April 25, 2024

Bhavana Tv

Its Your Channel

“ಕರ್ನಾಟಕ ಸರ್ಕಾರ ವಿದ್ಯುತ ಗುತ್ತಿಗೆದಾರರ ಕೆಲಸವನ್ನು ಅವಶ್ಯ ಕೆಲಸ ಎಂದು ಪರಿಗಣಿಸಿ”

ಯಲ್ಲಾಪುರ :- ಸರ್ಕಾರದ ಕೋವಿಡ್ ವಾರಿಯರ್ಸ್ಳ ಪಟ್ಟಿಯಲ್ಲಿ ಇವರು ಸೇರಿರಲಿ ಇಲ್ಲದಿರಲಿ, ನಮಗಾಗಿ ಪ್ರಾಣತೆತ್ತ ವಿದ್ಯುತ್ ಇಲಾಖೆಯ ನೌಕರರಿಗೂ  ಹಾಗು ವಿದ್ಯುತ್ ಗುತ್ತಿಗೆದಾರ ಸ್ನೇಹಿತರಿಗೂ ನಾವಾದರೂ ಎರಡು ತೊಟ್ಟು ಕಂಬನಿ ಸುರಿಸೋಣವೇ? ನಮ್ಮಲ್ಲಿ ಬಹುತೇಕರು ಸುರಕ್ಷತೆಗಾಗಿ ಮನೆಯಲ್ಲಿ  ಇದ್ದೇವೆ. ಒಂದೊಮ್ಮೆ ನಾವು ಔದ್ಯೋಗಿಕ ಅಥವಾ ಇತರ ಅನಿವಾರ್ಯ ಕಾರಣಗಳಿಗಾಗಿ ಹೊರಗೆ ಹೋದರೂ ನಮ್ಮ ಹಿರಿಯರು, ಕಿರಿಯರು ಮನೆಯಲ್ಲೇ ಉಳಿದಿದ್ದಾರೆ. ಈ ಊರಿ ಬೇಸಿಗೆಯಲ್ಲಿ ಪಂಕಗಳಿರದೆ(ಫ್ಯಾನ್) ಮನೆಯೊಳಗಿರುವುದು ಸುಲಭವೂ ಅಲ್ಲ.  ಟಿವಿ, ಫ್ರಿಜ್, ಇಂಟರ್ನೆಟ್ ಇರದೆ ಹೊತ್ತು ಕಳೆಯುವುದಂತೂ ಸಾಧ್ಯವೇ ಇಲ್ಲ. ರುಬ್ಬುವುದರಿಂದ ಹಿಡಿದು ಸೊಳ್ಳೆ ಓಡಿಸುವವರೆಗಿನ ಸಕಲ ಕಾರ್ಯಗಳಿಗೂ  ಜೀವದ್ರವ್ಯ ವಿದ್ಯುತ್. ನಮ್ಮ ನಿತ್ಯದ ಬದುಕಿಗೆ ಅನಿವಾರ್ಯವೆನ್ನಿಸಿದ ಈ ವಿದ್ಯುತ್ ಸ್ವಯಂಚಾಲಿತವಾಗಿ ಆಕಾಶದಿಂದ ಇಳಿದುಬರುವುದಿಲ್ಲ. ಸೂರ್ಯರಶ್ಮಿಯನ್ನಾದರೂ ಸಂಗ್ರಹಿಸಿ ವಿದ್ಯುಚ್ಛಕ್ತಿಯಾಗಿ ಪರಿವರ್ತಿಸಬೇಕಿದೆ. ಅಣು, ಜಲ, ಉಷ್ಣ, ಪವನ  ವಿದ್ಯುತ್ ಸ್ಥಾವರಗಳಲ್ಲಿ ಹಗಲೂ ರಾತ್ರಿ ಚಲಿಸುತ್ತಿರುವ ವಿದ್ಯುತ್ ಯಂತ್ರಗಳನ್ನು ಪಾಳಿಗಳಲ್ಲಿ ನಿರ್ವಹಿಸಿ ನಿರಂತರ ವಿದ್ಯುತ್ ಉತ್ಪಾದನೆಯಾಗುವಂತೆ, ಲೋಡಿಗೆ ಅನುಗುಣವಾಗಿ ಉತ್ಪಾದನೆ ಏರಿಳಿಯುವಂತೆ, ವಿದ್ಯುತ್ತಿನ ವೋಲ್ಟೇಜ್  ಫ್ರೀಕ್ವೆನ್ಸಿಗಳು ಪರಿಮಿತಿಯಲ್ಲಿರುವಂತೆ ನೋಡಿಕೊಳ್ಳಬೇಕಿದೆ. ವಿದ್ಯುತ್ ಪ್ರಸರಣ, ವಿತರಣ ಮಾರ್ಗಗಳನ್ನು ನಿರ್ವಹಿಸುತ್ತಿರಬೇಕಿದೆ, ಸ್ಥಗಿತಗೊಂಡರೆ ದುರಸ್ತಿ ಮಾಡುತ್ತಿರಬೇಕಿದೆ. ಕಾಡು ಕಣಿವೆಗಳಲ್ಲಿ ಸಾಗುವ ವಿದ್ಯುತ್ ಮಾರ್ಗಗಳ ಮೇಲೆ  ಮಳೆ, ಗಾಳಿ, ಬಿಸಿಲು, ಹಿಮ,  ಮಿಂಚು, ಮೋಡ ಎಲ್ಲವೂ ಪರಿಣಾಮ ಬೀರುತ್ತಿರುತ್ತವೆ. ಪಕ್ಕದ ಹೈವೋಲ್ಟೇಜ್ ಮಾರ್ಗದಲ್ಲಿ ವಿದ್ಯುತ್ ಹರಿಯುತ್ತಿದ್ದರೂ ಹಗಲು ರಾತ್ರಿಯೆನ್ನದೆ ಮಾರ್ಗಗಳ ದುರಸ್ತಿ, ನಿರ್ವಹಣೆ ನಡೆಯುತ್ತಿರಬೇಕಿದೆ. 

ಪರಿವರ್ತಕಗಳ ಯೋಗಕ್ಷೇಮ ನೋಡಿಕೊಳ್ಳುತ್ತಿರಬೇಕಿದೆ. ನಡುರಾತ್ರಿ ವಿದ್ಯುತ್ ಸ್ಥಗಿತಗೊಂಡಾಗ ಪಂಕ ನಿಂತು ನಮಗೆ ಎಚ್ಚರವಾಗಿ, ವಿದ್ಯುತ್ ಇಲಾಖೆಯನ್ನು ವಾಚಾಮಗೋಚರ ಬೈದುಕೊಳ್ಳುವ ಜನರು ನಮಗೆ ತುಸು ಹೊತ್ತಿನ ನಂತರ ವಿದ್ಯುತ್ ಬಂದಾಗ, “ಹೌದಲ್ಲ, ಈ ಅಪರಾತ್ರಿ ಈ ಹೊತ್ತಿನಲ್ಲಿ ಎಲ್ಲೋ ಯಾರೋ ರಿಪೇರಿ ಮಾಡಿ ಸ್ಥಗಿತಗೊಂಡ ವಿದ್ಯುತ್ತನ್ನು ಮರಳಿ ಬರುವಂತೆ ಮಾಡಿದರಲ್ಲ” ಎಂದು ಅನ್ನಿಸುವುದೇ ಇಲ್ಲ. ತಾನಾಗಿ ಬಂತು ಎಂದುಕೊಳ್ಳುತ್ತೇವೆ.
ಈ ವಿದ್ಯುತ್ ಎಂದರೆ ಹೆಂಡತಿ ಇದ್ದಂತೆ. ಅವರಿದ್ದಾಗ ನಮಗೆ ಅವರ ಇರುವಿಕೆಯ ಅರಿವೇ ಆಗದು. ಮಾಮೂಲಿ. ಟೇಕನ್ ಫಾರ್ ಗ್ರಾಂಟೆಡ್. ನಮಗಾಗಿ ಅವರು ಏನೆಲ್ಲ ಮಾಡುತ್ತಿರುತ್ತಾರೆ ಗೊತ್ತೇ ಇರುವುದಿಲ್ಲ. ಒಂದು ದಿನ ಇಲ್ಲವೆಂದರೆ ನಮಗೆ ಅವರ ಅನುಪಸ್ಥಿತಿಯ ಶಾಖ ತಟ್ಟುತ್ತದೆ. ಈ ವಿದ್ಯುತ್ ಕೂಡ ಹಾಗೆಯೇ. ಅದು ಇದ್ದಾಗ ಮಾಮೂಲಿ. ಇಲ್ಲದಿದ್ದಾಗ ಸಹಸ್ರ ನಾಮಾರ್ಚನೆ. ಇಡೀ ರಾಜ್ಯದ ಹಳ್ಳಿ ಹಳ್ಳಿಗಳ ಮೂಲೆ ಮೂಲೆಯ ಕೋಟಿ ಕೋಟಿ ಗ್ರಾಹಕರಿಗೆ ಸಾಧ್ಯವಿದ್ದಷ್ಟೂ ನಿರಂತರವಾಗಿ ವಿದ್ಯುತ್ ಹರಿಸುತ್ತ ರಾಜ್ಯದ ಕೈಗಾರಿಕೆ, ಕೃಷಿ, ಸಂಪರ್ಕ, ಸಂವಹನ, ಮನೋರಂಜನೆ..ಇಷ್ಟೇ ಅಲ್ಲ ವ್ಯಾಕ್ಸೀನುಗಳನ್ನು ಸಂಗ್ರಹಿಸಿಡುವ ತಂಪು ಸಂಗ್ರಾಹಕಗಳವರೆಗೆ, ಆಕ್ಸಿಜನ್ ಕಾನ್ಸೆಂಟ್ರೇಟರ್ವರೆಗೆ, ವ್ಯಾಕ್ಸಿನ್ ಆಕ್ಸಿಜನ್ ತಯಾರಿಕೆಯವರೆಗೆ, ಐಸಿಯೂ ಬೆಡ್ ಗಳವರೆಗೆ ಎಲ್ಲೆಡೆ ವಿದ್ಯುತ್ ಹರಿವು ಅನಿವಾರ್ಯ. ಗುತ್ತಿಗೆದಾರರು ಕಣ್ಣಿಗೆ ಬೀಳುವಷ್ಟು ಅದೃಷ್ಟಶಾಲಿಗಳಲ್ಲ. ಅವರ ಕೆಲಸ ಕತ್ತಲಲ್ಲಿ ದುಡಿದು ಬೆಳಕು ಕೊಡುವುದು. ಹಾಗಾಗಿ ಅವರೂ ಇಂದಿನ ಸಂಕಷ್ಟದ ಸಂದರ್ಭದಲ್ಲಿ ವಾರಿಯರ್‌ಗಳಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಬಹುತೇಕರಿಗೆ ಕಾಣಿಸಿಯೇ ಇಲ್ಲ.ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲೂ ವಿದ್ಯುತ್ ಬರುತ್ತಿದೆಯಲ್ಲ ಅನ್ನಿಸಿಯೇ ಇಲ್ಲ.
ಬೆಂಗಳೂರಿನಿAದ ನಾಲ್ಕುನೂರು ಕಿಲೋಮೀಟರ್ ದೂರದ, ಜೋಗದಿಂದ ಏಳುನೂರು ಕಿಲೋಮೀಟರ್ ದೂರದ ಕಾಡು ಕಣಿವೆಯ ಶರಾವತಿಯಂತಹ ವಿದ್ಯುತ ಸ್ಥಾವರದಲ್ಲಿ ಯಾರೋ ಹೆಣ್ಣುಮಗಳೋ, ಯುವ ಇಂಜಿನಿಯರೋ ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸಿರುತ್ತಾರೆ. ಅವರಿಗೂ ಅಪ್ಪ,ಅಮ್ಮ, ಗಂಡ ಹೆಂಡತಿ ಮಕ್ಕಳು ಎಲ್ಲರೂ ಇರುತ್ತಾರೆ. ಈ ಅಪಾಯದ ಪರಿಸ್ಥಿತಿಯಲ್ಲಿ ಕೆಲಸಕ್ಕೆ ಹೋಗಬೇಡ ಎಂದು ಕಣ್ಣೀರು ಸುರಿಸಿರುತ್ತಾರೆ. ಮಾರ್ಗ ಕುಸಿದಾಗ ಅಪಾಯಗಳ ನಡುವೆ ವಿದ್ಯುತ ಗೋಪುರವೇನ್ನೇರಿ ಸಾವಿನೆದರು ಸಮರ ಸಾರುವ ಪವರ ಮ್ಯಾನ್ ಗೂ ಹೆಂಡತಿ ಮಕ್ಕಳಿರುತ್ತಾರೆ. ಕೊರೋನಾ ಇದೆ ಹೊರಗೆ ಹೋಗಬೇಡ ಎಂದು ನಮಗೆ ಹೇಳುವ ನೀನೇಕೆ ಹೊರಗೆ ಹೋಗುತ್ತೀಯ ಎಂದು ಚಿಕ್ಕಮಕ್ಕಳು ಹಠ ಮಾಡಿರುತ್ತಾರೆ. ಇಂತಹ ಕ್ಲಿಷ್ಟ ಸಂದರ್ಭದಲ್ಲೂ ಪವರ ಮೆನಗಳು ಹಾಗೂ ವಿದ್ಯುತ ಗುತ್ತಿಗೆದಾರ ಕಾರ್ಮಿಕರು ಜೀವ ಕಳೆದುಕೊಂಡ ಹಲವು ವರದಿಗಳನ್ನು ನಾವು ನೀವು ಓದಿದ್ದೇವೆ. ಅವರು ಮನೆಯಲ್ಲೇ ಕುಳಿತಿದ್ದರೆ ವಿದ್ಯುತ ಇರುತ್ತಿರಲಿಲ್ಲ, ನಾವು ಮನೆಯೊಳಗೆ ಇರಲಾಗುತ್ತಿರಲಿಲ್ಲ!
ಇದನ್ನು ವಿದ್ಯುತ್ ಇಲಾಖೆ ಮತ್ತು ಗುತ್ತಿಗೆದಾರರನ್ನು ಹೊಗಳಿ ಅಟ್ಟಕ್ಕೇರಿಸಲು ಹೇಳುತ್ತಿಲ್ಲ. ಅವರು ತಪ್ಪುಗಳನ್ನೇ ಮಾಡುವುದಿಲ್ಲ ಎಂದೂ ಹೇಳುತ್ತಿಲ್ಲ. ಆದರೆ ನಮಗಾಗಿ ಈ ದುರ್ಭರ ಸನ್ನಿವೇಶದಲ್ಲಿ ದುಡಿಯುತ್ತ ಕಳೆದ ತಿಂಗಳು ನೂರಕ್ಕೂ ಹೆಚ್ಚು ವಿದ್ಯುತ ಗುತ್ತಿಗೆದಾರು ಮರಣ ಹೊಂದಿದ್ದಾರೆ. ಅವರನ್ನೇಕೆ ನಮ್ಮ ಸರ್ಕಾರ ಮತ್ತು ಮಾದ್ಯಮಗಳಿಗೆ ಕರೋನಾ ವಾರಿಯರ್ಗಳಂತೆ ಕಾಣುವುದಿಲ್ಲ ಎಂಬುದಷ್ಟೇ ನಮ್ಮ ನೋವು. ಈ ಕುರಿತು ವಿದ್ಯುತ್ ಇಲಾಖೆಯ ಮತ್ತು ಗುತ್ತಿಗೆದಾರ ಸ್ನೇಹಿತರ ಜೀವಗಳಿಗಾಗಿ ಎರಡು ಹನಿ ಕಂಬನಿ ಸುರಿಸೋಣವೇ?
ರಾಜ್ಯಾದ್ಯಂತ ವಿದ್ಯುತ ಗುತ್ತಿಗೆದಾರರು ಕೋವಿಡ್ಡಿಗೆ ಬಲಿಯಾಗಿದ್ದಾರೆ ಎನ್ನುವುದು ದುರಂತದ ಸಂಗತಿ.ಕೂಡಲೇ ಸರ್ಕಾರ ಈ ಬಗ್ಗೆ ಗಮನಹರಿಸಬೇಕೆಂದು ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ ಬೆಂಗಳೂರು ಇದರ ಪತ್ರಿಕಾ ವಿಭಾಗದ ಛೇರ್ಮನ್ ವೇಣುಗೋಪಾಲ ಮದ್ಗುಣಿ ಆಗ್ರಹಿಸಿದ್ದಾರೆ.

error: