March 29, 2024

Bhavana Tv

Its Your Channel

ಅನುಮಾನಾಸ್ಪದ ವಾಹನ ಬೆನ್ನಟ್ಟಿದ ಪೊಲೀಸ್ ಜೀಪ್ ಪಲ್ಟಿ : ಸಂಪೂರ್ಣ ಹಾನಿ, ಅಧಿಕಾರಿಗಳಿಗೆ ಹಳೆಯ ವಾಹನ ಬಳಕೆಗೆ ಸಾರ್ವಜನಿಕರ ಆಕ್ರೋಶ

ಬೈಂದೂರು: ಅಪರಾತ್ರಿಯಲ್ಲಿ ಅನುಮಾನಸ್ಪದವಾಗಿ ತಿರುಗಾಡುತ್ತಿದ್ದ ವಾಹನವೊಂದನ್ನು ಬೆನ್ನಟ್ಟಿದ ಪೊಲೀಸ್ ಜೀಪೊಂದು ಪಲ್ಟಿಯಾದ ಪರಿಣಾಮ ವಾಹನ ಸಂಪೂರ್ಣ ನುಜ್ಜುಗುಜ್ಜಾಗಿದ್ದಲ್ಲದೇ ಅಧಿಕಾರಿ ಹಾಗೂ ಚಾಲಕ ಗಾಯಗೊಂಡ ಘಟನೆ ಗುರುವಾರ ತಡರಾತ್ರಿ ಬೈಂದೂರು ಸಮೀಪದ ಒತ್ತಿನೆಣೆ ಎಂಬಲ್ಲಿ ನಡೆದಿದೆ.
ಬೈಂದೂರು ವೃತ್ತ ನಿರೀಕ್ಷಕರ ವಾಹನವೇ ಪಲ್ಟಿಯಾಗಿದ್ದು, ವೃತ್ತ ನಿರೀಕ್ಷಕ ಸುರೇಶ್ ನಾಯಕ್ ಹಾಗೂ ಚಾಲಕ ಹೇಮರಾಜ್ ಗಾಯಗೊಂಡಿದ್ದಾರೆ.

ಬೈಂದೂರಿನಲ್ಲಿ ಗುರುವಾರ ರಾತ್ರಿ ವೃತ್ತ ನಿರೀಕ್ಷಕ ಸುರೇಶ್ ನಾಯಕ್ ಹಾಗೂ ಅವರ ಚಾಲಕ ಹೇಮರಾಜ್ ರಾತ್ರಿ ಗಸ್ತಿನಲ್ಲಿದ್ದರು. ರೌಂಡ್ಸ್ ವೇಳೆ ಮಧ್ಯರಾತ್ರಿ ಸುಮಾರು 1 ಗಂಟೆ ಹೊತ್ತಿಗೆ ಅನುಮಾನಾಸ್ಪದವಾಗಿ ಮಾರುತಿ ಓಮ್ನಿ ಒಂದು ತಿರುಗಾಡುತ್ತಿರುವುದನ್ನು ಗಮನಿಸಿದ್ದು ಅದನ್ನು ಹಿಂಬಾಲಿಸಿದ್ದಾರೆ. ಈ ಸಂದರ್ಭ ಓಮ್ನಿಯಲ್ಲಿದ್ದವರು ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಸುರೇಶ್ ನಾಯಕ್ ವಾಹನವನ್ನು ಚೇಸ್ ಮಾಡುವಂತೆ ಚಾಲಕನಿಗೆ ಸೂಚಿಸಿದ್ದಾರೆ. ಓಮ್ನಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಬೈಂದೂರಿನಿಂದ ಒತ್ತಿನೆಣೆ ಕಡೆಗೆ ವೇಗವಾಗಿ ಚಲಿಸಿದೆ. ಇದನ್ನು ಗಮನಿಸಿದ ಪೊಲೀಸ್ ಜೀಪ್ ಅದನ್ನು ಬೆನ್ನಟ್ಟಿದೆ. ಈ ಸಂದರ್ಭ ರಾಘವೇಂದ್ರ ಮಠದ ಸಮೀಪ ನಿಯಂತ್ರಣ ಕಳೆದುಕೊಂಡ ಜೀಪ್ ಪಲ್ಟಿಯಾಗಿದೆ ಎಂದು ತಿಳಿದು ಬಂದಿದೆ. ಘಟನೆಯಲ್ಲಿ ಜೀಪ್ ಸಂಪೂರ್ಣ ನುಜ್ಜುಗುಜ್ಜಾಗಿದೆ. ಇಬ್ಬರೂ ಕುಂದಾಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪೊಲೀಸ್ ಇಲಾಖೆಯಲ್ಲಿ ಹಳೆಯ ವಾಹನ ಬಳಕೆಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಬಹುತೇಕ ಎಲ್ಲಾ ಪೊಲೀಸ್ ಠಾಣೆಗಳ ಎಸೈ, ವೃತ್ತ ನಿರೀಕ್ಷಕರು ರಾತ್ರಿ ಗಸ್ತು ನಡೆಸುತ್ತಾರೆ. ಹಗಲಿನ ವೇಳೆಯಲ್ಲಿಯೂ ಆರೋಪಿಗಳ ಪತ್ತೆಗಾಗಿ ವಾಹನ ಬಳಸುತ್ತಾರೆ. ಆದರೆ ಬಹುತೇಕ ಎಲ್ಲಾ ಠಾಣೆಗಲ್ಲಿಯೂ ಹಳೆಯದಾದ ಗುಜುರಿಗೆ ಹಾಕಬಹುದಾದ ವಾಹನಗಳನ್ನು ಬಳಸಲಾಗುತ್ತಿದೆ. ಇದರಿಂದ ಆರೋಪಿಗಳು ಸುಲಭವಾಗಿ ತಪ್ಪಿಸಿಕೊಳ್ಳಲು ಸಾಧ್ಯವಾಗುತ್ತದೆ. ಕಾನೂನು ರಕ್ಷಣೆ ಮಾಡಬೇಕಾದ ಪೊಲೀಸರಿಗೆ ಸೂಕ್ತ ಭದ್ರತೆ ಇಲ್ಲದಂತಾಗಿದೆ. ಪೊಲೀಸರು ಹಾಕಿದ ದಂಡದ ಮೊತ್ತದಲ್ಲಿಯೇ ವಾಹನಗಳನ್ನು ಖರೀದಿಸಿದರೂ ಎಲ್ಲಾ ಅಧಿಕಾರಿಗಳಿಗೆ ಹೊಸ ವಾಹನಗಳನ್ನು ನೀಡಿ ಠಾಣೆಯ ಅಭಿವೃದ್ಧಿ ಮಾಡುವಷ್ಟು ಹಣ ಇದೆ. ಆದರೂ ಸರ್ಕಾರ ನಿರ್ಲಕ್ಷ್ಯ ವಹಿಸುತ್ತಿದೆ ಎನ್ನುವ ಆರೋಪಗಳು ಕೇಳಿ ಬಂದಿವೆ. ಇನ್ನಾದರೂ ಸಂಬಂಧ ಪಟ್ಟ ಹಿರಿಯ ಅಧಿಕಾರಿಗಳು ಕ್ರಿಯಾಯೋಜನೆ ತಯಾರಿಸಿ ಸರ್ಕಾರದ ಗಮನಕ್ಕೆ ತರುವ ಮೂಲಕ ಪೊಲೀಸರಿಗೆ ಸುಸಜ್ಜಿತ ವಾಹನ ನೀಡುವರೇ ಕಾದು ನೋಡಬೇಕಾಗಿದೆ

error: