March 29, 2024

Bhavana Tv

Its Your Channel

ಮಧ್ಯಪ್ರದೇಶ ರಾಜ್ಯಪಾಲ ಲಾಲ್‌ಜಿ ಟಂಡನ್‌ ನಿಧನ.

ಲಕ್ನೊ:- ಮಧ್ಯಪ್ರದೇಶದರಾಜ್ಯಪಾಲರಾದ ಲಾಲ್‌ಜಿ ಟಂಡನ್‌ ವಿಧಿವಶರಾಗಿದ್ದಾರೆ. ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಜೂನ್ ತಿಂಗಳಿನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಮಂಗಳವಾರ ಬೆಳಗ್ಗೆ ಲಾಲ್‌ಜಿ ಟಂಡನ್ (85) ನಿಧನ ಹೊಂದಿದ್ದಾರೆ. ಟ್ವೀಟರ್‌ನಲ್ಲಿ ಈ ಕುರಿತು ಅವರ ಪುತ್ರ ಅಶುತೋಷ್ ಟಂಡನ್ ಮಾಹಿತಿ ನೀಡಿದ್ದಾರೆ.

ಉಸಿರಾಟದ ತೊಂದರೆ, ಜ್ವರ ಮತ್ತು ಮೂತ್ರಕೋಶದ ತೊಂದೆಯ ಕಾರಣದಿಂದಾಗಿ ಲಾಲ್‌ಜಿ ಟಂಡನ್‌ ಅವರನ್ನು ಜೂನ್ 11ರಂದು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅವರಿಗೆ ಸಣ್ಣ ಶಸ್ತ್ರ ಚಿಕಿತ್ಸೆಯನ್ನು ನಡೆಸಲಾಗಿತ್ತು. ಆದರೆ, ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿರಲಿಲ್ಲ.

“ಜುಲೈ 16 ರಂದು ಅವರ ಆರೋಗ್ಯ ಸ್ಥಿತಿ ಮತ್ತೆ ಹದಗೆಟ್ಟಿತ್ತು. ವೆಂಟಿಲೇಟರ್ ಅಳವಡಿಸಿದ್ದರೂ ಅವರ ದೇಹ ಸ್ಪಂದಿಸಿರಲಿಲ್ಲ. ಶ್ವಾಸಕೋಶ, ಮೂತ್ರಪಿಂಡ ಮತ್ತು ಯಕೃತ್ ಸರಿಯಾಗಿ ಕಾರ್ಯನಿರ್ವಹಿಸದೆ ದಿನದಿಂದ ದಿನಕ್ಕೆ ಪರಿಸ್ಥಿತಿ ಕೈಮಿರಿತ್ತು. ಅವರ ಸ್ಥಿತಿ ಸಂಪೂರ್ಣ ಹದಗೆಟ್ಟಿತ್ತು. ಪರಿಣಾಮ ಇಂದು ಮೃತರಾಗಿದ್ದಾರೆ’ ಎಂದು ಚಿಕಿತ್ಸೆ ನೀಡಿದ ವೈದ್ಯರು ತಿಳಿಸಿದ್ದಾರೆ. ಲಾಲ್ಜಿ ಟಂಡನ್ ಅವರ ಪುತ್ರ ಅಶುತೋಷ್ ಟಂಡನ್ ಟ್ವಿಟ್ಟರ್ ನಲ್ಲಿ ಈ ಸುದ್ದಿಯನ್ನು ತಿಳಿಸುವ ಮೂಲಕ ಲಾಲ್ಜಿ ಟಂಡನ್ ಅವರ ಮರಣವನ್ನು ಖಚಿತಪಡಿಸಿದ್ದಾರೆ.

ಟಂಡನ್ ಅವರ ಅನಾರೋಗ್ಯದ ನಂತರ ಉತ್ತರ ಪ್ರದೇಶದ ರಾಜ್ಯಪಾಲ ಆನಂದಿಬೆನ್ ಪಟೇಲ್ ಅವರಿಗೆ ಮಧ್ಯಪ್ರದೇಶ ರಾಜ್ಯದ ಹೆಚ್ಚುವರಿ ಉಸ್ತುವಾರಿ ನೀಡಲಾಗಿತ್ತು.

ಲಕ್ನೋದಲ್ಲಿ ಹುಟ್ಟಿ ಬೆಳೆದ ಟಂಡನ್ ಸಣ್ಣ ವಯಸ್ಸಿನಲ್ಲೇ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್‌) ಮತ್ತು ಹಿಂದಿನ ಜನ ಸಂಘದೊಂದಿಗೆ ಸಂಬಂಧ ಬೆಳೆಸಿದ್ದರು. 1970 ರ ದಶಕದ ಆರಂಭದಲ್ಲಿ ಕಾರ್ಪೋರೇಟರ್ ಆಗಿ ಪ್ರಾರಂಭವಾದ ಟಂಡನ್ ಒಂದು ದಶಕದ ನಂತರ ಯುಪಿ ಶಾಸಕಾಂಗದ ಮೇಲ್ಮನೆಗೆ ಪ್ರವೇಶಿಸಿದರು. 1991 ರಲ್ಲಿ ದಿವಂಗತ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಲಕ್ನೋ ಕ್ಷೇತ್ರದಿಂದ ಚುನಾವಣಾ ಸ್ಪರ್ಧೆಸಿದ್ದಾಗ ಟಂಡನ್ ಅವರು ಅಟಲ್ ಬಿಹಾರಿ ವಾಜಪೇಯಿ ಅವರ ಚುನಾವಣಾ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸಿದ್ದರು.

ಅನಾರೋಗ್ಯದ ಕಾರಣ ವಾಜಪೇಯಿ ಕ್ರಮೇಣ ರಾಜಕೀಯ ರಂಗದಿಂದ ಹಿಂದೆ ಸರಿದಂತೆ, 2009 ರ ಸಂಸತ್ ಚುನಾವಣೆಯಲ್ಲಿ ಲಕ್ನೋದಿಂದ ಬಿಜೆಪಿ ಅಭ್ಯರ್ಥಿಯಾಗಿ ಅವರನ್ನು ಬದಲಿಸಲು ಟಂಡನ್ ಸಹಜ ಆಯ್ಕೆಯಾಗಿದ್ದರು. ಕಾಂಗ್ರೆಸ್ ನ ರೀಟಾ ಬಹುಗುಣ ಜೋಶಿ ವಿರುದ್ಧ 40,000 ಮತಗಳ ಅಂತರದಿಂದ 15 ನೇ ಲೋಕಸಭೆಗೆ ಆಯ್ಕೆಯಾದರು.

ಆದರೆ, 2014 ರಲ್ಲಿ ರಾಜ್‌ನಾಥ್‌ ಸಿಂಗ್ ಅವರಿಗೆ ದಾರಿಮಾಡಿಕೊಡಬೇಕು ಎಂಬ ನಿಟ್ಟಿನಲ್ಲಿ ಟಂಡನ್ ಅವರಿಗೆ ಚುನಾವಣೆಯಲ್ಲಿ ಟಿಕೆಟ್ ನಿರಾಕರಿಸಲಾಗಿತ್ತು. ಹೀಗಾಗಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರ ಯುಗದಲ್ಲಿ “ಅಟಲ್ ಸ್ಕೂಲ್ ಆಫ್ ಪಾಲಿಟಿಕ್ಸ್” ನಲ್ಲಿ ಪರಿಣಿತಿ ಹೊಂದಿದ್ದ ಟಂಡನ್ ಅವರ ರಾಜಕೀಯ ಪ್ರಯಾಣದ ಇದರೊಂದಿಗೆ ಅಂತ್ಯ ಎಂದೇ ಅನೇಕರು ಭಾವಿಸಿದ್ದರು.

ಆದರೂ, ಟಂಡನ್ ರಾಜಕೀಯ ತಾಳ್ಮೆ ವ್ಯರ್ಥವಾಗಲಿಲ್ಲ. ಅವರನ್ನು ಆಗಸ್ಟ್ 2018 ರಲ್ಲಿ ಬಿಹಾರ ರಾಜ್ಯಪಾಲರನ್ನಾಗಿ ನೇಮಕ ಮಾಡಲಾಗಿತ್ತು. 2019 ರಲ್ಲಿ ಮಧ್ಯಪ್ರದೇಶಕ್ಕೆ ಸ್ಥಳಾಂತರಿಸಲಾಗಿತ್ತು. ಆದರೆ, ರಾಜ್ಯಪಾಲರಾಗಿ ಎರಡು ವರ್ಷವನ್ನು ಪೂರೈಸುವ ಮೊದಲೇ ವಾಜಪಾಯಿ ಕಾಲದ ಮತ್ತೊಂದು ಕೊಂಡಿ ಕಳಚಿದೆ ಎಂದು ಅನೇಕರು ಲಾಲ್ಜಿ ಟಂಡನ್ ಅವರ ಮರಣಕ್ಕೆ ಸಂತಾಪ ಸೂಚಿಸಿದ್ದಾರೆ.

error: