April 19, 2024

Bhavana Tv

Its Your Channel

ಲೇಖನಿ ಮೌನವಾದ ಹೊತ್ತು ಮತ್ತು ತಳಮಳ

ಆತ್ಮೀಯರು ‘ಯಾಕೆ ಏನೂ ಬರದೇ ಇಲ್ವಲ್ಲಾ ಸರ್’ ಎಂದಾಗ’, ‘ಅರೆ ಬರೆಯದೇ ಇದ್ದರೂ ಗಮನಿಸುತ್ತಾರಾ’ ಎಂಬ ಸಮಾಧಾನವಾಯಿತು.
ಕಳೆದ ಐದು ವರ್ಷಗಳಿಂದ ನಿರಂತರ ಬರಹಕ್ಕೆ, ಕೆಲವು ದಿನ ವಿರಾಮ ತೆಗೆದುಕೊಂಡ ಕಾರಣ ಹುಡುಕಬೇಕು.

ಸಿದ್ದು ಯಾಪಲಪರವಿ ಕಾರಟಗಿ.
9448358040

ಉಕ್ರೇನ್ ಮೇಲೆ ರಷ್ಯಾದ ದಾಳಿಯ ನಂತರ ಮಾನಸಿಕ ಕ್ಷೋಭೆ ಪ್ರತಿಯೊಬ್ಬ ಸೂಕ್ಷ್ಮರಿಗೆ ಕಾಡಿದಂತೆ ನನಗೂ ಕಾಡಿದ್ದು ಸಹಜ. ಈಗ ಯುದ್ಧದ ಅಗತ್ಯ ಇರದೇ ಇದ್ದಾಗಲೂ ರಾಜಕೀಯ, ಅಂದರೆ ನ್ಯಾಟೋ ಕಾರಣ ಇಟ್ಟುಕೊಂಡು ಉಕ್ರೇನ್ ಮೇಲೆ ದಾಳಿ ಮಾಡುವಾಗ ಆದ ಜೀವ ಹಾನಿ ಜೊತೆಗೆ, ಇಡೀ ಉಕ್ರೇನ್ ಉಡಾಯಿಸುವ ಕ್ರಮವನ್ನು ಜಗತ್ತು ಕ್ಷಮಿಸುವುದಿಲ್ಲ.

ಸರ್ವಾಧಿಕಾರಿಗಳು ಯಾವಾಗಲೂ ಹಿಂಸೆಯನ್ನು ಆರಾಧಿಸುತ್ತಾರೆ. ಅದನ್ನು ನಾವು ‘ಬಲಿ ಸಂಸ್ಕೃತಿ’ ಎಂದು ವ್ಯಾಖ್ಯಾನಿಸಬಹುದು. ಅವರು ಯುದ್ಧದ ಮೂಲಕ ಮಾತ್ರ ಪಾಠ ಕಲಿಸಬಹುದೆಂಬ ಭ್ರಮೆ ಹೊಂದಿರುತ್ತಾರೆ. ಅದೇ ಜಾಡನ್ನು ಹಿಡಿದು ಹಿಟ್ಲರ್ ಸಂಭ್ರಮಿಸಿದ ಇತಿಹಾಸವನ್ನು ನಾವು ಮರೆಯಲಾಗದು. ಆದರೆ ಬಲಶಾಲಿ ಮತ್ತು ಪ್ರಭಾವಿ ನಾಯಕರು ತಾವು ಏನೇ ಮಾಡಿದರೂ ಜನ ಗೌರವಿಸುತ್ತಾರೆ ಎಂದು ನಂಬಿಕೆಯಲ್ಲಿ ತೇಲಾಡುತ್ತಾರೆ. ರಷ್ಯಾದ ಯುದ್ಧ ಅಹಂಕಾರದ ಸಂಕೇತ ಮತ್ತು ಎಚ್ಚರಿಕೆ ಕೂಡ! ಅಮೇರಿಕಾದ ನೀತಿಗಳು ಪರೋಕ್ಷ ಜಾಗತಿಕ ಯುದ್ಧಗಳೇ ಆಗಿವೆ. ಅಮೇರಿಕಾದ ನಿಲುವನ್ನು ವಿರೋಧಿಸುವ ರಾಷ್ಟ್ರಗಳ ಬೇಗುದಿ ಹೇಳಲಾಗದು. ಇದರ ಜೊತೆಗೆ ಉಕ್ರೇನಿನಲ್ಲಿ ಸಿಕ್ಕಿ ಬಿದ್ದ ಭಾರತೀಯ ವಿದ್ಯಾರ್ಥಿಗಳ ಅಭಿಪ್ರಾಯಗಳನ್ನು ನೋಡಿ,ವಿಮರ್ಶೆ ಮಾಡಿದ ವಿಧಾನವೂ ಅಷ್ಟೇ ಅಪಾಯಕಾರಿ.
ಆತಂಕಕ್ಕೆ ಒಳಗಾದ ಮಕ್ಕಳ ಬಾಯಲ್ಲಿ ಬಂದ ಬೇಸರದ ಮಾತುಗಳಲ್ಲಿ ದೇಶಪ್ರೇಮ ಅಥವಾ ದೇಶದ್ರೋಹವನ್ನು ಹುಡುಕಬಾರದಿತ್ತು.
ಬರೀ ಭಾವನೆಗಳಿಂದ ನಮ್ಮ ಹೊಟ್ಟೆ ತುಂಬುವುದಿಲ್ಲ, ಆದರೆ ಭಾವನೆಗಳ ಆಧಾರದ ಮೇಲೆ ಜನರನ್ನು ಆಳಬಹುದು ಎಂಬ ಕೆಲವರ ಲೆಕ್ಕಾಚಾರ ಸದಾ ಯಶಸ್ವಿಯಾಗಲಾರದು.

ಹಸಿವು,ನಿರುದ್ಯೋಗ ಮತ್ತು ಆರ್ಥಿಕ ಹಿಂಜರಿತದ ಅಪಾಯಗಳನ್ನು ಕೇವಲ ಭಾವನಾ ಪ್ರಪಂಚದ ತೇಲಾಟದಲ್ಲಿ ಮುಚ್ಚಿ ಹಾಕಲಾಗುವುದಿಲ್ಲ. ಜಗತ್ತಿನ ಎಲ್ಲ ಸರ್ವಾಧಿಕಾರಿಗಳು ತಾವು ತೆಗೆದುಕೊಂಡ ನಿರ್ಣಯಗಳನ್ನು ಇತರರು ಒಪ್ಪಿಕೊಳ್ಳಲೇಬೇಕು ಎಂಬ ಹಟ ಇರುತ್ತದೆ, ಅದರ ಪರಿಣಾಮವಾಗಿ ಯುದ್ಧ ಸಾರುವ ನಿರ್ಣಯ ಮಾಡುತ್ತಾರೆ. ಯುದ್ಧ ಮಾಡುವುದು ಸುಲಭ ಆದರೆ ನಂತರದ ವಿನಾಶಕಾರಿ ಪರಿಣಾಮಗಳನ್ನು ಊಹಿಸಲಸಾಧ್ಯ. ಹೋಗಲಿ ಬಿಡಿ ಈ ಯುದ್ಧ ಮತ್ತು ಅದರ ಆರ್ಥಿಕ ಪರಿಣಾಮಗಳನ್ನು ಜಾಗತಿಕ ನಾಯಕರು ಮತ್ತು ವಿಶ್ವಸಂಸ್ಥೆ ನೋಡಿಕೊಂಡು ನಿರ್ಧರಿಸೋವರೆಗೆ ಕಾಯುವ ಸಹನೆ ಅನಿವಾರ್ಯ.

ಇನ್ನು ಎರಡನೇ ಭಾಗವಾಗಿ ಇತ್ತೀಚೆಗೆ ಬಿಡುಗಡೆಯಾದ ‘ದ ಕಾಶ್ಮೀರಿ ಫೈಲ್ಸ್’ ಎಂಬ ಸಿನೆಮಾ ವಿವಾದ. ಈ ಸಿನೆಮಾ ನೋಡದವರು ದೇಶ ದ್ರೋಹಿಗಳು ಎಂದು ಹೇಳುವ ರಾಜಕಾರಣಿ ಒಬ್ಬರ ಓಲೈಕೆಯ ಪರಮಾವಧಿಗೆ ‘ಅಯ್ಯೋ’ ಎನಿಸುತ್ತದೆ. ಒಂದು ಕೃತಿಯನ್ನು ಓದಬೇಡ ಎಂದು ಹೇಳುವುದು ಎಷ್ಟು ಅಪಾಯಕಾರಿಯೋ, ಅಷ್ಟೇ ಅಪಾಯಕಾರಿ ಓದಲೇಬೇಕು ಎಂದು ಹೇಳುವುದು ಕೂಡ!

ಜಾಗತಿಕ ಇತಿಹಾಸದಲ್ಲಿ ದಬ್ಬಾಳಿಕೆ, ಶೋಷಣೆ ಮತ್ತು ಅತ್ಯಾಚಾರ ಇಂದಿನ ಕತೆಯಲ್ಲ. ಅಂತಹ ಒಂದು ಕ್ರೂರ ಹಿಂಸಾಚಾರ ಕಾಶ್ಮೀರದಲ್ಲಿ ನಡೆದದ್ದು ಅಕ್ಷಮ್ಯ. ಅದಕ್ಕೆ ಕಾರಣರಾದವರು ಸಿಕ್ಕರೆ ಖಂಡಿತವಾಗಿ ಶಿಕ್ಷೆ ನೀಡಲೇಬೇಕು. ಆದರೆ ಅದಕ್ಕೆ ಸಂಬAಧವಿರದ ಇಂದಿನ ತಲೆಮಾರಿನವರೊಂದಿಗೆ ದ್ವೇಷ ಕಾರುವುದು ಎಷ್ಟೊಂದು ಸಮಂಜಸ?

ದೇಶ ಪ್ರೇಮದ ಕೊರತೆ ಇಂದಿನ ಯುವಕರಲ್ಲಿ ಹೆಚ್ಚಾಗಿದೆ. ದೇಶಪ್ರೇಮ ಹೆಚ್ಚಿಸಲು ಇಂತಹ ಕ್ರಮ ಅನಿವಾರ್ಯ ಆದರೆ… ಈ ಹಿನ್ನೆಲೆಯಲ್ಲಿ ನಡೆಯುವ ಒತ್ತಾಯ ನಮ್ಮ ಕತ್ತು ಹಿಚುಕಿದಂತಾಗಬಾರದು. ಒಳ್ಳೆಯ ಪುಸ್ತಕ, ಒಳ್ಳೆಯ ಸಿನಿಮಾಕ್ಕೆ ಮನುಷ್ಯನ ಮನಸನ್ನು ಪರಿವರ್ತಿಸುವ ಶಕ್ತಿ ಇದೆ ಆದರೆ ಅದು ತನ್ನಷ್ಟಕ್ಕೆ ತಾನೇ ಸಂಭವಿಸಬೇಕು. ತಮ್ಮ ಬೇಳೆ ಬೇಯಿಸಿಕೊಳ್ಳುವ ಕೆಲವರು, ಹೀಗೆ ಸಮೂಹ ಸನ್ನಿ ಸೃಷ್ಟಿಸುವುದರ ಮೂಲಕ ಸಾಧ್ಯ ಎಂಬ ವಾದ-ವಿವಾದ ಎಷ್ಟರ ಮಟ್ಟಿಗೆ ಸರಿ ಎಂಬುದನ್ನು ಕೊಂಚ ಧ್ಯಾನಸ್ಥರಾಗಿ ಅಲೋಚಿಸೋಣ.

ಮೂರನೆಯದಾಗಿ ಹಿಜಾಬ್ ವಿವಾದದಲ್ಲಿ ಗೌರವಾನ್ವಿತ ಹೈಕೋರ್ಟ್ ತನ್ನ ನಿರ್ಣಯ ನೀಡಿದೆ. ನಮ್ಮಷ್ಟಕ್ಕೆ ನಾವೇ ನಿರ್ಣಯಿಸುವ ವಿಷಯಕ್ಕೆ, ನ್ಯಾಯಾಲಯದ ಮೆಟ್ಟಿಲೇರಿದ ಪ್ರತಿಯೊಬ್ಬರೂ ಇದನ್ನು ಗೌರವಿಸಿ ಅದರಂತೆ ನಡೆದುಕೊಳ್ಳಬೇಕು. ಹೈ ತೀರ್ಪಿನ ವಿರುದ್ಧ ಬೀದಿಗಿಳಿದು ಹೋರಾಟ ಮಾಡಿ, ಮಕ್ಕಳ ಭವಿಷ್ಯದೊಂದಿಗೆ ಚಲ್ಲಾಟವಾಡುವುದು ಸರಿಯಲ್ಲ. ಪರೀಕ್ಷೆ ಬಹಿಷ್ಕಾರದಂತಹ ನಿರ್ಣಯಕ್ಕೆ ವಿದ್ಯಾರ್ಥಿಗಳು ಮುಂದಾಗಬಾರದು. ಇದನ್ನು ಪಾಲಕರು ತಡೆದು ಮಕ್ಕಳ ಶೈಕ್ಷಣಿಕ ಭವಿಷ್ಯ ಕಾಪಾಡಬೇಕು, ಅದೇ ರೀತಿ ಸರ್ಕಾರ ಮಕ್ಕಳ ತಪ್ಪನ್ನು ಮನ್ನಿಸಿ ಮರು ಪರೀಕ್ಷೆಗೆ ಒಮ್ಮೆ ಅವಕಾಶ ಮಾಡಿಕೊಟ್ಟು ಕ್ಷಮಾಗುಣ ಮೆರೆಯಬೇಕು. ಯಾರದೋ ಹಟಕ್ಕೆ ವಿನಾಕಾರಣ ನಮ್ಮ ಯುವಕರು ಬಲಿಯಾಗಬಾರದು.

ಹೀಗೆ ಹತ್ತಾರು ಸಾರ್ವಜನಿಕ ಗೊಂದಲಕ್ಕೆ ಯುದ್ಧ,ಸಿನೆಮಾ ಮತ್ತು ಉಡುಪುಗಳು ಕಾರಣವಾದರೆ ಹೇಗೆ? ಇಂತಹ ಸಮೂಹ ಸನ್ನಿಗೆ ಸಾಮಾನ್ಯರು ಸದಾ ಬಲಿಯಾಗುವುದನ್ನು ಯಾರು ತಡೆಯಬಹುದು? ಇಂತಹ ಹತ್ತಾರು ಘಟನೆಗಳು ಒಬ್ಬ ಲೇಖಕನಲ್ಲಿ ಖಾಲಿತನ ಹುಟ್ಟಿಸುವುದು ಸಹಜ ಆದರೆ ಇದನ್ನು ರೈಟರ್ಸ್ ಬ್ಲ್ಯಾಂಕ್ ಎನ್ನಲಾಗದು. ವಿವಾದಿತ ಮಾತುಗಳಿಗಿಂತ ಒಮ್ಮೊಮ್ಮೆ ಮೌನ ಅನಿವಾರ್ಯ. ಮೌನದ ಮಾತು ಮತ್ತು ತಲ್ಲಣಗಳ ಧ್ಯಾನದ ಮೂಲಕ ಹೊಸ ಭರವಸೆ ಹುಟ್ಟಿಸಿಕೊಂಡು ಮುಂದೆ ಸಾಗುತ್ತಲೇ ಇರೋಣ.

ಸಿದ್ದು ಯಾಪಲಪರವಿ ಕಾರಟಗಿ.
9448358040

error: