ಹೊನ್ನಾವರ:- ಪೈಬರ್ ದೋಟಿ ಬಳಕೆಯಿಂದ ಹಿಂಜರಿಯುತ್ತಿರುವ ಪ್ರಗತಿಪರ ಕೃಷಿಕರು, ಪುನಃ ಕೊನೆಗೌಡರತ್ತ ಒಲವು ತೋರುತ್ತಿರುವುದು ಹೊನ್ನಾವರ ತಾಲೂಕಿನಲ್ಲಿ ಕಂಡು ಬರುತ್ತಿದೆ.
ಈಗಷ್ಟೇ ಅಡಿಕೆ ಕೊಯ್ಲು ಆರಂಭವಾಗಿದ್ದು, ಕೊನೆಗೌಡರಿಗೆ ಬೇಡಿಕೆ ಹೇಳತೀರದ್ದಾಗಿದೆ. ಏಕೆಂದರೆ ಹೊಲ ಗದ್ದೆಗಳಲ್ಲಿ ಕೆಲಸ ಮಾಡುವ ಮಾಮೂಲು ಕೃಷಿ ಕಾರ್ಮಿಕರು ನಿರ್ವಹಿಸುವ ಕಾಯಕ ಇದಲ್ಲ. ಇದಕ್ಕೆ ಪರಿಣತಿ, ನೈಪುಣ್ಯ, ಏಕಾಗ್ರತೆ ಬಹಳ ಮುಖ್ಯ. ಏಕೆಂದರೆ ಅಡಿಕೆ ತೋಟದಲ್ಲಿ ಒಂದು ಮರ ಏರುವ ಕೊನೆಗೌಡ ಅದರಿಂದ ಕೆಳಗಿಳಿಯದೇ, ಮರದಿಂದ ಮರಕ್ಕೆ ದಾಟುತ್ತಲೇ ದಿನಕ್ಕೆ 300 ರಿಂದ 400 ಗೊನೆ ಕೊಯ್ಯುತ್ತಾರೆ.
50 ರಿಂದ 60 ಅಡಿ ಎತ್ತರದಲ್ಲಿ ಮನುಷ್ಯನೊಬ್ಬ ಮರದಿಂದ ಮರಕ್ಕೆ ದಾಟುವ ಪರಿ ಎಂಥವರನ್ನೂ ಬೆರಗಾಗಿಸುತ್ತದೆ. ಆ ಸಂದರ್ಭದಲ್ಲಿ ಗಮನವು ಒಂದು ಕ್ಷಣ ಆಚೀಚೆಯಾದರೂ ಅಪಾಯ ತಪ್ಪಿದ್ದಲ್ಲ.
ಕೆಲವು ವರ್ಷಗಳ ಹಿಂದೆ ಮಾರುಕಟ್ಟೆಗೆ ಬಂದ ಪೈಬರ್ ದೋಟಿ, ಈ ವರ್ಷ ಮದ್ದು ಹೊಡೆಯುವ ಸಂದರ್ಭದಲ್ಲಿ ಗಣನೀಯವಾಗಿ ಜನ ಮೆಚ್ಚುಗೆ ಗಳಿಸಿತ್ತು. ಆದರೀಗ ಕೊನೆ ಕೊಯ್ಲು ಪ್ರಾರಂಭವಾಗುತ್ತಿದ್ದAತೆ ಪುನಃ ಕೊನೆಗೌಡರನ್ನೇ ಕರೆಯುತ್ತಿದ್ದಾರೆ ಕೃಷಿಕರು. ಕೊನೆ ಕೊಯ್ಯಲು ಪೈಬರ್ ದೋಟಿ ಅಷ್ಟು ಯೋಗ್ಯವಲ್ಲ ಎಂಬ ಭಾವನೆ ಕೃಷಿಕರಲ್ಲಿ ಬರುತ್ತಿದೆ.
ಈ ಕುರಿತು ಕೊನೆಗೌಡ ರವಿ ನಾಯ್ಕ್ ಬಳಿ ಅಭಿಪ್ರಾಯ ಕೇಳಿದಾಗ “ಕೊನೆ ಕೊಯ್ದು ಪೂರೈಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅದರಲ್ಲೂ ಜನರ ಒತ್ತಾಯದ ಕರೆಗಳು ಹೆಚ್ಚುತ್ತಲಿದೆ. ಈ ನಮ್ಮ ಅಪಾಯಕಾರಿ ಕಾಯಕಕ್ಕೆ ಸರಕಾರ ವಿಮಾ ಸೌಲಭ್ಯವನ್ನು ಒದಗಿಸಿದರೆ ಅನುಕೂಲವಾಗುತಿತ್ತು.” ಎಂದರು.
ಯುವ ಕೃಷಿಕ ಸುಜೇಂದ್ರ ಭಂಡಾರಿ ಈ ಸಂದರ್ಭದಲ್ಲಿ ಮಾತನಾಡಿ “ಕೊನೆ ಕೊಯ್ಲಿಗೆ ದೋಟಿ ಬಳಸಿದರೆ, ವೀಳ್ಯದೆಲೆ ಬಳ್ಳಿ ಹಾಳಾಗುವುದು. ಮತ್ತು ಕಾಯಡಿಕೆ ಕೊನೆ, ಸಿಂಗಾರಗಳಿಗೂ ಕತ್ತಿ ತಾಗಿ ಹಾನಿಯಾಗುವ ಸಾಧ್ಯತೆಯಿದೆ.” ಎಂದು, ದೋಟಿ ಹಾಗೂ ಕೊನೆಗೌಡರ ನಡುವಿನ ಸಾಧಕ ಬಾದಕಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು.
ವಿಶೇಷ ವರದಿ: ನರಸಿಂಹ ನಾಯ್ಕ್ ಹರಡಸೆ.
More Stories
ನಿತ್ಯ ಅಪ್ಪನ ದಿನಾಚರಣೆ ಮತ್ತು ಮಕ್ಕಳು
ಅಸ್ತಂಗತನಾದ ತಬಲಾಸೂರ್ಯ ಶ್ರೀ ಎನ್. ಎಸ್. ಹೆಗಡೆ ಹಿರೇಮಕ್ಕಿ.
ನವ ವಧುವಿನಂತೆ ಕಂಗೊಳಿಸುತ್ತಿದೆ ಮಿರ್ಜಾನ್ ಕೋಟೆ