April 25, 2024

Bhavana Tv

Its Your Channel

ಉಳವಿ ಸಾಹಿತ್ಯ ಸಮ್ಮೇಳನದ ಲಾಂಛನ ಬಿಡುಗಡೆ

ಸಮ್ಮೇಳನ ಯಶಸ್ವಿಗೊಳಿಸುವುದು ಎಲ್ಲರ ಜವಾಬ್ದಾರಿ- ದೇಶಪಾಂಡೆ

ಜೋಯಿಡಾ : ಡಿಸೆಂಬರ 17ಮತ್ತು 18 ರಂದು ಜೋಯಿಡಾ ತಾಲೂಕಿನ ಉಳವಿಯಲ್ಲಿ ನಡೆಯಲಿರುವ ಉತ್ತರ ಕನ್ನಡ ಜಿಲ್ಲಾ 22 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನವನ್ನು ಸಮ್ಮೇಳನದ ಸ್ವಾಗತ ಸಮಿತಿಯ ಗೌರವಾಧ್ಯಕ್ಷರೂ, ಶಾಸಕರೂ ಅದ ಆರ್.ವಿ. ದೇಶಪಾಂಡೆಯವರು ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಜ್ನಾನ ನಿಧಿ ಚೆನ್ನಬಸವಣ್ಣನ ಸುಕ್ಷೇತ್ರ ಉಳವಿಯಲ್ಲಿ ಜಿಲ್ಲಾ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ನಮ್ಮೆಲ್ಲರ ಅಭಿಮಾನದ ಸಂಗತಿ. ಈ ಸಮ್ಮೇಳನಕ್ಕೆ ಅಗಮಿಸುವ ಕವಿ ಕಲಾವಿದರಿಗೆ ಯಾವ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು. ನಾನು ಈಗಾಗಲೇ ಸಮ್ಮೇಳನದ ಸಿದ್ದತೆಯ ಕುರಿತಂತೆ ಸಂಬAಧ ಪಟ್ಟವರಿಗೆ ಅಗತ್ಯ ಸಲಹೆ ನೀಡಿದ್ದೇನೆ. ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆಯವರ ನೇತೃತ್ವದಲ್ಲಿ ನಡೆಯುತ್ತಿರುವ ಈ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗುತ್ತದೆ ಎಂಬುದರಲ್ಲಿ ಯಾವ ಸಂದೇಹವೂ ಇಲ್ಲ. ನಮ್ಮ ಕ್ಷೇತ್ರದಲ್ಲಿ ನಡೆಯುತ್ತಿರುವ ಈ ಸಮ್ಮೇಳನವನ್ನು ಯಶಸ್ವಿಗೊಳಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದ ದೇಶಪಾಂಡೆಯವರು ಸಮ್ಮೇಳನದ ಲಾಂಛನವನ್ನು ಅಭಿಮಾನದಿಂದ ಬಿಡುಗಡೆಗೊಳಿಸಿದ್ದೇನೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆಯವರು ಮಾತನಾಡಿ ಸಾಹಿತ್ಯ ಸಮ್ಮೇಳನದ ಲಾಂಛನ ಬಿಡುಗಡೆ ಮಾಡುವುದು ಸಮ್ಮೇಳನದ ಒಂದು ಭಾಗ. ವಚನ ಸಾಹಿತ್ಯಕ್ಕೆ ತನ್ನದೇ ಆದ ಕೊಡುಗೆ ನೀಡಿದ ಉಳವಿಯಲ್ಲಿ ಜಿಲ್ಲಾ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ನಮಗೆಲ್ಲ ಹೆಮ್ಮೆಯ ಸಂಗತಿ. ಈಗಾಗಲೇ ಸಾಕಷ್ಟು ಸಿದ್ದತೆಗಳು ನಡೆದಿವೆ. ಉಳವಿ ಚನ್ನಬಸವೇಶ್ವರ ಟ್ರಸ್ಟನವರೂ ಕೂಡಾ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಹೇಳಿದ್ದಾರೆ. ಸಮ್ಮೇಳನದಲ್ಲಿ ಬಡಕಟ್ಟುಗಳ ಬದುಕು ಮತ್ತು ಸಂಸ್ಕೃತಿ , ಜಿಲ್ಲೆಯ ಅಭಿವೃದ್ದಿ, ವಚನ ವಿಚಾರ ಸೇರಿದಂತೆ ಹಲವು ವಿಷಯಗಳ ಮೇಲೆ ಗೋಷ್ಠಿಗಳು ನಡೆಯಲಿವೆ. ಸಾಧಕರನ್ನು ಸನ್ಮಾನಿಸಲಾಗುತ್ತಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ತಿಳಿಸಿದರು.

ಉಳವಿ ಚನ್ನ ಬಸವೇಶ್ವರ ಟ್ರಸ್ಟನ ಅಧ್ಯಕ್ಷರಾದ ಗಂಗಾಧರ ಕಿತ್ತೂರ ಮಾತನಾಡಿ ಸಮ್ಮೇಳನದ ಯಶಸ್ದಿಗೆ ತಮ್ಮ ಉಳವಿ ಟ್ರಸ್ಟಿನಿಂದ ಆಗುವ ಎಲ್ಲ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದರು.

ಜೋಯಿಡಾ ತಾಲೂಕು ಪಂಚಾಯತ ಸಭಾ ಭವನದಲ್ಲಿ ನಡೆದ ಸಮಾರಂಭದ ವೇದಿಕೆಯಲ್ಲಿ ತಾ.ಪಂ ಕಾರ್ಯನಿರ್ವಹಣಾಧಿಕಾರಿ ಆನಂದ ಬಡಕುಂದ್ರಿ, ಕ್ಷೇತ್ರ ಶಿಕ್ಷಣಾಧಿಕಾರಿ ಬಶೀರ ಅಹಮ್ಮದ್ ಶೇಖ, ಸಿ.ಪಿ.ಐ. ನಿತ್ಯಾನಂದ ಪಂಡಿತ, ಸಮಾಜ ಸೇವಕ ಸದಾನಂದ ದಬ್ಗಾರ ಉಪಸ್ಥಿತರಿದ್ದರು.
ಉಳವಿ ಗ್ರಾಮ ಪಂಚಾಯತ ಉಪಾಧ್ಯಕ್ಷರಾದ ಮಂಜುನಾಥ ಮೊಕಾಶಿ, ಉಳವಿ ಟ್ರಸ್ಟ್ ಮುಖ್ಯ ಅರ್ಚಕರಾದ ಶಂಕರಯ್ಯ ಕಲ್ಮಠ, ಗುಂದ ಗ್ರಾ.ಪಂ ಉಪಾಧ್ಯಕ್ಷ ಅರುಣ ದೇಸಾಯಿ, ಉಪ ತಹಶೀಲ್ದಾರ ಸುರೇಶ ವಕ್ಕುಂದ, ಪ್ರಮುಖರಾದ ಶಕುಂತಲಾ ಹಿರೆಗೌಡರ್, ಸಂತು ಮಂಥೆರೋ, ವಿನಯ ದೇಸಾಯಿ, ಭೀಮಾಶಂಕರ ಅಜನಾಳ , ಕನ್ನಡ ಅಭಿಮಾನಿ ಸಂಘದ ಅಧ್ಯಕ್ಷ ಗಣೇಶ ಹೆಗಡೆ, ಕರವೇ ಅಧ್ಯಕ್ಷ ಸೂರಜ ಹಿರೇಗೌಡರ್, ಕಸಾಪ ದಾಂಡೇಲಿ ತಾಲೂಕು ಕಾರ್ಯದರ್ಶಿ ಗುರುಶಾಂತ ಜಡೆಹಿರೇಮಠ ಮುಂತಾದವರು ಹಾಗೂ ವಿವಿಧ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.

ಕಸಾಪ ಜೋಯಿಡಾ ತಾಲೂಕು ಘಟಕದ ಅಧ್ಯಕ್ಷ ಪಾಂಡುರAಗ ಪಟಗಾರ ಸ್ವಾಗತಿಸಿದರು. ಕಾರ್ಯದರ್ಶಿ ಪ್ರೇಮಾನಂದ ವೇಳಿಪ ವಂದಿಸಿದರು. ಶಿಕ್ಷಕರ ಸಂಘದ ಅಧ್ಯಕ್ಷ ಯಶವಂತ ನಾಯ್ಕ ನಿರೂಪಿಸಿದರು. ಕಸಾಪ ಕೋಶಾಧ್ಯಕ್ಷ ಮಹಾದೇವ ಹಳದನಕರ, ಎಸ್.ಬಿ. ಶಿಂದೆ ಮುಂತಾದವರು ಸಹಕರಿಸಿದರು.

ಆಕರ್ಷಕ ಲಾಂಛನ
ಉಳವಿಯಲ್ಲಿ ನಡೆಯುತ್ತಿರುವ ಜಿಲ್ಲಾ ಸಾಹಿತ್ಯ ಸಮ್ಮೈಳನದ ಭಾಗವಾಗಿ ಅರ್ಥಪೂರ್ಣ ಹಾಗೂ ಆಕರ್ಷಕ ಲಾಂಛನ ಅನಾವರಣಗೊಳಿಸಲಾಗಿದೆ. ಜೋಯಿಡಾವನ್ನು ಪ್ರತಿನಿಧಿಸುವ ಸುಂದರವಾದ ಅರಣ್ಯ, ನದಿ, ಉಳವಿ ದೇವಸ್ಥಾನದ ಹೆಬ್ಬಾಗಿಲು ಹಾಗೂ ಮುಂಬಾಗಲ್ಲಿ ಉಳವಿ ಚೆನ್ನಬಸವಣ್ಣನ ಭಾವಚಿತ್ರ, ನಡುವೆ ಕನ್ನಡಾಂಬೆ, ಯಕ್ಷಗಾನದ ಮುಖಪಟ ಸೇರಿದಂತೆ ಹಲವು ವಿಶೇಷತೆಗಳೊಂದಿಗೆ ಲಾಂಚನವನ್ನು ವಿನ್ಯಾಸಗೊಳಿಸಲಾಗಿದೆ.

error: