April 25, 2024

Bhavana Tv

Its Your Channel

ಕೆಜಿಎಫ್ ಮತ್ತು ಮನೋರಂಜನೆ

ಸಿನೆಮಾ ಸದಾಕಾಲದ ಪ್ಯಾಶನ್. ಬಾಲ್ಯದಲ್ಲಿ ಕಪ್ಪು ಬಿಳುಪು ಕಾಲದಲ್ಲಿ, ನೆಲದ ಮೇಲೆ ಮಲಗಿ, ನಂತರ ಬೆಂಚಿನ ಮೇಲೆ ಕುಳಿತು, ಕಬ್ಬಿಣ ಕುರ್ಚಿ ಮೇಲೆ ಈಗ ಮಲ್ಟಿಪ್ಲೆಕ್ಸ್ ಗಳಲ್ಲಿ ಐಷಾರಾಮಿಯಾಗಿ ಸಿನೆಮಾ ನೋಡುವ ಸಿನಿ ಪಯಣ ನನ್ನದು. ತಂತ್ರಜ್ಞಾನ ಬೃಹದಾಕಾರದಲ್ಲಿ ಬೆಳೆದರೂ ತೀವ್ರತೆ ಹಾಗೆಯೇ ಉಳಿದು, ಖುಷಿ ಪ್ರಭಾವ ನೂರ್ಮಡಿಸಿದೆ. ನಂತರದ ದಿನಗಳಲ್ಲಿ ತೆಲುಗು, ಹಿಂದಿ ಸಿನೆಮಾಗಳನ್ನು ನೋಡಿದ ಮೇಲೆ ಅದ್ದೂರಿತನದ ಅರಿವಾಯಿತು. ಅದ್ದೂರಿತನದಲ್ಲಿ ಸಪ್ಪೆ ಎನಿಸಿದರೂ ರಾಜಕುಮಾರ ಅಭಿನಯದ ಸಿನೆಮಾಗಳ ಗುಂಗು ಈಗಲೂ ಹಚ್ಚ ಹಸಿರು.

ಸದ್ಯ ವಿಷಯಕ್ಕೆ ಬರೋದಾದ್ರೆ, ಬಹು ಚರ್ಚಿತ ಕೆಜಿಎಫ್ ಚಾಪ್ಟರ್-2 ಕೊಂಚ ತಡವಾಗಿ ನೋಡಿದೆ. ಕತೆಯ ನೈತಿಕತೆ, ಗುಂಡಾಗಿರಿ, ಹಿಂಸೆ, ರಕ್ತಪಾತ ಮತ್ತು ಸಂದೇಶಗಳ ಕುರಿತು ಅನೇಕರು ತೋಡಿಕೊಂಡಿದ್ದಾರೆ. ಅದೇನೇ ಇರಲಿ ಸಿನೆಮಾದ ಮೂಲ ಉದ್ದೇಶ ಮನೋರಂಜನೆ, ಮೂರು ತಾಸು ಎಲ್ಲಾ ಮರೆತು, ಯಾವುದೋ ಭಾವ ಪ್ರಪಂಚದಲ್ಲಿ ತೇಲಾಡಿ ಖುಷಿ ಪಟ್ಟು, ಹೊರ ಬಂದಾಗ ಬದುಕಿನ ವಾಸ್ತವ ರಾಚುತ್ತದೆ. ಇದೊಂಥರಾ ಸ್ಮಶಾನ ವೈರಾಗ್ಯವೇ!
ಸಿನೆಮಾ ನೋಡಿ ಪಾಠ ಕಲಿಯುವ ಕಾಲ ಇದಲ್ಲ ಎಂಬುದನ್ನು ನಾವು ಮರೆಯಬಾರದು. ಒಳ್ಳೆಯದು, ಕೆಟ್ಟದ್ದು ಎಂಬ ಸಂದೇಶ ಈಗ ಮ್ಯಾಟರ್ ಆಗೋದೇ ಇಲ್ಲ.

ಪರಸ್ಪರ ಪೈಪೋಟಿ ಮೇಲೆ ಈಗ ಸಿನೆಮಾ ಬರುತ್ತಲಿವೆ. ಮಲೆಯಾಳಂ ಸಿನೆಮಾಗಳ ಕತಾ ಹಂದರ, ತೆಲುಗು ಸಿನೆಮಾಗಳ ಅದ್ದೂರಿತನದ ಪ್ರತಿರೂಪವೇ ಈ ಕೆಜಿಎಫ್. ಪ್ಯಾನ್ ಇಂಡಿಯಾ ಪರಿಕಲ್ಪನೆಯನ್ನು ಒಂದು ಕಾಲದಲ್ಲಿ ಬಾಲಿವುಡ್ ಒಪ್ಪಿಕೊಳ್ಳುತ್ತಿರಲಿಲ್ಲ. ನಮ್ಮ ದಕ್ಷಿಣ ಭಾರತ ಹೀರೋಗಳ ಮೀಸೆ, ಗಡ್ಡ ಮತ್ತು ವಿಗ್ ಅವರಿಗೆ ಕೃತಕ ಎನಿಸುತ್ತಿತ್ತು, ಆದರೆ ನಂತರ ಜಿತೇಂದ್ರ ಅಭಿನಯದ ರಿಮೇಕ್ ಸಿನೆಮಾಗಳಲ್ಲಿ ಮೀಸೆ, ವಿಗ್ ಮತ್ತು ಕುಣಿತ ಶುರುವಾಯಿತು. ಹಿಂದಿ ಭಾಷೆಗೆ ಸಿನೆಮಾಗಳು ಡಬ್ ಆದರೂ ಅವರು ಮನಸಾರೆ ಒಪ್ಪಿಕೊಳ್ಳುತ್ತಿರಲಿಲ್ಲ.

ಈಗ ಕಾಲ ಬದಲಾಗಿದೆ. ನಮ್ಮ ಹೀರೋಗಳನ್ನು ಒಪ್ಪಿಕೊಳ್ಳುವ ಸಂದರ್ಭ ಬಂದಿರುವುದು ಮಧ್ಯ ವಯೋಮಾನದ ನಮ್ಮಂತವರಿಗೆ ಅಭಿಮಾನ. ತೆಲುಗಿನ ಬಾಹುಬಲಿ ನಂತರ, ದಕ್ಷಿಣ ಭಾರತದ ಕೆಜಿಎಫ್ ಎಲ್ಲಾ ದಾಖಲೆಗಳನ್ನು ಮುರಿದು ಕನ್ನಡದ ಬಾವುಟವನ್ನು ಹಾಲಿವುಡ್ ನಲ್ಲಿಯೂ ಹಾರಿಸಿದೆ.

ಸಿನೆಮಾ ಕೂಡ ಬಹುದೊಡ್ಡ ಬದ್ಧತೆ ಮತ್ತು ಯೋಜನೆ ಎಂಬುದನ್ನು ಈ ತಂಡ ಜಗತ್ತಿಗೆ ಸಾರಿ ಹೇಳಿದೆ. ಅವರು ತೆಗೆದುಕೊಂಡ ರಿಸ್ಕ್ ಮತ್ತು ಮಾರ್ಕೆಟಿಂಗ್ ತುಂಬಾ ಅರ್ಥಪೂರ್ಣ. ಲೆಕ್ಕಾಚಾರ ಹುಸಿ ಹೋಗುವ ಮಾತೇ ಇಲ್ಲಾ, ಹತ್ತಾರು ಚಾಪ್ಟರ್ ಬಂದರೂ ನೋಡುವ ಆತ್ಮವಿಶ್ವಾಸವನ್ನು ಇವರು ಹೆಚ್ಚಿಸಿದ್ದಾರೆ.

ಯಶ್ ಯಶೋಗಾಥೆ ಕನ್ನಡಿಗರಿಗೆ ಚೆನ್ನಾಗಿ ಗೊತ್ತಿದೆ. ಲುಕ್ ಆಚೆಗೆ ಇರುವ ನಟನಾ ಸಾಮರ್ಥ್ಯವನ್ನು ಪರಿಚಯಸಿದೆ.
ನಿರ್ದೇಶಕ, ಕ್ಯಾಮರಾಮನ್, ಎಡಿಟರ್, ಸಂಗೀತ ನಿರ್ದೇಶಕ, ಫೈಟ್ ಮಾಸ್ಟರ್ ಹೀಗೆ ಸಾಲು ಸಾಲು ತೆರೆ ಹಿಂದೆ ಇರುವ ತಂತ್ರಜ್ಞರೆಲ್ಲ ರಾತ್ರೋ ರಾತ್ರಿ ಪ್ರಸಿದ್ಧಿಗೆ ಬರಲು ಕೆಜಿಎಫ್ ಕಾರಣವಾಯಿತು. ಕರೋನ ಕಾರಣದಿಂದ ಮಂಕಾದ ಉದ್ಯಮಕ್ಕೆ ಚೈತನ್ಯ ಲಭಿಸಿ, ಹೊಸ ಪ್ರಯೋಗಗಳಿಗೆ ಶಕ್ತಿ ಲಭಿಸಿದೆ. ಕನ್ನಡ ತಂತ್ರಜ್ಞಾನದ ಅಗಾಧತೆಯನ್ನು ಕನ್ನಡಿಗರು ಜಗತ್ತಿಗೆ ತೋರಿಸಿ ಕೊಟ್ಟಿದ್ದಾರೆ.

ಮೇಕಿಂಗ್ ಅದ್ಭುತವಾಗಿದೆ, ಇಡೀ ಚಿತ್ರತಂಡದ ಪರಿಶ್ರಮ ಎದ್ದು ಕಾಣುತ್ತದೆ. ಅನಗತ್ಯ ಟೀಕೆ ಟಿಪ್ಪಣಿ ಅಷ್ಟೊಂದು ಸಮಂಜಸವಲ್ಲ. ಕತೆಗೆ ತಕ್ಕಂತೆ ಪಾತ್ರಗಳು, ಪಾತ್ರಗಳಿಗೆ ಪೂರಕವಾದ ಅದ್ದೂರಿತನ, ಹಿಂಸೆ, ಪಂಚಿAಗ್ ಡೈಲಾಗ್ಸ್… ಸಮಪಾತಳಿಯ ಸಮಾಗಮಕ್ಕೆ ತಕ್ಕಂತೆ ನಟರ ಆಯ್ಕೆ, ಪಾತ್ರ ಪೋಷಣೆ ಇದೆ. ಹಿಂದಿ ನಟ ಸಂಜಯದತ್ ಅಭಿನಯ ಒಂದು ಪ್ಲಸ್ ಕಮರ್ಷಿಯಲ್ ದೃಷ್ಟಿಯಿಂದ.

ಯಾವುದೇ ಉದ್ಯಮ ಬೆಳೆಯುವ ಮನಸ್ಸು ಮಾಡಿದಾಗ ಹಲವಾರು ಹೊಂದಾಣಿಕೆ ಅಗತ್ಯ. ಅಂತಹ ನೂರಾರು ಹೊಂದಾಣಿಕೆಗಳು ಇಲ್ಲಿ ಹೇರಳವಾಗಿವೆ. ಮಾರ್ಕೆಟಿಂಗ್ ಮಾಡಿದ ವಿಧಾನ ಚಿತ್ರದ ಗೆಲುವಿನ ಮೊಟ್ಟಮೊದಲ ಕಾರಣ. ಉಳಿದದ್ದು ಗೊತ್ತೇ ಇದೆ.

ಉಜ್ವಲ್ ಕುಲಕರ್ಣಿ ಎಂಬ ಹದಿ ಹರೆಯದ ಕನ್ನಡದ ಯುವಕನ ಕೈಗೆ ಎಡಿಟಿಂಗ್ ಜವಾಬ್ದಾರಿ ನೀಡಿದ್ದು ಅಭಿನಂದನೀಯ. ಸುಂದರ ಕತೆ, ಸಂದೇಶ ಇತ್ಯಾದಿ ಮೌಲ್ಯಗಳನ್ನು ಬದಿಗಿರಿಸಿ, ಇದು ಕೇವಲ ಒಂದು ಮನೋರಂಜನಾತ್ಮಕ ಸಿನೆಮಾ ಎಂಬ ದೃಷ್ಟಿಕೋನದಿಂದ ನೋಡಬೇಕು.

ಟೀಕೆ ಟಿಪ್ಪಣಿಗಳನ್ನು ಜನ ಬದಿಗಿರಿಸಿ ಒಂದು ಮಾದರಿಯ ಸಾಹಸ ಎಂಬAತೆ ಥಿಯೇಟರ್ ಕಡೆ ದೌಡಾಯಿಸುವ ಕಾರಣಕ್ಕಾಗಿ ಖುಷಿ ಪಡೋಣ. ಕೆಜಿಎಫ್ ಹೊಗಳಿದಂತೆ, ತೆಗಳಿದರೂ ಮೈಲೇಜ್ ಸಿಗುತ್ತದೆ ಎಂಬ ಭ್ರಮೆ ಸಾಧುವಲ್ಲ.

ಕನ್ನಡ ಇಲ್ಲಿಯವರೆಗೆ ಸಾಹಿತ್ಯಿಕವಾಗಿ ತನ್ನ ಘನತೆ ಮತ್ತು ಮೌಲ್ಯವನ್ನು ಉಳಿಸಿಕೊಂಡಿತ್ತು, ಈಗ ಈ ಸಿನೆಮಾ ಮೂಲಕ ರಾಷ್ಟ್ರೀಯ, ಅಂತರರಾಷ್ಟ್ರೀಯ ಮನ್ನಣೆಯನ್ನು ಗಳಿಸಿಕೊಂಡ ವಾಸ್ತವವನ್ನು ಸಡಗರಿಸೋಣ.
ಸೃಜನಶೀಲತೆಯನ್ನು ಜೀವಂತವಾಗಿಡುವ ಕತೆ, ಕಾದಂಬರಿ, ಸಿನೆಮಾ ಕೇವಲ ಮನೋರಂಜನೆಯಲ್ಲ, ನಮ್ಮ ಜ್ಞಾನದ ಮತ್ತು ಮನಸಿನ ಹಸಿವನ್ನು ತಣಿಸುವ ಸಾಧನಗಳು.

ಸಿದ್ದು ಯಾಪಲಪರವಿ ಕಾರಟಗಿ.
9448358040

error: