April 23, 2024

Bhavana Tv

Its Your Channel

ಭಾರತ ಜೋಡೊ ಅಲ್ಲ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಜೋಡೊ ಯಾತ್ರೆ; ಅರುಣ್ ಸಿಂಗ್ ವ್ಯಂಗ್ಯ

ಹುಬ್ಬಳ್ಳಿ : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕರ್ನಾಟಕದಲ್ಲಿ ನಡೆಸಿದ ಯಾತ್ರೆ ಭಾರತ ಜೋಡೊ ಅಲ್ಲ. ಸಿದ್ಧರಾಮಯ್ಯ ಮತ್ತು ಡಿ.ಕೆ.ಶಿವಕುಮಾರ ಜೋಡೊ ಯಾತ್ರೆ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣಸಿಂಗ್ ವ್ಯಂಗ್ಯ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತ ಜೋಡೊ ಯಾತ್ರೆ ರಾಹುಲ್ ಗಾಂಧಿ ಅವರ ಮುಂಜಾನೆ ಮತ್ತು ಸಂಜೆಯ ವಾಕಿಂಗ್ ಯಾತ್ರೆಯಾಗಿದೆ ಅಷ್ಟೇ. ಇದರಲ್ಲಿ ದೇಶದ ಜನರ ಹಿತ ಚಿಂತನೆ ಅಡಗಿಲ್ಲ. ಕಂಪ್ಲೀಟ್ ಪ್ಲಾಪ್ ಶೋ ಹೈ ಎಂದು ಹೇಳಿದರು.
ಶೇ 40 ಭ್ರಷ್ಟಾಚಾರ ಆರೋಪ ನಿರಾಧಾರ. ನಿರಾಧಾರ ಅರೋಪಕ್ಕೆ ಏನು ಪ್ರತಿಕ್ರಿಯಿಸಬೇಕು. ದಾಖಲೆ ಒದಗಿಸಿ ತನಿಖೆ ನಡೆಸುತ್ತೇವೆ ಎಂದರೆ ಕಾಂಗ್ರೆಸ್ ನವರು ದಾಖಲೆ ಒದಗಿಸುತ್ತಿಲ್ಲ. ಅರೋಪ ಮಾಡಿದವರು ದಾಖಲೆ ಕೊಡಬೇಕಲ್ಲ ಎಂದು ಪ್ರಶ್ನಿಸಿದರು.
ಡಬಲ್ ಎಂಜಿನ್ ಸರ್ಕಾರ,ಅಭಿವೃದ್ಧಿಪರ ಆಡಳಿತದಿಂದ ರಾಜ್ಯದಲ್ಲಿ ಮತ್ತೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ. ಕನಿಷ್ಠ 150 ಸ್ಥಾನಗಳನ್ನು ನಮ್ಮ ಪಕ್ಷ ಗಳಿಸಲಿದೆ. ಪಕ್ಷ ಸಂಘಟನೆ, ಚುನಾವಣೆ ತಯಾರಿಗಾಗಿ ರಾಜ್ಯದಲ್ಲಿ ಪಕ್ಷದ ನಾಯಕರು ವಿವಿಧ ತಂಡಗಳಾಗಿ ಪ್ರವಾಸ ಕೈಗೊಂಡಿದ್ದಾರೆ. ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸುತ್ತಿದ್ದಾರೆ. ಸರ್ಕಾರದ ಜನಪರ ಯೋಜನೆಗಳ ತ್ವರಿತ ಅನುಷ್ಠಾನಕ್ಕೆ ಮುಂದಾಗಿದ್ದಾರೆ ಎಂದರು.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರನ್ನು ಕಾಂಗ್ರೆಸ್ ತನ್ನ ಓಟ್ ಬ್ಯಾಂಕ್ ಆಗಿ ಬಳಸಿಕೊಂಡಿತು. ಆದರೆ, ಬಿಜೆಪಿ ಸರ್ಕಾರ ಅವರಿಗೆ ಅಭಿವೃದ್ಧಿ ಯೋಜನೆಗಳನ್ನು ಅವರ ಕಲ್ಯಾಣಕ್ಕೆ ಮುಂದಾಯಿತು. ಈಗ ಮೀಸಲಾತಿ ಪ್ರಮಾಣ ಹೆಚ್ಚಳ ಮಾಡುವ ಮೂಲಕ ಈ ಸಮುದಾಯದ ಬಗ್ಗೆ ಇರುವ ಕಾಳಜಿಯನ್ನು ತೋರಿಸಿಕೊಟ್ಟಿದೆ ಎಂದರು.
ಪರಿಶಿಷ್ಟರ ಬಗ್ಗೆ ಮಾತನಾಡುವ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರು ಬಿಜೆಪಿಯ ಪರಿಶಿಷ್ಟ ಪಂಗಡದ ನಾಯಕ ಬಿ.ಶ್ರೀರಾಮುಲು ಅವರ ಬಗ್ಗೆ ಅತ್ಯಂತ ತಳಮಟ್ಟದ ಶಬ್ದಗಳನ್ನು ಬಳಸಿ ಟೀಕೆ ಮಾಡುತ್ತಾರೆ. ಆ ಸಮುದಾಯಕನನ್ನು ಗೌರವಿಸುವ ರೀತಿಯೇ ಇದು ಎಂದು ಪ್ರಶ್ನಿಸಿದರು.

error: