April 20, 2024

Bhavana Tv

Its Your Channel

ನವ ವಧುವಿನಂತೆ ಕಂಗೊಳಿಸುತ್ತಿದೆ ಮಿರ್ಜಾನ್ ಕೋಟೆ

ಕುಮಟಾ ತಾಲೂಕಿನ ಮಿರ್ಜಾನ್ ಕೋಟೆಯು ನಯನಮನೋಹರವಾಗಿದ್ದು, ಮಳೆಗಾಲದಲ್ಲಿ ಸುತ್ತಲಿನ ಗೋಡೆಗಳು ಹಸಿರು ಸೀರೆ ಉಟ್ಟ ನವ ವಧುವಿನಂತೆ ಕಂಗೊಳಿಸುತ್ತಿದೆ. ಐತಿಹಾಸಿಕ ಸೊಬಗಿನಿಂದ ಆಕರ್ಷಿಸುತ್ತಿರುವ ಮಿರ್ಜಾನ್ ಕೋಟೆಯ ಕುರಿತು ಸ್ಪೆಷಲ್ ರಿಪೋರ್ಟ್ ಇಲ್ಲಿದೆ.

ಕರ್ನಾಟಕದಲ್ಲಿ ಬಹಳಷ್ಟು ಕೋಟೆಗಳು ಅಳಿವಿನಂಚಿನಲ್ಲಿದ್ದು, ಕೆಲವೇ ಕೆಲವು ಕೋಟೆಗಳು ಮಾತ್ರಾ ಇಂದಿಗೂ ತನ್ನ ಜೀವಂತಿಕೆಯನ್ನು ಉಳಿಸಿಕೊಂಡು ಗತ ವೈಭವದ ವೈಭೋಗವನ್ನು ಸಾರುತ್ತಿದೆ. ಅಂತಹ ಕೋಟೆಗಳಲ್ಲಿ ಮಿರ್ಜಾನ್ ಕೋಟೆಯೂ ಒಂದು.

ಕರ್ನಾಟಕದ ಇತಿಹಾಸದಲ್ಲಿ ಕಾಳುಮೆಣಸಿನ ರಾಣಿ ಎಂದೇ ಪ್ರಖ್ಯಾತಿಗೊಂಡಿದ್ದ, ಸಾಳುವ ವಂಶದ ಗೇರುಸೊಪ್ಪೆಯ ರಾಣಿ ಚೆನ್ನಾಭೈರಾದೇವಿ, ಈ ಕೋಟೆಯನ್ನು 16 ನೇ ಶತಮಾನದಲ್ಲಿ ನಿರ್ಮಿಸಿದ್ದಾಳೆ ಎಂದು ಇತಿಹಾಸದ ಪುಟಗಳಲ್ಲಿ ಉಲ್ಲೇಖಿಸಲಾಗಿದೆ.
ಸುಮಾರು 11.5 ಎಕರೆಗಳಷ್ಟು ವಿಸ್ತರವಾದ ಪ್ರದೇಶದಲ್ಲಿ ಈ ಕೋಟೆಯಿದ್ದು, ಜಂಬಿಟ್ಟಿಗೆ ಕೆಂಪು ಕಲ್ಲಿನಿಂದ ನಿರ್ಮಾಣಗೊಂಡಿದೆ. ಇಂದಿಗೂ ಗಟ್ಟಿಮುಟ್ಟಾದ ಈ ಗೋಡೆಗಳಲ್ಲಿ ಒಂದು ಮುಖ್ಯ ದ್ವಾರ, ಮೂರು ಉಪದ್ವಾರ ಮತ್ತು ಹಲವಾರು ಗುಪ್ತದ್ವಾರಗಳಿವೆ. ದರ್ಬಾರ್ ಹಾಲ್, ಸಿಂಹಾಸನ, ಪಾಕಶಾಲೆ, ಬಾವಿ, ಧ್ವಜಸ್ತಂಭ, ಕಾವಲು ಗೋಪುರ, ಮೆಟ್ಟಿಲುಗಳು ಸೇರಿದಂತೆ ಕೋಟೆಯ ನಿರ್ಮಾಣವು ಅಚ್ಚುಕಟ್ಟಾಗಿದ್ದು, ಪ್ರತಿಯೊಂದು ಸೌಕರ್ಯವನ್ನು ಈ ಕೋಟೆ ಹೊಂದಿತ್ತೆoಬುದಕ್ಕೆ ಸಾಕ್ಷಿ ಲಭಿಸುತ್ತದೆ.

ಕೋಟೆಯ ಸುತ್ತವಿರುವ ತಗ್ಗು ಪ್ರದೇಶದಲ್ಲಿ ಕಂದಕಗಳಿದ್ದು, ಈ ಆಳವಾದ ಕಂದಕದಲ್ಲಿ ನೀರನ್ನು ಹರಿಸುವ ಮೂಲಕ ವಿಷ ಜಂತುಗಳನ್ನು ಅದರಲ್ಲಿ ಬಿಟ್ಟು ವೈರಿಗಳನ್ನು ಸುಲಭವಾಗಿ ಕೊಲ್ಲಲು ಅನುಕೂಲವಾಗುತಿತ್ತು ಎಂದು ಸೂಚಿಸುತ್ತದೆ.

ಪಳೆಯುಳಿಕೆಯಂತೆ ಉಳಿದು ಬಂದಿರುವ ಈ ಕೋಟೆಯನ್ನು ಈಗ ಪುರಾತತ್ವ ಇಲಾಖೆ ತನ್ನ ವಶಕ್ಕೆ ಪಡೆದುಕೊಂಡಿದೆ. ಪ್ರತಿ ಸ್ವಾತಂತ್ರ‍್ಯೋತ್ಸವ ಹಾಗೂ ಗಣರಾಜ್ಯೋತ್ಸವ ದಿನದಂದು ಕೋಟೆಯ ಮೇಲಿನ ಧ್ವಜಸ್ತಂಭದಲ್ಲಿ ಧ್ವಜಾರೋಹಣ ಮಾಡಲಾಗುತ್ತಿದೆ.

ಮಳೆಗಾಲದಲ್ಲಿ ಹಚ್ಚ ಹಸಿರು ಬಣ್ಣ ಹಾಗೂ ಬೇಸಿಗೆಯಲ್ಲಿ ಕೆಂಪು ಕಲ್ಲಿನ ಬಣ್ಣದಿಂದ ಪ್ರವಾಸಿಗರನ್ನು ಆಕರ್ಷಿಸುವ ಈ ಕೋಟೆಯ ಬಳಿ, ಪುರಾತತ್ವ ಇಲಾಖೆ ಮ್ಯೂಸಿಯಂ ನಿರ್ಮಿಸಿದರೆ ಇನ್ನೂ ಹೆಚ್ಚಿನ ಮಾಹಿತಿ ಇಲ್ಲಿ ಕಾಣಬಹುದು ಎಂಬುದು ಪ್ರಜ್ಞಾವಂತರ ಆಶಯವಾಗಿದೆ.

ವರದಿ: ನರಸಿಂಹ ನಾಯ್ಕ್ ಹರಡಸೆ.

error: