April 24, 2024

Bhavana Tv

Its Your Channel

ಕಾರ್ಕಳ; ಟೋಲ್ ಗೇಟ್ ತೆರವು ಹೋರಾಟಕ್ಕೆ ಸಂದ ಜಯ

ಕೈ ಜೋಡಿಸಿದ ಸಮಸ್ತ ಜನತೆಗೆ ಅಭಿನಂದನೆ ಸಲ್ಲಿಸಿದ ಶುಭದ ರಾವ್

ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಿಸಿದ ಹೋರಾಟ ಸಮಿತಿ ಸದಸ್ಯರು

ಕಾರ್ಕಳ:- ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ, ಸುರತ್ಕಲ್ ಇದರ ನೇತೃತ್ವದಲ್ಲಿ ಸತತ ಆರುವರ್ಷಗಳ ಕಾಲ ಪಟ್ಟು ಬಿಡದೆ ನಡೆಸಿದ ಹೋರಾಟದಿಂದ ಸುರತ್ಕಲ್ ಅಕ್ರಮ ಟೋಲ್ ಗೇಟ್ ಕೊನೆಗೂ ಮುಚ್ಚಲ್ಪಟ್ಟಿದೆ. ಇದು ಒಗ್ಗಟ್ಟಿನ ಜನರ ಹೋರಾಟಕ್ಕೆ ಸಂದ ಗೆಲುವು. ಈ ಹೋರಾಟ ಅವಿಭಜಿತ ಜಿಲ್ಲೆಯಲ್ಲಿ ಪರಿವರ್ತನೆಯ ಹೊಸ ಸಾಧ್ಯತೆಗಳನ್ನು ತೆರೆದಿದೆ. ಮುಂದೆಯೂ ಈ ಒಗ್ಗಟ್ಟು, ಹೋರಾಟದ ಸ್ಪೂರ್ತಿಯನ್ನು ಉಳಿಸಿಕೊಳ್ಳಬೇಕಿದೆ ಎಂದು ಕಾರ್ಕಳ ಪುರಸಭೆ ಸದಸ್ಯ ಶುಭದ ರಾವ್ ಹೇಳಿದರು. ಅವರು ಸುರತ್ಕಲ್ ಟೋಲ್ ರದ್ದುಗೊಂಡಿರುವುದರ ಪ್ರಯುಕ್ತ ಕಾರ್ಕಳ ಬಸ್ ನಿಲ್ದಾಣ ಸಮೀಪ ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಿ ಮಾತನಾಡಿದರು.

ಟೋಲ್ ಗೇಟ್ ತೆರವು ಹೋರಾಟ ಹಲವು ಸವಾಲುಗಳನ್ನು ಎದುರಿಸಿ ನಡೆದಿದೆ. ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಎಲ್ಲಾ ವಿಭಾಗಗಳನ್ನು ವಿಶ್ವಾಸಕ್ಕೆ ಪಡೆದು ತಾಳ್ಮೆಯಿಂದ ಹೋರಾಟವನ್ನು ಮುನ್ನಡೆಸಿರುವುದರಿಂದ ಇಂದು ಅಂತಿಮವಾಗಿ ಟೋಲ್ ಗೇಟ್ ರದ್ದುಗೊಂಡಿದೆ. ಕಾರ್ಕಳ ಜನತೆಯ ಪರವಾಗಿ ನಾವು ಹೋರಾಟ ಸಮಿತಿಯ ಭಾಗವಾಗಿದ್ದದ್ದು ನಮ್ಮ ಸಂಭ್ರಮವನ್ನು ಹೆಚ್ಚಿಸಿದೆ. ಕಾರ್ಕಳದ ಟ್ಯಾಕ್ಸಿ ಚಾಲಕರು, ಬಸ್ಸು ಏಜಂಟರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಈ ನಿರ್ಣಾಯಕ ಹೋರಾಟದಲ್ಲಿ ಭಾಗಿಗಳಾಗಿದ್ದಾರೆ. ಅವರಿಗೂ, ಹೋರಾಟಕ್ಕೆ ಸಮರ್ಥ ನೇತೃತ್ವ ನೀಡಿದ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಗೂ, ಹೋರಾಟದಲ್ಲಿ ಭಾಗಿಗಳಾದ ಕಾರ್ಕಳದ ಸಂಘ ಸಂಸ್ಥೆಗಳ ಪದಾಧಿಕಾರಿಗಳಿಗೂ, ಹೋರಾಟ ಸಮಿತಿಯ ಮೇಲೆ ನಂಬಿಕೆ ಇಟ್ಟು ಜೊತೆಯಾಗಿ ನಿಂತ ತುಳುನಾಡಿನ ಸಮಸ್ತ ಜನತೆಗೂ ಅಭಿನಂದನೆಗಳನ್ನು ಸಲ್ಲುತ್ತದೆ. ಹೆಜಮಾಡಿಯಲ್ಲಿ ಟೋಲ್ ದರ ಹೆಚ್ಚಳಗೊಂಡರೆ ಅಲ್ಲಿ ನಡೆಯಲಿರುವ ಹೋರಾಟಕ್ಕೂ ಕಾರ್ಕಳದ ಸಮಾನ ಮನಸ್ಕರ, ಜನತೆಯ ಬೆಂಬಲ ಇರುತ್ತದೆ ಎಂದು ಶುಭದ ರಾವ್ ಹೇಳಿದರು.

ಈ ಸಂದರ್ಭದಲ್ಲಿ ಬಸ್ಸ್ ಏಜೆಂಟರ ಬಳಗದ ಗೌರವಾಧ್ಯಕ್ಷ ಸುರೇಶ್ ದೇವಾಡಿಗ,
ಪದಾಧಿಕಾರಿಗಳಾದ ಇಕ್ಬಾಲ್ ಅಹಮ್ಮದ್, ಬಾಲಕೃಷ್ಣ ದೇವಾಡಿಗ,ಸುಧಾಕರ್ ದೇವಾಡಿಗ, ರಾಜೇಂದ್ರ, ಪೀಚು ಪ್ರಸಾದ್, ಸತೀಶ್ ದೇವಾಡಿಗ,ಟ್ಯಾಕ್ಸಿ ಯೂನಿಯನ್ ಪದಾಧಿಕಾರಿಗಳಾದ ಮುನೀರ್, ಹೈದರ್, ತೈಯಬ್, ಲಕ್ಷ್ಮಣ ದೇವಾಡಿಗ, ಮುಂತಾದವರು ಉಪಸ್ಥಿತರಿದ್ದರು.

ವರದಿ: ಅರುಣ ಭಟ್ ಕಾರ್ಕಳ

error: