September 27, 2021

Bhavana Tv

Its Your Channel

ಹಟ್ಟಿಯಂಗಡಿ ರಾಮಚಂದ್ರ ಭಟ್ಟರ ಶಿಲಾ ಪ್ರತಿಮೆ ಹಾಗೂ ಸ್ಮಾರಕವನ್ನು ಅನಾವರಣಗೊಳಿಸಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ

ಹಟ್ಟಿಯಂಗಡಿ: ದೇವರ ಪೂಜೆ, ಶೃದ್ಧೆ, ಭಕ್ತಿ, ಧಾರ್ಮಿಕ ಆಚರಣೆಗೆ ಹಟ್ಟಿಯಂಗಡಿ ರಾಮಚಂದ್ರ ಭಟ್ಟರು ಮಾದರಿಯಾಗಿದ್ದರು ಎಂದು ರಾಜ್ಯದ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಅವರು ಹಟ್ಟಿಯಂಗಡಿಯಲ್ಲಿ ನಿರ್ಮಾಣ ಮಾಡಲಾದ ಹಟ್ಟಿಯಂಗಡಿ ರಾಮಚಂದ್ರ ಭಟ್ಟರ ಶಿಲಾ ಪ್ರತಿಮೆ ಹಾಗೂ ಸ್ಮಾರಕವನ್ನು ಅನಾವರಣಗೊಳಿಸಿ ಮಾತನಾಡುತ್ತಿದ್ದರು.
ರಾಜ್ಯದಲ್ಲಿನ ಎಲ್ಲಾ ದೇವಸ್ಥಾನಗಳಲ್ಲಿ ಹಟ್ಟಿಯಂಗಡಿ ರಾಮಚಂದ್ರ ಭಟ್ಟರ ಪೂಜಾ ಪದ್ಧತಿ, ಶೃದ್ಧೆ, ನಂಬಿಕೆ, ಆಚಾರ-ವಿಚಾರ, ಭಕ್ತರಲ್ಲಿ ಮೂಡಿಸುವ ನಂಬಿಕೆ, ತೋರಿಸುವ ಪ್ರೀತಿ ಅನುಸರಿಸಿಕೊಂಡಲ್ಲಿ ಧಾರ್ಮಿಕ ಕ್ಷೇತ್ರದಲ್ಲಿ ನಮ್ಮ ರಾಜ್ಯ ಸುಭಿಕ್ಷವಾಗುತ್ತದೆ ಎನ್ನುವುದನ್ನು ಈ ಹಿಂದೆ ವಿಧಾನ ಸೌಧದ ಬಾಂಕ್ವೆಟ್ ಹಾಲ್‌ನಲ್ಲಿ ನಡೆದ ಶಾಸಕರು, ಸಂಸದರು, ಧಾರ್ಮಿಕ ಮುಖಂಡರ ಸಭೆಯಲ್ಲಿ ಪ್ರಸ್ತಾಪ ಮಾಡಿದ್ದನ್ನು ಸ್ಮರಿಸಿಕೊಂಡ ಅವರು ರಾಮಚಂದ್ರ ಭಟ್ಟರು ಪೂಜಾ ಪದ್ಧತಿಗೆ ಮಾದರಿಯಾಗಿದ್ದರು ಎಂದರು. ಕಲ್ಲಿನಲ್ಲಿ ಓರ್ವ ವ್ಯಕ್ತಿಯ ಪ್ರತಿಮೆಯನ್ನು ಮಾಡುವುದು ಸುಲಭದ ಕೆಲಸವಲ್ಲ, ಆದರೆ ಇಲ್ಲಿ ೧೦೦ಕ್ಕೆ ೧೦೦ ರಾಮಚಂದ್ರ ಭಟ್ಟರನ್ನು ಹೋಲುವಂತಹ ಪ್ರತಿಮೆ ಮಾಡಿರುವುದು ಶ್ಲಾಘನೀಯವಾಗಿದೆ. ತಮ್ಮ ಬದುಕನ್ನು ಧಾರ್ಮಿಕ ಕ್ಷೇತ್ರಕ್ಕೆ ಸಮರ್ಪಣೆ ಮಾಡಿ, ಒಂದು ಕುಗ್ರಾಮದಲ್ಲಿರುವ ದೇವಸ್ಥಾನವನ್ನು ಪ್ರಪಂಚಕ್ಕೆ ಪರಿಚಯಿಸಿದ್ದಾರೆ. ಹಟ್ಟಿಯಂಗಡಿಯ ಈ ಗ್ರಾಮ ಮುಂದೆ ಧಾರ್ಮಿಕ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಒಂದು ಮಾದರಿ ಕ್ಷೇತ್ರವಾಗಲಿ ಎಂದೂ ಹಾರೈಸಿದರು.
ಸಂಜೆ ನಡೆದ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಶ್ರೀ ಸಿದ್ಧಿ ಶಿಕ್ಷಣ ಪ್ರತಿಷ್ಟಾನದ ಅಧ್ಯಕ್ಷ ಹಾಗೂ ಸಾಗರದ ಮಾಜಿ ಶಾಸಕ ಎಲ್.ಟಿ. ತಿಮ್ಮಪ್ಪ ಹೆಗಡೆ ಹಟ್ಟಿಯಂಗಡಿಯಲ್ಲಿ ತಾವು ಅಂದುಕೊAಡಿದನ್ನು ಸಾಧಿಸಿ ತೋರಿಸಿದ ರಾಮಂದ್ರ ಭಟ್ಟರ ಶೃದ್ಧಾ ಭಕ್ತಿಗೆ ತಾವೂ ಕೂಡಾ ಮಾರು ಹೋಗಿದ್ದನ್ನು ಉದಾಹರಣೆ ಸಹಿತ ವಿವರಿಸಿದರು. ಅನೇಕ ಬಾರಿ ತಾವು ಸಾಧ್ಯವಿಲ್ಲ ಎಂದು ಕೊಂಡಿದ್ದನ್ನು ಭಟ್ಟರು ಸಾಧಿಸಿದ್ದರು, ಅವರು ಭಕ್ತರಲ್ಲಿ ಇಟ್ಟಿರುವ ವಿಶ್ವಾಸವೇ ಇದಕ್ಕೆಲ್ಲ ಕಾರಣ ಎಂದೂ ಹೇಳಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಮಾತನಾಡಿದ ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ಕ್ಷೇತ್ರದ ಧರ್ಮಕರ್ತರಾದ ಡಾ. ಜಿ. ಭೀಮೇಶ್ವರ ಜೋಷಿ ಅವರು ರಾಮಚಂದ್ರ ಭಟ್ಟರು ಮಹಾಗಣಪತಿಯ ಆರಾಧನೆಯನ್ನು ಮಾಡಿಕೊಂಡು ಬಂದಿದ್ದು ಗಣಪತಿಯ ದರ್ಶನ ಮಾಡಿದವರು ಭಟ್ಟರ ದರ್ಶನ ಪಡೆದು ಆಶೀರ್ವಾದ ಪಡೆದೇ ಹೋಗುತ್ತಿದ್ದರು ಎಂದರು.

ಬೈಂದೂರು ಕ್ಷೇತ್ರದ ಮಾಜಿ ಶಾಸಕ ಗೋಪಾಲ ಪೂಜಾರಿ ಅವರು ಮಾತನಾಡಿ ಕಳೆದ ಹಲವಾರು ವರ್ಷಗಳಿಂದ ಹಟ್ಟಿಯಂಗಡಿ ಕ್ಷೇತ್ರದ ಬೆಳವಣಿಗೆಯನ್ನು ಹತ್ತಿರದಿಂದ ನೋಡುತ್ತಿದ್ದೇನೆ. ರಾಮಚಂದ್ರ ಭಟ್ಟರು ಕ್ಷೇತ್ರ ಅಭಿವೃದ್ಧಿಗೆ ಎಲ್ಲರ ಸಹಕಾರವನ್ನು ಪಡೆದು ಮುಂದುವರಿಯುತ್ತಿದ್ದರು ಎಂದರು.

ಕರ್ಣಾಟಕ ಬ್ಯಾಂಕಿನ ಆಡಳಿತ ವ್ಯವಸ್ಥಾಪಕ ಮಹಾಬಲೇಶ್ವರ ಎಂ.ಎಸ್. ಅವರು ಮಾತನಾಡಿ ಬಹಳ ವರ್ಷಗಳಿಂದ ಈ ಕ್ಷೇತ್ರವನ್ನು ನೋಡುತ್ತಾ ಬಂದಿದ್ದು ಅಂದಿಗೂ ಇಂದಿಗೂ ಮಹತ್ತರ ಬದಲಾವಣೆಯಾಗಿದೆ ಎಂದು ಹೇಳಿದ ಅವರು ಶಾಲಾ ಸ್ಥಾಪನೆಯ ಸಂದರ್ಭದಲ್ಲಿ ತಮ್ಮ ಭೇಟಿಯಾಗಿದ್ದನ್ನು ಸ್ಮರಿಸಿದರು.

ಧರ್ಮಸ್ಥಳದ ಭುಜಬಲಿಯವರು ಮಾತನಾಡಿ ತಮ್ಮ ರತ್ನಮಾನಸದಲ್ಲಿ ವಿದ್ಯಾಭ್ಯಾಸ ಮಾಡಿದ ರಾಮಚಂದ್ರ ಭಟ್ಟರ ಪುತ್ರರು ಕೂಡಾ ಅವರಂತೆಯೇ ಶೃದ್ಧಾ, ಭಕ್ತಿ ಹಾಗೂ ಜನರ ವಿಶ್ವಾಸವನ್ನು ಗಳಿಸಿಕೊಂಡಿರುವುದು ತಮ್ಮ ಸಂಸ್ಥೆಗೆ ಹೆಮ್ಮೆಯಾಗಿದೆ. ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯು ಅತ್ಯಂತ ಸ್ವಚ್ಚತೆ, ಶಿಸ್ತು ಬದ್ಧವಾಗಿ ಇರುವುದು ನೋಡಿ ಸಂತಸವಾಗಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದ ವೇ.ಮೂ. ಭಾಲಚಂದ್ರ ಭಟ್ಟ ಅವರು ಹಟ್ಟಿಯಂಗಡಿ ಕ್ಷೇತ್ರ ಬೆಳೆದು ಬಂದ ದಾರಿಯನ್ನು ವಿವರಿಸುತ್ತಾ ರಾಮಚಂದ್ರ ಭಟ್ಟರ ಧರ್ಮಪತ್ನಿ ರಮಾದೇವಿ ಹಾಗೂ ಕುಟುಂಬಿಕರ ಇಚ್ಚೆಯಂತೆ ಸ್ಮಾರಕ ನಿರ್ಮಾಣ ಮಾಡಿದ್ದು, ಅವರ ಸಾಧನೆ ತಮಗೆಲ್ಲರೂ ದಾರಿದೀಪವಾಗಿದೆ ಎಂದರು.
ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಅಧ್ಯ÷ಕ್ಷೆ ಅಮೃತಾ ಭಂಡಾರಿ, ರಾಮಚಂದ್ರ ಭಟ್ಟರ ಧರ್ಮಪತ್ನಿ ರಮಾದೇವಿ, ಪುತ್ರ ಹಾಗೂ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯ ಪ್ರಾಂಶುಪಾಲ ಶರಣಕುಮಾರ್, ದಿವ್ಯಾ ರಾಜೇಂದ್ರಕುಮಾರ್ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ವಿವಿಧ ದೇವಾಲಯಗಳಿಗೆ ಹಾಗೂ ಅಶಕ್ತರಿಗೆ ಸಹಾಯಧನ ವಿತರಣೆಯನ್ನು ಮಾಡಲಾಯಿತು.

error: