April 24, 2024

Bhavana Tv

Its Your Channel

79ನೇ ಭದ್ರಾ ಯೋಜನಾ ನೀರಾವರಿ ಸಲಹಾ ಸಮಿತಿ ಸಭೆ

ಶಿವಮೊಗ್ಗ: ಪ್ರಸಕ್ತ 2021/22 ನೇ ಸಾಲಿನ ಬೇಸಿಗೆ ಹಂಗಾಮಿನ ಬೆಳೆಗಳಿಗೆ ಭದ್ರಾ ಜಲಾಶಯದಿಂದ ಎಡದಂಡೆ ನಾಲೆ, ಬಲದಂಡೆ ನಾಲೆ, ಆನವೇರಿ ಶಾಖಾ ನಾಲೆ, ದಾವಣಗೆರೆ ಶಾಖಾ ನಾಲೆ, ಮಲೆಬೆನ್ನೂರು ಶಾಖಾ ನಾಲೆ ಮತ್ತು ಹರಿಹರ ಶಾಖಾ ನಾಲೆಯ ಮೂಲಕ ಅಚ್ಚುಕಟ್ಟು ಭಾಗಗಳಿಗೆ ನೀರು ಹರಿಸುವ ಹಾಗೂ ಬೆಳೆ ಕ್ಷೇತ್ರ ಪ್ರಕಟಿಸುವ ಸಂಬoಧ ಭದ್ರಾ ಅಚ್ಚುಕಟ್ಟು ಪ್ರಾಧಿಕಾರದ ಸಭಾಂಗಣದಲ್ಲಿ ಜರುಗಿದ 79ನೇ ಭದ್ರಾ ಯೋಜನಾ ನೀರಾವರಿ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ನಡೆಸಿಕೊಡಲಾಯಿತು.

ರೈತ ಮುಖಂಡರಾದ ಬಸವರಾಜಪ್ಪ ಮಾತನಾಡಿ, ಭದ್ರಾ ಅಚ್ಚುಕಟ್ಟು ಪ್ರದೇಶ ವಿಭಿನ್ನ ಹವಾಮಾನ ಮತ್ತು ಮಣ್ಣಿನ ಗುಣ ಹೊಂದಿದೆ. ಈ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಏಕ ಕಾಲದಲ್ಲಿ ನೀರು ಹರಿಸುವುದು ಮತ್ತು ಬಂದ್ ಮಾಡುವುದು ಕಷ್ಟಸಾಧ್ಯ ಏಕೆಂದರೆ, ಭದ್ರಾವತಿ ಸುತ್ತಮುತ್ತಲಿನ ಪ್ರದೇಶದಲ್ಲಿ ಕಲ್ಲುಭೂಮಿ, ಕೆಂಪುಮಿಶ್ರತ ಮಣ್ಣಿನಲ್ಲಿ ಅಡಿಕೆ ಇತ್ಯಾದಿ ಬೆಳೆಯಲಾಗುತ್ತಿದ್ದು ಈ ಮಣ್ಣು 20 ರಿಂದ 25 ದಿನಕ್ಕೆ ಮಾತ್ರ ನೀರನ್ನು ಹಿಡಿದಿಡಲು ಸಾಧ್ಯವಿದ್ದು, ದಾವಣಗೆರೆ, ಮಲೆಬೆನ್ನೂರು, ಹರಿಹರ ಭಾಗದಲ್ಲಿ ಎರೆಮಣ್ಣಿದ್ದು ಒಂದು ತಿಂಗಳವರೆಗೆ ನೀರನ್ನು ತಡೆದಿಡುವ ಸಾಮರ್ಥ್ಯ ಅಲ್ಲಿನ ಮಣ್ಣಿಗೆ ಇರುತ್ತದೆ. ಆದ್ದರಿಂದ ಆ ಭಾಗಕ್ಕೆ ಸ್ವಲ್ವ ತಡವಾಗಿ ನೀರು ಹರಿಸಬೇಕೆಂದು ಸಲಹಾ ಸಮಿತಿ ಸದಸ್ಯರು ಅಭಿಪ್ರಾಯ ಹಂಚಿಕೊoಡಿದರು.

ವಿದ್ಯುತ್ ಇಲಾಖೆಯಲ್ಲಿರುವ ಎಲ್‌ಸಿ ವ್ಯವಸ್ಥೆಯಂತೆ, ಅಚ್ಚುಕಟ್ಟು ಭಾಗದಲ್ಲಿ ನೀರು ಬಿಡಲು ಕೂಡ ಗೇಟ್ ವ್ಯವಸ್ಥೆ ಮಾಡಿಕೊಂಡರೆ, ನೀರು ಬೇಡವಾದ ಭಾಗಕ್ಕೆ ಗೇಟ್ ಬಂದ್ ಮಾಡಿ, ನೀರು ಬೇಕಾದ ಕಡೆ ಗೇಟ್ ತೆರೆದು ನೀರು ಹರಿಸಬಹುದು, ಇದರಿಂದ ಅಚ್ಚುಕಟ್ಟು ರೈತರಿಗೆ ಅನುಕೂಲವಾಗುತ್ತದೆ ಎಂದರು.

ಭದ್ರಾವತಿ ಶಾಸಕರಾದ ಸಂಗಮೇಶ್ವರ್ ಮಾತನಾಡಿ, ಈ ಬಾರಿ ಒಳ್ಳೆಯ ಮಳೆಯಾಗಿ, ಡ್ಯಾಂನಲ್ಲಿ ಸಾಕಷ್ಟು ನೀರಿದ್ದರೂ, ಇದುವರೆಗೆ ನಾಲೆಗಳಿಗೆ ನೀರು ಹರಿಸದೇ ಇರುವುದರಿಂದ ರೈತರಿಗೆ ಹಾಗೂ ಜಾನುವಾರುಗಳಿಗೆ ನೀರಿಲ್ಲದೇ ತುಂಬಾ ತೊಂದರೆಯಾಗಿದೆ. ಇಂಜಿನಿಯರ್‌ಗಳು ನೀರು ಬಂದ್ ಮಾಡಿ ಇಷ್ಟು ದಿನ ಆದರೂ ಕಾಮಗಾರಿ ಸಬೂಬು ಹೇಳಿ ನೀರು ಹರಿಸದಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅವರು, ಅಧ್ಯಕ್ಷರು ದೃಢವಾದ ನಿರ್ಧಾರ ಮಾಡಿ ನಾಳೆಯಿಂದಲೇ ನೀರು ಬಿಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಬೇಕು ಎಂದು ಮನವಿ ಮಾಡಿದರು.

ಪ್ರಾಧಿಕಾರದ ನಿರ್ದೇಶಕರಾದ ಷಡಕ್ಷರಪ್ಪ ಮಾತನಾಡಿ, ಎಡದಂಡೆ ನಾಲೆ ರೈತರಿಗೆ, ಜಾನುವಾರುಗಳಿಗೆ ನೀರಿಲ್ಲದೇ ತುಂಬಾ ತೊಂದರೆಯಾಗಿದೆ ಆದ್ದರಿಂದ ಎಡದಂಡೆ ನಾಲೆಗೆ ಇಂದಿನಿAದಲೇ ಹಾಗೂ ಬಲದಂಡೆ ನಾಲೆ ಡಿ.30 ರಿಂದ ನೀರು ಬಿಡಬೇಕು.

ಎಡದಂತೆ ನಾಲೆಯ ಹಿತ ರಕ್ಷಣಾ ಸಮಿತಿಯ ರಘುನಾಥ್ ಮಾತನಾಡಿ, ಪ್ರತಿ ಸಲ ನೀರು ಬಂದ್ ಮಾಡಿದಾಗ ಗೊಂದಲ ಸೃಷ್ಟಿಯಾಗುತ್ತಿದೆ. ನೀರು ನಿಲ್ಲಿಸಿದ 25 ದಿನಗಳಿಗೆ ಅಧ್ಯಕ್ಷರು ಒಂದು ಸಭೆ ಕರೆದು ನಿರ್ಧಾರ ಕೈಗೊಳ್ಳಬೇಕು. ಎಡದಂಡೆ ಭಾಗದ ಮರಳು ಮಿಶ್ರಿತ ಮಣ್ಣಿನಲ್ಲಿ ನೀರಿನ ತೇವ ತಡೆದಿಡುವ ಶಕ್ತಿ ಇಲ್ಲವಾದ್ದರಿಂದ ಇಂದೇ ನೀರು ಬಿಡಬೇಕು ಎಂದು ಆಗ್ರಹಿಸಿದರು.

ಎಡದಂಡೆ ನಾಲೆ ಭಾಗದ ಸದಸ್ಯರಾದ ಮಲ್ಲಿಕಾರ್ಜುನ ಮಾತನಾಡಿ, ನೀರು ನಿಲ್ಲಿಸಿ 40 ದಿನ ಆದರೂ ನೀರು ಹರಿಸದಿರುವುದು ವಿಪರ್ಯಾಸ. ಅವೈಜ್ಞಾನಿಕವಾಗಿ ಹೀಗೆ ನೀರು ನಿಲ್ಲಿಸಿದರೆ ಬೆಳೆ ಹಾಳಾಗುತ್ತದೆ ಎಂದಾಗ ಎಡದಂಡೆ ನಾಲೆ ಭಾಗದ ಸದಸ್ಯರಾದ ಯಶವಂತರಾವ್, ರಾಮಪ್ಪ, ಹನುಂತಪ್ಪ, ಶೇಖರಪ್ಪ ಹಾಗೂ ಇತರೆ ರೈತರು ಧ್ವನಿಗೂಡಿಸಿ ಈ ರಾತ್ರಿಯೇ ನೀರು ಹರಿಸುವಂತೆ ಒತ್ತಾಯಿಸಿದರು.

ದಾವಣಗೆರೆ ಮತ್ತು ಮಲೆಬೆನ್ನೂರು ನಾಲಾಭಾಗದ ಸದಸ್ಯರಾದ ತೇಜಸ್ವಿ ಪಟೇಲ್ ಮತ್ತು ಇತರರು ಮಾತನಾಡಿ, ನಮಗೆ ಜ.5 ರ ಹೊತ್ತಿಗೆ ನೀರು ಬಿಟ್ಟರೆ ಅನುಕೂಲವಾಗುತ್ತದೆ ಆದರೆ ಸಲಹಾ ಸಮಿತಿ ಸಂಪ್ರದಾಯದAತೆ ಅಧಿಸೂಚನೆ ಹೊರಡಿಸಿ ನೀರು ಬಿಡಬೇಕು. ಶಿವಮೊಗ್ಗ ಭಾಗದ ಮುಖಂಡರು ಡಿ.30 ಕ್ಕೆ ನೀರು ಹರಿಸಲು ತೀರ್ಮಾನ ಕೈಗೊಂಡ ಹಿನ್ನೆಲೆಯಲ್ಲಿ ಮರಳಿನ ತಡೆ ಒಡ್ಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ಕೋರಿದರು.

ನಂತರ ಸಭೆಯನ್ನುದ್ದೇಶಿಸಿ ಮಾತನಾಡಿ, ದಾವಣಗೆರೆ ಮತ್ತು ಮಲೆಬೆನ್ನೂರು ಶಾಖಾ ನಾಲೆಗಳಿಗೆ ಜನವರಿ ಮೊದಲ ವಾರದಿಂದ ನೀರು ಹರಿಸುವಂತೆ ಅಧಿಕಾರಿಗಳು ಕೇಳಿಕೊಂಡಿರುವ ಹಿನ್ನೆಲೆಯಲ್ಲಿ, ಮರಳಿನ ತಡೆ ಒಡ್ಡಿ ನೀರು ಹರಿಸುವಂತೆ ಸೂಚನೆ ನೀಡಿದ್ದು, ಜಲಾಶಯದ ಪ್ರಸ್ತುತ ವಾಸ್ತವಾಂಶದ ಪ್ರಕಾರ ಭದ್ರಾ ಜಲಾಶಯದಲ್ಲಿ ನೀರಾವರಿಗೆ ಹರಿಸಲು ಸುಮಾರು 57.703 ಟಿಎಂಸಿ ನೀರು ಬಳಕೆಗೆ ಲಭ್ಯವಿದ್ದು, ಬೇಸಿಗೆ ಅವಧಿಗೆ ಸುಮಾರು 51.97 ಟಿಎಂಸಿ ನೀರು ಅವಶ್ಯವಿದ್ದು, ಸತತ 120ದಿನಗಳ ಕಾಲ ನೀರು ಹರಿಸಿದ ನಂತರವು ಅಂಕಿ ಅಂಶದ ಪ್ರಕಾರ ಸುಮಾರು 5.733 ಟಿಎಂಸಿ ನೀರು ಜಲಾಶಯದಲ್ಲಿ ಉಳಿಯಲಿದೆ ಎಂದು ಮಾಹಿತಿ ನೀಡಲಾಯಿತು.

ಅಧಿಕಾರಿಗಳು ಅಚ್ಚುಕಟ್ಟು ಪ್ರದೇಶದ ರೈತರಿಗೆ ಪೂರಕವಾಗಿ ಸ್ಪಂದಿಸಬೇಕು, ಪ್ರತಿಯೊಬ್ಬ ಅಧಿಕಾರಿಗಳು ರೈತರಿಗೆ ಬೆಲೆ ಕೊಡಬೇಕು, ರೈತರು ತಮ್ಮ ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತರಲು ದೂರವಾಣಿ ಕರೆ ಮಾಡಿದ ಸಮಯದಲ್ಲಿ ಸೂಕ್ತವಾಗಿ ಸ್ಪಂದಿಸಬೇಕು ಎಂದು ಎಚ್ಚರಿಕೆ ನೀಡಿ, ಭದ್ರಾ ಕಾಡಾ ಅಧ್ಯಕ್ಷರಾದ ನಂತರ ಅಚ್ಚುಕಟ್ಟು ವ್ಯಾಪ್ತಿಯಲ್ಲಿ ಪ್ರವಾಸ ಮಾಡಿ ನಾಲಾ ಸ್ಥಿತಿ ಗತಿಯ ಕುರಿತು ಅಧ್ಯಯನ ನಡೆಸಿದ್ದೇನೆ, ನರೇಗಾ ಯೋಜನೆಯಡಿ ಚಾನಲ್‌ಗಳಲ್ಲಿ ಹೂಳು ತೆಗೆಸಿದ್ದೇನೆ ಇದನ್ನು ಪ್ರತಿಯೊಬ್ಬ ಅಧಿಕಾರಿಗಳು ಗಮನದಲ್ಲಿರಿಸಿಕೊಂಡು, ನಾಲೆಗಳ ಮೇಲೆ ಎಲ್ಲಾ ಇಂಜಿನಿಯರುಗಳು ಸುತ್ತಾಡಿ ಕೆಲಸ ಮಾಡಬೇಕು ಎಂದು ಸೂಚನೆ ನೀಡಲಾಯಿತು.

ಸಭೆಯಲ್ಲಿ ಉಪಸ್ಥಿತರಿದ್ದ ಎಲ್ಲಾ ಪ್ರಮುಖರ ಸಲಹೆಯನ್ನು ಕ್ರೊಡಿಕರಿಸಿ ಪ್ರಸಕ್ತ ಸಾಲಿನ ಬೇಸಿಗೆ ಹಂಗಾಮಿನ ಬೆಳೆಗಳಿಗಾಗಿ ಡಿಸೆಂಬರ್ 29ರ ಮಧ್ಯ ರಾತ್ರಿಯಿಂದ ಎಡದಂಡೆ ನಾಲೆಯ ಪೂರ್ಣ ಪ್ರಮಾಣದ 350 ಕ್ಯೂಸೆಕ್ ಹರಿಸುವುದು ಮತ್ತು ಡಿಸೆಂಬರ್ 30 ರಿಂದ ಬಲದಂಡೆ ನಾಲೆಗೆ ಮೊದಲ ಹತ್ತು ದಿನ 1,500ಕ್ಯೂಸೆಕ್ ನಂತೆ ಹರಿಸಿ, ನಂತರದ ದಿನಗಳಲ್ಲಿ ಪೂರ್ಣ 3,000ಕ್ಯೂಸೆಕ್ ಪ್ರಮಾಣಕ್ಕೆ ಹೆಚ್ಚಿಸಿ ಒಟ್ಟಾರೆ ಸತತ 120 ದಿನಗಳ ಕಾಲ ನೀರು ಹರಿಸಲು ಭದ್ರಾ ಯೋಜನಾ ನೀರಾವರಿ ಸಲಹಾ ಸಮಿತಿ ಸಭೆಯು ಒಮ್ಮತದ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಪ್ರಕಟಿಸಲಾಯಿತು.

ನಂತರ ಮಾತನಾಡಿದ ಅಧೀಕ್ಷಕ ಅಭಿಯಂತರರಾದ ಚಂದ್ರಹಾಸ್ ಅವರು, ಸಭೆಯಲ್ಲಿ ಕೈಗೊಂಡ ಒಮ್ಮತದ ತೀರ್ಮಾನದಂತೆ 2021-22 ನೇ ಸಾಲಿನ ಬೇಸಿಗೆ ಬೆಳೆಗಳಿಗಾಗಿ ಬಲದಂಡೆ, ಎಡದಂಡೆ ನಾಲೆಗಳು, ಆನವೇರಿ, ದಾವಣಗೆರೆ, ಮಲೆಬೆನ್ನೂರು ಮತ್ತು ಹರಿಹರ ಶಾಖಾ ನಾಲೆಗಳಲ್ಲಿ ಅಚ್ಚುಕಟ್ಟು ರೈತರಿಗೆ ನೀರು ಸಮರ್ಪಕವಾಗಿ ಹರಿಯುವಂತೆ ಎಲ್ಲಾ ರೀತಿಯ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಭದ್ರಾ ಕಾಡಾ ನಿರ್ದೇಶಕರಾದ ರುದ್ರಮೂರ್ತಿ , ವಿನಾಯಕ್ , ಹನುಮಂತಪ್ಪ , ರಾಜಪ್ಪ , ಷಡಾಕ್ಷರಿ , ಭದ್ರಾ ಯೋಜನಾ ಮಟ್ಟದ ನೀರು ಬಳಕೆದಾರರ ಸಹಕಾರ ಸಂಘಗಳ ಮಹಾ ಮಂಡಲದ ಅಧ್ಯಕ್ಷರಾದ ದ್ಯಾವಪ್ಪ ರೆಡ್ಡಿ ಹಾಗೂ ಹಲವಾರು ರೈತ ಮುಖಂಡರು, ಭದ್ರಾ ಕಾಡಾ ಮತ್ತು ನೀರಾವರಿ ಇಲಾಖೆಯ ಸಮಸ್ತ ಅಧಿಕಾರಿ ವೃಂದದವರು ಉಪಸ್ಥಿತರಿದ್ದರು.

error: