April 25, 2024

Bhavana Tv

Its Your Channel

ಕಾರ್ಕಳ ಪುರಸಭೆ ಸಾಮಾನ್ಯ ಸಭೆ; ಒಳಚರಂಡಿ ಕಾಮಗಾರಿಯಲ್ಲಿ ಭಾರೀ ಗೋಲ್ ಮಾಲ್:13 ಕೋ.ರೂ ಕಾಮಗಾರಿಯ ಲೆಕ್ಕಕೊಡಿ: ವಿಪಕ್ಷ ಕಾಂಗ್ರೆಸ್ ಸದಸ್ಯರ ಒತ್ತಾಯ

ಕಾರ್ಕಳ : ಕಾರ್ಕಳದ ಮೂರುಮಾರ್ಗ ಜಂಕ್ಷನ್ ನಿಂದ ವೆಂಕಟರಮಣ ದೇವಳದವರೆಗಿನ ಒಳಚರಂಡಿ ಕಾಮಗಾರಿಯಲ್ಲಿ ಭಾರೀ ಅವ್ಯವಹಾರವಾಗಿದ್ದು,13 ಕೋ.ರೂ ವೆಚ್ಚದ ಕಾಮಗಾರಿಯೇ ನಡೆದಿಲ್ಲ ಈ ಕಾಮಗಾರಿಯಲ್ಲಿ 7 ಕೋ.ರೂ ಮಿಕ್ಕಿ ಭ್ರಷ್ಟಾಚಾರ ನಡೆದಿದೆ ಎಂದು ವಿಪಕ್ಷ ಕಾಂಗ್ರೆಸ್ ಸದಸ್ಯರು ಪುರಸಭೆ ಸಾಮಾನ್ಯ ಸಭೆಯಲ್ಲಿ ಆರೋಪಿಸಿದರು.
ಮಂಗಳವಾರ ನಡೆದ ಕಾರ್ಕಳ ಪುರಸಭಾ ಸಾಮಾನ್ಯ ಸಭೆಯಲ್ಲಿ ಈ ಕುರಿತು ವಿಷಯ ಪ್ರಸ್ತಾಪಿಸಿದ ಶುಭದ್ ರಾವ್,ಅಸಮರ್ಪಕ ಒಳಚರಂಡಿ ಕಾಮಗಾರಿಯಿಂದ ಕೊಳಚೆ ನೀರು ಬಾವಿಯನ್ನು ಸೇರಿ ಕುಡಿಯುವ ನೀರು ಕಲುಷಿತವಾಗುತ್ತಿದೆ, ಇದಕ್ಕೆ ಯಾರು ಹೊಣೆ ಎಂದು ಪ್ರಶ್ನಿಸಿದರು. ಇಷ್ಟೊಂದು ದೊಡ್ಡ ಮೊತ್ತ ಯೋಜನೆ ಮಾಹಿತಿಯನ್ನು ಪುರಸಭೆಗೆ ನೀಡದೇ ಕಾಮಗಾರಿಯ ರೂಪುರೇಷೆಯ ಕುರಿತು ಏನನ್ನೂ ತಿಳಿಸದೇ ಒಳಚರಂಡಿ ಮಂಡಳಿಯವರು ತಮಗೆ ಇಷ್ಟ ಬಂದAತೆ ಕಾಮಗಾರಿಯನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.ಇದಕ್ಕೆ ದನಿಗೂಡಿಸಿದ ಅಶ್ಪಕ್ ಅಹಮ್ಮದ್ ಒಳಚರಂಡಿ ಯೋಜನೆಯೇ ಒಂದು ಗೋಲ್ ಮಾಲ್ ಯೋಜನೆಯಾಗಿದೆ ಎಂದು ಆರೋಪಿಸಿದರು.
ಪುರಸಭಾ ವ್ಯಾಪ್ತಿಯಲ್ಲಿ ಹಲವು ಮನೆಗಳಿಗೆ ನಳ್ಳಿ ಸಂಪರ್ಕಗಳಿಲ್ಲ. ಬೆಳಕು ಯೋಜನೆಯಡಿ ವಿದ್ಯುತ್ ಸಂಪರ್ಕ ಪಡೆದ ಫಲಾನುಭವಿಗಳಿಗೆ ನೀರಿನ ವ್ಯವಸ್ಥೆಯನ್ನು ಕಲ್ಪಿಸಿಕೊಡಿ ಎಂದು ಶುಭದ ರಾವ್ ಪುರಸಭೆಯಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ಆಗ್ರಹಿಸಿದರು.
ಸ್ಥಾಯಿ ಸಮಿತಿ ಅಧ್ಯಕ್ಷ ಯೋಗೀಶ್ ದೇವಾಡಿಗ ಮಾತನಾಡಿ, ಅಕ್ರಮ ನಳ್ಳಿ ನೀರಿನ ಸಂಪರ್ಕವನ್ನು ಪಡೆದುಕೊಂಡಿದ್ದಾರೆ. ಇದರಿಂದ ಪುರಸಭೆ ಆದಾಯ ಖೋತವಾಗುತ್ತಿದೆ. ಬದಲಿಗೆ ಅಂತಹ ಸಂಪರ್ಕಗಳನ್ನು ಕಂಡು ಹಿಡಿದು ಸಕ್ರಮಗೊಳಿಸುವ ಪ್ರಯತ್ನ ನಡೆಸಿ ಎಂದರು.
ಕಾಬೆಟ್ಟು ಜಂಕ್ಷನ್ ಬಳಿ ಕಸರಾಶಿ ಹಾಕುವುದರಿಂದ ತೊಂದರೆ ಅನುಭವಿಸುತ್ತಿದ್ದೇವೆ ಎಂದು ಪ್ರಭಾ ಆಕ್ರೋಶ ಹೊರ ಹಾಕಿದರು. ಹವಾಲ್ದಾರಬೆಟ್ಟುನಲ್ಲಿ ಕಲುಷಿತ ನೀರು ಬರುತ್ತಿದೆ ಎಂದು ನಳಿನಿ ಆಚಾರ್ಯ ಆರೋಪಿಸಿದರು. ಪ್ರವಾಸೋದ್ಯಮ ಇಲಾಖೆಯಿಂದ ಗೋಮಟೇಶ್ವರ ಬೆಟ್ಟ ಬಳಿ ನಿರ್ಮಿಸಿದ ಶೌಚಾಲಯ ಕೆಟ್ಟು ಹೋಗಿದ್ದು, ಪ್ರವಾಸಿಗರು ಬಹಿರ್ದೆಸೆಗಾಗಿ ಅಲೆದಾಟ ನಡೆಸುತ್ತಿದ್ದಾರೆ ಈ ಕುರಿತು ಕ್ರಮಕೈಗೊಳ್ಳಬೇಕೆಂದು ವಿನ್ನಿಬೋಲ್ಡ್ ಮೆಂಡೋನ್ಸಾ ಆಗ್ರಹಿಸಿದರು. ಪ್ರವಾಸೋದ್ಯಮ ಇಲಾಖೆಯ ಅನುದಾನ ಬಳಸಿಕೊಳ್ಳಬಹುವುದಲ್ಲ ಎಂದು ಹರೀಶ್ ಸಲಹೆ ನೀಡಿದರು. ಗೋಮಟೇಶ್ವರ ಬೆಟ್ಟದ ಬಳಿ ಸ್ವಚ್ಚತೆ ಕಾಪಾಡುವಂತಹ ಸೂಚನಾಫಲಕ ಅಳವಡಿಸುವಂತೆ ಪ್ರಸನ್ನ ದಾನಶಾಲೆ ಹೇಳಿದರು. ಬಂಗ್ಲೆಗುಡ್ಡೆ ವಾರ್ಡ್ ನಲ್ಲಿ ಬೋರ್‌ವೆಲ್ ವ್ಯವಸ್ಥೆ ಕಲ್ಪಿಸಿಕೊಡುವಂತೆ ಹಾಗೂ ಟ್ಯಾಂಕರ್ ನೀರು ಪೂರೈಕೆಗೆ ಕೂಡಲೇ ಟೆಂಡರ್ ನಡೆಸುವಂತೆ ಪ್ರತಿಮಾ ರಾಣೆ ಒತ್ತಾಯಿಸಿದರು ಅಲ್ಲದೇ ಅಂಬೇಡ್ಕರ್ ಭಾವಚಿತ್ರವುಳ್ಳ ಬ್ಯಾನರನ್ನು ಪುರಸಭೆ ಅನುಮತಿ ಪಡೆದಿಲ್ಲ ಎನ್ನುವ ಕಾರಣಕ್ಕೆ ತೆರವುಗೊಳಿಸಿದೆ. ಆದರೆ ಇತ್ತೀಚೆಗೆ ಪುರಸಭೆ ವ್ಯಾಪ್ತಿಯುದ್ದಕ್ಕೂ ಅಳವಡಿಸಿದ ಬ್ಯಾನರ್ ಗಳನ್ನು ನೀವು ತೆರವುಗೊಳಿಸಿಲ್ಲ ಎಂದು ಆರೋಪಿಸಿದರು.
ಪುರಸಭೆ ಅಧ್ಯಕ್ಷೆ ಸುಮಕೇಶವ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಪಲ್ಲವಿ, ಮುಖ್ಯಾಧಿಕಾರಿ ರೂಪಾ ಟಿ.ಶೆಟ್ಟಿ ಉಪಸ್ಥಿತರಿದ್ದರು.

ವರದಿ:ಅರುಣ ಭಟ್ ಕಾರ್ಕಳ

error: