March 25, 2024

Bhavana Tv

Its Your Channel

ಖ್ಯಾತ ನೃತ್ಯ ಸಂಯೋಜಕಿ ಸರೋಜ್ ಖಾನ್ ಇನ್ನಿಲ್ಲ.

ಮುಂಬೈ :ಬಾಲಿವುಡ್‍ನ ಹಿರಿಯ ನೃತ್ಯ ಸಂಯೋಜಕಿ ಸರೋಜ್ ಖಾನ್ (71) ಹೃದಯಾಘಾತದಿಂದ ಮುಂಜಾನೆ ಮೃತಪಟ್ಟಿದ್ದಾರೆ. ಕೆಲ ದಿನಗಳ ಹಿಂದೆ ಸರೋಜ್ ಖಾನ್ ಅವರು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. ಜೂನ್‌ 20ರಂದು ಮುಂಬೈನ ಬಾಂದ್ರಾದಲ್ಲಿರುವ ಗುರು ನಾನಕ್ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿತ್ತು. ಆದರೆ ಅವರಿಗೆ ನೀಡುತ್ತಿದ್ದ ಚಿಕಿತ್ಸೆ ಫಲಕಾರಿಯಾಗದೇ ಹೃದಯಾಘಾತವಾಗಿ ನಿಧನರಾಗಿದ್ದಾರೆ.ಮಲಾಡ್‌ ಮಾಲ್ವಾನಿಯಲ್ಲಿ ಇಂದು ಸಂಜೆ ಅಂತ್ಯ ಸಂಸ್ಕಾರ ನಡೆಯಲಿದೆ.

ಬಾಲಿವುಡ್ ಸಿನಿಮಾ ರಂಗದಲ್ಲಿ ಮಾಸ್ಟರ್ ಜೀ ಎಂದೇ ಕರೆಯಲ್ಪಡುತ್ತಿದ್ದ ಸರೋಜ್ ಖಾನ್, ‘ನಜರಾನಾ’ ಸಿನಿಮಾದಲ್ಲಿ ಬಾಲನಟಿಯಾಗಿ ಸಿನಿಮಾ ರಂಗ ಪ್ರವೇಶಿಸಿದ್ದರು. ಆಗ ಅವರಿಗೆ 3 ವರ್ಷ. 1950ರಲ್ಲಿ ಅವರು ಸಿನಿಮಾಗಳಲ್ಲಿನ ನೃತ್ಯ ತಂಡಗಳಲ್ಲಿ ಸಹ ನರ್ತಕಿಯಾಗಿ ಕಾಣಿಸಿಕೊಂಡರು.

ನೃತ್ಯ ಸಂಯೋಜಕ ಬಿ.ಸೋಹನ್‌ಲಾಲ್ ಅವರೊಂದಿಗೆ ಕೆಲಸ ನಿರ್ವಹಿಸುತ್ತಾ ನೃತ್ಯ ಕಲಿತ ಖಾನ್ ಆಮೇಲೆ ನೃತ್ಯ ಸಂಯೋಜನೆಯಲ್ಲಿ ತೊಡಗಿಸಿಕೊಂಡರು. ಬಾಲಿವುಡ್‌ ನೃತ್ಯ ಸಂಯೋಜನೆಯಲ್ಲಿ ಗಂಡಸರೇ ಅಧಿಪತ್ಯ ಸ್ಥಾಪಿಸಿದ್ದ ಕಾಲದಲ್ಲಿ ಸಹ ನೃತ್ಯ ಸಂಯೋಜಕಿಯಾಗಿ ಕೆಲಸ ಮಾಡಿದ್ದ ಖಾನ್, ಆಮೇಲೆ ಗೀತಾ ಮೇರಾ ನಾಮ್ (1974) ಸಿನಿಮಾದಲ್ಲಿ ನೃತ್ಯ ಸಂಯೋಜನೆ ಮಾಡುವ ಮೂಲಕ ನೃತ್ಯ ಸಂಯೋಜಕಿ ಆದರು.

ನಟಿ ಶ್ರೀದೇವಿ ಅವರ ಸಿನಿಮಾಗಳಿಗೆ ನೃತ್ಯ ಸಂಯೋಜನೆ ಮಾಡಿದ ನಂತರವೇ ಖಾನ್ ಪ್ರತಿಭೆ ಪ್ರಸಿದ್ಧಿ ಪಡೆದದ್ದು. ಮಿಸ್ಟರ್ ಇಂಡಿಯಾ ಸಿನಿಮಾದ ಹವಾ ಹವಾಯೀ (1987), ನಗೀನಾ (1986), ಚಾಂದ್ನೀ (1989) ಸಿನಿಮಾದಲ್ಲಿ ಸರೋಜ್ ಖಾನ್ ನೃತ್ಯ ಸಂಯೋಜನೆ ಇದೆ. ಮಾಧುರಿ ದೀಕ್ಷಿತ್ ಅವರ ತೇಜಾಬ್ (1988) ಚಿತ್ರದಲ್ಲಿನ ಏಕ್ ದೋ ತೀನ್, ಥಾಣೇದಾರ್ (1990) ಸಿನಿಮಾದ ಟಮ್ಮಾ ಟಮ್ಮಾ ಲೋಗೇ, ಬೇಟಾ (1992) ಸಿನಿಮಾದ ಧಕ್ ಧಕ್ ಕರ್‌ನೇ ಲಗಾ ಹಾಡಿಗೆ ನೃತ್ಯ ಸಂಯೋಜಿಸಿದ್ದು ಇದೇ ಸರೋಜ್ ಖಾನ್.

2014ರಲ್ಲಿ ಖಾನ್ ಅವರು ಮಾಧುರಿ ದೀಕ್ಷಿತ್ ನಟನೆಯ ಗುಲಾಬ್ ಗ್ಯಾಂಗ್ ಸಿನಿಮಾಗೆ ನೃತ್ಯ ಸಂಯೋಜನೆ ಮಾಡಿದ್ದರು. ರಿಯಾಲಿಟಿ ಶೋಗಳಲ್ಲಿಯೂ ಇವರು ತೀರ್ಪುಗಾರರಾಗಿ ಕಾಣಿಸಿಕೊಂಡಿದ್ದರು.

ಸುಮಾರು 2,000ಕ್ಕಿಂತಲೂ ಹೆಚ್ಚು ಹಾಡುಗಳಿಗೆ ನೃತ್ಯ ಸಂಯೋಜನೆ ಮಾಡಿದ್ದ ಸರೋಜ್ ಖಾನ್ ಅವರಿಗೆ ಮೂರು ಬಾರಿ ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ.

ಸರೋಜ್ ಖಾನ್, ಪತಿ ಸೋಹನ್‌ಲಾಲ್, ಪುತ್ರ ಹಮೀದ್ ಖಾನ್ ಹಾಗೂ ಪುತ್ರಿ ಹೀನಾ ಖಾನ್ ಅವರನ್ನು ಅಗಲಿದ್ದಾರೆ.

error: