April 24, 2024

Bhavana Tv

Its Your Channel

1-9 ತರಗತಿಗಳಿಗೆ ಪರೀಕ್ಷೆ ಇಲ್ಲ, ಮೌಲ್ಯಾಂಕನ ವಿಶ್ಲೇಷಣಾ ಫಲಿತಾಂಶ -ಸುರೇಶ್ ಕುಮಾರ್

ಬೆಂಗಳೂರು: ಕೊರೊನಾ ಸೋಂಕಿನ ಎರಡನೇ ಅಲೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಒಂದರಿಂದ ಒಂಭತ್ತನೇ ತರಗತಿಗಳ ಮೌಲ್ಯಾಂಕನ ವಿಶ್ಲೇಷಣೆ ಮಾಡಿ ಫಲಿತಾಂಶ ಪ್ರಕಟಣೆ ನಿರ್ಧರಿಸಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.

ಒಂದರಿಂದ ಐದನೇ ತರಗತಿ ಮತ್ತು ಆರರಿಂದ ಒಂಭತ್ತನೇ ತರಗತಿಗಳವರೆಗೆ ಮೌಲ್ಯಾಂಕನ ಕುರಿತು ಪ್ರತ್ಯೇಕ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ. 1ರಿಂದ 9ನೇ ತರಗತಿಗಳ ವಿದ್ಯಾರ್ಥಿಗಳಿಗೆ ವಿದ್ಯಾಗಮ ಕಾರ್ಯಕ್ರಮದಲ್ಲಿ ನಿರ್ವಹಿಸಿದ ದಾಖಲೆಗಳು/ ಸಂವಹನದ ಆಧಾರದ ಮೇಲೆ ಕೆಲವು ಶಾಲೆಯವರು ಆನ್‍ಲೈನ್ ಮೂಲಕ ತರಗತಿ ನಿರ್ವಹಿಸಿದ್ದಲ್ಲಿ ಆ ಸಂದರ್ಭದಲ್ಲಿ ಅವಲೋಕಿಸಿದ ವಿದ್ಯಾರ್ಥಿಗಳ ಕಲಿಕಾ ಪ್ರಗತಿ, ಮಕ್ಕಳಿಗೆ ನೀಡಿದ್ದ ಪ್ರಬಂಧ, ಗೃಹ ಕೆಲಸ ಇತರೆ ಚಟುವಟಿಕೆಗಳನ್ನಾಧರಿಸಿದ ಕೃತಿ ಸಂಪುಟ/ ಚೈಲ್ಡ್ ಪ್ರೊಫೈಲ್, ಇತರೆ ಲಭ್ಯ ದಾಖಲೆಗಳನ್ನು ಅವಲೋಕಿಸಿ ಈವರೆಗೆ ಪೂರೈಸಿದ ಪಠ್ಯವಸ್ತು/ಸಾಮರ್ಥ್ಯ/ ಕಲಿಕಾ-ಫಲಗಳ ಸಾಧನೆ ಮತ್ತು ಕೊರತೆಗಳನ್ನು ಶಾಲಾ ಹಂತದಲ್ಲಿ ಸಿಸಿಇ ನಿಯಮಗಳಂತೆ ವಿಶ್ಲೇಷಿಸಿ ಪ್ರಗತಿ ಪತ್ರದಲ್ಲಿ ದಾಖಲಿಸಲಾಗುತ್ತದೆ ಎಂದು ಅವರು ಮಂಗಳವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮುಂದಿನ ತರಗತಿಗೆ ಬಡ್ತಿ ನೀಡುವುದು ಮತ್ತು ಅದನ್ನು ಪ್ರಗತಿ ಪತ್ರದಲ್ಲಿ ದಾಖಲಿಸುವುದು ಸೇರಿದಂತೆ ಈ ಎಲ್ಲ ಪ್ರಕ್ರಿಯೆಗಳನ್ನು ಏಪ್ರಿಲ್ 30ರೊಳಗೆ ನಿರ್ವಹಿಸಿ ಫಲಿತಾಂಶ ದಾಖಲಿಸಿ ಪೂರ್ಣಗೊಳಿಸಲು ನಿರ್ದೇಶನ ನೀಡಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಒಂದರಿಂದ ಐದನೇ ತರಗತಿಗಳು:

  • ಒಂದರಿಂದ ಐದನೇ ತರಗತಿವರೆಗೆ ಶಾಲಾ ಹಂತದಲ್ಲಿ ಮಕ್ಕಳ ಪ್ರಗತಿ ವಿಶ್ಲೇಷಿಸಿ ಎಲ್ಲ ವಿದ್ಯಾರ್ಥಿಗಳನ್ನು ಮುಂದಿನ ತರಗತಿಗಳಿಗೆ ಬಡ್ತಿ ನೀಡಲಾಗುವುದು.
  • ಹಾಗೆಯೇ ಈ ತರಗತಿಗಳ ವಿದ್ಯಾರ್ಥಿಗಳು ಶಾಲೆಗೆ ಭೌತಿಕವಾಗಿ ಹಾಜರಾಗಲು ಇದುವರೆವಿಗೂ ಕೋವಿಡ್-19 ರಾಜ್ಯ ತಾಂತ್ರಿಕ ಸಲಹಾ ಸಮಿತಿ ಅವಕಾಶ ಕಲ್ಪಿಸದೇ ಇರುವ ಹಿನ್ನೆಲೆಯಲ್ಲಿ ಈ ಮಕ್ಕಳಿಗೆ ಪ್ರತ್ಯೇಕ ಆನ್‍ಲೈನ್ ಇಲ್ಲವೇ ಆಫ್‍ಲೈನ್ ಮೂಲಕವೂ ಸಹ ಮೌಲ್ಯಾಂಕನ ಮಾಡಬಾರದು. ಮೌಲ್ಯಾಂಕನಕ್ಕಾಗಿ ಈ ಮಕ್ಕಳನ್ನು ಶಾಲೆಗಳಿಗೆ ಹಾಜರಾಗುವಂತೆ ಸೂಚಿಸಬಾರದು.

ಆರರಿಂದ ಒಂಭತ್ತನೇ ತರಗತಿಗಳು

  • 6ರಿಂದ 9ನೇ ತರಗತಿಗಳ ಮಕ್ಕಳು ಭೌತಿಕವಾಗಿ ತರಗತಿಗಳಿಗೆ ಹಾಜರಾಗುತಿದ್ದರು. ಹಾಗೆಯೇ ದೂರದರ್ಶನ ಚಂದನ ವಾಹಿನಿಯ ಸಂವೇದ, ಇ-ಕಲಿಕಾ, ಆನ್‍ಲೈನ್ ಸೇರಿದಂತೆ ವಿವಿಧ ಪ್ರಕಾರದಲ್ಲಿ ಪಾಠ ಪ್ರವಚನ ಆಲಿಸಿರುವ ಹಿನ್ನಲೆಯಲ್ಲಿ ಈ ಮೇಲಿನ ಪಾಠ ಪ್ರವಚನ, ಕಲಿಕಾ ಪೂರಕ ಚಟುವಟಿಕೆ, ಪ್ರಾಜೆಕ್ಟ್ ಚಟುವಟಿಕೆಗಳ ನೆಲೆಯಲ್ಲಿ ಈಗಾಗಲೇ ಕೈಗೊಂಡಿರುವ ರೂಪಣಾತ್ಮಕ ಮೌಲ್ಯಮಾಪನ ಹಾಗೂ ಸಂಕಲನಾತ್ಮಕ ಮೌಲ್ಯಮಾಪನವನ್ನು ನಿರ್ವಹಿಸಿದ ದಾಖಲೆಗಳನ್ನಾಧರಿಸಿ ಪಡೆದ ಅಂಕಗಳನ್ನು 100ಕ್ಕೆ ವೃದ್ಧಿಸಿ ಶ್ರೇಣಿ ನಮೂದಿಸಿ ಮುಂದಿನ ತರಗತಿಗಳಿಗೆ ಬಡ್ತಿ ನೀಡಲಾಗುತ್ತದೆ.
  • 6ರಿಂದ 9ನೇ ತರಗತಿಗಳಿಗೆ 2020ರ ಆಗಸ್ಟ್ 4ರಿಂದ ಅಕ್ಟೋಬರ್ 10ರವರೆಗೆ ವಿದ್ಯಾಗಮ ತರಗತಿಗಳು ನಡೆದಿವೆ. 2021 ಜನವರಿ 29ರಿಂದ ಫೆಬ್ರವರಿ 1ರವರೆಗೆ 9 ಮತ್ತು 10ನೇ ತರಗತಿಗಳು ಪೂರ್ಣವಾಗಿ ನಡೆದಿವೆ. ಫೆ. 22ರಿಂದ ಬೆಂಗಳೂರು ನಗರ ಮತ್ತು ಕೇರಳ ಗಡಿ ಭಾಗದ ಪ್ರದೇಶಗಳ ಶಾಲೆಗಳಲ್ಲಿ ವಿದ್ಯಾಗಮ ತರಗತಿಗಳು ನಡೆದಿವೆ. ಉಳಿದಂತೆ ರಾಜ್ಯದ ಎಲ್ಲ ಕಡೆಗಳಲ್ಲಿ ಈ ಅವಧಿಯಲ್ಲಿ ಪೂರ್ಣಾವಧಿ ಭೌತಿಕ ತರಗತಿಗಳು ನಡೆದಿವೆ. ಆನ್‍ಲೈನ್ ಸೇರಿದಂತೆ ವಿವಿಧ ಪ್ರಕಾರದ ತರಗತಿಗಳು ನಡೆದಿವೆ. ಈ ಹಿನ್ನೆಲೆಯಲ್ಲಿ 6ರಿಂದ 9ನೇ ತರಗತಿಗಳ ಮೌಲ್ಯಾಂಕನ ವಿಶ್ಲೇಷಣೆ ಹಾಗೂ ಫಲಿತಾಂಶ ಪ್ರಕಟಣೆ ಮಾಡಲಾಗತ್ತದೆ.
  • ಈ ತರಗತಿಗಳ ವಿದ್ಯಾರ್ಥಿಗಳಿಗೆ ಈವರೆಗೂ ಪೂರೈಸಿದ ಚಟುವಟಿಕೆಗಳನ್ನು ಆಧರಿಸಿ ಮಾತ್ರ ಮೌಲ್ಯಂಕನ ಮಾಡಲು ತಿಳಿಸಿರುವುದರಿಂದ ಈ ಮಕ್ಕಳಿಗೆ ಪ್ರತ್ಯೇಕ ಆನ್‍ಲೈನ್/ಆಫ್‍ಲೈನ್ ಮೂಲಕ ಮೌಲ್ಯಾಂಕನ ಮಾಡಬಾರದು.

ಮೌಲ್ಯಾಂಕನ ವಿಶ್ಲೇಷಣೆಯ ಅನುಪಾಲನೆ

  • ಈ ಮೌಲ್ಯಾಂಕನದ ಉದ್ದೇಶ ವಿದ್ಯಾರ್ಥಿಗಳನ್ನು ಉತ್ತೀರ್ಣ/ಅನುತ್ತೀರ್ಣ ಎಂದು ತೀರ್ಮಾನಿಸುವುದಲ್ಲ. ಬದಲಾಗಿ ಅವರ ಕಲಿಕೆಯ ಪ್ರಗತಿ ಹಾಗೂ ಕೊರತೆಯನ್ನು ತಿಳಿದು ಮುಂದಿನ ಶೈಕ್ಷಣಿಕ ವರ್ಷದ ಆರಂಭದಲ್ಲಿ ಸೇತು-ಬಂಧ ಕಾರ್ಯಕ್ರಮವನ್ನು ನಡೆಸಿ ಈ ಕೊರತೆಯನ್ನು ತುಂಬಲು ಕ್ರಮ ವಹಿಸಲು ಶಾಲಾ ಯೋಜನೆಯನ್ನು ತಯಾರಿಸಲಾಗುತ್ತದೆ.
  • 2021-22ನೇ ಶೈಕ್ಷಣಿಕ ಸಾಲಿನಲ್ಲಿ ಶಾಲೆಗಳು ಪುನರಾರಂಭವಾದ ನಂತರ ಈ ಮಕ್ಕಳಿಗೆ ಕಳೆದ ಸಾಲಿನಲ್ಲಿ ಹಿಂದಿನ ತರಗತಿಯಲ್ಲಿನ ಕಲಿಕಾ ಸಾಮರ್ಥ್ಯಗಳ ಬಗ್ಗೆ ನೈದಾನಿಕ ಪರೀಕ್ಷೆ ನಡೆಸಿ ಅವರಲ್ಲಿ ಇರುವ ಕಲಿಕಾ ಕೊರತೆಯನ್ನು ಗುರುತಿಸುವುದು. ಈ ಕೊರತೆಗಳು ಹಾಗೂ ಹಿಂದಿನ ವರ್ಷ ಪಟ್ಟಿ ಮಾಡಿ ಇಟ್ಟುಕೊಂಡಿದ್ದ ಕಲಿಕಾ ಕೊರತೆಗಳನ್ನು ಆಧರಿಸಿ ಪ್ರತಿ ಮಗುವಿನವಾರು ನಿರ್ದಿಷ್ಟ ತಂತ್ರಗಳನ್ನು ರೂಪಿಸಿ ಸೇತು-ಬಂಧ ಮುಖೇನ ಪರಿಹಾರ ಬೋಧನೆ ನಡೆಸುವುದು. ನಂತರ ಸಾಫಲ್ಯ ಪರೀಕ್ಷೆ ನಡೆನಸಿ ಮಕ್ಕಳಲ್ಲಿ ಕಲಿಕೆ ಆಗಿರುವುದನ್ನು ದೃಢೀಕರಿಸಿ ಮುಂದಿನ ತರಗತಿಯ ಪಠ್ಯಾಧಾರಿತ ಕಲಿಕಾಂಶಗಳ ಬೋಧನೆಯನ್ನು ಆರಂಭಿಸುವುದು.

sources:News First Live

error: