April 25, 2024

Bhavana Tv

Its Your Channel

ಶ್ರೀ ಚೌಡೇಶ್ವರಿ ಅಮ್ಮನವರ ದೇವಸ್ಥಾನದಲ್ಲಿ ನಡೆದ ಗೋಪುರ ನವೀಕರಣ, ಕಳಶ ಪ್ರತಿಷ್ಠಾಪನೆ, ಮಹಾ ಚಂಡಿಕಾಹೋಮ, 82 ನೇ ವರ್ಧಂತಿ ಹಾಗೂ ಜ್ಯೋತಿ ಮಹೋತ್ಸವ

ಮೈಸೂರು ಜಿಲ್ಲೆಯ ಸರಗೂರಿನ ತೊಗಟವೀರ ಸಮಾಜದ ಸಂಘಟನೆ ಒಗ್ಗಟ್ಟು ರಾಜ್ಯಕ್ಕೆ ಮಾದರಿಯಾಗಿದೆ. ನೇಕಾರ ಸಮುದಾಯಗಳ ಬಂಧುಗಳು ಶಿಕ್ಷಣದ ಜ್ಞಾನ ಪಡೆದು ಸಮಾಜದ ಮುಖ್ಯವಾಹಿನಿಗೆ ಬಂದು ಸಾಧನೆ ಮಾಡಲು ಅಶ್ವತ್ಥನಾರಾಯಣ ಕರೆ ನೀಡಿದರು

ರಾಜ್ಯದಲ್ಲಿ 60 ಲಕ್ಷಕ್ಕೂ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿರುವ ನೇಕಾರ ತೊಗಟವೀರ ಸಮಾಜದ ಬಂಧುಗಳು ಸಂಘಟಿತರಾಗಿ ಸಂವಿಧಾನಬದ್ಧವಾದ ಸೌಲಭ್ಯಗಳನ್ನು ಪಡೆದುಕೊಂಡು ಅಭಿವೃದ್ಧಿಯ ಪಥದತ್ತ ಸಾಗಬೇಕು ಎಂದು ಬೆಂಗಳೂರು ವಿಮಾನ ನಿಲ್ದಾಣ ಪ್ರಾಧಿಕಾರದ ಮಾಜಿಅಧ್ಯಕ್ಷ ಅಶ್ವತ್ಥನಾರಾಯಣ ಕರೆ ನೀಡಿದರು…

ಅವರು ಮೈಸೂರು ಜಿಲ್ಲೆಯ ಸರಗೂರು ಪಟ್ಟಣದಲ್ಲಿ ನಡೆದ ಶ್ರೀ ಚೌಡೇಶ್ವರಿ ಅಮ್ಮನವರ ದೇವಸ್ಥಾನದ ಗೋಪುರ ನವೀಕರಣ, ಕಳಶ ಪ್ರತಿಷ್ಠಾಪನೆ, ಮಹಾ ಚಂಡಿಕಾಹೋಮ, 82 ನೇ ವರ್ಧಂತಿ ಹಾಗೂ ಜ್ಯೋತಿ ಮಹೋತ್ಸವದಲ್ಲಿ ಭಾಗವಹಿಸಿ ಮಾತನಾಡಿದರು…

ನೇಕಾರ ತೊಗಟವೀರ ಕುಲಬಾಂಧವರು ತಮ್ಮ ಕುಲಕಸುಬಾದ ನೇಯ್ಗೆಯ ಮೂಲಕ ಸಮಾಜದಲ್ಲಿ ಮಾನವರಾದ ನಮಗೆ ಮಾನ ಮುಚ್ಚಲು ಬೇಕಾದ ವಸ್ತ್ರಗಳು ಹಾಗೂ ಬಟ್ಟೆಗಳನ್ನು ತಯಾರಿಸಿಕೊಡುತ್ತಾ ಸ್ವಾಭಿಮಾನಿ ಜೀವನವನ್ನು ನಡೆಸುತ್ತಿದ್ದಾರೆ. ಸಮಾಜದಲ್ಲಿ ಹಿಂದುಳಿದಿದ್ದು ಅಲ್ಪಸಂಖ್ಯಾತರಾಗಿರುವ ತೊಗಟವೀರ ಬಂಧುಗಳು ಯಾರಿಗೂ ಕಡಿಮೆಯಿಲ್ಲ, ಹಾಲಿಗೆ ಸಕ್ಕರೆ ಬೆರೆತರೆ ಹಾಲಿನ ರುಚಿಯು ಹೆಚ್ಚಾಗುವಂತೆ ಸಮಾಜದಲ್ಲಿನ ಎಲ್ಲಾ ಜಾತಿ ವರ್ಗಗಳ ಜನರ ಜೊತೆ ಸೌಹಾರ್ಧಯುತವಾದ ಸಹಬಾಳ್ವೆಯ ಜೀವನ ನಡೆಸುತ್ತಾ ಇತರರಿಗೆ ಮಾದರಿಯಾಗಿದ್ದಾರೆ. ತೊಗಟವೀರ ಸಮಾಜದ ಬಂಧುಗಳು ವೃತ್ತಿ ಬದುಕಿನ ಜೊತೆಗೆ ತಮ್ಮ ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ಕಳಿಸಿ ವಿದ್ಯಾವಂತರನ್ನಾಗಿ ಮಾಡಿಸಿ ಸಂಸ್ಕಾರಯುತವಾದ ಸಾರ್ಥಕ ಜೀವನ ನಡೆಸಲು ಅವಕಾಶ ಮಾಡಿಕೊಡಬೇಕು. ನಾವು ಹಿಂದುಳಿದ ಜನಾಂಗದವರು ನಾವು ಕೀಳು ಎಂಬ ಮನೋಭಾವನೆ ಯನ್ನು ಅಳಿಸಿಹಾಕಿ ಆತ್ಮವಿಶ್ವಾಸದಿಂದ ಸ್ವಾಭಿಮಾನಿ ಜೀವನ ನಡೆಸಬೇಕು ಎಂದು ಅಶ್ವತ್ಥನಾರಾಯಣ ಕರೆ ನೀಡಿದರು..

ಅಖಿಲ ಭಾರತ ತೊಗಟವೀರ ಸಮಾಜದ ಮಹಾಮಂಡಳದ ಅಧ್ಯಕ್ಷರಾದ ಬೆಂಗಳೂರು ಬೃಹತ್ ಮಹಾನಗರ ಪಾಲಿಕೆಯ ಮಾಜಿಉಪಮಹಾಪೌರರಾದ ಹರೀಶ್ ವೇದಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ತೊಗಟವೀರ ಸಮಾಜ ಸೇರಿದಂತೆ ನೇಕಾರಿಕೆ ಕಸುಬು ಮಾಡುವ ದೇವಾಂಗ, ಪದ್ಮಶಾಲಿ, ಪಟ್ಟಸಾಲಿ, ಕುರುಹಿನಶೆಟ್ಟಿ, ಕುಳುವಸಾಲಿ ಸೇರಿದಂತೆ ಏಳು ಜಾತಿಗಳು ಒಂದಾಗಿ ಸಂಘಟಿತರಾಗಬೇಕು. ಸಂಘಟನೆಯ ಸಂಘಟಿತ ಹೋರಾಟದಲ್ಲಿ ಶಕ್ತಿಯು ಹೆಚ್ಚಾಗುವುದರಿಂದ ನೇಕಾರ ಸಮಾಜದ ಎಲ್ಲಾ ಬಂಧುಗಳು ತಮ್ಮಲ್ಲಿನ ವೈಮನಸ್ಸು ಹಾಗೂ ಭಿನ್ನಮತ ಮರೆತು ಕೂಡಿ ಬಾಳುವುದನ್ನು ಕಲಿಯಬೇಕು ಎಂದು ಮನವಿ ಮಾಡಿದ ಹರೀಶ್ ತೊಗಟವೀರ ಸಮಾಜದ ಬಂಧುಗಳು ಮೈಸೂರು ಮಹಾನಗರದಲ್ಲಿ ಸಿಎ ಸೈಟ್ ಪಡೆದುಕೊಂಡು ಸಮಾಜದ ಬಡ ಮಕ್ಕಳ ಶೈಕ್ಷಣಿಕ ವಿಕಾಸಕ್ಕಾಗಿ ನಿರ್ಮಿಸಲು ಹೊರಟಿರುವ ವಿದ್ಯಾರ್ಥಿ ನಿಲಯದ ಕಟ್ಟಡಕ್ಕೆ ವಯಕ್ತಿಕವಾಗಿ ಸಹಾಯ ಮಾಡುವ ಜೊತೆಗೆ ಸರ್ಕಾರದಿಂದ ವಿಶೇಷ ಅನುದಾನ ದೊರಕಿಸಿಕೊಡಲು ಶ್ರಮಿಸುವುದಾಗಿ ಹೇಳಿದರು…
ರಾಜ್ಯ ತೊಗಟವೀರ ಕ್ಷತ್ರಿಯ ಸಂಘ ಹಾಗೂ ನೇಕಾರ ಸಮುದಾಯಗಳ ಒಕ್ಕೂಟದ ಅಧ್ಯಕ್ಷರಾದ ಬಿ.ಎಸ್.ಸೋಮಶೇಖರ್ ಮಾತನಾಡಿ ನೇಕಾರಿಕೆ ಕಸುಬು ಮಾಡುವ ಎಲ್ಲಾ ಸಮುದಾಯಗಳು ಒಂದಾಗಿ ಹೆಜ್ಜೆಹಾಕುವ ಸಮಯ ಈಗ ಬಂದಿದೆ. ನೇಕಾರ ಸಮಾಜಗಳ ಒಗ್ಗೂಡುವಿಕೆ ಈಗ ಅಗತ್ಯವಾಗಿದ್ದು ನೇಕಾರರ ಸಂಘಟನೆಗಳ ಶಕ್ತಿ ಪ್ರದರ್ಶನ ಮಾಡಲು ಸಧ್ಯದಲ್ಲಿಯೇ ಸಮುದಾಯಗಳ ಲಕ್ಷಾಂತರ ಜನರನ್ನು ಒಗ್ಗೂಡಿಸಿ ಬೃಹತ್ ಸಮಾವೇಶ ಮಾಡಿಸಿ ಶಕ್ತಿಪ್ರದರ್ಶನ ಮಾಡುವುದಾಗಿ ಘೋಷಿಸಿದ ಸೋಮಶೇಖರ್ ಸರಗೂರು ಪಟ್ಟಣ ಹಾಗೂ ಕೃಷ್ಣರಾಜಪೇಟೆ ಪಟ್ಟಣದ ತೊಗಟವೀರ ಸಮಾಜದ ಸಂಘಟನೆಯು ಸಮಾಜದ ಎಲ್ಲಾ ಪಟ್ಟಣಗಳಿಗೆ ಮಾದರಿಯಾಗಿದೆ ಎಂದು ಅಭಿಮಾನದಿಂದ ಹೇಳಿದರು.

ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿದ್ದ ದೊಡ್ಡಬಳ್ಳಾಪುರದ ತಪಸೀಹಳ್ಳಿಯ ಪುಷ್ಪಾಂಡಜ ಮುನಿ ಆಶ್ರಮದ ಪೀಠಾಧಿಪತಿಗಳಾದ ಶ್ರೀ ಶ್ರೀ ದಿವ್ಯಜ್ಞಾನಾನಂದಗಿರಿ ಸ್ವಾಮೀಜಿಗಳು ಆಶೀರ್ವಚನ ನೀಡಿ ಮಾತನಾಡಿ ತೊಗಟವೀರ ಸಮಾಜದ ಬಂಧುಗಳು ಜಾಗೃತರಾಗಿ ಶಿಕ್ಷಣದ ಜ್ಞಾನದ ಬೆಳಕಿನ ಶಕ್ತಿಯ ಮೂಲಕ ಸಮಾಜದ ಮುಖ್ಯವಾಹಿನಿಗೆ ಬಂದು ಸಾಧನೆ ಮಾಡಬೇಕು. ಸಾಧನೆ ಮಾಡಲು ಕಷ್ಠವಾದರೂ ನ್ಯಾಯ, ನೀತಿ, ಧರ್ಮ ಹಾಗೂ ಸತ್ಯದ ಹಾದಿಯಲ್ಲಿಯೇ ಮುನ್ನಡೆಯಬೇಕು. ಅಸತ್ಯ, ಸುಳ್ಳು, ಮೋಸ ವಂಚನೆ ಹಾಗೂ ಅಧರ್ಮಕ್ಕೆ ತಾತ್ಕಾಲಿಕವಾಗಿ ಗೆಲುವಾದರೂ ಅಂತಿಮವಾಗಿ ಗೆಲುವಿನ ನಗೆ ಬೀರುವುದು ಧರ್ಮ ಆದ್ದರಿಂದ ಸಮಾಜದ ಯುವಜನರು ಧರ್ಮದ ದಾರಿಯಲ್ಲಿಯೇ ಸಾಗಿ ಗುರಿಮುಟ್ಟಬೇಕು ಎಂದು ಮನವಿ ಮಾಡಿ, ಗುರುಪೀಠದಲ್ಲಿ ನಡೆಯುತ್ತಿರುವ ಶಿಕ್ಷಣ ಸಂಸ್ಥೆಯಲ್ಲಿ ಬಡ ಮಕ್ಕಳಿಗೆ ಉಚಿತ ಶಿಕ್ಷಣವನ್ನು ನೀಡಲಾಗುತ್ತಿದೆ. ಸರಗೂರಿನಿಂದಲೂ ಇಬ್ಬರು ಮಕ್ಕಳಿಗೆ ವಸತಿ ಸಹಿತ ಶಿಕ್ಷಣ ನೀಡಲಾಗುವುದು ಸಮಾಜದ ಮುಖಂಡರು ಗುರುತಿಸಿ ಕೊಡಬೇಕು. ಗುರುಪೀಠ ಹಾಗೂ ಮಠಕ್ಕೆ ಸಮಾಜದ ಬಂಧುಗಳು ಕೈಲಾದ ಸಹಾಯ ಮಾಡಬೇಕು.. ವರ್ಷಕ್ಕೆ ಒಮ್ಮೆಯಾದರೂ ಶ್ರೀ ಮಠದ ಕಾರ್ಯಕ್ರಮದಲ್ಲಿ ಭಾಗವಹಿಸಿ ನೈತಿಕವಾಗಿ ಬೆಂಬಲ ನೀಡಬೇಕು ಎಂದು ಶ್ರೀಗಳು ಹೇಳಿದರು..

ಸರಗೂರು ತೊಗಟವೀರ ಸಮಾಜದ ಅಧ್ಯಕ್ಷ ರವೀಂದ್ರಪ್ರಸಾದ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಮಾಜದ ಮುಖಂಡರಾದ ಎಸ್.ವಿ.ನಾರಾಯಣಸ್ವಾಮಿ, ಅಚ್ಚಪ್ಪ ನಾಗರಾಜು, ವಿಜಯಕುಮಾರ್, ಕೃಷ್ಣಪ್ಪ, ಎಸ್.ಆರ್.ಮುನಿರಾಜು, ಎ.ಎಸ್.ರಾಜು, ರಾಜಣ್ಣ, ಸಿ.ವೆಂಕಟಾಚಲಶೆಟ್ಟಿ, ಎಸ್.ಎನ್.ಸತ್ಯನಾರಾಯಣ, ಕೆ.ಚಲುವಕೃಷ್ಣಶೆಟ್ಟಿ, ಹೆಚ್.ಎಂ.ಚAದ್ರಶೇಖರ್, ದೊಡ್ಡಬಳ್ಳಾಪುರ ಸುರೇಶ್, ಬೆಂಗಳೂರಿನ ಸೂರ್ಯನಾರಾಯಣ, ಜೀವಾನಂದ್, ರವಿಕುಮಾರ್, ಸರಗೂರಿನ ಮುಖಂಡರಾದ ಸಿ.ರಂಗಧಾಮ, ಎಸ್.ಕೆ.ಮುಕುಂದರಾಜು, ಚ.ಬಾಲಸುಬ್ರಹ್ಮಣ್ಯ, ಸುಂದರರಾಜು, ಆದಿನಾರಾಯಣಶೆಟ್ಟಿ, ವೆಂಕಟರಾಜು, ಎಸ್.ಆರ್.ನಾಗಾರಾಮ್, ಉಧ್ಯಮಿ ಕೆ.ಆರ್.ಚಂದ್ರಶೇಖರ್, ಮಾರಿಗುಡಿ ಚಂದ್ರಶೇಖರ್, ಮಧುಸೂದನ್, ಗೋವಿಂದರಾಜು, ಕೆ.ಎಸ್.ಮಲ್ಲಿಕಾರ್ಜುನ ಮತ್ತು ರಾಜ್ಯ ಹಿಂದುಳಿದ ವರ್ಗಗಳ ಮಾನ್ಯತೆ ಪಡೆದ ಸಂಪಾದಕರ ವರದಿಗಾರರ ಸಂಘದ ರಾಜ್ಯಾಧ್ಯಕ್ಷ ಡಾ.ಕೆ.ಆರ್.ನೀಲಕಂಠ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ, ಮಂಡ್ಯ

error: