಕೆಲಸವನ್ನು ಮಾಡುವ ಮೂಲಕ ಇಂದಿನ ಯುವ ಪೀಳಿಗೆಗೆ ಅವರ ತತ್ವ, ಆದರ್ಶವನ್ನು ತಿಳಿಯುವಂತೆ ಮಾಡಲಾಗಿದೆ
ಈ ಕಾರ್ಯದಲ್ಲಿ ಶ್ರಮಿಸಿದ ಎಲ್ಲರಿಗೂ ಅಭಿನಂದನೆಗಳನ್ನು ತಿಳಿಸುವುದಾಗಿ ಹೇಳಿದ ದೇವೇಗೌಡರು ಡಾ.ಬಿ.ಆರ್.ಅಂಬೇಡ್ಕರ್ ಕೆಳವರ್ಗದ ಜನರು ಸಮಾಜದ ಮುಖ್ಯ ವಾಹಿನಿಗೆ ಬರಲು ಶ್ರಮಿಸಿದ ಒಬ್ಬ ಮಹಾನ್ ವ್ಯಕ್ತಿ ಎಂದು ಬಣ್ಣಿಸಿದರು.

ತಮ್ಮ ಸ್ವಗ್ರಾಮದ ಇಂದಿನ ವಿಚಾರಗಳನ್ನು ಮೆಲುಕು ಹಾಕುತ್ತಾ ಜಾತಿ ವ್ಯವಸ್ಥೆ ವಿರುದ್ಧ ಹೋರಾಡಿದೆ ನಾನು ನನ್ನ ಗ್ರಾಮದಲ್ಲಿ ಕಂಟ್ರಾಕ್ಟರ್ ವೃತ್ತಿ ಮಾಡುವಾಗ ಪಾಪಯ್ಯ ಎಂಬ ವ್ಯಕ್ತಿಗೆ ಬೇರೋಬ್ಬರಿಂದ ಅನ್ಯಾಯವಾಗುತ್ತಿತ್ತು, ಇದನ್ನು ನೋಡಿ ೬೦ ವರ್ಷಗಳ ಹಿಂದೆಯೇ ನಾನು ಕೂಡ ಜಾತಿ ವ್ಯವಸ್ಥೆ ವಿರುದ್ಧ ಮತ್ತು ಶ್ರೀಮಂತರಿAದ ತುಳಿತಕ್ಕೆ ಒಳಗಾಗುವ ಬಡವರ ಪರವಾಗಿ ಹೋರಾಟ ಮಾಡಿದೆ. ಅದರ ಪರಿಣಾಮವೇ ಇಂದು ಇಲ್ಲಿಯವರೆಗೆ ಬರಲು ಸಾಧ್ಯವಾಯಿತು ಎಂದರು

ಪ್ರಸ್ತುತ ದಿನಗಳಲ್ಲಿಯೂ ನನ್ನ ಕಿವಿಯ ಮೇಲೆ ಬಿದ್ದ ಸಮಸ್ಯೆಗಳ ಬಗ್ಗೆ ಹೋರಾಟ ನಡೆಸುತ್ತೇನೆ, ಇಳಿಯ ವಯಸ್ಸಿನಲ್ಲೂ ನಾನು ಬಿಡುವುದಿಲ್ಲ. ಸಮಸ್ಯೆಗಳನ್ನು ಪರಿಹರಿಸುವ ಮೂಲಕ ಜನರಿಗೆ ಧ್ವನಿಯಾಗಿ ತುಳಿತಕ್ಕೊಳಗಾಗಿರುವವರಿಗೆ ನ್ಯಾಯ ದೊರಕಿಸಿದ್ದೇನೆ ಎಂದು ಹೇಳಿದರು

ಪ್ರಾದೇಶಿಕ ಪಕ್ಷದಿಂದ ಮಾತ್ರ ನೆಲ, ಜಲ ಸೇರಿದಂತೆ ನಾಡಿನ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ. ರಾಷ್ಟ್ರೀಯ ಪಕ್ಷಗಳು ಸಮಸ್ಯೆಗಳನ್ನು ಸಮಸ್ಯೆಯಾಗಿಯೇ ಉಳಿಸುತ್ತವೆಯೇ ವಿನಃ ಪರಿಹಾರ ಸೂಚಿಸುವುದಿಲ್ಲ. ಕಾವೇರಿ ನದಿ ನೀರಿನ ಅಂತಿಮ ತೀರ್ಪನ್ನು ವಿರೋಧಿಸಿ ಸುಪ್ರೀಂಕೋರ್ಟ್ಗೆ ಜೆಡಿಎಸ್ ಸಲ್ಲಿಸಿದ ಮೇಲ್ಮನವಿಯಿಂದಾಗಿ ೧೪ ಟಿ.ಎಂ.ಸಿ ನೀರು ರಾಜ್ಯಕ್ಕೆ ಹೆಚ್ಚುವರಿಯಾಗಿ ದೊರೆಯಿತು. ನೀರಿನ ವಿಷಯವಾಗಿ ನಾನು ನಡೆಸಿದ ಹೋರಾಟಕ್ಕೆ ಕಾಂಗ್ರೆಸ್-ಬಿಜೆಪಿ ಪಕ್ಷದವರು ಬೆಂಬಲ ಕೊಡಲಿಲ್ಲವೆಂದು ಬೇಸರ ವ್ಯಕ್ತಪಡಿಸಿದರು.

ಪಕ್ಷವನ್ನು ಬಲವರ್ಧನೆಗೊಳಿಸಿ: ನಾಡಿನ ನೆಲ, ಜಲ ಹಾಗೂ ನುಡಿಗಾಗಿ ಹೋರಾಟ ಮಾಡುತ್ತಿರುವ ಜೆಡಿಎಸ್ ಪಕ್ಷವನ್ನು ಬೆಳೆಸುವುದು ನಿಮ್ಮೆಲ್ಲರ ಹೊಣೆ, ಒಬ್ಬ ರೈತನ ಮಗನಾಗಿ ಹುಟ್ಟಿದ ನನಗಿರುವ ಒಂದು ಆಸೆ ಎಂದರೆ ಈ ಪಕ್ಷವನ್ನು ಬಲವಾಗಿ ಕಟ್ಟಿ ರಾಜ್ಯದಲ್ಲಿ ಅಧಿಕಾರಕ್ಕೆ ತರುವುದು. ಈ ಹಿನ್ನಲೆಯಲ್ಲಿ ಕ್ಷೇತ್ರದ ಜನರು ಶಾಸಕ ಸುರೇಶ್‌ಗೌಡರಿಗೆ ಹೆಚ್ಚು ಶಕ್ತಿ ತುಂಬಬೇಕು ಎಂದರು.

ದೇವನಹಳ್ಳಿ ಶಾಸಕ ನಿಸರ್ಗ ನಾರಾಯಣಸ್ವಾಮಿ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ನೆಲ್ಲಿಗೆರೆ ಬಾಲು, ಜಿ.ಪಂ.ಮಾಜಿ ಸದಸ್ಯರಾದ ಶಿವಪ್ರಕಾಶ್, ಮುತ್ತಣ್ಣ ಪುರಸಭೆ ಅಧ್ಯಕ್ಷೆ ಆಶಾವಿಜಯಕುಮಾರ್, ಉಪಾಧ್ಯಕ್ಷ ಜಾಫರ್, ಸ್ಥಾಯಿಸಮಿತಿ ಅಧ್ಯಕ್ಷ ಎಂ.ಸಿ.ಚನ್ನಪ್ಪ, ಸದಸ್ಯ ವರದರಾಜು, ರಾಜ್ಯ ಪಡಿತರ ವಿತರಕರ ಸಂಘದ ಅಧ್ಯಕ್ಷ ಟಿ.ಕೃಷ್ಣಪ್ಪ, ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ಡಿ.ಟಿ.ಶ್ರೀನಿವಾಸಯ್ಯ, ಪರಿಶಿಷ್ಟ ಜಾತಿ ಮತ್ತು ಪಂಗಡದ ಯುವ ಅಧ್ಯಕ್ಷ ಲೋಹಿತ್, ರಾಜ್ಯ ದಸಂಸ ಸಂಚಾಲಕ ವೆಂಕಟಗಿರಿಯಯ್ಯ, ದಲಿತ ಮುಖಂಡರಾದ ಮುಳಕಟ್ಟೆ ಶಿವರಾಮಯ್ಯ, ಸೋಮಶೇಖರ್, ಅನ್ನದಾನಿ, ಕಂಚಿನಕೋಟೆ ಮೂರ್ತಿ, ಮಂಜು, ನಾಗೇಶ್, ಕೋಟಿ ರವಿ, ರಮೇಶ್ ಸೇರಿದಂತೆ ಹಲವರಿದ್ದರು.

ವರದಿ: ಚಂದ್ರಮೌಳಿ ನಾಗಮಂಗಲ

error: