April 19, 2024

Bhavana Tv

Its Your Channel

ಒಂದೇ ದಿನ ೮೩ ಸಾವಿರ ಮಂದಿಗೆ ಸೋಂಕು ಬೆಚ್ಚಿಬಿದ್ದ ಭಾರತ

ನವದೆಹಲಿ:ದೇಶದಲ್ಲಿ ಕೊರೊನಾ ಮಹಾಮಾರಿಯ ಅಬ್ಬರ ಹೆಚ್ಚಾಗುತ್ತಲೇ ಇದೆ. ಕಳೆದ ೨೪ ಗಂಟೆಗಳ ಅವಧಿಯಲ್ಲಿ ೮೩ ಸಾವಿರಕ್ಕೂ ಹೆಚ್ಚು ಹೊಸ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ಸೋಂಕು ಪತ್ತೆಯಾದ ನಂತರ ಇದೇ ಮೊದಲ ಬಾರಿಗೆ ಒಂದೇ ದಿನದಲ್ಲಿ ಗರಿಷ್ಠ ಪ್ರಮಾಣದಲ್ಲಿ ಏರಿಕೆಯಾಗಿರುವ ದಾಖಲೆಯನ್ನು ಸೃಷ್ಟಿಸಿದೆ.
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಇಂದು ಬೆಳಿಗ್ಗೆ ನೀಡಿರುವ ಮಾಹಿತಿಯ ಅನ್ವಯ ದೇಶದಲ್ಲಿ ಕಳೆದ ೨೪ ಗಂಟೆಗಳ ಅವಧಿಯಲ್ಲಿ ೮೩,೩೩೩ ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಇದರೊಂದಿಗೆ ಒಟ್ಟಾರೆ ದೇಶದಲ್ಲಿ ಸೋಂಕಿತರ ಸಂಖ್ಯೆ ಸುಮಾರು ೩೯ ಲಕ್ಷದತ್ತ ಸಾಗುತ್ತಿರುವುದು ದೇಶವಾಸಿಗಳನ್ನು ತಲ್ಲಣಗೊಳಿಸಿದೆ.
ದೇಶದಲ್ಲಿ ಇದೀಗ ೩೮,೫೩,೪೦೬ ಸೋಂಕು ಪ್ರಕರಣಗಳು ದಾಖಲಾಗಿವೆ. ಕಳೆದ ಒಂದು ದಿನದ ಅವಧಿಯಲ್ಲಿ ಕೊರೊನಾ ಮಹಾಮಾರಿಗೆ ೧,೦೪೩ ದುರ್ದೈವಿಗಳು ಬಲಿಯಾಗಿದ್ದಾರೆ. ಇದರೊಂದಿಗೆ ಮಹಾಮಾರಿ ಇದುವರೆಗೂ ದೇಶದಲ್ಲಿ ಒಟ್ಟಾರೆ ೬೭,೩೭೬ ಜನರನ್ನು ಬಲಿತೆಗೆದುಕೊಂಡಿದೆ.
ಇನ್ನೊಂದೆಡೆ ಸುಮಾರು ೩೦ ಲಕ್ಷ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆ ಹೊಂದಿದ್ದಾರೆ. ಸಚಿವಾಲಯ ನೀಡಿರುವ ಅಂಕಿ-ಅಂಶಗಳ ಪ್ರಕಾರ ದೇಶದಲ್ಲಿ ಸೋಂಕಿನಿಂದ ಬಳಲುತ್ತಿದ್ದ ೨೯,೭೦,೪೯೨ ಮಂದಿ ಚೇತರಿಕೆ ಕಂಡು ಆಸ್ಪತ್ರೆಗಳಿಂದ ಮನೆಗಳಿಗೆ ತೆರಳಿದ್ದಾರೆ.
ಒಟ್ಟಾರೆ ದೇಶದಲ್ಲಿ ಸೋಂಕಿನಿಂದ ಗುಣಮುಖ ಆಗುತ್ತಿರುವ ಪ್ರಮಾಣ ಶೇ. ೭೭ ರಷ್ಟಿದ್ದು, ರೋಗಿಗಳ ಆರೈಕೆಯಲ್ಲಿ ತೊಡಗಿರುವ ವೈದ್ಯರ ಮತ್ತು ಸಿಬ್ಬಂದಿಯ ಪರಿಶ್ರಮದ ಧ್ಯೋತಕವಾಗಿದೆ ಎಂದರೂ ತಪ್ಪಾಗಲಾರದು. ಇಡೀ ದೇಶದಲ್ಲಿ ಮಹಾರಾಷ್ಟ್ರ ಅತಿ ಹೆಚ್ಚು ಬಾಧಿತವಾಗಿರುವ ರಾಜ್ಯಗಳ ಪೈಕಿ ಮೊದಲನೇ ಸ್ಥಾನದಲ್ಲಿದೆ. ಆ ನಂತರದ ಸ್ಥಾನದಲ್ಲಿ ಕರ್ನಾಟಕ, ಆಂಧ್ರಪ್ರದೇಶ ಮತ್ತು ತಮಿಳುನಾಡು ರಾಜ್ಯಗಳಿವೆ. ಮಹಾಮಾರಿ ಸೋಂಕಿನಿಂದ ಅತಿ ಹೆಚ್ಚು ಬಾಧಿತವಾಗಿರುವ ವಿಶ್ವದ ರಾಷ್ಟ್ರಗಳ ಪೈಕಿ ಅಮೆರಿಕ ಮತ್ತು ಬ್ರೆಜಿಲ್ ಮೊದಲೆರಡು ಸ್ಥಾನಗಳಲ್ಲಿ ಮುಂದುವರೆದಿದ್ದರೆ ಭಾರತ ಮೂರನೇ ಸ್ಥಾನದಲ್ಲಿ ಈಗಲೂ ಮುಂದುವರಿದಿದೆ.
ಮಹಾರಾಷ್ಟ್ರದಲ್ಲಿ ನಿನ್ನೆ ಒಂದೇ ದಿನ ೧೭ ಸಾವಿರಕ್ಕೂ ಹೆಚ್ಚು ಸೋಂಕು ಪ್ರಕರಣಗಳು ಪತ್ತೆಯಾಗಿದ್ದು ರಾಜ್ಯದಲ್ಲಿ ಇದುವರೆಗೂ ೮ ಲಕ್ಷಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ. ನಿನ್ನೆ ಒಂದೇ ದಿನ ೨೯೨ ಸೋಂಕಿತರು ಮೃತಪಟ್ಟಿದ್ದಾರೆ. ಮುಂಬೈ ನಗರದಲ್ಲಿ ೩೪ ಮಂದಿ ಸಾವನ್ನಪ್ಪಿದ್ದು ರಾಜ್ಯದಲ್ಲಿ ಇರುವರೆಗೂ ೨೫ ಸಾವಿರಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ..

ಆಂಧ್ರಪ್ರದೇಶದಲ್ಲಿ ಕಳೆದ ೨೪ ಗಂಟೆಗಳ ಅವಧಿಯಲ್ಲಿ ೧೦ ಸಾವಿರಕ್ಕೂ ಹೆಚ್ಚು ಸೋಂಕು ಪ್ರಕರಣಗಳು ಪತ್ತೆಯಾಗಿದ್ದು ಇದುವರೆಗೂ ೪ ಲಕ್ಷ ೪೫ ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಸೋಂಕು ಪ್ರಕರಣಗಳು ದಾಖಲಾಗಿವೆ.ಕರ್ನಾಟಕದಲ್ಲಿ ಕಳೆದ ಮೂರು ದಿನಗಳಿಂದ ೯ ಸಾವಿರಕ್ಕೂ ಹೆಚ್ಚು ಸೋಂಕು ಪ್ರಕರಣಗಳು ಪತ್ತೆಯಾಗುತ್ತಿದ್ದು ಇದುವರೆಗೂ ೩,೬೧,೩೪೧ ಸೋಂಕು ಪ್ರಕರಣಗಳು ದಾಖಲಾಗಿವೆ. ಇನ್ನೊಂದೆಡೆ ರಾಜ್ಯದಲ್ಲಿ ಮಾದರಿ ಪರೀಕ್ಷೆಗಳ ಪ್ರಮಾಣ ಹೆಚ್ಚಾಗುತ್ತಿದ್ದು ನಿನ್ನೆ ಒಂದೇ ದಿನ ೨೩ ಸಾವಿರಕ್ಕೂ ಹೆಚ್ಚು ಮಾದರಿ ಪರೀಕ್ಷೆಗಳನ್ನು ನಡೆಸಲಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ದೇಶದಲ್ಲಿ ಸಾವಿನ ಪ್ರಮಾಣ ಇಳಿಮುಖವಾಗುತ್ತಿದ್ದು, ಪ್ರಸ್ತುತ ಈ ಪ್ರಮಾಣ ಶೇ ೧.೭೬ ರಷ್ಟಿದೆ. ವಿಶ್ವದ ಸರಾಸರಿ ಸಾವಿನ ಪ್ರಮಾಣಕ್ಕೆ ಹೋಲಿಕೆ ಮಾಡಿದರೆ ಭಾರತದಲ್ಲಿ ಪ್ರಮಾಣ ತೀರಾ ಕಡಿಮೆಯಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ವಿಶ್ವದಲ್ಲಿ ಸಾವಿನ ಪ್ರಮಾಣ ಸರಾಸರಿ ಶೇ ೩.೩ ರಷ್ಟಿದೆ. ಒಂದು ದಶಲಕ್ಷ ಜನಸಂಖ್ಯೆಗೆ ೧೧೦ ಮಂದಿ ಸಾವನ್ನಪ್ಪುತ್ತಿರುವ ವಿಶ್ವದ ಸರಾಸರಿ ಪ್ರಮಾಣಕ್ಕೆ ಹೋಲಿಕೆ ಮಾಡಿದರೆ ಭಾರತದಲ್ಲಿ ಒಂದು ಲಕ್ಷ ಜನಸಂಖ್ಯೆಗೆ ಕೇವಲ ೪೮ ಮಂದಿ ಸಾವನ್ನಪ್ಪುತ್ತಿದ್ದಾರೆ ಎಂದು ಸಚಿವಾಲಯ ತಿಳಿಸಿದೆ

error: